ಸೆ. 12 ರ ನಿರ್ಧಾರದತ್ತ ರೈತರ ನೋಟ

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರ ಅನುಷ್ಠಾನಕ್ಕೆ ಸ್ವಾಧೀನ ಪಡಿಸಿಕೊಳ್ಳಲಾಗುವ ಭೂಮಿಗೆ ಸರ್ಕಾರ ಕನ್ಸೆಂಟ್ ಅವಾರ್ಡ ಘೋಷಣೆ ಮಾಡಿದ ಬಳಿಕ ಯಾರೂ ನ್ಯಾಯಾಲಯಕ್ಕೆ ಹೋಗಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಲ್ಲಿ ಮಾಡಿರುವ ಮನವಿ ಸಮಯೋಚಿತವಾಗಿದೆ.

ಈಗಾಗಲೇ ಅರ್ಧ ದಶಕ ಕಾಲ ವಿಳಂಬವಾಗಿರುವ ಯೋಜನಾನುಷ್ಠಾನ ಮತ್ತಷ್ಟು ವಿಳಂಬವಾಗಲಿದೆ ಎನ್ನುವ ಮಾತು ಹೇಳಿರುವುದು ಸರಿಯಾಗಿದೆಯಾದರೂ ಸರ್ಕಾರ ರೈತರೂ ಒಪ್ಪುವಂತಹ ಕನ್ಸೆಂಟ್ ಅವಾರ್ಡ ನಿಗದಿ ಪಡಿಸಬೇಕಿದೆ. ಹೀಗೆ ಆದಲ್ಲಿ ಬಹುಶಃ ಯಾರೂ ನ್ಯಾಯಾಲಯದ ಮೆಟ್ಟಿಲು ಹತ್ತುವ ಪ್ರಮೇಯ ಬರುವುದಿಲ್ಲ. ರೈತರ ನಿರೀಕ್ಷೆ ಹಾಗೂ ಅಪೇಕ್ಷೆಗೆ ತಕ್ಕುದಾದ ಭೂ ಪರಿಹಾರ ನಿಗದಿ ಆಗಬೇಕಿದೆ.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಸಾಕಷ್ಟು ಬಾರಿ ಸಭೆಗಳು ನಡೆದಿದ್ದು, ರೈತರು ಹಾಗೂ ಜನಪ್ರತಿನಿಧಿಗಳ ಸಭೆಗಳು ನಡೆದಿವೆ. ಎಲ್ಲರೂ ಭೂ ಪರಿಹಾರ ಇಂತಿಷ್ಟು ಇರಬೇಕು ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಒಣ ಬೇಸಾಯ ಭೂಮಿಗೆ ಪ್ರತಿ ಎಕರೆಗೆ 20 ಲಕ್ಷ ರೂ., ನೀರಾವರಿಗೆ 24 ಲಕ್ಷ ರೂ.‌ ನಿಗದಿ ಪಡಿಸಿ, ಒಂದಿಷ್ಟು ರೈತರಿಗೆ ಪರಿಹಾರ ಧನ ಚೆಕ್ ವಿತರಿಸಿದ್ದರು. ಆದರೆ ರೈತರು ಸರ್ಕಾರ ನಿಗದಿ ಪಡಿಸಿದ ಪರಿಹಾರ ಧನಕ್ಕೆ ಒಪ್ಪದೆ ನ್ಯಾಯಾಲಯದ ಮೊರೆ ಹೋಗಿದ್ದರು.

ಕನ್ಸೆಂಟ್ ಅವಾರ್ಡ ನಿಗದಿ ವಿಷಯದಲ್ಲಿ ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕಿದೆ. ಅಳೆದು ತೂಗಿ, ಅವರು ನ್ಯಾಯಾಲಯದ ಮೆಟ್ಟಿಲು ಹತ್ತದಂತೆ ಅವರಿಗೂ ಒಪ್ಪಿಗೆ ಆಗುವಂತಹ ದರ ನಿಗದಿ ಪಡಿಸುವ ಕೆಲಸ ಮಾಡಬೇಕಿದೆ. ಸರ್ಕಾರದ ಒಪ್ಪಿತ ದರಕ್ಕೆ ಶಾಸಕರು ಅನುಮೋದನೆ ನೀಡಬೇಕಿದೆ. ಜತೆಗೆ ಒಪ್ಪಿತ ಭೂ ಪರಿಹಾರಕ್ಕೆ ರೈತರ ಮನವೊಲಿಸುವ ಕೆಲಸ ಮಾಡಬೇಕಿದೆ.

ಒಪ್ಪಿತ ಭೂ ಪರಿಹಾರ ನಿಗದಿ ಪಡಿಸಲು ಸೆ. 12 ರಂದು ಸಭೆ ಆಯೋಜನೆಗೊಂಡಿದೆ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆಯುವ ಸಭೆ ಅತ್ಯಂತ ನಿರ್ಣಾಯಕ ವಾಗಿದ್ದು, ಎಲ್ಲರ ಚಿತ್ತ ಈಗ ಸೆ. 12 ರತ್ತಲೇ ನೆಟ್ಟಿದೆ. ಒಪ್ಪಿತ ದರ ನಿಗದಿ ರೈತರ ನಿರೀಕ್ಷೆಗೆ ತಕ್ಕಂತೆ ಆಗಲಿ ಎನ್ನುವುದು ಬಹುತೇಕರ ಆಶಯವಾಗಿದ್ದು, ಸರ್ಕಾರ ಕೂಡ ರೈತರು ಒಪ್ಪುವಂತಹ ಪರಿಹಾಧನ ನಿಗದಿ ಪಡಿಸಲಿದೆ ಎನ್ನಲಾಗುತ್ತಿದೆ. ಯಾವುದಕ್ಕೂ ಕಾಯ್ದು ನೋಡಬೇಕಷ್ಟೆ.

Scroll to Top