ಸರ್ಕಾರದ ವರ್ಚಸ್ಸಿಗೆ ಕೈಗನ್ನಡಿ ಉಪ ಚುನಾವಣೆ

ಬಾಗಲಕೋಟೆ ವಿಧಾನಸಭೆ ಕ್ಷೇತ್ರ ಎರಡುವರೆ ವರ್ಷಕ್ಕೆ ಮತ್ತೊಮ್ಮೆ ಚುನಾವಣೆ ಎದುರಿಸಬೇಕಾದ ಅನಿವಾರ್ಯತೆ ಸೃಷ್ಟಿ ಆಗಿದೆ. ದಿ. ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದಾಗಿ ಹೊಸ ಕ್ಷೇತ್ರಾಧಿಪತಿ ಆಯ್ಕೆಗೆ ಕ್ಷೇತ್ರದ ಜನತೆ ಸಜ್ಜಾಗಬೇಕಿದೆ.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಬರೋಬ್ಬರಿ ಎರಡುವರೆ ವರ್ಷಕ್ಕೆ ಚುನಾವಣೆ ಎದುರಾಗಿರುವುದು ಸರ್ಕಾರಕ್ಕೂ ಒಂದು ಸವಾಲೇ ಸರಿ. ಕಳೆದ ಎರಡು ವರ್ಷಗಳ ಅವಧಿಯಲ್ಲಿನ ಸರ್ಕಾರದ ಸಾಧನೆಗಳನ್ನು ಒರೆಗಚ್ಚುವ ಚುನಾವಣೆ ಇದಾಗಲಿದೆ.

ಆಡಳಿತಾರೂಢ ಕಾಂಗ್ರೆಸ್ಸಿಗೆ ತನ್ನ ಸಾಧನೆ ಹೇಳಿಕೊಳ್ಳುವ ಅವಕಾಶ ಒದಗಿ ಬಂದಿದ್ದರೆ, ಪ್ರತಿಪಕ್ಷ ಬಿಜೆಪಿ, ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಲು ಸೂಕ್ತ ಸಮಯವಾಗಿದೆ. ಏತನ್ಮಧ್ಯೆ ಕ್ಷೇತ್ರದ ಮತದಾರ ಕ್ಷೇತ್ರ ಮಟ್ಟದಲ್ಲಿನ ಸಾಧನೆ ಮತ್ತು ವೈಫಲ್ಯಗಳನ್ನು ಅಳೆದ ತೂಗುವ ಸಕಾಲ ಇದಾಗಿದೆ.

ಕೈಗೆ ಬಲ ತಂದ ಮೇಟಿ:

ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲದಲ್ಲಿವೆ ಎನ್ನುವಂತೆ ಮೇಲ್ನೋಟಕ್ಕೆ ಕಾಣಿಸುತ್ತದೆ. 1997 ರಿಂದ 2008 ರವರೆಗೆ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಸಾಧಿಸುತ್ತ ಬಂದಿದೆ. ದಿ. ಶಾಸಕ ಎಚ್.ವೈ. ಮೇಟಿ ಅವರು ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಗುಳೇದಗುಡ್ಡ ವಿಧಾನಸಭೆ ಕ್ಷೇತ್ರದಿಂದ ಬಾಗಲಕೋಟೆ ಕ್ಷೇತ್ರಕ್ಕೆ ಆಗಮಿಸಿದ ನಂತರ ಕಾಂಗ್ರೆಸ್ ಸಂಘಟನೆಯಲ್ಲಿ ಭಾರಿ ಸುಧಾರಣೆ ಕಂಡು ಬಂದು 2013 ಮತ್ತು 2023 ರಲ್ಲಿ ಗೆಲುವಿನ ನಗೆ ಬೀರಿದೆ. ಈ ಗೆಲುವಿನ ಹಿಂದೆ ಪಕ್ಷಕ್ಕಿಂತ ವ್ಯಕ್ತಿ ಮುಖ್ಯವಾಗಿದ್ದರು ಎನ್ನುವುದು ಗಮನಾರ್ಹ.

