ಬೆಳಗಾವಿ ಸುವರ್ಣ ಸೌಧದಲ್ಲಿ ಆರಂಭಗೊಂಡಿರುವ ಚಳಿಗಾಲ ಅಧಿವೇಶನದಲ್ಲಿ ಬೆಳಗಾವಿ ವಿಭಜನೆ ಕೂಗು ಜೋರಾಗಿದೆ. ರಾಜ್ಯದಲ್ಲೇ ಅತಿದೊಡ್ಡ ಜಿಲ್ಲೆಯಾಗಿರುವ ಬೆಳಗಾವಿ ಜಿಲ್ಲೆಯನ್ನು ಆಡಳಿತ ಅನುಕೂಲತೆ ಹಾಗೂ ಜನತೆಯ ಹಿತದೃಷ್ಟಿಯಿಂದ ವಿಭಜಿಸಬೇಕು ಎನ್ನುವ ಆಗ್ರಹ ಜೋರಾಗಿದೆ.
ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿ ಮತ್ತು ಗೋಕಾಕ ಜಿಲ್ಲೆಗಳನ್ನು ರಚನೆ ಮಾಡಬೇಕು ಎನ್ನುವ ಬೇಡಿಕೆ ಹಲವು ದಶಕಗಳಿಂದ ಕೇಳಿ ಬರುತ್ತಲೇ ಇದೆ. ಆದರೆ ನಾನಾ ಕಾರಣಗಳ ಹಿನ್ನೆಲೆಯಲ್ಲಿ ವಿಭಜನೆ ನನೆಗುದಿಗೆ ಬಿದ್ದಿದೆ. ಜಾರಕಿಹೊಳಿ ಸಹೋದರರು ಗೋಕಾಕನ್ನು ಶತಾಯ- ಗತಾಯ ಜಿಲ್ಲೆಯನ್ನಾಗಿಸಬೇಕು ಎನ್ನುವ ಒತ್ತಡವನ್ನು ಸರ್ಕಾರದ ಮೇಲೆ ಹಾಕುತ್ತಲೇ ಇದ್ದಾರೆ.
ಅಥಣಿ ಹೊಸ ಬೇಡಿಕೆ:
ಚಿಕ್ಕೋಡಿ ಮತ್ತು ಗೋಕಾಕ ಪಟ್ಟಣಗಳನ್ನು ಜಿಲ್ಲಾ ಕೇಂದ್ರವಾಗಿಸಬೇಕು ಎನ್ನುವ ಆಗ್ರಹದ ಮಧ್ಯೆ ರಾಜ್ಯದ ಗಡಿಭಾಗ ಅಥಣಿ ತಾಲೂಕು ಕೇಂದ್ರವನ್ನು ಜಿಲ್ಲಾ ಕೇಂದ್ರವಾಗಿಸಬೇಕು ಎನ್ನುವ ಹೊಸ ಬೇಡಿಕೆ ಮುನ್ನೆಲೆಗೆ ಬಂದಿದೆ. ಅಥಣಿ ಶಾಸಕ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನೇತೃತ್ವದಲ್ಲಿ ಗಡಿ ಭಾಗದ ಹಿತದೃಷ್ಟಿಯಿಂದ ಅಥಣಿ ಜಿಲ್ಲಾ ಕೇಂದ್ರವಾಗಬೇಕು ಎನ್ನುವುದು ಅವರ ಬೇಡಿಕೆ ಆಗಿದೆ.
