ರಾಜ್ಯ ರಾಜಕಾರಣದಲ್ಲಿ ಸಚಿವ ಸಂಪುಟ ಪುನಾರಚನೆ ಹೊಸ ವರ್ಷದ ಮೊದಲ ಸಹಿ ಸುದ್ದಿ ಆಗುವ ಸಾಧ್ಯತೆಗಳು ದಟ್ಟವಾಗಿವೆ. ಇದು ಯಾರ ಪಾಲಿಗೆ ಸಿಹಿ, ಯಾರ ಪಾಲಿಗೆ ಕಹಿ ಎನ್ನುವ ವಿದ್ಯಮಾನಗಳು ಗರಿಗೆದರಿವೆ.
ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ನಾಯಕತ್ವ ಬದಲಾವಣೆಗಿಂತ ಸಂಪುಟ ಪುನಾರಚನೆ ಸಾಕಷ್ಟು ಮುನ್ನೆಲೆಗೆ ಬಂದಿದೆ. ಮಂತ್ರಿಸ್ಥಾನದ ಆಕಾಂಕ್ಷಿಗಳಲ್ಲಿ ಹೊಸ ವರ್ಷದ ಆರಂಭಿಕ ದಿನಗಳಲ್ಲೇ ಹೊಸ ಹುಮ್ಮಸ್ಸು ಕಾಣಿಸಿಕೊಂಡಿದೆ. ಇದು ಯಾರಲ್ಲಿ ಉಳಿಯಲಿದೆ ಎನ್ನುವುದು ಕಾಂಗ್ರೆಸ್ ವರಿಷ್ಠರು ಕೈಗೊಳ್ಳಲಿರುವ ನಿರ್ಧಾರದ ಮೇಲೆ ಸ್ಪಷ್ಟವಾಗಲಿದೆ.
ಪೈಪೋಟಿ ತೀವ್ರ:
ಸಂಪುಟ ಪುನಾರಚನೆ ಹವಾ ಜೋರಾಗುತ್ತಿದ್ದಂತೆ ಸಂಪುಟದ ಕೆಲವರಲ್ಲಿ ಢವಢವ ಶುರುವಾಗಿದೆ. ಕಾರಣವಿಷ್ಟೆ, ಸದ್ಯ ಸಂಪುಟದಲ್ಲಿರುವವರ ಪೈಕಿ ಶೇ.50 ರಷ್ಟು ಸಚಿವರನ್ನು ಕೈಬಿಟ್ಟು, ಹೊಸಬರಿಗೆ ಅವಕಾಶ ಸಿಗಲಿದೆ ಎನ್ನುವುದು ಹಾಲಿ ಸಚಿವರಲ್ಲಿ ಆತಂಕ ಮನೆ ಮಾಡಲು ಕಾರಣವಾಗಿದೆ.
ಸಂಪುಟದಲ್ಲಿದ್ದವರು ಸ್ಥಾನ ಭದ್ರತೆಗಾಗಿ, ಮಂತ್ರಿ ಸ್ಥಾನದ ಆಕಾಂಕ್ಷಿಗಳು ಸಂಪುಟ ಸೇರ್ಪಡೆಗಾಗಿ ಇನ್ನಿಲ್ಲದ ಪ್ರಯತ್ನಕ್ಕೆ ಇಳಿಯಲಿದ್ದಾರೆ. ಪರಿಣಾಮವಾಗಿ ಕಾಂಗ್ರೆಸ್ ಪಾಳೆಯದಲ್ಲಿ ವರಿಷ್ಠರ ಮನವೊಲಿಕೆ ಕಾರ್ಯ ಜೋರಾಗಲಿದೆ.
ಜಿಲ್ಲೆಯಲ್ಲೂ ಸಂಪುಟ ಸರ್ಕಸ್:
ಏತನ್ಮಧ್ಯೆ ಬಾಗಲಕೋಟೆ ಜಿಲ್ಲೆಯಲ್ಲೂ ಸಂಪುಟ ಸರ್ಕಸ್ ಪ್ರಯತ್ನ ತೀವ್ರಗೊಳ್ಳಲಿದೆ. ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸ್ಥಾನ ಭದ್ರತೆ ಜತೆಗೆ ಈಗಿರುವ ಖಾತೆಗಿಂತ ಇನ್ನಷ್ಟು ಉತ್ತಮವಾದ, ಅಭಿವೃದ್ಧಿಪರವಾಗಿರುವ ಖಾತೆಯ ಪ್ರಯತ್ನ ನಡೆಸಲಿದ್ದಾರೆ. ಈ ಹಿಂದೆಯೇ ಅವರು ಈ ಮಾತನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಸ್ಥಾನ ಉಳಿಸಿಕೊಳ್ಳುವ ಪ್ರಯತ್ನ ಹಾಲಿ ಸಚಿವರದ್ದಾದರೆ, ಹೊಸದಾಗಿ ಸಂಪುಟ ಸೇರಲು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಪ್ರಯತ್ನ ಜೋರಾಗಲಿದೆ. ಈಗಾಗಲೇ ಅವರು ಮಂತ್ರಿಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಹೇಳಿಕೊಂಡಿದ್ದಾರೆ. ಇವರ ಜತೆ ಬೀಳಗಿ ಕ್ಷೇತ್ರದ ಹಿರಿಯ ಶಾಸಕ ಜೆ.ಟಿ. ಪಾಟೀಲ ಕೂಡ ಮಂತ್ರಿಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಮಾನದಂಡಗಳ ಮೇಲಾಟ:
ಜಾತಿ, ಪ್ರದೇಶವಾರು, ಹಿರಿತನದ ಹಾಗೂ ಅನುಭವದ ಹಿನ್ನೆಲೆ ತಮ್ಮ ಸ್ಥಾನ ಉಳಿಯಲಿದೆ ಎನ್ನುವುದು ಸಚಿವ ತಿಮ್ಮಾಪುರ ಅವರ ಲೆಕ್ಕಾಚಾರವಾಗಿದೆ. ಇದೇ ಆಧಾರದಲ್ಲೆ ತಮಗೂ ಅವಕಾಶ ಸಿಗಲಿದೆ ಎನ್ನುವ ವಿಶ್ವಾಸ ಕಾಶಪ್ಪನವರ ಹಾಗೂ ಜೆ.ಟಿ. ಪಾಟೀಲರದ್ದಾಗಿದೆ.
