“ಪಕ್ಷದಲ್ಲಿ ಅಂತದ್ದೇನೂ ಇಲ್ಲ, ಇದ್ದರೆ ತಾನೆ ಸರಿಪಡಿಸುವುದು” ಎನ್ನುವ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರ ಹೇಳಿಕೆ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಕಮಲ ಪಾಳೆಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಉಪ ಚುನಾವಣೆ ಹೊತ್ತಲ್ಲಿ ಚರಂತಿಮಠ ಅವರಾಡಿರುವ ಮಾತು ಇನ್ನಿಲ್ಲದ ಮಹತ್ವ ಪಡೆದುಕೊಂಡಿದೆ.
ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ್ ಮತ್ತು ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಒಂದೇ ಪಕ್ಷದಲ್ಲಿದ್ದರೂ ಅವರಿಬ್ಬರ ನಡುವಿನ ರಾಜಕೀಯ ಸಂಬಂಧ ಎಂತದ್ದು ಎನ್ನುವುದನ್ನು ಹೊಸದಾಗಿ ವಿವರಿಸಬೇಕಿಲ್ಲ. ಉಭಯತರ ನಡುವೆ ಹಳಸಿರುವ ರಾಜಕೀಯ ಸಂಬಂಧವನ್ನು ಪುನರ್ ಸ್ಥಾಪಿಸುವ ಮೂಲಕ ಎದುರಾಗಿರುವ ಬಾಗಲಕೋಟೆ ವಿಧಾನಸಭೆ ಚುನಾವಣೆಯನ್ನು ಶತಾಯ-ಗತಾಯ ಗೆಲ್ಲಲೇ ಬೇಕು ಎನ್ನುವ ಹಠಕ್ಕೆ ಬಿದ್ದಿರುವ ಬಿಜೆಪಿ ಮುಖಂಡರು ಈಗಾಗಲೇ ಅನೇಕ ಬಾರಿ ಸಂಧಾನ ಸಭೆಗಳನ್ನು ನಡೆಸುವ ಮೂಲಕ ಪೂರಕ ವಾತಾವರಣ ಸೃಷ್ಟಿಗೆ ನಾಂದಿ ಹಾಡಿದ್ದಾರೆ. ಇಂತಹ ಸನ್ನಿವೇಶದಲ್ಲಿ ಚರಂತಿಮಠರ ಮಾತು ರಾಜಕೀಯ ವಲಯದಲ್ಲಿ ಇನ್ನಿಲ್ಲದ ಮಹತ್ವ ಪಡೆದುಕೊಂಡಿದೆ.
ಅಂತರ ಕಡಿಮೆ ಆಗಿಲ್ಲ:
ಮೊನ್ನೆ ತಾನೇ ಪಕ್ಷದ ರಾಜ್ಯದ ವರಿಷ್ಠರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಜಿಲ್ಲೆಯ ಪ್ರಮುಖರ ಸಭೆ ನಡೆಸಿ ಪಕ್ಷದಲ್ಲಿ ಸಣ್ಣ ಪುಟ್ಟ ಅಸಮಾಧಾನವಿದೆ. ಅದನ್ನು ಸರಿ ಪಡಿಸಲಾಗುವುದು ಎಂದು ಹೇಳುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಎನ್ನುವ ಹೇಳಿಕೆ ಹೊರಬಿದ್ದ ಬಳಿಕವೂ ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ್ ಮತ್ತು ವೀರಣ್ಣ ಚರಂತಿಮಠರ ಪರಸ್ಪರ ಅಂತರ ಕಾಯ್ದುಕೊಂಡು ಬರುತ್ತಿದ್ದಾರೆ.
ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಬಿಜೆಪಿ ಪಾಳೆಯದಲ್ಲಿನ ಅಸಮಾಧಾನಕ್ಕೆ ತೇಪೆ ಹಾಕಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ಹಾಗೆ ಇದೆ. ಮೇಲ್ಮನೆ ಸದಸ್ಯ ಪಿ.ಎಚ್. ಪೂಜಾರ್ ಹಾಗೂ ಮಾಜಿ ಶಾಸಕ ವೀರಣ್ಣ ಚರಂತಿಮಠ ನಡುವಿನ ರಾಜಕೀಯ ಸಮರಕ್ಕೆ ಅಂತ್ಯ ಹಾಡಲು ಕಮಲ ನಾಯಕರು ಸಂಧಾನದ ತಮ್ಮ ಪ್ರಯತ್ನ ಮುಂದುವರಿಸಿದ್ದಾರೆ. ಆದರೆ ರಾಜಿ ಸಂಧಾನ ಸಾಧ್ಯವಾಗುತ್ತಿಲ್ಲ.
