ಚರ್ಚೆಗೆ ಸೀಮಿತವಾದ ಯುಕೆಪಿ ಹಂತ-3

ಆಲಮಟ್ಟಿ ಎತ್ತರ ಹೆಚ್ಚಳ ವಿಷಯ ಪ್ರತಿ ಬಾರಿ ಸದನ ನಡೆದಾಗಲೂ ಪ್ರಸ್ತಾಪವಾಗುತ್ತಲೇ ಇದೆ. ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು‌ ಚರ್ಚೆಯಲ್ಲಿ‌ ಭಾಗವಹಿಸಿ‌ ಮಾತನಾಡುತ್ತಾರೆ. ಎಷ್ಟೆ ಮಾತನಾಡಿದರೂ ಅದರ ಫಲಿತಾಂಶ ಮಾತ್ರ ಶೂನ್ಯ ಎನ್ನುವಂತಾಗಿರುವುದು ದುರದೃಷ್ಟಕರ ಸಂಗತಿ.

ಮುಂಗಾರು ಅಧಿವೇಶನದಲ್ಲಿ ಯುಕೆಪಿ ಹಂತ-3 ರ ಅನುಷ್ಠಾನ ಕುರಿತು ನಡೆದ ಚರ್ಚೆಯಲ್ಲಿ ಜಿಲ್ಲೆಯ ಶಾಸಕರು ಭಾಗವಹಿಸಿ ಮಾತನಾಡಿದರು. ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ್ ಮೇಲ್ಮನೆ ಪ್ರವೇಶಿಸಿದಾಗಿನಿಂದಲೂ ಅತ್ಯಂತ ಗಂಭೀರವಾಗಿ ಮಾತನಾಡುತ್ತಿದ್ದಾರೆ. ಪ್ರತಿ ಬಾರಿ ನಡೆಯುವ ಅಧಿವೇಶನದಲ್ಲೂ ಸಾಧ್ಯವಾದಷ್ಟು ಈ ಬಗೆಗೆ ಗಮನ ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಎರಡು ಬಾರಿ ಶಾಸಕರಾಗಿದ್ದ ಪಿ.ಎಚ್. ಪೂಜಾರ್ ಅವರು ಎಸ್.‌ಎಂ.‌ಕೃಷ್ಣ ಅವರ ಅಧಿಕಾರಾವಧಿಯಲ್ಲಿ ಮುಳುಗಡೆ ಸಂತ್ರಸ್ತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಾಗಲಕೋಟೆಯಲ್ಲಿ ಸ್ಥಳೀಯ ಮುಖಂಡರೊಂದಿಗೆ ನಡೆಸಿದ ಐತಿಹಾಸಿಕ ಹೋರಾಟದ ಫಲವಾಗಿ ಕೃಷ್ಣ ಅವರ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತ್ತು ಎನ್ನುವುದು ಗಮನಾರ್ಹ ಅಂಶ.

ಈಗಲೂ ಅವರು ಯುಕೆಪಿ ಹಂತ-೩ ರ ಅನುಷ್ಠಾನಕ್ಕಾಗಿ ಸದನದೊಳಗೆ ನಡೆಸುತ್ತಿರುವ ಹೋರಾಟ ಸರ್ಕಾರದ ಗಮನ ಸೆಳೆಯುವಲ್ಲಿ ತಕ್ಕ ಮಟ್ಟಿಗೆ ಯಶಸ್ಸು ಕಂಡಿದೆ.

ಬೃಹತ್ ನೀರಾವರಿ ಸಚಿವರೂ ಆಗಿರುವ ಡಿ.ಕೆ. ಶಿವಕುಮಾರ ಅವರು ಯುಕೆಪಿ ಹಂತ-೩ರ ಅನುಷ್ಠಾನದ ಬಗೆಗೆ ನಡೆದಿರುವ ಪ್ರಯತ್ನಗಳ ಬಗೆಗೆ ವಿವರಿಸುವ ಪ್ರಯತ್ಮ ಮಾಡಿದ್ದಾರಾದರೂ ಯೋಜನೆ ವಿಳಂಭಕ್ಕೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳತ್ತ ಬೊಟ್ಟು ಮಾಡಿದ್ದಾರೆ.

ಜತೆಗೆ ಯೋಜನಾನುಷ್ಠಾನಕ್ಕೆ ಬೇಕಾಗುವ ೨ ಲಕ್ಷ ಕೋಟಿ ಹಣ ಎಲ್ಲಿಂದ ತರುವುದು ಎನ್ನುವ ಅಸಹಾಯಕತೆ ಕೂಡ ವ್ಯಕ್ತ ಪಡಿಸಿದಾಗ, ಅದಕ್ಕೆ ಸೂಕ್ತ ತಿರುಗೇಟು ನೀಡಿರುವ ಪೂಜಾರ್ ಅವರು ಕೃಷ್ಣ ಅವರ ಕಾಲದಲ್ಲಿ ಯೋಜನಾನುಷ್ಠಾನಕ್ಕೆ ಇದ್ದ ವೇಗ ಹಾಗೆ ಇದ್ದಿದ್ದರೆ ಯೋಜನೆ ಪೂರ್ಣಗೊಂಡು ಹತ್ತು ಹದಿನೈದು ವರ್ಷಗಳಾಗುತ್ತಿತ್ತು. ಸರ್ಕಾರಗಳ ವಿಳಂಭ ನೀತಿಯಿಂದಾಗ ಯೋಜನಾ ವೆಚ್ಚ ೨ ಲಕ್ಷ ಕೋಟಿಗೆ ಬಂದು ತಲುಪಿದೆ. ಹೀಗೆ ಬಿಟ್ಟರೆ ೪ ಲಕ್ಷ ಕೋಟಿಗೆ ತಲುಪಲಿದೆ ಎನ್ನುವ ಎಚ್ಚರಿಕೆ ನೀಡಿದರು.

