ಬಾಗಲಕೋಟೆ: ನಾಯಕತ್ವ ಬದಲಾವಣೆ ಗುಸುಗುಸು ಮಧ್ಯೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ಪುನರ್ ರಚನೆ ಗಾಳಿ ಕೂಡ ಬೀಸಲಾರಂಭಿಸಿದೆ. ಹಾಗಾಗಿ ಸಂಪುಟದಲ್ಲಿದ್ದವರು ತಮ್ಮ ಅಧಿಕಾರ ಉಳಿಸಿಕೊಳ್ಳಲು ನಿರಂತರ ಪ್ರಯತ್ನದಲ್ಲಿದ್ದರೆ, ಸಚಿವಾಕಾಂಕ್ಷಿಗಳು ಸಂಪುಟದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಹರಸಾಹಸ ಆರಂಭಿಸಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡುವರೆ ವರ್ಷಗಳು ಆಗುತ್ತಿದ್ದು, ಸಂಪುಟ ಪುನಾರಚನೆ ಮೂಲಕ ಹೊಸಬರಿಗೆ ಅವಕಾಶ ನೀಡಬೇಕು ಎನ್ನುವ ಚಿಂತನೆ ಪಕ್ಷದ ವರಿಷ್ಠರಲ್ಲೂ ಇದೆಯಂತೆ. ಪರಿಣಾಮವಾಗಿ ಸಂಪುಟ ಪುನಾರಚನೆ ಕುರಿತ ಚಟುವಟಿಕೆಗಳು ಗರಿಗೆದರಿವೆ.
ಜಿಲ್ಲೆಯಲ್ಲೂ ಬದಲಾವಣೆ:
ಸಂಪುಟ ಪುನಾರಚನೆಯಿಂದ ಬಾಗಲಕೋಟೆ ಜಿಲ್ಲಾ ರಾಜಕಾಣದಲ್ಲೂ ಸಾಕಷ್ಟು ವ್ಯತ್ಯಾಸವಾಗಲಿದೆ ಎನ್ನುವ ಅಂದಾಜುಗಳು ಶುರುವಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದಲ್ಲಿ ಈಗಾಗಲೇ ಮುಧೋಳದ ಶಾಸಕರಾಗಿರುವ ಆರ್. ಬಿ. ತಿಮ್ಮಾಪುರ ಅಬಕಾರಿ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಏನೇ ಬದಲಾವಣೆಗಳಾದರೂ ಸಂಪುಟದಲ್ಲಿನ ತಮ್ಮ ಸ್ಥಾನ ಅಬಾಧಿತ ಎನ್ನುವ ವಿಶ್ವಾಸದಲ್ಲಿದ್ದಾರೆ. ಆದರೆ ಪರಿಸ್ಥಿತಿ ಅಂದುಕೊಂಡಷ್ಟು ಸರಳವಾಗಿಲ್ಲ.
ಆರೋಪಗಳ ಸರಮಾಲೆ:
ಕಳೆದ ಎರಡುವರೆ ವರ್ಷಗಳ ಅವಧಿಯಲ್ಲಿ ಅವರ ಇಲಾಖೆ ಅನೇಕ ಬಾರಿ ಭಾರಿ ಸದ್ದು ಮಾಡಿದೆ. ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ವಿಷಯ ಪ್ರಸ್ತಾಪಿಸಿದ್ದರಿಂದ ರಾಷ್ಟ್ರ ಮಟ್ಟದಲ್ಲಿ ವಿಷಯ ಚರ್ಚೆಗೆ ಗ್ರಾಸವಾಗಿತ್ತು. ಜತೆಗೆ ಇಲಾಖೆ ವಿಷಯದಲ್ಲಿ ಸಚಿವರ ಪುತ್ರ ವಿನಯ ತಿಮ್ಮಾಪುರ ಕೂಡ ಕೈಯಾಡಿಸುತ್ತಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬಂದಿತ್ತು. ಇದು ಒಂದು ಹಂತದಲ್ಲಿ ಪಕ್ಷದ ವರಿಷ್ಠರಿಗೂ ಮುಜಗುರವನ್ನುಂಟು ಮಾಡಿತ್ತಾದರೂ ಮುಖ್ಯಮಂತ್ರಿಗಳು ತಿಮ್ಮಾಪುರ ಪರ ಬ್ಯಾಟಿಂಗ್ ಮಾಡಿದ್ದರಿಂದ ಬಚಾವ್ ಆಗಿದ್ದರು. ಈಗಲೂ ತಮ್ಮ ಸ್ಥಾನಕ್ಕೆ ಯಾವುದೇ ಚ್ಯುತಿ ಬಾರದು ಎನ್ನುವ ನಂಬಿಕೆಯಲ್ಲಿದ್ದಾರೆ.
