ಹುಟಗಿ-ಗದಗ ಡಬಲ್ ಲೈನ್ ರೈಲು ಮಾರ್ಗದ ಹಿಂದೆ ರಣ ರೋಚಕ ಕಥೆ ಇದೆ. ಮೀಟರ್ ಗೇಜ್ ಮಾರ್ಗವಾಗಿದ್ದ ಇದು ಇಂದು ದ್ವಿಪಥ ಮಾರ್ಗವಾಗಿ ಪರಿವರ್ತನೆಗೊಂಡಿದ್ದು, ಇದರ ಹಿಂದೆ ಬಹುದೊಡ್ಡ ಹೋರಾಟದ ಕಥೆ ಇದೆ.
ರಾಜ್ಯದಲ್ಲಷ್ಟೆ ಅಲ್ಲ, ಇಡೀ ದೇಶದಲ್ಲಿ ರೈಲ್ವೆ ಕ್ರಾಂತಿಗೆ ಮುನ್ನುಡಿ ಬರೆದವರು ಹಿರಿಯ ಕಾಂಗ್ರೆಸ್ಸಿಗ, ಮಾಜಿ ಕೇಂದ್ರ ಸಚಿವ ದಿ.ಸಿ.ಕೆ. ಜಾಫರ್ ಷರಿಫ್. 90 ರ ದಶಕದಲ್ಲಿ ಮಾಜಿ ಪ್ರಧಾನಿ ದಿ. ಪಿ.ವಿ.ನರಸಿಂಹರಾವ್ ಅವರ ಕೇಂದ್ರ ಸಚಿವ ಸಂಪುಟದಲ್ಲಿ ರೈಲ್ವೆ ಸಚಿವರಾಗಿದ್ದ ಜಾಫರ್ ಷರೀಫ್ ಅವರು ದೇಶದಲ್ಲಿನ ಬಹುತೇಕ ಎಲ್ಲ ಮೀಟರ್ ಗೇಜ್ ಮಾರ್ಗಗಳನ್ನು ಬ್ರಾಡ್ ಗೇಜ್ ಮಾರ್ಗಗಳನ್ನಾಗಿ ರೂಪಿಸಲು ಮಹತ್ತರ ನಿರ್ಧಾರ ಕೈಗೊಂಡು ಅನುಷ್ಠಾನಕ್ಕೆ ಮುಂದಾದರು.
ಅಲ್ಲಿಯವರೆಗೂ ಮೀಟರ್ ಗೇಜ್ ಆಗಿದ್ದ ಹುಟಗಿ-ಗದಗ ರೈಲು ಮಾರ್ಗ ಬ್ರಾಡ್ ಗೇಜ್ ಆಗಿ ಪರಿವರ್ತನೆಗೊಳ್ಳುವ ಮಾರ್ಗಗಳ ಪಟ್ಟಿಗೆ ಸೇರ್ಪಡೆ ಆಯಿತು. ಯಾವಾಗ ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಗೆ ರೂಪಾಂತರ ಗೊಳ್ಳುವ ಕಾಮಗಾರಿ ಆರಂಭವಾಯಿತೋ ಅದರ ಬೆನ್ನಲ್ಲೆ ಬ್ರಾಡ್ ಗೇಜ್ ಗಾಗಿನ ಹೋರಾಟವೂ ಆರಂಭಗೊಂಡಿತು.
ಕಾಕತಾಳಿಯ ಎನ್ನುವಂತೆ ಆಲಮಟ್ಟಿ ಜಲಾಶಯದಲ್ಲಿ ಹಿನ್ನೀರು ನಿಲ್ಲಿಸಿದ್ದರಿಂದ ಹುಬ್ಬಳ್ಳಿ – ವಿಜಯಪುರ ಹೆದ್ದಾರಿಯಲ್ಲಿನ ಕೋರ್ತಿ -ಕೊಲ್ಹಾರ ಸೇತುವೆ ಮತ್ತು ಅನಗವಾಡಿ ಸೇತುವೆಗಳು ಕೂಡ ಮುಳುಗಡೆ ಆಗಿ ಪ್ರಮುಖ ರಸ್ತೆಯು ಕೂಡ ಬಂದ್ ಆಯಿತು. ಇದು ಪ್ರಯಾಣಿಕರ ತುಂಬ ತೊಂದರೆ ಆಗಿ ಪರಿಣಮಿಸಿತು. ಸುತ್ತು ಬಳಸಿ ಪ್ರಯಾಣಿಸಬೇಕಾಯಿತು.