ಏತನ್ಮಧ್ಯೆ ಬೈಲಹೊಂಗಲ ತಾಲೂಕನ್ನು ಜಿಲ್ಲಾ ಕೇಂದ್ರವಾಗಿ ಘೋಷಿಸುವಂತೆ ಶಾಸಕ ಮಹಾಂತೇಶ ಕೌಜಲಗಿ ಅವರ ನೇತೃತ್ವದ ನಿಯೋಗ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಸದನಲ್ಲಿ ವಿಭಜನೆ ಕೂಗು ಜೋರು:
ಬೆಳಗಾವಿ ಅಧಿವೇಶನ ಆರಂಭಗೊಂಡಾಗಿನಿಂದ ಬೆಳಗಾವಿ ವಿಭಜನೆ ಆಗ್ರಹ ಜೋರಾಗಿದೆ. ಬೆಳಗಾವಿ ಜಿಲ್ಲೆಯ ಗಡಿ ಭಾಗ ಅಥಣಿಯನ್ನು ಜಿಲ್ಲಾ ಕೇಂದ್ರವಾಗಿಸಬೇಕು. ಇದಕ್ಕೆ ಅಥಣಿ, ರಾಯಬಾಗ, ಕಾಗವಾಡ, ಜತೆಗೆ ಬಾಗಲಕೋಟೆ ಜಿಲ್ಲೆಯ ತೇರದಾಳ, ರಬಕವಿ-ಬನಹಟ್ಟಿ ಮತ್ತು ಜಮಖಂಡಿ ತಾಲೂಕುಗಳನ್ನು ಸೇರಿಸಬೇಕು ಎನ್ನುವುದು ಅಲ್ಲಿನ ಜನತೆಯ ಆಗ್ರಹವಾಗಿದೆ.
ಜಮಖಂಡಿ ಜಿಲ್ಲೆ ಬೇಡಿಕೆ:
ಅಚ್ಚರಿಯ ಸಂಗತಿ ಎಂದರೆ ರಾಜ್ಯ ಸರ್ಕಾರ ನೇಮಕ ಮಾಡಿದ್ದ ಜಿಲ್ಲಾ ಪುನರ್ ವಿಂಗಡಣಾ ಸಮಿತಿಗಳು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಜಿಲ್ಲಾ ಕೇಂದ್ರವಾಗಲು ಸೂಕ್ತ ಸ್ಥಳ ಎಂದು ಶಿಫಾರಸ್ಸು ಮಾಡಿವೆ. ಜಮಖಂಡಿ ಜಿಲ್ಲೆಯ ರಚನೆಗಾಗಿ ಮೊದಲಿನಿಂದಲೂ ಪ್ರಬಲ ಬೇಡಿಕೆ ಇದೆ. ಬಾಗಲಕೋಟೆ ಜಿಲ್ಲೆಯನ್ನು ವಿಭಜಿಸಿ ಜಮಖಂಡಿಯನ್ನು ಪ್ರತ್ಯೇಕ ಹೊಸ ಜಿಲ್ಲೆ ಘೋಷಣೆ ಮಾಡಬೇಕು ಎಂದು ಇಲ್ಲಿನ ಜನಪ್ರತಿನಿಧಿಗಳು ಅಧಿವೇಶನಗಳಲ್ಲಿ ಸಾಕಷ್ಟು ಬಾರಿ ಪ್ರಸ್ತಾಪಿಸಿದ್ದಾರೆ. ವಿಷಯ ಇನ್ನೂ ಜೀವಂತವಾಗಿದೆ. ಇಂತಹ ಸನ್ನಿವೇಶದಲ್ಲಿ ಅಥಣಿ ತಾಲೂಕು ಕೇಂದ್ರವನ್ನು ಹೊಸ ಜಿಲ್ಲೆಯಾಗಿಸಿ, ಆ ಜಿಲ್ಲೆಗೆ ತೇರದಾಳ, ರಬಕವಿ-ಬನಹಟ್ಟಿ ಹಾಗೂ ಜಮಖಂಡಿ ತಾಲೂಕುಗಳನ್ನು ಸೇರ್ಪಡೆ ಮಾಡಬೇಕು ಎನ್ನುವ ಅಲ್ಲಿನ ಜನರ ಆಗ್ರಹ ಗಮನಾರ್ಹವಾಗಿದೆ.