ಸರ್ಕಾರದ ಬಲ:

ಮೇಟಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಿರುಸಿನ ಪೈಪೋಟಿ ನಡೆಯುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಕಾಂಗ್ರೆಸ್‌ನಲ್ಲಿ ಯಾರೆ ಅಭ್ಯರ್ಥಿ ಆದರೂ ರಾಜ್ಯದಲ್ಲಿನ ಆಡಳಿತಾರೂಢ ಪಕ್ಷವಾಗಿರುವುದರಿಂದ ವ್ಯಕ್ತಿಗಿಂತ ಪಕ್ಷ ಮುಖ್ಯವಾಗಿ ಪರಿಣಮಿಸಲಿದೆ. ಕಾಂಗ್ರೆಸ್ಸಿನಲ್ಲಿ ಆಡಳಿತ ಪಕ್ಷ ಎನ್ನುವ ಕಾರಣಕ್ಕಾಗಿ ಮುಖಂಡರ ನಡುವೆ ಟಿಕೆಟ್‌ಗಾಗಿ ಇನ್ನಿಲ್ಲದ ಪ್ರಯತ್ನ ನಡೆಯಲಿವೆ.

ಕ್ಷೇತ್ರದಲ್ಲಿ ಬಿಜೆಪಿ ಕೂಡಾ ಸಾಕಷ್ಟು ಪ್ರಬಲ ಸಂಘಟನೆ ಹೊಂದಿದೆ. ಕಳೆದ ಎರಡುವರೆ ವರ್ಷಗಳಲ್ಲಿನ ಕಾಂಗ್ರೆಸ್ ಆಡಳಿತದಲ್ಲಿನ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿಗರು ಕಾಂಗ್ರೆಸ್ ಹಣಿಯಲು ಬೇವರು ಹರಿಸಲಿದ್ದಾರೆ. ಮುಂಬರುವ ವಿಧಾನಸಭೆ ಉಪ ಚುನಾವಣೆ ಎದುರಿಸಲು ಎರಡೂ ಪಕ್ಷಗಳಲ್ಲಿ ತೆರೆಮರೆಯಲ್ಲಿ ಸಿದ್ಧತೆಗಳಂತೂ ಆರಂಭಗೊಂಡಿವೆ.

ಕ್ಷೇತ್ರ ವಶಕ್ಕೆ ಯತ್ನ:

ಕಾಂಗ್ರೆಸ್ ಕ್ಷೇತ್ರ ಉಳಿಸಿಕೊಳ್ಳಲು ಮುಂದಾದರೆ, ಕಳೆದುಕೊಂಡಿರುವ ಕ್ಷೇತ್ರವನ್ನು ಪುನಃ ತನ್ನ ವಶಕ್ಕೆ ತೆಗೆದುಕೊಳ್ಳಲು ಬಿಜೆಪಿ ಇನ್ನಿಲ್ಲದ ಪ್ರಯತ್ನ ನಡೆಸಲಿದೆ. ಬಿಹಾರ ಚುನಾವಣೆ ಉತ್ಸಾಹದಲ್ಲಿರುವ ಬಿಜೆಪಿ ಕ್ಷೇತ್ರ ಪುನರ್ ವಶಕ್ಕೆ ತನ್ನೆಲ್ಲ ಶಕ್ತಿಯನ್ನು ವಿನಿಯೋಗಿಸಲಿದೆ.

ಕ್ಷೇತ್ರದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗೆ 480 ಕೋಟಿ ರೂಪಾಯಿ ಅನುದಾನ ಬಿಡುಗಡೆ, ಕೃಷ್ಣಾ ಮೇಲ್ದಂಡೆ ಹಂತ 3ರ ಅನುಷ್ಠಾನಕ್ಕಾಗಿ ಪ್ರತಿ ವರ್ಷ 18 ಸಾವಿರ ಕೋಟಿ ರೂಪಾಯಿ ಬಿಡುಗಡೆ ಭರವಸೆಗಳು ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಲಿವೆ.