ಮೀಟರ್ ಗೆಜ್ ಹಳಿಗಳನ್ನು ಕಿತ್ತು ಹಾಕಿದ ಬಳಿಕ ಬ್ರಾಡ್ ಗೇಜ್ ಕಾಮಗಾರಿಯಲ್ಲಿ ವಿಳಂಬ ನೀತಿ ಶುರುವಾಯಿತು. ಪರಿಣಾಮವಾಗಿ ರಸ್ತೆ ಮತ್ತು ರೈಲ್ವೆ ಪ್ರಯಾಣ ನಂಬಿದ್ದ ಜನತೆ ಇನ್ನಿಲ್ಲದ ತೊಂದರೆ ಅನುಭವಿಸಲಾರಂಭಿಸಿದರು.
ಬ್ರಾಡ್ ಗೇಜ್ ಮಾರ್ಗ ವಿಳಂಬ ನೀತಿ ಖಂಡಿಸಿ ಗದಗ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಹೋರಾಟಗಳು ಆರಂಭಗೊಂಡವು.
ಹೋರಾಟದ ಕಾವು ದಿನದಿಂದ ದಿನಕ್ಕೆ ಹೆಚ್ಚಾಯಿತು. ರೈಲ್ವೆ ಹಳಿ ಕಿತ್ತು ಹಾಕಿದ ಪ್ರಸಂಗಗಳು ನಡೆದವು. ಒಂದು ಹಂತದಲ್ಲಿ ರೈಲಿಗೆ ಬೆಂಕಿ ಹಚ್ಚುವ ಪ್ರಯತ್ನ ಕೂಡ ನಡೆಯಿತು. ಹೋರಾಟದ ಮುಂಚೂಣಿಯಲ್ಲಿದ್ದ ಮುಖಂಡರ ವಿರುದ್ಧ ಪ್ರಕರಣಗಳು ದಾಖಲಾದವು.
ನಿರಂತರ ಹೋರಾಟದ ವೇಳೆ ವಿಜಯಪುರ ಗಾಂಧಿ ವೃತ್ತ ಮತ್ತು ರೈಲ್ವೆ ನಿಲ್ದಾಣದಲ್ಲಿ ರಾಜ್ಯಮಟ್ಟದ ಪತ್ರಿಕೆ ಯೊಂದಕ್ಕೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ ಉದಾಹರಣೆಗಳು ಇವೆ. ಅಷ್ಟೆ ಅಲ್ಲ ಖಾಸಗಿ ಸಾರಿಗೆ ಸಂಸ್ಥೆಯೊಂದರ ಬಸ್ ಸಂಚಾರ ಕೂಡ ಕೆಲ ದಿನ ಬಂದಾಗಿತ್ತು. ವಿಜಯಪುರ ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ರೈಲ್ವೆ ಮಾರ್ಗದುದ್ದಕ್ಕೂ ಹೋರಾಟ ನಿರಂತರವಾಗಿ ನಡೆದ ಪರಿಣಾಮ ಹಂತ ಹಂತವಾಗಿ ಹುಟಗಿ- ಗದಗ ಬ್ರಾಡ್ ಗೇಜ್ ಮಾರ್ಗ ಸಜ್ಜಾಗಿ ಪ್ರಯಾಣಿಕರ ಸೇವೆ ಆರಂಭಿಸಿತು.