ಸಚಿವಾಕಾಂಕ್ಷಿಗಳಿಗೆ ನಿಗಮಗಳ ಹುದ್ದೆ:
2023 ರಲ್ಲಿ ಪಕ್ಷದ ಅಧಿಕಾರಕ್ಕೆ ಬರುತ್ತಲೇ ಸಚಿವ ಸ್ಥಾನಕ್ಕಾಗಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಬೀಳಗಿ ಶಾಸಕ ಜೆ.ಟಿ. ಪಾಟೀಲ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಶಾಸಕ ಕಾಶಪ್ಪನವರ ಮಂತ್ರಿ ಆಗುವುದು ಬಹುತೇಕ ಖಚಿತ ಎನ್ನುತ್ತಿರುವಾಗಲೇ ಅವರ ಒಂದು ಸೂಕ್ಷ್ಮ ಹೇಳಿಕೆ, ಮಂತ್ರಿ ಸ್ಥಾನದಿಂದ ವಂಚಿತರನ್ನಾಗಿಸಿತು ಎನ್ನುವ ಮಾತಿದೆ.
ಸಚಿವ ಸ್ಥಾನದಿಂದ ವಂಚಿತರಾದ ಇಬ್ಬರೂ ಶಾಸಕರಿಗೆ ನಿಗಮ- ಮಂಡಳಿ ಅಧ್ಯಕ್ಷ ಸ್ಥಾನಗಳು ಸಿಕ್ಕಿವೆ. ಆದರೆ ಸಂಪುಟ ಪುನಾರಚನೆ ವೇಳೆ ತಮಗೆ ಅವಕಾಶ ಸಿಗಲೇ ಬೇಕು ಎನ್ನುವ ಪ್ರಯತ್ನಕ್ಕೆ ಕೈ ಹಾಕಿರುವುದು ಸುಳ್ಳಲ್ಲ. ಈಗಾಗಲೇ ಉಭಯತರು ತಾವೂ ಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.
ಅನುಭವಿ ರಾಜಕಾರಣಿ:
ಸಚಿವ ತಿಮ್ಮಾಪುರ ಈಗಾಗಲೇ ಎಸ್.ಎಂ. ಕೃಷ್ಣ ಅವರ ಸಂಪುಟದಲ್ಲಿ, ಸಿದ್ದರಾಮಯ್ಯ ಸಂಪುಟದಲ್ಲಿ ಕೆಲಸ ಮಾಡಿದ ಅನುಭವಿ ರಾಜಕಾರಣಿ ಆಗಿದ್ದಾರೆ. ಸಿದ್ದರಾಮಯ್ಯ ಆಪ್ತರಲ್ಲೊಬ್ಬರು ಕೂಡ. ಹಿರಿಯ ಸಚಿವರ ಪೈಕಿ ಒಬ್ಬರಾಗಿರುವ ತಿಮ್ಮಾಪುರ ಆರೋಪಗಳ ಮಧ್ಯೆ, ಸರ್ಕಾರದ ಮಟ್ಟದಲ್ಲಿ ಒಂದಿಷ್ಟು ಮಹತ್ತರ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ.