ಮೊದಲಿನಿಂದ ಹೋರಾಟ:
ಬಾಗಲಕೋಟೆ ಜಿಲ್ಲೆಯನ್ನು ವಿಭಜಿಸಿ ಜಮಖಂಡಿಯನ್ನು ಹೊಸ ಜಿಲ್ಲಾ ಕೇಂದ್ರವನ್ನಾಗಿಸಿ ಆ ಜಿಲ್ಲೆಗೆ ರಬಕವಿ-ಬನಹಟ್ಟಿ, ಮುಧೋಳ, ಬೀಳಗಿ ತಾಲೂಕುಗಳನ್ನು ಸೇರ್ಪಡೆ ಮಾಡಬೇಕು. ಜತೆಗೆ ಸಾವಳಗಿಯನ್ನು ತಾಲೂಕು ಕೇಂದ್ರವಾಗಿಸಿ, ಜಮಖಂಡಿ ಜಿಲ್ಲೆಯಲ್ಲಿ ಉಳಿಸಬೇಕು ಎನ್ನುವ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಇದೀಗ ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರುವಾಗ ಚಿಕ್ಕೋಡಿ, ಗೋಕಾಕ ಹಾಗೂ ಅಥಣಿ ಜಿಲ್ಲೆಯ ಬೇಡಿಕೆ ಜೋರಾಗಿರುವುದು ಬಾಗಲಕೋಟೆ ಜಿಲ್ಲೆಯ ಜಮಖಂಡಿ ಭಾಗದ ಜನತೆಯಲ್ಲಿ ಆತಂಕವನ್ನುಂಟು ಮಾಡಿದೆ.
ಕನಸು ನನಸಾಗಲಿದೆ:
ಇವತ್ತಲ್ಲ ನಾಳೆ ಪಟವರ್ಧನ ಮಹಾರಾಜರ ಆಳ್ವಿಕೆಯ ಸಂಸ್ಥಾನ ಕೇಂದ್ರವಾಗಿದ್ದ ಜಮಖಂಡಿ ಜಿಲ್ಲಾ ಕೇಂದ್ರವಾಗಿ ರೂಪಗೊಳ್ಳಲಿದೆ ಎನ್ನುವ ವಿಶ್ವಾಸದಲ್ಲಿ ಇಲ್ಲಿನ ಜನರಿದ್ದಾರೆ. ಈಗ ಏಕಾಏಕಿ ಅಥಣಿ ಜಿಲ್ಲೆಯ ಕೂಗಿನ ಜತೆಗೆ ಜಮಖಂಡಿ ಹಾಗೂ ಸುತ್ತಲಿನ ತಾಲೂಕುಗಳನ್ನು ಹೊಸ ಜಿಲ್ಲೆಗೆ ಸೇರಿಸಬೇಕು ಎನ್ನುವ ಆಗ್ರಹ ಹೊಸದೊಂದು ವಿವಾದ ಸೃಷ್ಟಿಗೆ ಕಾರಣವಾಗಬಹುದು.
ಬಾಗಲಕೋಟೆ ಜಿಲ್ಲೆಯಲ್ಲಿ ಸದ್ಯ ಹತ್ತು ತಾಲೂಕು ಕೇಂದ್ರಗಳಿದ್ದು, ಬಾಗಲಕೋಟೆ ಜಿಲ್ಲೆಯನ್ನು ವಿಭಜಿಸಿ ಜಮಖಂಡಿಯನ್ನು ಪ್ರತ್ಯೇಕ ಹೊಸ ಜಿಲ್ಲೆಯನ್ನಾಗಿಸಲು ಯಾವ ಸಮಸ್ಯೆಗಳೂ ಇಲ್ಲ. ಜಮಖಂಡಿ ಜಿಲ್ಲೆಗೆ ರಬಕವಿ-ಬನಹಟ್ಟಿ, ಮುಧೋಳ, ಬೀಳಗಿ ತಾಲೂಕುಗಳನ್ನು ಸೇರಿಸುವ ಜತೆಗೆ ಸಾವಳಗಿಯನ್ನು ತಾಲೂಕು ಕೇಂದ್ರವಾಗಿಸಿ, ಜಮಖಂಡಿಯಲ್ಲಿ ಉಳಿಸುವುದರಿಂದ ಆಡಳಿತಾತ್ಮಕವಾಗಿ ಅನುಕೂಲವಾಗಲಿದೆ ಎನ್ನುವುದು ಆ ಭಾಗದ ಜನಪ್ರನಿಧಿಗಳ ಅಭಿಪ್ರಾಯವಾಗಿದೆ.
