ಸಂಪುಟದಲ್ಲಿ ‌ಯುಕೆಪಿ ವಿಷಯ ಪ್ರಸ್ತಾಪವಾದರೂ ಚರ್ಚೆ ಅಪೂರ್ಣ

ಬಾಗಲಕೊಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ರಲ್ಲಿ ಸ್ವಾಧೀನಕ್ಕೊಳಪಡುವ ಭೂಮಿಗೆ ಕನ್ಸೆಂಟ್ ಅವಾರ್ಡ ವಿಷಯ ಸೇರಿದಂತೆ ಯೋಜನಾನುಷ್ಠಾನದ ಬಗೆಗೆ ಸಂಪುಟದಲ್ಲಿ ವಿಷಯ ಪ್ರಸ್ತಾಪಗೊಂಡು ಸಾಕಷ್ಟು ಚರ್ಚೆ ನಡೆದರೂ ಅಂತಿಮ‌ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ.

ನಿರೀಕ್ಷೆಯಂತೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಕುರಿತ ವಿಷಯ ಪ್ರಸ್ತಾಪಗೊಂಡರೂ ಒಪ್ಪಿದ ಪರಿಹಾರ ದರ, ಆಲಮಟ್ಟಿ ಜಲಾಶಯದ ಎತ್ತರ‌ ಹೆಚ್ಚಳ ಬಗೆಗೆ ಚರ್ಚೆ ನಡೆದಿದೆ. ಈ ಕುರಿತು ಒಂದು‌ ಅಂತಿಮ ನಿರ್ಧಾರ ಕೈಗೊಳ್ಳಲು ಇನ್ನೂ ಹಲವು ಸುತ್ತಿನ‌ ಮಾತುಕತೆ ನಡೆಸಿದ ಬಳಿಕ ಒಪ್ಪಿತ ದರಕ್ಕೆ ಒಪ್ಪಿಗೆ ನೀಡಲು ಸಂಪುಟ ಬಯಸಿದ್ದರಿಂದ ಚರ್ಚೆ ಅಪೂರ್ಣ ಗೊಂಡಿದೆ ಎಂದು ಕಾನೂನು ಮತ್ತು ಸಂಸದಿಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು ಹೇಳಿರುವ ಜತೆಗೆ, ಅದಕ್ಕಾಗಿ ವಿಶೇಷ ಸಂಪುಟ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ.

16 ರಂದು ವಿಶೇಷ ಸಚಿವ ಸಂಪುಟ ಸಭೆ :

ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನ ಕುರಿತು ಇನ್ನಷ್ಟು ಚರ್ಚೆಗಾಗಿ ಸೆ. 16 ರಂದು‌ ವಿಶೇಷ ಸಂಪುಟ‌ ಸಭೆಗೆ ದಿನಾಂಕವೂ ನಿಗದಿ ಆಗಿದೆ. ಅಲ್ಲಿಯವರೆಗೂ ಕನ್ಸೆಂಟ್ ಅವಾರ್ಡ ಬಗೆಗೆ‌ ಚಿಂತನೆ ನಡೆಯಲಿದೆ. ಇದೊಂದು ಬಹುದೊಡ್ಡ ಯೋಜನೆ ಆಗಿರುವುದರಿಂದ, ಹೆಚ್ಚಿನ‌ ಪ್ರಮಾಣದಲ್ಲಿ‌ ಭೂಸ್ವಾಧೀನ ಆಗಬೇಕಿದೆ. ಕನ್ಸೆಂಟ್ ಅವಾರ್ಡ ಘೋಷಣೆ ಬಳಿಕ ರೈತರು ಹೆಚ್ಚಿನ‌ ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗದ ಹಾಗೆ, ಅವರಿಗೆಲ್ಲ ಒಪ್ಪಿಗೆ ಆಗುವ ನಿಟ್ಟಿನಲ್ಲಿ ಅತ್ಯಂತ‌ ಜವಾಬ್ದಾರಿಯಿಂದ ಪರಿಹಾರ ಘೋಷಣೆ ಮಾಡಬೇಕಿದೆ.

ಒಮ್ಮೆ ಪರಿಹಾರ ಘೋಷಣೆ ಆದ ಬಳಿಕ ಹೆಚ್ಚಿನ ಪರಿಹಾರ ಧನಕ್ಕಾಗಿ ರೈತರು ನ್ಯಾಯಾಲಯಕ್ಕೆ ಹೋಗಬಾರದು. ಯೋಜನೆ ಬೇಗ ಅನುಷ್ಠಾನಗೊಳ್ಳ ಬೇಕು ಎನ್ನುವುದು ಸರ್ಕಾರದ ನಿಲುವು ಆಗಿರುವುದರಿಂದ
ಕಳೆದ ಅನೇಕ ತಿಂಗಳುಗಳಿಂದ ಮೇಲಿಂದ ಮೇಲೆ ಸಭೆಗಳನ್ನು‌ ನಡೆಸುತ್ತಲೇ ಬಂದಿದೆ.