ಬ್ರಾಡ್ ಗೇಜ್ ಮಾರ್ಗ ನಿರ್ಮಾಣದ ಬಳಿಕ ಈ ಮಾರ್ಗದಲ್ಲಿನ ದಟ್ಟಣೆ ಹೆಚ್ಚಾಯಿತು. ಜತೆಗೆ ಕೂಡಗಿ ಬಳಿ ವಿದ್ಯುತ್ ಸ್ಥಾವರ ಘಟಕ ತಲೆ ಎತ್ತಿತು. ಆಗ ಕೇಂದ್ರ ಸರ್ಕಾರ ಕೂಡಗಿ ವಿದ್ಯುತ್ ಸ್ಥಾವರಕ್ಕೆ ಕಲ್ಲಿದ್ದಲು ಪೂರೈಸಲು ದ್ವಿಪಥ ಮಾರ್ಗ ರಚನೆಗೆ ಮುಂದಾಯಿತು. ಬಳಿಕ ಈ ಭಾಗದ ಜನತೆಯ ಒತ್ತಾಯ, ಸಂಸದರಾದ ರಮೇಶ ಜಿಗಜಿಣಗಿ, ಪಿ.ಸಿ. ಗದ್ದಿಗೌಡರ. ಒತ್ತಾಸೆ ಫಲವಾಗಿ ಇಡೀ ಹುಟಗಿ – ಬಾಗಲಕೋಟೆ – ಗದಗ ಮಾರ್ಗವನ್ನು ದ್ವಿಪಥ ಮಾರ್ಗವಾಗಿ ರೂಪಿಸಲು ಕೇಂದ್ರ ನಿರ್ಧರಿಸಿತು. ಇಂದು ಹುಟಗಿ-ಗದಗ ದ್ವೀಪಥ ಮಾರ್ಗ ರಚನೆ ಆಗಿ ಸಾರ್ವಜನಿಕ ಸೇವೆಗೆ ಸಜ್ಜಾಗಿದೆ.
ಒಂದು ಕಾಲಕ್ಕೆ ಮೀಟರ್ ಗೇಜ್ ಆಗಿದ್ದ ಹುಟಗಿ-ಗದಗ ರೈಲ್ವೆ ಮಾರ್ಗ ಇಂದು ದ್ವೀಪಥ ಮಾರ್ಗವಾಗಿರುವುದರಿಂದ ಗದಗ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ ಅಭಿವೃದ್ಧಿ ಬಾಗಿಲು ಕೂಡ ತೆರೆದಂತಾಗಿದೆ. ಕೃಷಿ, ಕೈಗಾರಿಕೆ, ವಾಣಿಜ್ಯ ಕ್ಷೇತ್ರಗಳ ಪ್ರಗತಿಗೆ ಈ ಮಾರ್ಗ ಪೂರಕವಾಗಲಿದೆ ಎಂದು ಬಹುತೇಕರು ಅಭಿಪ್ರಾಯ ಪಡುತ್ತಿದ್ದಾರೆ.
ದೇಶದ ಎಲ್ಲ ಪ್ರದೇಶಗಳ ಸಂಚಾರಕ್ಕೆ ಹೆಚ್ಚಿನ ಹೆಚ್ಚಿನ ಪ್ರಮಾಣದಲ್ಲಿ ರೈಲುಗಳ ಸಂಚಾರ ಆರಂಭಗೊಳ್ಳಲಿದೆ. ಪ್ರವಾಸೋದ್ಯಮ ಅಭಿವೃದ್ಧಿ ವೇಗ ಪಡೆದುಕೊಳ್ಳಲಿದೆ. ವಿಜಯಪುರ, ಬಾಗಲಕೋಟೆ ಮತ್ತು ಗದಗ ಜಿಲ್ಲೆಗಳ ಪ್ರವಾಸಿ ತಾಣಗಳ ಜತೆಗೆ ಇತರೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಸುಲಭವಾಗಿ ಭೇಟಿ ನೀಡಲು ಸಾಕಷ್ಟು ಅನುಕೂಲವಾಗಲಿದೆ ಎನ್ನುವ ಸದಾಭಿಪ್ರಾಯವನ್ನು ಜನತೆ ಹೊಂದಿದ್ದಾರೆ. ಅದಕ್ಕೆ ತಕ್ಕುದಾಗಿ ರೈಲ್ವೆ ಇಲಾಖೆ ನಡೆದುಕೊಳ್ಳಬೇಕಿದೆ. ಅಂದಾಗ ಮಾತ್ರ ಇದೆಲ್ಲ ಸಾಧ್ಯವಾಗಲಿದೆ.
- ವಿಠ್ಠಲ ಆರ್. ಬಲಕುಂದಿ