ಸಂಪುಟ ಪುನರ್ ರಚನೆ ವೇಳೆ ಮಂತ್ರಿಸ್ಥಾನಕ್ಕಾಗಿ ಜಿಲ್ಲೆಯ ಮೂವರು ಪ್ರಯತ್ನ ಪಡುತ್ತಿದ್ದಾರೆ. ಹೊಸ ಮುಖಗಳಿಗೆ ಅದೃಷ್ಟ ಖುಲಾಯಿಸುತ್ತದೋ, ಇದ್ದವರೆ ಮುಂದುವರಿಯುತ್ತಾರೋ ಎನ್ನುವುದು ಕುತೂಹಲದ ಸಂಗತಿ ಆಗಿದೆ.
ಸಂಪುಟ ಪುನಾರಚನೆ ಕುರಿತು ಕಾಂಗ್ರೆಸ್ ವಲಯದಲ್ಲಿ ಸಾಕಷು ಬೆಳವಣಿಗೆಗಳು ನಡೆಯುತ್ತಿದ್ದು, ಪುನಾರಚನೆ ಕುರಿತ ಸ್ಪಷ್ಟ ಸ್ವರೂಪಕ್ಕೆ ಇನ್ನಷ್ಟು ದಿನ ಕಾಯಬೇಕಿದೆ. ಪುನಾರಚನೆ ಗ್ಯಾರಂಟಿ ಆದಲ್ಲಿ ಜಿಲ್ಲೆಯ ಮೂವರ ನಡುವೆ ಇನ್ನಿಲ್ಲದ ಪೈಪೋಟಿಯೂ ಗ್ಯಾರಂಟಿ.
ಲಾಬಿಗೆ ಚಾನ್ಸ್:
ಸಚಿವ ಸ್ಥಾನಕ್ಕಾಗಿ ಪೈಪೋಟಿಯಲ್ಲಿ ಜಾತಿ, ಪ್ರದೇಶವಾರು ಆದ್ಯತೆ, ಅನುಭವ, ವರ್ಚಸ್ಸು ಹೆಚ್ಚು ಕೆಲಸ ಮಾಡಲಿವೆಯಾದರೂ ಇವೆಲ್ಲಕ್ಕೂ ಮಿಗಿಲಾಗಿ ಪಕ್ಷದ ರಾಜ್ಯ ಮುಖಂಡರು ಮತ್ತು ಕೇಂದ್ರದ ವರಿಷ್ಠರ ಹಂತದಲ್ಲಿ ನಡೆಯುವ ಪ್ರಯತ್ನದಲ್ಲಿ ಯಾರ ಕೈ ಮೇಲಾಗುತ್ತದೋ ಅವರಿಗೆ ಸಂಪುಟ ಸೇರ್ಪಡೆ ಸಾಧ್ಯತೆಗಳು ನಿಚ್ಚಳವಾಗಲಿವೆ. ಅಚ್ಚರಿಯ ಸಂಗತಿ ಎಂದರೆ ಇದುವರೆಗೂ ನಡೆದ ಸಂಪುಟ ವಿಸ್ತರಣೆ, ಪುನಾರಚನೆ ಸಮಯದಲ್ಲಿ ಯಾರೆ ಮಂತ್ರಿ ಆದರೂ ಅಸಮಾಧಾನ ಬುಗಿಲೆದ್ದ ಉದಾಹರಣ, ಬಂಡಾಯದ ಕಹಳೆ ಕೇಳಿ ಬಂದಿಲ್ಲ. ನಾವು ಪ್ರಯತ್ನ ಮಾಡಿದಿವಿ, ಪಕ್ಷದ ವರಿಷ್ಠರು ಕೈಗೊಂಡ ನಿರ್ಧಾರ ಒಪ್ಪಿ ಕೆಲಸ ಮಾಡಿಕೊಂಡು ಹೋಗುತ್ತೇವೆ ಎನ್ನುವ ಅಭಿಪ್ರಾಯ ಕೇಳಿ ಬಂದಿರುವುದು ವಿಶೇಷ.
- ವಿಠ್ಠಲ ಆರ್. ಬಲಕುಂದಿ