ಭೂಸ್ವಾಧೀನ ವಿಷಯದಲ್ಲಿ ರೈತರಿಗೆ ಕೊಡಬೇಕಾದ ಪರಿಹಾರ ಕೊಡಲೇ ಬೇಕಾಗುತ್ತದೆ. ಭೂಮಿ‌ ಕಳೆದುಕೊಳ್ಳಲಿರುವ ರೈತರಿಗೆ ಅಕ್ಕಪಕ್ಕದ ಜಮೀನುಗಳ ಬೆಲೆಗಳಿಗೆ ಅನುಸಾರ ಪರಿಹಾರ ಕೊಡಲೇ ಬೇಕು. ಅದರಲ್ಲಿ ರಾಜಿಯೇ ಇಲ್ಲ. ರೈತರಿಗೆ ಕನ್ಸಂಟ್ ಅವಾಡ್೯ ಕೊಡಲು ಸರ್ಕಾರ ಸೂಕ್ತ ನಿರ್ಧಾರಕ್ಕೆ ಬರಬೇಕು. ರೈತರೊಂದಿಗೆ ನಾವೂ ಮಾತನಾಡಲು ಬರುತ್ತೇವೆ ಎನ್ನುವ ಖಡಕ್ ಮಾತು‌ ಹೇಳಿದಾಗ, ಡಿಸಿಎಂ ಡಿ.ಕೆ. ಶಿವಕುಮಾರ್ , ಯೋಜನಾನುಷ್ಠಾನ ಕುರಿತು ಈಗಾಗಲೇ ಸರ್ಕಾರ ಸಾಕಷ್ಟು ಚರ್ಚೆ ಮಾಡಿದೆ. ಜನಪ್ರತಿನಿಧಿ ಗಳೊಂದಿಗೆ ಸಭೆಗಳನ್ನೂ ನಡೆಸಿದೆ. ಮುಂದಿನ ೧೫ ದಿನಗಳಲ್ಲಿ ರೈತರ ಸಭೆ ಕರೆಯುವ ಭರವಸೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಎರಡುವರೆ ವರ್ಷಗಳಾಗುತ್ತಿದೆ. ಈ ಅವಧಿಯಲ್ಲಿ ಮಂಡಿಸಲಾದ ಬಜೆಟ್ ಗಳಲ್ಲಿ ಯುಕೆಪಿಗಾಗಿ ನಯ್ಯಾಪೈಸೆ ಮೀಸಲಿಡುವ ಗೋಜಿಗೆ ಹೋಗಿಲ್ಲ. ಬರಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತ ಬಂದಿದೆ. ಕೇಂದ್ರ ಸರ್ಕಾರ. ಕೃಷ್ಣ ನ್ಯಾಯಾಧೀಕರಣ ಅಧಿಸೂಚನೆ ಹೊರಡಿಸುವ ಮುನ್ನವೇ

ಭೂಸ್ವಾಧೀನ, ಪರಿಹಾರ ಹಂಚಿಕೆ, ಪುನರ್ ವಸತಿ, ಪುನರ್ ನಿರ್ಮಾಣ ಕೆಲಸಗಳು ಪೂರ್ಣಗೊಳ್ಳಬೇಕು. ಅಂದಾಗ ಮಾತ್ರ ಹಂಚಿಕೆ ನೀರಿನ ಪ್ರಯೋಜನ ಪಡೆಯಲು ಸಾಧ್ಯವಾಗಲಿದೆ.‌ ಈ ಹಿಂದೆ ೨೦೧೩ ರ ಚುನಾವಣೆ ವೇಳೆ ಪಾದಯಾತ್ರೆ ನಡೆಸಿ ಐದು ವರ್ಷಗಳಲ್ಲಿ

ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಭರವಸೆ ನೀಡಿದ್ದರೂ ಪ್ರಯೋಜನವಾಗಲಿಲ್ಲ. ೨೦೨೩ ರ ಚುನಾವಣೆಯಲ್ಲಿ ಯುಕೆಪಿ ಯೋಜನೆ ಪೂರ್ಣಗೊಳಿಸಲು ಪ್ರತಿವರ್ಷ ೫೦ ಸಾವಿರ ಕೋಟಿ ಖರ್ಚು ಮಾಡುವುದಾಗಿ ಹೇಳಿದ್ದರೂ ಇದುವರೆಗೂ ಅತ್ತ ತಿರುಗಿ ಕೂಡ ನೋಡುತ್ತಿಲ್ಲ. ಎಲ್ಲದಕ್ಕೂ ತಾಂತ್ರಿಕ ಕಾರಣ ನೀಡುವ ಕೆಲಸ ನಡೆದಿದೆ.

ಒಂದೊಮ್ಮೆ ಕೇಂದ್ರ ನ್ಯಾಯಾಧೀಕರಣ ವರದಿಯ ಅಧಿಸೂಚನೆ ಹೊರಡಿಸಿದಲ್ಲಿ ಹಂಚಿಕೆ ನೀರನ್ನು ಬಳಸಿಕೊಳ್ಳಲಾದರೂ ಯೋಜನೆ ಪೂರ್ಣಗೊಳ್ಳಬೇಕಿದೆ. ಇಲ್ಲದೆ ಹೋದಲ್ಲಿ ಯುಕೆಪಿ ಹಂತ -೩ ಎನ್ನುವುದು ಬರಿ ಮರಿಚಿಕೆ ಆಗಿ ಉಳಿಯಲಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top