ಕೆರೂರಲ್ಲಿ ಹಠಾತ್ ರಾಷ್ಟ್ರೀಯ ಹೆದ್ದಾರಿ ತಡೆ

ಕೆರೂರ: ಇಲ್ಲಿಯ ಎಪಿಎಂಸಿ ಬಳಿ ಏಕಾಏಕಿಯಾಗಿ ರಸ್ತೆ ಬದಿ ನಿಲ್ಲಿಸಿದ ವಾಹನಗಳ ಜಖಂಗೊಂಡ ಹಿನ್ನಲೆಯಲ್ಲಿ ಮಂಗಳವಾರ ಹಠಾತ್ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಟೈರ್ ಗಳಿಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಇಲ್ಲಿಯ ಪೊಲಿಸ ಠಾಣೆ ಪಿಎಸ್‌ಐ ಭೀಮಪ್ಪ ರಬಕವಿ ಸುಗಮ ರಸ್ತೆ ಸಂಚಾರಕ್ಕೆ ನಿಮಿತ್ತ ಕೆಲ ವಾಹನಗಳ ಗಾಜು ಒಡೆದಿದ್ದಾರೆ ಎಂಬ ಉಹಾಪೋಹ ಕಾರಣದಿಂದ ಆಕ್ರೋಶಗೊಂಡ ನೂರಾರು ಚಾಲಕರ ಸಮೂಹ ದಿಢೀರ್ ಹೆದ್ದಾರಿ ತಡೆ ನಡೆಸಿದರು.

ಪಿಎಸ್‌ಐ ವರ್ತನೆಗೆ ವಾಹನ ಚಾಲಕರು ಆಕ್ರೋಶ ವ್ಯಕ್ತಪಡಿಸಿ ಹೆಸ್ಕಾಂ ಕಚೇರಿ ಎದುರು ಟೈರ್ ಗೆ ಬೆಂಕಿ ಹಚ್ಚಿ ಸುಮಾರು ನಾಲ್ಕು ತಾಸು ಹೆದ್ದಾರಿ ತಡೆದ ಕಾರಣ ಹುಬ್ಬಳ್ಳಿ ಸೋಲಾಪುರ ಕಡೆಗೆ ತೆರಳುವ ಪ್ರಯಾಣಿಕರಿಗೆ ಭಾರಿ ತೊಂದರೆ ಉಂಟಾಯಿತು.

ನಾಲ್ಕು ವಾಹನ ಜಖಂ:

ನಾಲ್ಕು ವಾಹನಗಳ ಗಾಜುಗಳು ಪುಡಿ ಪುಡಿಯಾದ ಹಿನ್ನಲೆಯಲ್ಲಿ ಪರಸ್ಥಿತಿ ಬಿಗಡಾಯಿಸಿ ವಿಕೋಪಕ್ಕೆ ಹೋಗುತ್ತಿತ್ತು. ಆಗಾಗ್ಗೆ ಮಳೆರಾನ ಕೃಪೆಯಿಂದ ಸೇರಿದ ಜನಸಮೂಹದ ಆಕ್ರೋಶ ಶಮನಗೊಂಡಿತು.

ಹೆದ್ದಾರಿ ತೆರವುಗೊಳಿಸಿದ ಎಸ್ಪಿ:

ಸುಮಾರು ನಾಲ್ಕು ತಾಸಿಗೂ ಹೆಚ್ಚು ಕಾಲ ಹುಬ್ಬಳ್ಳಿ ಸೋಲಾಪುರ ಸ್ಥಗಿತಗೊಂಡಿದ್ದ ಹೆದ್ದಾರಿ ಪ್ರತಿಭಟನಾಕಾರರ ಮನವೊಲಿಸಿ ಸುಗಮ ಸಂಚಾರಕ್ಕೆ ಎಸ್ಪಿ ಸಿದ್ಧಾರ್ಥ ಗೋಯಲ್ ಅನವು ಮಾಡಿಕೊಟ್ಟು ಪ್ರಸಂಶೆಗೆ ಪಾತ್ರರಾದರು.

ಎರಡು ಬದಿಯಲ್ಲಿ ಸುಮಾರು ಮೂರ್ನಾಲ್ಕು ಕಿಮೀ ಉದ್ದಕ್ಕೂ ಬಸ್, ಲಾರಿ, ಕಾರು, ಟ್ರ‍್ಯಾಕ್ಟರ್, ಟಂಟಂ ಸೇರಿದಂತೆ ವಿವಿಧ ಐದು ಸಾವಿರಕ್ಕೂ ಅಧಿಕ ವಾಹನಗಳು ನಿಂತಲ್ಲೆ ನಿಂತಿದ್ದನ್ನು ಗಮನಿಸಿ ಒಂದು ತಾಸಿಗೂ ಅಧಿಕ ಕಾಲ ಹೆದ್ದಾರಿಯಲ್ಲೆ ಬಿಡುಬಿಟ್ಟು ಠೀಕಾಣಿ ಹೂಡಿ ವಾಹನಗಳ ಸಂಚಾರಕ್ಕೆ ದಾರಿ ಮಾಡಿಕೊಟ್ಟರು.

ಆಗಾಗ್ಗೆ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಸಂಚಾರ ವ್ಯವಸ್ಥೆ ಸುಗಮಗೊಳಿಸಿದ್ದು ಗಮನಾರ್ಹವಾಗಿದೆ. ಹೆಚ್ಚುವರಿ ಎಸ್ಪಿ ಪ್ರಸನ್ನ ದೇಸಾಯಿ, ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ಸಿಪಿಐ ಕರಿಯಪ್ಪ ಬನ್ನೆ ಮತ್ತಿತರ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು.

ತಪ್ಪಿತಸ್ಥರ ವಿರುದ್ಧ ಕ್ರಮ:

ಹಠಾತ್ ಹೆದ್ದಾರಿ ತಡೆ, ವಾಹನಗಳ ಜಖಂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಪ್ರಕರಣದ ತನಿಖೆ ಚುಕರುಕಾಗಿ ನಡೆಯುತ್ತಿದೆ ತಪ್ಪಿತಸ್ಥರ ವಿರುದ್ದ ಹಿರಿಯ ಅಧಿಕಾರಿಗಳ ನಿರ್ದೇಶನ ಮೇರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಸ್ಪಿ ವಿಶ್ವನಾಥ ಕುಲಕರ್ಣಿ ತಿಳಿಸಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷರ ಭೇಟಿ:

ಭಾರಿ ಪ್ರಮಾಣದ ಹೆದ್ದಾರಿ ತಡೆ ನಡೆಸಿದ ಸ್ಥಳಕ್ಕೆ ಬಿಜೆಪಿ ಜಿಲ್ಲಾದ್ಯಕ್ಷ ಶಾಂತಗೌಡ ಪಾಟೀಲ ಭೇಟಿ ನೀಡಿ ತಪ್ಪಿತಸ್ಥರ ವಿರುದ್ದ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ವಾರದ ಸಂತೆ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಅಮಾಯಕರ ಮೇಲಿನ ದುಂಡಾವರ್ತನೆ ತೀವ್ರವಾಗಿ ಖಂಡಿಸಿದರು.

ಪ್ರತಿ ಮಂಗಳವಾರ ನೆರೆ ರಾಜ್ಯದ ಗಮನ ಸೆಳೆದ ಸಂತೆಗೆ ಅಪಾರ ಪ್ರಮಾಣ ರೈತರು ಆಗಮಿಸುತ್ತಿರುವ ಜನರ ಸುಗಮ ವಹಿವಾಟಿಗೆ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.

Scroll to Top