ಉಭಯ ಮುಖಂಡರ ನಡುವಿನ ರಾಜಕೀಯ ಭಿನ್ನಾಭಿಪ್ರಾಯ ಇಂದು ನಿನ್ನೆಯದಲ್ಲ. ಎರಡು ದಶಕಕ್ಕಿಂತಲೂ ಹಳೆಯದಾಗಿದೆ. 2004ರ ವಿಧಾನಸಭೆ ಚುನಾವಣೆಯಲ್ಲಿ ಅಂದು ಹಾಲಿ ಶಾಸಕರಾಗಿದ್ದ ಪಿ.ಎಚ್. ಪೂಜಾರ್ ಅವರಿಗೆ ಟಿಕೆಟ್ ಕೈ ತಪ್ಪಿ, ವೀರಣ್ಣ ಚರಂತಿಮಠ ಅವರ ಪಾಲಾದಾಗಿನಿಂದಲೂ ಭಿನ್ನಮತ ತಾಂಡವವಾಡುತ್ತಿದೆ.
ಕಮಲದಿಂದ ದೂರ ದೂರ:
2004ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಕೈತಪ್ಪುತ್ತಲೇ ಪಕ್ಷೇತರರಾಗಿ ಕಣಕ್ಕಿಳಿದ ಪಿ.ಎಚ್. ಪೂಜಾರ್ ಬಿಜೆಪಿಯಿಂದ ದೂರಾದರು. ಅಲ್ಲಿಂದ ಅವರು ಪಕ್ಷಕ್ಕೆ ವಾಪಸ್ ಆಗಿದ್ದು 2018ರಲ್ಲಿ. ಅಲ್ಲಿಯವರೆಗೂ ಪಕ್ಷದಿಂದ ದೂರವಾಗಿದ್ದರೂ ಹಿಂದುತ್ವದ ಸಿದ್ಧಾಂತ ಮತ್ತು ಬಿಜೆಪಿ ರಾಜ್ಯ ಹಾಗೂ ರಾಷ್ಟ್ರ ನಾಯಕರೊಂದಿಗಿನ ಸಂಪರ್ಕದಿಂದ ದೂರವಾಗಿರಲಿಲ್ಲ.
ಅಷ್ಟಕ್ಕಷ್ಟೆ ಸಂಬಂಧ:
ಪಕ್ಷಕ್ಕೆ ವಾಪಸ್ಸಾದ ಬಳಿಕ ಅವರ ಮತ್ತು ಅಂದಿನ ಶಾಸಕ ಚರಂತಿಮಠರ ನಡುವಿನ ರಾಜಕೀಯ ಸಂಬಂಧ ಅಷ್ಟಾಗಿ ಹೇಳಿಕೊಳ್ಳುವಂತಿರಲಿಲ್ಲ. ಅಷ್ಟರ ಮಧ್ಯೆ ವಿಜಯಪುರ- ಬಾಗಲಕೋಟೆ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ಬಿಜೆಪಿಯಿಂದ ಟಿಕೆಟ್ ಗಿಟ್ಟಿಸಿಕೊಂಡ ಪೂಜಾರ್ ಗೆಲುವು ಸಾಧಿಸಿದರು.
ಮೊಳಕೆಯೊಡೆದ ಅನುಮಾನ:
ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆದ ಚುನಾವಣೆ ವೇಳೆ ಪಕ್ಷದಲ್ಲಿ ಹುಟ್ಟಿಕೊಂಡ ಅನುಮಾನಗಳು ಪೂಜಾರ್ ಮತ್ತು ಚರಂತಿಮಠ ಅವರ ನಡುವೆ ಮತ್ತೆ ಅಸಮಾಧಾನ ಮೊಳಕೆಯೊಡಲು ಕಾರಣವಾದವು. ಅಂದಿನ ಅಸಮಾಧಾನವೇ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದೆ. ರಾಜಿ ಸಂಧಾನ ಅಸಾಧ್ಯ ಎನ್ನುವ ಹಂತದಲ್ಲಿದೆ. ಇದಕ್ಕೆ ಪಕ್ಷದಲ್ಲಿನ ಮುಖಂಡರ ಹೇಳಿಕೆಗಳು ಸಾಕ್ಷಿಯಂತಿವೆ.
