ಯತ್ನಾಳ್ ಹೇಳಿಕೆಗೆ ವಚನಾನಂದಶ್ರೀ ಪರೋಕ್ಷ ವಾಗ್ದಾಳಿ

ಬಾಗಲಕೋಟೆ: ಹಗುರ ವ್ಯಕ್ತಿಯ ಮಾತುಗಳನ್ನು ಹಗುರವಾಗಿ ಬಿಡಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳುವ ಮೂಲಕ ವಿಜಯಪುರ ಶಾಸಕ ಬಸನಗೌಡ ಪಾಟೀಲರ ಹೇಳಿಕೆಗೆ ಪರೋಕ್ಷವಾಗಿ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಧರ್ಮಸ್ಥಳದ ವಿರುದ್ಧ ಅನಗತ್ಯವಾಗಿ ಅಪಪ್ರಚಾರ ಕೆಲಸ ನಡೆದಿದ್ದು, ಧರ್ಮಸ್ಥಳ ರಕ್ಷಣೆಗೆ ನೀಡುವಂತೆ ಒತ್ತಾಯಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಗೆ ತೆರಳಿ ಭೇಟಿ ಮಾಡಿರುವ ಹಿನ್ನೆಲೆಯಲ್ಲಿ ಯತ್ನಾಳ್ ಅವರು ಸ್ವಾಮೀಜಿ ವಿರುದ್ಧ ಹರಿಹಾಯ್ದಿದ್ದರು. ಆ‌ ವಿಷಯವಾಗಿ ಪ್ರಶ್ನಿಸಿದ ವೇಳೆ ಅವರು ಈ ರೀತಿ ಪ್ರತಿಕ್ರಿಯಿಸಿದರು.

ನಾಡಿನ ಶ್ರದ್ಧಾ ಕೇಂದ್ರ:

ನಾಡಿನ ಜನತೆಯ‌ ಶೃದ್ಧಾ ಕೇಂದ್ರವಾಗಿರುವ ಧರ್ಮಸ್ಥಳ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿದೆ. ಅದರ ಹೆಸರನ್ನು ಕಡೆಸುವ ಹುನ್ನಾರ ನಡೆದಿದೆ. ಇದಕ್ಕೆ ವಿದೇಶಿ ಶಕ್ತಿಗಳ ಕೈವಾಡವಿದೆ ಎಂದು ಆಪಾದಿಸಿದರು. ಇಂತಹ ಸನ್ನಿವೇಶದಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲಬೇಕಿದೆ. ಹಾಗಾಗಿ ತಾವೂ ಸೇರಿದಂತೆ ಕೆಲ‌ ಮಠಾಧೀಶರು ಸೇರಿ ಕೇಂದ್ರ ಸಚಿವ ಶಾ ಅವರನ್ನು ಭೇಟಿ ಮಾಡಿದ್ದೇವು.ಅದಕ್ಕೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು.

ಪೀಠದ ಮಾತೆ ಅಂತಿಮ:

ರಾಜ್ಯದಲ್ಲಿ ನಡೆಯಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ವೇಳೆ ಲಿಂಗಾಯತ ಪಂಚಮಸಾಲಿ ಸಮುದಾಯ ಜಾತಿ ಮತ್ತು ಧರ್ಮದ ಕಾಲಂನಲ್ಲಿ ಏನು ಬರೆಯಿಸಬೇಕು ಎನ್ನುವ ಕುರಿತು ಅಂತಿಮ‌ ನಿರ್ಧಾರ ಕೈಗೊಳ್ಳುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಈಗಾಗಲೇ 6 ಜಿಲ್ಲೆಗಳಲ್ಲಿ ಭಕ್ತರ ಸಭೆ ನಡೆಸಲಾಗಿದ. ಉಳಿದ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಂಡ ನಂತರ ಸೆ.16 ರಂದು ಹರಿಹರ ಪೀಠದಲ್ಲಿ ಸಮುದಾಯದ ಜಗದ್ಗುರುಗಳು ಸ್ವಾಮೀಜಿಗಳು ಹಾಗೂ ಸಮುದಾಯದ ಮುಖಂಡರ ಸಭೆ ನಡೆಯಲಿದೆ. ಅಲ್ಲಿ ಗಣತಿ ಕುರಿತು ವ್ಯಾಪಕ ಚರ್ಚೆ ನಡೆಯಲಿದೆ ಎಂದರು.

ಮಹಾಸಭಾ ನಿರ್ಧಾರ ನಮಗೆ ಸಂಬಂಧವಿಲ್ಲ:

ಜಾತಿ ಮತ್ತು ಧರ್ಮದ ಕಾಲಂನಲ್ಲಿ ಏನು ಬರೆಯಿಸಬೇಕು ಎನ್ನುವ ಕುರಿತು ಅಖಿಲ ಭಾರತ ವೀರಶೈವ ಮಹಾಸಭಾ ಕೈಗೊಂಡಿರುವ ನಿರ್ಧಾರಕ್ಕೂ ನಮಗೂ ಸಂಬಂಧವಿಲ್ಲ.‌ ಸೆ. 17 ರಂದು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಸಮುದಾಯ ಕೈಗೊಳ್ಳುವ ನಿರ್ಧಾರವೇ ಅಂತಿಮ ಎಂದರು.

ಇದುವರೆಗೂ ಇತರರು ನಮ್ಮನ್ನು ಉಪಯೋಗ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ನಮ್ಮದು ಬಹುದೊಡ್ಡ ಸಮಾಜವಾಗಿದೆ. ನಮ್ಮ ಸಮುದಾಯಕ್ಕೆ ನಮ್ಮ ಪೀಠಗಳ ಮಾತೆ ಅಂತಿಮ ಎಂದು ಹೇಳಿದರು.

ಜನಸಂಖ್ಯೆಗೆ ಅನುಸಾರ ಇನ್ನೂ‌ ಹೆಚ್ಚಿನ ಮಠಗಳು ಆಗಲಿವೆ. ಇದರಿಂದ ಭಕ್ತರಿಗೆ ಅನುಕೂಲ ಆಗಲಿದೆ. ಸಮಾಜದ ಹಿತಕ್ಕಾಗಿ ಕೆಲಸ ಆಗಲಿದೆ ಎಂದು ಅವರು ತಿಳಿಸಿದರು.

ಗೊಂದಲದ ಕೆಲಸ :

ಲಿಂಗಾಯತ ಸಮಾಜದ ನಾನಾ ಮಠಗಳ‌ ಮಠಾಧೀಶರು ಸೇರಿ ಬಸವ ಸಂಸ್ಕೃತಿ ಉತ್ಸವ ನಡೆಸುತ್ತಿದ್ದಾರೆ. ಅದರಲ್ಲಿ ಕೆಲವರು ಗೊಂದಲ ಹುಟ್ಟಿಸುವ ಕಾರ್ಯ ನಡೆಸಿದ್ದಾರೆ ಎಂದು ವಚನಾನಂದಶ್ರೀಗಳು ದೂರಿದರು. ನಾಡಿನ‌ ಹರಿಯ‌ಮಠಾಧೀಶರು ಇದ್ದಾರೆ. ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷರಾದ ಸೋಮನಗೌಡ ಪಾಟೀಲ ಮಾತನಾಡಿದರು.‌ ಸಮಾಜದ ಜಿಲ್ಲಾಧ್ಯಕ್ಷ ರವಿ ಪಟ್ಟಣದ ಇದ್ದರು.

Scroll to Top