ರೈತರ ಹೋರಾಟಕ್ಕೆ ಸಂಸದ ಗದ್ದಿಗೌಡರ ಬೆಂಬಲ

ಬಾಗಲಕೋಟೆ: ಕಬ್ಬಿಗೆ ನ್ಯಾಯಯುತ ಬೆಲೆ ನೀಡುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಜಿಲ್ಲೆಯ ಬಿಜೆಪಿ ಮುಖಂಡರು ಬೆಂಬಲ ವ್ಯಕ್ತ ಪಡಿಸುವ ಮೂಲಕ ಇದೇ ಮೊದಲ ಬಾರಿಗೆ ಸರ್ಕಾರಕ್ಕೆ ರೈತರ ಪರ ಸೆಡ್ಡು ಹೊಡೆಯುವ ಕೆಲಸ ಮಾಡಿದ್ದಾರೆ.

ನ್ಯಾಯಯುತ ಬೆಲೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟ ಸ್ಥಳಕ್ಕೆ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಸಿದ್ದು ಸವದಿ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಸೇರಿದಂತೆ ಪ್ರಮುಖರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದ್ದು ರಾಜಕೀಯ ವಲಯದಲ್ಲಿ ಹೊಸ ಬೆಳವಣಿಗೆ ಆಗಿದ್ದರೂ ರೈತರ ಹಿತದೃಷ್ಟಿಯಿಂದ ಇದು ಉತ್ತಮ ಬೆಳವಣಿಗೆ ಆಗಿದೆ.

ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆ:

ಕಬ್ಬಿಗೆ ಬೆಲೆ ನಿಗದಿ ಕೇಂದ್ರದ ವಿಚಾರವಾಗಿದ್ದು, ಈಗಾಗಲೇ ಕೇಂದ್ರ ಸರ್ಕಾರ ಕಬ್ಬಿಗೆ ಪ್ರತಿ ಟನ್‌ಗೆ ನ್ಯಾಯಯುತ ಬೆಲೆ ನಿಗದಿ ಮಾಡಿದೆ. ಕೇಂದ್ರ ನಿಗದಿ ಮಾಡಿರುವ ಬೆಲೆಯನ್ನು ರೈತರು ಒಪ್ಪುತ್ತಿಲ್ಲ. ಪ್ರತಿ ಟನ್ ಕಬ್ಬಿಗೆ 3500 ರೂ. ನೀಡುವಂತೆ ಆಗ್ರಹಿಸುತ್ತಿದ್ದಾರೆ. ರೈತರ ಬೇಡಿಕೆಗೆ ಕಾರ್ಖಾನೆ ಆಡಳಿತ ಮಂಡಳಿಯವರು ಸೊಪ್ಪು ಹಾಕುತ್ತಿಲ್ಲ. ಪರಿಣಾಮವಾಗಿ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ.

ರೈತರ ಹೋರಾಟವನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದ ರಾಜ್ಯ ಸರ್ಕಾರ, ರೈತರು ಹಾಗೂ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಸೇರಿ ಬೆಲೆ ನಿಗದಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ಸಲಹೆ ಮಾಡಿದೆ. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವರು ಹೋರಾಟಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎನ್ನುವಂತೆ ಮಾತನಾಡಿದೆ.

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ ಮಾತನ್ನೇ ಜಿಲ್ಲಾಡಳಿತ ಕೂಡ ಹೇಳಿದೆ. ಇದುವರೆಗೂ ಕಬ್ಬು ಬೆಲೆ ನಿಗದಿ ವಿಷಯದಲ್ಲಿ ರಾಜ್ಯ ಸರ್ಕಾರ ಮಧ್ಯಸ್ಥಿಕೆ ವಹಿಸದೇ ಕಬ್ಬಿನ ಬೆಲೆ ನಿಗದಿ ಆಗಿರುವ ಉದಾಹರಣೆಯೇ ಇಲ್ಲ. ರೈತರು ಹಾಗೂ ಕಾರ್ಖಾನೆ ಆಡಳಿತ ಮಂಡಳಿಯವರೊಂದಿಗೆ ಸಭೆ ನಡೆಸಿ, ರಾಜಿ ಸಂಧಾನಗಳ ಮೂಲಕ ಬೆಲೆ ನಿಗದಿ ಆಗಿವೆ. ಸಂಧಾನ ಸಭೆಗಳು ವಿಫಲವಾದಾಗ ತಿಂಗಳಾನುಗಟ್ಟಲೇ ರೈತರು ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ಈ ವೇಳೆ ಕಾನೂನು ಸುವ್ಯವಸ್ಥೆಗೂ ಸಮಸ್ಯೆ ಆದ ಅನೇಕ ನಿದರ್ಶನಗಳು ಇವೆ.

