ಬಾಗಲಕೋಟೆ: “ನನ್ನ ನಾಯಕ ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ” ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಸಾರ್ವಜನಿಕ ವೇದಿಕೆಯಲ್ಲಿ ಹೇಳಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ, ಮೇಲ್ಮನೆ ಸದಸ್ಯ ಯತೀಂದ್ರ ಅವರು ಸತೀಶ್ ಜಾರಕಿಹೊಳಿ ನಾಯಕತ್ವದ ಪರ ಬ್ಯಾಟಿಂಗ್ ಮಾಡಿದ್ದು ರಾಜ್ಯ ರಾಜಕಾರಣದಲ್ಲಿ ತಲ್ಲಣವನ್ನುಂಟು ಮಾಡಿದೆ.
ಮೊನ್ನೆ ತಾನೇ ಮುಧೋಳದಲ್ಲಿ ನಡೆದ ಜಿಡಗಣ್ಣ-ಬಾಲಣ್ಣ ಮೂರ್ತಿಗಳ ಅನಾವರಣ ಕಾರ್ಯಕ್ರಮದಲ್ಲಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಎಲ್ಲರ ನಿರೀಕ್ಷೆಯಂತೆ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ. ಯಾರಿಂದಲೂ ಅವರು ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ನೀಡಿದ್ದ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಸಿದ್ದರಾಮಯ್ಯ ಉತ್ತರಾಧಿಕಾರಿ:
ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಸಿದ್ದರಾಮಯ್ಯ ಅವರ ಬಳಿಕ ಅವರ ಸ್ಥಾನವನ್ನು ತುಂಬಬಲ್ಲ ಕೆಲವೇ ಕೆಲವರ ಪೈಕಿ ಸತೀಶ್ ಜಾರಕಿಹೊಳಿ ಅವರು ಒಬ್ಬರಾಗಿದ್ದಾರೆ. ತಮ್ಮ ತಂದೆಯವರು ನಂಬಿರುವ ತತ್ವ ಸಿದ್ಧಾಂತದಲ್ಲೇ ನಂಬಿಕೆ ಇಟ್ಟು ರಾಜಕಾರಣ ಮಾಡುತ್ತಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ನಂತರ 2028 ರಲ್ಲಿ ಅವರು ಮುಖ್ಯಮಂತ್ರಿ ಆದರೆ ಒಳ್ಳೆಯದು ಎನ್ನುವ ಮಾತನ್ನಾಡಿದ್ದು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನವನ್ನುಂಟು ಮಾಡಿದೆ.
ಪೈಪೋಟಿ ನಡುವೆ ಸತೀಶ್ ಹೆಸರು:
ರಾಜ್ಯ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟು, ಆ ಸ್ಥಾನ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನಕ್ಕೆ ಇಳಿದಿರುವುದರಿಂದ ಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆಯುತ್ತಿದೆ. ಇದು ಪಕ್ಷದಲ್ಲಿನ ಬಣ ರಾಜಕಾರಣಕ್ಕೂ ಕಾರಣವಾಗಿದೆ. ನಾಯಕತ್ವ ವಿಷಯದ ಬಗೆಗೆ ಯಾರೂ ಬಹಿರಂಗವಾಗಿ ಮಾತನಾಡಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದ್ದರೂ ಅದಕ್ಕೆ ಕ್ಯಾರೇ ಎನ್ನದೇ ಕೆಲವರು ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಕುರಿತು ಮಾತನಾಡುತ್ತಲೇ ಇದ್ದಾರೆ. ಮುಖ್ಯಮಂತ್ರಿ ಸ್ಥಾನದ ಬಗೆಗೆ ಮಾತನಾಡಿರುವವರಿಗೆ ಪಕ್ಷ ನೋಟಿಸ್ ಜಾರಿ ಮಾಡಿದ್ದರೂ ಅದರಿಂದ ಯಾವುದೇ ಪರಿಣಾಮ ಆದಂತೆ ಕಾಣಿಸುತ್ತಿಲ್ಲ. ವರಿಷ್ಠರ ಎಚ್ಚರಿಕೆ ಮಧ್ಯೆಯೂ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಕುರಿತು ಚರ್ಚೆಗಳು ನಿರಂತರವಾಗಿ ನಡೆಯುತ್ತಲೇ ಇವೆ.
