ಯೋಜನಾನುಷ್ಠಾನಕ್ಕೆ ಕೇಂದ್ರದಿಂದ ಹಣ ಕೊಡಿಸಲಿ: ತಿಮ್ಮಾಪುರ

ಬಾಗಲಕೋಟೆ: ರೈತರ ವಿಷಯದಲ್ಲಿ ರಾಜಕಾರಣ ಮಾಡಲ್ಲ ಎಂದು ಪ್ರತಿಕ್ರಿಯಿಸುವ ಮೂಲಕ ಏಕರೂಪ ದರ ನಿಗದಿ ಕುರಿತು ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರ ಹೇಳಿಕೆಗೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.‌ಬಿ. ತಿಮ್ಮಾಪುರ ತಿರುಗೇಟು ನೀಡಿದರು.

ನಗರದ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಯುಕೆಪಿ ಹಂತ-3- ರಲ್ಲಿ ಸ್ವಾಧೀನಕ್ಕೊಳಪಡುವ ಭೂಮಿಗೆ ಸರ್ಕಾರ ಏಕರೂಪ ದರ ನಿಗದಿ ಪಡಿಸಿರುವುದಕ್ಕೆ ವಿರೋಧ ವ್ಯಕ್ತ ಪಡಿಸಿ, 30-40 ಲಕ್ಷ ರೂ.‌ಪರಿಹಾರ ಬದಲಿಗೆ 40 -50 ಲಕ್ಷ ರೂ.‌ ನಿಗದಿ ಪಡಿಸಬೇಕಿತ್ತು ಎಂದು ಹೇಳಿದ್ದರು. ಅವರ ಹೇಳಿಕೆಗೆ ಪ್ರತಿಕ್ರಿಯಸಲು ನಿರಾಕರಿಸಿದ ಸಚಿವ ತಿಮ್ಮಾಪುರ ಅವರು ರೈತರ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದರು.

ಕಾರಜೋಳರಿಗೆ ರೈತರ ಬಗೆಗೆ ಕಾಳಜಿ ಇದ್ದಲ್ಲಿ ಯೋಜನಾನುಷ್ಠಾನಕ್ಕೆ ಕೇಂದ್ರದಿಂದ ಹಣ ಕೊಡಿಸಲಿ ಎಂದರು.

ಏಕರೂಪ ಪರಿಹಾರ:

ಯುಕೆಪಿ ಹಂತ- 3 ರಲ್ಲಿ ಸ್ವಾಧೀನಕ್ಕೊಳಪಡುವ ಭೂಮಿಗೆ ಯೋಗ್ಯ ಪರಿಹಾರ ನೀಡುವಂತೆ ನಿರಂತರ ಹೋರಾಟ ಮಾಡುತ್ತ ಬಂದಿದ್ದಾರೆ. ನಮ್ಮ ಸರ್ಕಾರ ರೈತರಿಗೆ ನ್ಯಾಯ ಕೊಡಿಸುವ ಭರವಸೆ ನೀಡಿತ್ತು. ಈಗ ಆ ಕೆಲಸ ಮಾಡಿದೆ. ಸರ್ಕಾರ, ರೈತರು, ಜನಪ್ರತಿನಿಧಿ ಗಳೊಂದಿಗೆ ಸತತ ಸಭೆಗಳನ್ನು ನಡೆಸಿ, ಅಳೆದು ತೂಗಿ ನ್ಯಾಯಯುತ ಏಕರೂಪ ಪರಿಹಾರ ನಿಗದಿ ಪಡಿಸಿದೆ ಎಂದರು.

ಅಭಿನಂದನಾರ್ಹರು:

ಭೂಸ್ವಾಧೀನ ಸೇರಿದಂತೆ ಇತರ ಎಲ್ಲ ಕಾರ್ಯಗಳ ಪ್ರಾಧಿಕಾರ ರಚನೆ ಬಳಿಕೆ ಆರಂಭಗೊಳ್ಳಲಿವೆ. ಏಕರೂಪ ದರ ನಿಗದಿ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ , ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ಎಚ್. ಕೆ. ಪಾಟೀಲ, ಎಂ.ಬಿ.‌ಪಾಟೀಲ, ಶಿವಾನಂದ ಪಾಟೀಲ ಸೇರಿದಂತೆ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಶಾಸಕರು, ರೈತ ಮುಖಂಡರ ಕಾಳಜಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಸರ್ಕಾರ ಘೋಷಿಸಿರುವ ಏಕರೂಪ ದರಕ್ಕೆ ಬಹುತೇಕ ಎಲ್ಲ ರೈತರು ಒಪ್ಪಿಗೆ ಇದೆ ಎಂದ ಅವರು ಈಗಾಗಲೇ ಪರಿಹಾರಕ್ಕೆ ಒತ್ತಾಯಿಸಿ ನ್ಯಾಯಾಲಯದಲ್ಲಿ ಪ್ರಕರಣಗಳಿದ್ದು, ಅವುಗಳನ್ನು ಹಿಂಪಡೆಯುವಂತೆ ರೈತರ ಮನವೊಲಿಸಲಾಗುವುದು ಎಂದರು.

ನ್ಯಾಯಯುತ ಹೋರಾಟ:

ಯುಕೆಪಿ ಹಂತ- 3 ಅನುಷ್ಠಾನ ಸಾಧ್ಯವೇ ಇಲ್ಲ ಎನ್ನುವ ಮಾತುಗಳು ವ್ಯಾಪಕವಾಗಿರುವಾಗಲೇ ಸರ್ಕಾರ , ರೈತರು, ಪ್ರತಿಪಕ್ಷಗಳ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭೂಸ್ವಾಧೀನಕ್ಕೆ ಎಕರೂಪ ದರ ನಿಗದಿ‌ ಮಾಡಿದೆ. ಮೂರು ಆರ್ಥಿಕ ವರ್ಷಗಳಲ್ಲಿ ಈ ಕಾರ್ಯ ನೆರವೇರಲಿದೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಅಗತ್ಯ ಸಂಪನ್ಮೂಲ ಕ್ರೋಢಿಕರಣ ವಿಷಯವನ್ನು ಅವರು ಗೌಪ್ಯವಾಗಿಟ್ಟಿದ್ದು, ಹಣಕಾಸಿನ ಹೊಂದಾಣಿಕೆ ಮಾಡಲಿದ್ದಾರೆ ಎನ್ನುವ ವಿಶ್ವಾಸ ವ್ಯಕ್ತ ಪಡಿಸಿದರು.

Scroll to Top