ಯುಕೆಪಿ ಹಂತ -3 ರ ಅನುಷ್ಠಾನ ಮತ್ತು ಬಾಗಲಕೋಟೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆ ವಿಷಯಗಳು ಸಾಕಷ್ಟು ನನೆಗುದಿಗೆ ಬಿದ್ದಿದ್ದವು. ರಾಜ್ಯ ಕಾಂಗ್ರೆಸ್ ಸರ್ಕಾರ ಎರಡೂ ಯೋಜನೆಗಳಿಗೂ ಹಸಿರು ನಿಶಾನೆ ತೋರುವ ಮೂಲಕ ಬದ್ಧತೆ ಪ್ರದರ್ಶಿಸಿದೆ. ಈ ಎರಡೂ ವಿಷಯಗಳು ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಿಗೆ ಬಹದೊಡ್ಡ ಅಸ್ತ್ರಗಳಾಗಿ ಪರಿಣಮಿಸಲಿವೆ.

ಕಾರ್ಪಸ್ ಫಂಡ್ ಗೊಂದಲ:

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿದ್ದ 365 ಕೋಟಿ ರೂಪಾಯಿ ಕಾರ್ಪಸ್ ಫಂಡ್ ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಸರ್ಕಾರಕ್ಕೆ ವಾಪಸ್ಸಾಗಿದೆ. ಬಾಗಕೋಟೆ ನವನಗರ ಅಭಿವೃದ್ಧಿಗಾಗಿನ ಈ ಹಣ ಯಾರ ಅವಧಿಯಲ್ಲಿ ಸರ್ಕಾರಕ್ಕೆ ವಾಪಸ್ಸಾಯಿತು ಎನ್ನುವುದು ಬಾಗಲಕೋಟೆ ನಗರದ ಜನತೆಯನ್ನು ಕಾಡುತ್ತಲೇ ಇದೆ. ಇದಕ್ಕೆ ಎರಡೂ ಪಕ್ಷಗಳ ಮುಖಂಡರು ಸ್ಪಷ್ಟ ಉತ್ತರ ನೀಡುತ್ತಿಲ್ಲ. ಒಬ್ಬರ ಮೇಲೋಬ್ಬರು ಆರೋಪ ಮಾಡುತ್ತಲೇ ಇದ್ದಾರೆ. ಕೆಲವರಂತೂ ಈ ವಿಷಯದಲ್ಲಿ ಪಲಾಯನವಾದಕ್ಕೆ ಶರಣಾಗಿದ್ದಾರೆ. ಸರ್ಕಾರ ಪಡೆದ ಕಾರ್ಪಸ್ ನಿಧಿಯನ್ನು ವಾಪಸ್ ತರುವುದಾಗಿ ಆಡಳಿತ ಪಕ್ಷದ ಮುಖಂಡರು ಹೇಳುತ್ತಲೇ ಇದ್ದಾರೆ. ಆದರೆ ಹಣ ವಾಪಸ್ ಆಗಿಲ್ಲ. ಪರಿಣಾಮವಾಗಿ ನವನಗರ ಅಭಿವೃದ್ಧಿ ಮರಿಚಿಕೆ ಆಗಿದೆ. ಕಾರ್ಪಸ್ ನಿಧಿ ಕೂಡ ಚುನಾವಣೆ ವಿಷಯವಾಗುವ ಸಾಧ್ಯತೆಗಳು ಇವೆ. ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಉತ್ತರ ಏನಾಗಿರಲಿದೆ ಎನ್ನುವುದು ಕುತೂಹಲದ ಸಂಗತಿ ಆಗಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top