ಸಿಗಲಿಲ್ಲ ಸಿಹಿ ಸುದ್ದಿ:

ಆಲಮಟ್ಟಿ ಬಾಗಿನ ಕಾರ್ಯಕ್ರಮಕ್ಕೆ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಾರದಲ್ಲಿ ಕನ್ಸೆಂಟ್ ಅವಾರ್ಡ ನಿಗದಿ ಪಡಿಸುವುದಾಗಿ ಹೇಳಿದ್ದರು. ಆ ಹಿನ್ನೆಲೆಯಲ್ಲಿ ಬುಧವಾರ ಯೋಜನಾ ವ್ಯಾಪ್ತಿಯ ಸಚಿವರು, ಶಾಸಕರ ಸಭೆ ಕರೆದಿದ್ದ ಮುಖ್ಯಮಂತ್ರಿಗಳು ಹಲವು ಸುತ್ತಿನ ಚರ್ಚೆ ನಡೆಸಿದ್ದರು. ಗುರುವಾರದ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಉಪಮುಖ್ಯಮಂತ್ರಿಗಳು ಹೇಳಿದ್ದರು.

ಗುರುವಾರದ ಸಂಪುಟದಲ್ಲಿ ಕೃಷ್ಣಾ ಮೇಲ್ದಂಡೆ ವಿಷಯ ಚರ್ಚೆಗೆ ಬಂದರೂ ಅಂತಿಮ‌ ನಿರ್ಧಾರ ಸಾಧ್ಯವಾಗಿಲ್ಲ. ಇದಕ್ಕಾಗಿಯೇ ಸೆ. 16 ರಂದು ವಿಶೇಷ ಸಂಪುಟ ಸಭೆ ನಡೆಯಲಿದೆ. ಯುಕೆಪಿ ಯೋಜನಾ‌ ವ್ಯಾಪ್ತಿಯ‌ ಬಹುತೇಕ‌ ರೈತರು ಗುರುವಾರದ ಸಂಪುಟ ಸಭೆಯಲ್ಲಿ ಒಪ್ಪಿತ ದರ ನಿಗದಿಗೊಂಡು, ಸಿಹಿಸುದ್ದಿ ಸಿಗಲಿದೆ ಎನ್ನುವ ಕಾತರದಲ್ಲಿದ್ದರು.

ಎಚ್ಚರಿಕೆ ಹೆಜ್ಜೆ:

ಸರ್ಕಾರ ಮಾತ್ರ ಕನ್ಸೆಂಟ್ ಅವಾರ್ಡ ವಿಷಯವನ್ನು ಬಹಳಷ್ಟು ಗಂಭೀರವಾಗಿ ತೆಗೆದುಕೊಂಡಿರುವುದರಿಂದ ಎಚ್ಚರಿಕೆ ಹೆಜ್ಜೆ ಇಡಲು‌ ಮುಂದಾಗಿದೆ. ಪರಿಣಾಮವಾಗಿ ಗುರುವಾರದ ಸಂಪುಟ ಸಭೆಯಲ್ಲಿ ಚರ್ಚೆ ಅಪೂರ್ಣ ಆಗಿದ್ದರೂ ಸೆ. 16 ರಂದು ಅಂತಿಮ ನಿರ್ಧಾರ ಕೈಗೊಳ್ಳಲು ವಿಶೇಷ ಸಂಪುಟ‌ ಸಭೆ ಕರೆದಿರುವುದು ಯೋಜನಾ ವ್ಯಾಪ್ತಿಯ ರೈತರಲ್ಲಿ ಸಮಾಧಾನ ಭಾವ ಹುಟ್ಟಿಸಿದೆ. ಸೆ.‌16 ರಂದು‌ ನಡೆಯುವ ಸಂಪುಟ ಸಭೆಯಲ್ಲಾದರೂ ಉತ್ತಮ ನಿರ್ಧಾರ ಹೊರ ಬೀಳಲಿದೆಯೋ ಹೇಗೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.

  • ವಿಠ್ಠಲ ಆರ್.‌ಬಲಕುಂದಿ
Scroll to Top