ಜಮಖಂಡಿಯೇ ಹೊಸ ಜಿಲ್ಲೆ ಆಗಲಿ:
ಬಾಗಲಕೋಟೆ ಜಿಲ್ಲೆಯನ್ನು ವಿಭಜಿಸಿ ಜಮಖಂಡಿಯನ್ನು ಪ್ರತ್ಯೇಕ ಜಿಲ್ಲಾ ಕೇಂದ್ರವಾಗಿಸಬೇಕು. ಅದನ್ನು ಇತರ ಜಿಲ್ಲೆಯೊಂದಿಗೆ ಸೇರಿಸಬಾರದು ಎನ್ನುವುದು ಜನತೆಯ ಆಗ್ರಹವಾಗಿರುವಾಗ, ಬೇರೊಂದು ಜಿಲ್ಲೆಗೆ ಸೇರಿಸುವುದಕ್ಕೆ ಅಲ್ಲಿನ ಜನತೆ ಸುತಾರಾಂ ಒಪ್ಪಲಾರರು. ಜಿಲ್ಲಾ ಪುನರ್ ವಿಂಗಡಣಾ ಸಮಿತಿಗಳು ಕೂಡಾ ಜಮಖಂಡಿಯನ್ನು ಜಿಲ್ಲಾ ಕೇಂದ್ರವಾಗಿಸಲು ಶಿಫಾರಸ್ಸು ಮಾಡಿವೆ. ಪರಿಸ್ಥಿತಿ ಹೀಗಿರುವಾಗ ಜಮಖಂಡಿ ಭಾಗವನ್ನು ಬೇರೆ ಕಡೆ ಸೇರಿಸಬೇಕು ಎನ್ನುವ ಆಗ್ರಹ ಎಷ್ಟು ಸೂಕ್ತ ಎನ್ನುವ ಹೊಸ ಪ್ರಶ್ನೆ ಹುಟ್ಟಿಕೊಂಡಿದೆ.
ಸರ್ಕಾರ ಒಂದೊಮ್ಮೆ ಅಥಣಿ ತಾಲೂಕು ಕೇಂದ್ರವನ್ನು ಜಿಲ್ಲಾ ಕೇಂದ್ರವಾಗಿಸಲು ಹೊರಟಲ್ಲಿ ಆ ಜಿಲ್ಲೆಗೆ ಸೇರಲು ಜಮಖಂಡಿ ಭಾಗದ ಜನತೆ ಎಷ್ಟರ ಮಟ್ಟಿಗೆ ಒಪ್ಪುತ್ತಾರೆ ಎನ್ನುವುದು ಕೂಡ ಮುಖ್ಯವಾಗಲಿದೆ. ಜತೆಗೆ ಜಮಖಂಡಿಯನ್ನೇ ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಿ ಎನ್ನುವ ಕೂಗನ್ನು ಇನ್ನಷ್ಟು ತೀವ್ರಗೊಳಿಸಿದಲ್ಲಿ ಅಚ್ಚರಿ ಪಡಬೇಕಿಲ್ಲ.
- ವಿಠ್ಠಲ ಆರ್. ಬಲಕುಂದಿ