ಅಚ್ಚರಿಯ ಹೇಳಿಕೆ:
ಇಂತಹ ಸಂದಿಗ್ಧ ಸನ್ನಿವೇಶದಲ್ಲಿ “ಪಕ್ಷದಲ್ಲಿ ಅಂತದ್ದೇನೂ ಇಲ್ಲ. ಎಲ್ಲವೂ ಸರಿಯಾಗಿದೆ” ಎನ್ನುವ ಅಚ್ಚರಿಯ ಹೇಳಿಕೆಯನ್ನು ಚರಂತಿಮಠ ಅವರು ನೀಡಿದ್ದಾರೆ. ಆ ಮೂಲಕ ರಾಜಕಾರಣದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಶತ್ರುಗಳಲ್ಲ ಎನ್ನುವ ಹೇಳಿಕೆಯನ್ನು ಮತ್ತೊಮ್ಮೆ ಸಾಬೀತು ಪಡಿಸುವಂತಿದೆ. ಪರಸ್ಪರರ ಮಧ್ಯೆ ಇರುವ ಅಸಮಾಧಾನ ಚುನಾವಣಾ ರಾಜಕಾರಣದಲ್ಲಿ ಉಭಯತರಿಗೂ ಎಷ್ಟೆಲ್ಲ ಲಾಭ -ನಷ್ಟ ಉಂಟಾಗಿದೆ ಎನ್ನುವುದು ಕ್ಷೇತ್ರದ ಜನತೆಯ ಕಣ್ಮುಂದೆ ಇದೆ.
ಹೊಸ ಸಮೀಕರಣ ಆರಂಭ:
ಸದ್ಯ ಎದುರಾಗಿರುವ ಉಪಚುನಾವಣೆ ಇಬ್ಬರ ನಡುವಿನ ಭಿನ್ನಮತ ಶಮನಕ್ಕೆ ನಾಂದಿ ಹಾಡುವಂತಿದೆ. ಹೇಗಾದರೂ ಮಾಡಿ ಉಪ ಚುನಾವಣೆ ಗೆಲ್ಲಲೇ ಬೇಕು ಎನ್ನುವ ಜಿದ್ದಿಗೆ ಬಿದ್ದಂತಿರುವ ಬಿಜೆಪಿ ಮುಖಂಡರು ಸತತವಾಗಿ ರಾಜಿ ಸಂಧಾನ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಅದರ ಭಾಗವಾಗಿಯೇ ವೀರಣ್ಣ ಚರಂತಿಮಠ ಅವರ ಬಾಯಿಂದ “ಪಕ್ಷದಲ್ಲಿ ಅಂತದ್ದೇನೂ ಇಲ್ಲ, ಎಲ್ಲವೂ ಸರಿಯಾಗಿದೆ” ಎನ್ನುವ ಮಾತು ಹೊರಬಂದಂತೆ ಕಾಣಿಸುತ್ತಿದೆ. ವೀರಣ್ಣ ಚರಂತಿಮಠ ಅವರ ಬಾಯಿಂದ ಹೊರ ಬಿದ್ದಿರುವ ಮಾತು ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹೊಸ ರಾಜಕೀಯ ಸಮೀಕರಣ ಹುಟ್ಟಿಗೆ ಕಾರಣವಾಗಿದೆ.
ರಾಜಕೀಯವಾಗಿ ಒಂದೇ ಪಕ್ಷದಲ್ಲಿದ್ದರೂ ಉತ್ತರ ಧೃವ, ದಕ್ಷಿಣ ಧೃವದಂತಿರುವ ಮುಖಂಡರು ಒಂದಾಗುವ ಕಾಲ ಸನ್ನಿಹಿತವಾದಂತೆ ಕಾಣಿಸುತ್ತಿದೆ. ಮುಂದಿನ ಬೆಳವಣಿಗೆ ಹೇಗಿರಲಿದೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.
- ವಿಠ್ಠಲ ಆರ್. ಬಲಕುಂದಿ