ಕೇಂದ್ರದ್ದೂ ಜವಾಬ್ದಾರಿ ಇದೆ:

ಇಂತಹ ಸನ್ನಿವೇಶದಲ್ಲಿ ಸರ್ಕಾರ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸಲಹೆ ಮಾಡಿರುವುದರಿಂದ ಹೋರಾಟ ಮತ್ತಷ್ಟು ಕಾವು ಪಡೆದುಕೊಂಡಿದೆ. ಇದುವರೆಗೂ ರೈತರ ಹೋರಾಟದ ಬಗೆಗೆ ಏನನ್ನೂ ಮಾತನಾಡದ ಜಿಲ್ಲೆಯ ಬಿಜೆಪಿ ಮುಖಂಡರು ಅದರಲ್ಲೂ ಸಂಸದ ಪಿ.ಸಿ. ಗದ್ದಿಗೌಡರ ದಿಢೀರ್ ಹೋರಾಟಕ್ಕೆ ಬೆಂಬಲ ವ್ಯಕ್ತ ಪಡಿಸಿದ್ದು ಹೊಸ ಬೆಳವಣಿಗೆ ಆಗಿದೆ. ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡುವುದು ಕೇಂದ್ರ ಸರ್ಕಾರವೇ ಆಗಿರುವುದರಿಂದ ಸಂಸದ ಪಿ.ಸಿ. ಗದ್ದಿಗೌಡರ ಅವರು ರೈತರ ನ್ಯಾಯಯುತ ಬೇಡಿಕೆಯನ್ನು ಕೇಂದ್ರದ ಗಮನಕ್ಕೆ ತರುವ ಕೆಲಸವನ್ನೂ ಮಾಡಬೇಕಿದೆ. ಅಂದಾಗ ಮಾತ್ರ ಹೋರಾಟ ಬೆಂಬಲಿಸಿದ್ದು ಸಾರ್ಥಕವಾಗಲಿದೆ.

ರೈತರ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ವಿಷಯದಲ್ಲಿ ರಾಜ್ಯದಷ್ಟೇ ಜವಾಬ್ದಾರಿ ಕೇಂದ್ರದ‌ ಮೇಲೂ ಇದೆ. ರಾಜ್ಯ ಸರ್ಕಾರದ ಮಧ್ಯಸ್ಥಿಕೆ ಜತೆ ಕೇಂದ್ರದ‌‌ ಮಧ್ಯಸ್ಥಿಕೆಯೂ ಮುಖ್ಯವಾಗಿದೆ. ಇಂತಹ ಸನ್ನಿವೇಶದಲ್ಲಿ ಸಂಸದ‌ ಗದ್ದಿಗೌಡರ ಹೋರಾಟ ಬೆಂಬಲಿಸಿದ್ದು ನ್ಯಾಯೋಚಿತವಾಗಿದೆ.

ನ್ಯಾಯ ಕೊಡಿಸುವುದು ಪ್ರತಿಪಕ್ಷಗಳ ಹೊಣೆ:

ರೈತರ ನ್ಯಾಯಯುತ ಹೋರಾಟದ ವೇಳೆ ಅದಕ್ಕೆ ಸ್ಪಂದನೆ ಮಾಡುವ ಬದಲು ಸರ್ಕಾರ ಸುಮ್ಮನೆ ಕುಳಿತಾಗ ಪ್ರತಿಪಕ್ಷಗಳು ಸರ್ಕಾರವನ್ನು ಎಚ್ಚರಿಸಲೇ ಬೇಕು. ಆ ಕೆಲಸವನ್ನು ಜಿಲ್ಲೆಯ ಬಿಜೆಪಿ ಕೆಲ ಮುಖಂಡರು ಮಾಡಿರುವುದು ವ್ಯಾಪಕ ಸ್ವಾಗತಕ್ಕೆ ಒಳಗಾಗಿದೆ. ಈಗಾಗಲೇ ನ್ಯಾಯವಾದಿಗಳು, ಸ್ವಾಮೀಜಿಗಳು ಹೋರಾಟಕ್ಕೆ ಬೆಂಬಲ ನೀಡಿದ್ದು, ಇದೀಗ ಪ್ರತಿಪಕ್ಷವಾಗಿ ಬಿಜೆಪಿ ಕೂಡ ಬೆಂಬಲ ಘೋಷಿಸಿರುವುದು ಹೋರಾಟಕ್ಕೆ ಮತ್ತಷ್ಟು ಬಲ ನೀಡಿದಂತಾಗಿದೆ.

ಸರ್ಕಾರ ಕೂಡಲೇ ಸಮಸ್ಯೆಗೆ ಸ್ಪಂದನೆಮಾಡಿ, ಉಭಯತರ ಮಧ್ಯೆ ಮಧ್ಯಸ್ಥಿಕೆ ವಹಿಸಿ ಸೂಕ್ತ ಬೆಲೆ ನಿಗದಿ ದೊಡ್ಡಣ್ಣ ಪಾತ್ರ ನಿರ್ವಹಿಸುವಂತೆ ಪ್ರತಿಪಕ್ಷಗಳು ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕಿದೆ. ಅಂದಾಗ ಮಾತ್ರ ರೈತರ ಹೋರಾಟ ಸಾರ್ಥಕತೆ ಪಡೆದುಕೊಳ್ಳಲಿದೆ. ಕಾರ್ಖಾನೆಗಳು ಆರಂಭಗೊಂಡು ರೈತರು ಹಾಗೂ ಆಡಳಿತ ಮಂಡಳಿಯವರ ನಡುವೆ ಅನುಕೂಲಕರ ವಾತಾವರಣ ನಿರ್ಮಾಣವಾಗಲಿದೆ.

ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಪ್ರತಿಪಕ್ಷ ಬಿಜೆಪಿ ಎಷ್ಟರ ಮಟ್ಟಿಗೆ ರೈತರ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಕಿವಿ ಹಿಂಡಲಿದೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.

  • ವಿಠ್ಠಲ ಆರ್. ಬಲಕುಂದಿ
Scroll to Top