28ಕ್ಕಲ್ಲದಿದ್ದರೆ 33ಕ್ಕೆ:
ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ಮುಖ್ಯಮಂತ್ರಿ ಸ್ಥಾನದ ಬದಲಾವಣೆ ಚರ್ಚೆಯ ಮಧ್ಯೆಯೇ ಮುಧೋಳದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಮಾಜಿ ಶಾಸಕ ರಾಜುಗೌಡ ಅವರು ಮಾತನಾಡುತ್ತಾ “ಸತೀಶ್ ಅಣ್ಣಾ ಮುಖ್ಯಮಂತ್ರಿ ಆಗಲು 28ರ ವರೆಗೆ ಕಾಯಬೇಡಿ. ಈಗಲೇ ಅವಕಾಶ ಸಿಕ್ಕರೆ ಆಗಿಬಿಡಿ. 28ಕ್ಕೆ ಯಾವುದೇ ಕಾರಣಕ್ಕೂ ಬಿಜೆಪಿ ಅಧಿಕಾರಕ್ಕೆ ಬರುತ್ತದೆ” ಎನ್ನುವ ಸಲಹೆ ಮಾಡಿದ್ದರು.
ರಾಜುಗೌಡರ ಮಾತಿಗೆ ಸಚಿವ ಜಾರಕಿಹೊಳಿ ತಿರುಗೇಟು ನೀಡಿ “ಮುಖ್ಯಮಂತ್ರಿ ಆಗಲು ಅವಸರ ಏನಿಲ್ಲ. 28ಕ್ಕೆ ಸಾಧ್ಯವಾಗದಿದ್ದರೆ 33ಕ್ಕೆ ನೋಡೋಣ” ಎಂದು ಹೇಳುವ ಮೂಲಕ ವಿಷಯವನ್ನು ಅಲ್ಲಿಗೆ ಮುಗಿಸುವ ಪ್ರಯತ್ನ ಮಾಡಿದ್ದರು.
ಜವಾಬ್ದಾರಿ ತೆಗೆದುಕೊಳ್ಳಲಿ:
ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರು ಬೆಳಗಾವಿ ಜಿಲ್ಲೆಯ ಗೋಕಾಕನ ಕಪ್ಪಲಗುದ್ದಿಯಲ್ಲಿ ಕನಕದಾಸರ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರು “ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಅವರ ಉತ್ತರಾಧಿಕಾರಿ ಆಗಬೇಕು. ಸಿದ್ದರಾಮಯ್ಯ ಅವರಂತೆಯೆ ಜಾರಕಿಹೊಳಿ ಅವರು ಸಾಮಾಜಿಕ ಬದ್ಧತೆ ಉಳ್ಳವರು, ಸಾಮಾಜಿಕ ನ್ಯಾಯದ ಬಗೆಗೆ ಕಾಳಜಿ ಉಳ್ಳವರು, ರಾಜಕೀಯ ಬುದುಕಿನ ಕೊನೆ ಕಾಲದಲ್ಲಿ ಇದ್ದಾರೆ. ಅವರ ಬಳಿಕ ಜಾರಕಿಹೊಳಿ ಅವರು ಈ ಜವಾಬ್ದಾರಿ ವಹಿಸಿಕೊಳ್ಳಬೇಕು. ಅವರನ್ನು ಎಲ್ಲ ನಾಯಕರು ಒಪ್ಪಿಕೊಳ್ಳುತ್ತಾರೆ ” ಎಂದರು.