ಪಕ್ಷದ ವಲಯದಲ್ಲಿನ ಪ್ರಭಾವ ಮತ್ತು ಲಾಬಿ ಕೂಡ ಇಲ್ಲಿ ಹೆಚ್ಚಿನ ಕೆಲಸ ಮಾಡುವ ಸಾಧ್ಯತೆಗಳು ಇರುವುದರಿಂದ ಯಾರ ಲಾಬಿ, ಪ್ರಭಾವ ಹೆಚ್ಚಿದೆ ಎನ್ನುವುದರ ಮೇಲೆಯೂ ಮಂತ್ರಿಸ್ಥಾನ ನಿರ್ಧಾರವಾಗಲಿದೆ.
ಬಣದಾಟವೂ ನಿರ್ಣಾಯಕ:
ಇವೆಲ್ಲದರ ಜತೆ ಯಾರು ಯಾವ ಬಣದಲ್ಲಿದ್ದಾರೆ ಎನ್ನುವುದು ಕೂಡ ಮಹತ್ವದ್ದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬಣ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಣ ಇವರ ಜತೆ ಹೈಕಮಾಂಡಿನ ತಟಸ್ಥ ಬಣಗಳಿವೆ.
ಈ ಬಣಗಳ ಮೇಲೆ ಮಂತ್ರಿ ಸ್ಥಾನಗಳು ಯಾರ ಬಣಕ್ಕೆ ಎಷ್ಟು ಎನ್ನುವುದು ಕೂಡಾ ನಿರ್ಧಾರವಾಗಲಿವೆ. ಬಾಗಲಕೊಟೆ ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರು, ಒಬ್ಬರು ಮೇಲ್ಮನೆ ಸದಸ್ಯರಿದ್ದಾರೆ. ಈ ಪೈಕಿ ಯಾರು ಯಾವ ಬಣ ಎಂದು ಹೇಳುವುದು ಕಷ್ಟ.
ಅದೃಷ್ಟದಾಟ:
ಸಂಪುಟ ಪುನಾರಚನೆ ಎನ್ನುವುದು ಅದೃಷ್ಟದಾಟವಿದ್ದಂತೆ. ಈ ಆಟದಲ್ಲಿ ಅದೃಷ್ಟ ಯಾರ ಪಾಲಾಗಲಿದೆ ಎನ್ನುವುದು ಜಾತಿ, ಜಿಲ್ಲೆ, ಪ್ರಾದೇಶವಾರು, ಹಿರಿತನ ಮೀರಿ ಲಾಬಿಯ ಮತ್ತು ಪ್ರಭಾವಗಳ ಮೇಲೆ ನಿಂತಿದೆ. ಹಾಗಾಗಿ ಪುನಾರಚಿತ ಸಂಪುಟದಲ್ಲಿ ಜಿಲ್ಲೆಯ ಸ್ಥಾನ ಸ್ಪಷ್ಟವಾಗಲಿದೆ.
ಯಾವುದಕ್ಕೂ ಸಂಕ್ರಮಣ ಬಳಿಕ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ನಡೆಯುವ ಬೆಳವಣಿಗೆಳ ಮೇಲೆ ಸಂಪುಟ ಪುನಾರಚನೆ ನಡೆಯಲಿದೆ. ಹಾಗೆ ಒಂದೊಮ್ಮೆ ಸಂಪುಟ ಪುನಾರಚನೆ ನಡೆದಲ್ಲಿ, ಪುನಾರಚಿತ ಸಂಪುಟದಲ್ಲಿ ಜಿಲ್ಲೆಯ ನಾಲ್ವರು ಶಾಸಕರು, ಒಬ್ಬರು ಮೇಲ್ಮನೆ ಸದಸ್ಯರ ಪೈಕಿ ಯಾರು ಇರಲಿದ್ದಾರೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.
- ವಿಠ್ಠಲ ಆರ್. ಬಲಕುಂದಿ