ಮೊದಲ ಬಾರಿ ಉತ್ತರಾಧಿಕಾರಿ ಮಾತು:
ಕಾಂಗ್ರೆಸ್ಸಿನಲ್ಲಿ ಇದುವರೆಗೂ ಸಿದ್ದರಾಮಯ್ಯ ಬಳಿಕ ಇಂತವರು ಉತ್ತರಾಧಿಕಾರಿ ಆಗಬೇಕು ಎನ್ನುವ ಮಾತನ್ನು ಆಡಿರಲಿಲ್ಲ. ಮೊದಲ ಬಾರಿಗೆ ಯತೀಂದ್ರ ಅವರು ಸಿದ್ದರಾಮಯ್ಯ ನಂತರ ಉತ್ತರಾಧಿಕಾರಿ ಜವಾಬ್ದಾರಿ ವಹಿಸಿಕೊಳ್ಳಬೇಕು ಎನ್ನುವ ಸಲಹೆ ಮಾಡಿದ್ದಾರೆ. ಯತೀಂದ್ರ ಅವರ ಸಲಹೆಯನ್ನು ರಾಜ್ಯ ಕಾಂಗ್ರೆಸ್ಸಿಗರು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳಲಿದ್ದಾರೆ ಎನ್ನುವುದು ಸದ್ಯದ ಕುತೂಹಲವಾಗಿದೆ. ಮುಖ್ಯಮಂತ್ರಿ ಬದಲಾವಣೆ ಬಗೆಗೆ ನಿತ್ಯ ಚರ್ಚೆ ನಡೆಯುತ್ತಿರುವಾಗಲೇ ಯತೀಂದ್ರ ಅವರು ಉತ್ತರಾಧಿಕಾರತ್ವದ ಬಗೆಗೆ ಮಾತನಾಡುವ ಜತೆಗೆ 28ರ ವರೆಗೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಅಲ್ಲಿಯ ವರೆಗೂ ಯಾವುದೇ ಬದಲಾವಣೆ ಆಗದು ಎಂದಿದ್ದಾರೆ.
ನಾಯಕತ್ವ ಒಪ್ಪಿಸುವ ತಂತ್ರ:
“ನನ್ನ ನಾಯಕ ಮುಂದಿನ ಮುಖ್ಯಮಂತ್ರಿ” ಎನ್ನುವ ಅಬಕಾರಿ ಸಚಿವರ ಮಾತು, ಯತೀಂದ್ರ ಅವರ ಉತ್ತರಾಧಿಕಾರಿ ಮಾತುಗಳ ಹಿಂದೆ ನಿಷ್ಠೆ ಕ್ರೋಢೀಕರಿಸುವ ತಂತ್ರ ಶುರುವಾಗಿದೆ ಎನ್ನುವ ಸಂಶಯ ಸಹಜವಾಗಿಯೇ ಮೂಡುತ್ತದೆ. ಸಿದ್ಧರಾಮಯ್ಯ ಬೆಂಬಲಗರನ್ನೆಲ್ಲ ಸತೀಶ್ ಜಾರಕಿಹೊಳಿ ಅವರ ನಿಷ್ಠರನ್ನಾಗಿಸಿ, ಅವರ ನಾಯಕತ್ವ ಒಪ್ಪಿಕೊಳ್ಳುವಂತೆ ಮಾಡುವ ಪ್ರಯತ್ನ ಇದಾಗಿರಬಹುದು. ಸಚಿವ ತಿಮ್ಮಾಪುರ ಮತ್ತು ಯತೀಂದ್ರ ಹೇಳಿಕೆ ಗಮನಿಸಿದಾಗ ಸಿದ್ದರಾಮಯ್ಯ ಬೆಂಬಲಿಗರೆಲ್ಲ ಮುಂದಿನ ದಿನಗಳಲ್ಲಿ ಸತೀಶ್ ಜಾರಕಿಹೊಳಿ ನಿಷ್ಠರಾಗಿ, ಅವರು ನಾಯಕತ್ವ ಒಪ್ಪಿಕೊಳ್ಳಲಿ ಎನ್ನುವ ಸ್ಪಷ್ಟ ಉದ್ದೇಶವಿದ್ದಂತೆ ಕಾಣಿಸುತ್ತದೆ. ಮುಂದಿನ ಮುಖ್ಯಮಂತ್ರಿ, ಉತ್ತರಾಧಿಕಾರದ ಮಾತುಗಳು ರಾಜ್ಯ ಕಾಂಗ್ರೆಸ್ಸಿನಲ್ಲಿ ಯಾವ ತಿರುವು ಪಡೆದುಕೊಳ್ಳಲಿವೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.
- ವಿಠ್ಠಲ ಆರ್. ಬಲಕುಂದಿ




