ಕಾಂಗ್ರೆಸ್ ಪಾಳೆಯದಲ್ಲಿ ನವೆಂಬರ್ ಕ್ರಾಂತಿ ಕುರಿತು ಭಾರಿ ಚರ್ಚೆ ನಡೆಯುತ್ತಿರುವಾಗಲೇ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಅವರು ಮುಧೋಳದಲ್ಲಿ ನಡೆದ ಜಿಡಗಣ್ಣ – ಬಾಲಣ್ಣ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ PWD ಮಂತ್ರಿ ಸತೀಶ್ ಜಾರಕಿಹೊಳಿ ಅವರು ಮುಂದಿನ ಮುಖ್ಯಮಂತ್ರಿ ಎನ್ನುವ ಕುತೂಹಲಕರ ಅಂಶವನ್ನು ಪ್ರಸ್ತಾಪಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆ, ಮುಂದಿನ ಮುಖ್ಯಮಂತ್ರಿ ಚರ್ಚೆಗೆ ಸಂಬಂಧಿಸಿದಂತೆ ಇದುವರೆಗೂ ಜಾಣ್ಮೆಯ ನಡೆ ಅನುಸರಿಸುತ್ತಿದ್ದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಇದೀಗ, ಸ್ವ-ಶಕ್ತಿಯ ಮೇಲೆ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಲಿದ್ದಾರೆ ಎನ್ನುವ ಮಾತನ್ನಾಡಿ ಸಾಕಷ್ಟು ಕುತೂಹಲಕ್ಕೆ ಕಾರಣರಾಗಿದ್ದಾರೆ.
ಜಾಣ್ಮೆಯ ನಡೆ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದಾಗಿನಿಂದಲೂ ಮುಖ್ಯಮಂತ್ರಿ ಬದಲಾವಣೆ ಮಾತು ಸಾಮಾನ್ಯ ಎನ್ನುವಂತಾಗಿದೆ. ಅದರಲ್ಲೂ ಕಳೆದ ಐದಾರು ತಿಂಗಳಿನಿಂದ ಮುಖ್ಯಮಂತ್ರಿ ಬದಲಾವಣೆ, ನವೆಂಬರ್ ಕ್ರಾಂತಿ ಮಾತುಗಳು ಜೋರಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಕೆಲವರು, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಪರ ಕೆಲವರು ನಿರಂತರ ಬ್ಯಾಟಿಂಗ್ ಮಾಡುತ್ತಲೇ ಇದ್ದಾರೆ.
ಕಾಂಗ್ರೆಸ್ಸಿನ ವರಿಷ್ಠರು ಹತ್ತು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಅದಕ್ಕೆ ಕ್ಯಾರೇ ಎನ್ನದೆ ತಮ್ಮ ವಾದ ಮುಂದುವರಿಸಿದ್ದಾರೆ. ಸಚಿವ ತಿಮ್ಮಾಪುರ ಮಾತ್ರ ಇದುವರೆಗೂ ಮುಖ್ಯಮಂತ್ರಿ ಬದಲಾವಣೆ ಬಗೆಗಾಗಲಿ, ನವೆಂಬರ್ ಕ್ರಾಂತಿ ಬಗೆಗಾಗಿ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ. ಯಾರ ಪರವೂ ಬ್ಯಾಟಿಂಗ್ ಮಾಡಿಲ್ಲ. ಎಲ್ಲವನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ಅದು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಹೇಳುತ್ತ, ಜಾಣ್ಮೆಯ ನಡೆ ಅನುಸರಿಸುತ್ತ ಬಂದಿದ್ದಾರೆ.
ಪಕ್ಷದಲ್ಲಿ ಏನೇ ನಿರ್ಧಾರಗಳು ಆದರೂ ಅವುಗಳಿಂದ ತಮ್ಮ ರಾಜಕೀಯ ಭವಿಷ್ಯದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಬಾರದು. ಏನೇನೊ ಹೇಳಿಕೆ ನೀಡಿ, ಮುಜುಗರಕ್ಕೊಳಗಾಗಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಬಾರದು ಎನ್ನುವ ತಂತ್ರ ಅನುಸರಿಸಿಕೊಂಡು ಬಂದಿದ್ದಾರೆ.
ನನ್ನ ನಾಯಕ ಮುಂದಿನ ಸಿಎಂ:
ಏತನ್ಮಧ್ಯೆ PWD ಮಂತ್ರಿ ಸತೀಶ್ ಜಾರಕಿಹೊಳಿ ಅವರ ಅಭಿಮಾನಿಗಳು ಆಗಾಗ್ಗೆ ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಹೇಳುತ್ತಲೇ ಬಂದಿದ್ದಾರೆ. ಸಚಿವ ಜಾರಕಿಹೊಳಿ ಮಾತ್ರ, ಸದ್ಯ ತಾವು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಅಲ್ಲ, ಏನಿದ್ದರೂ 2028ರಲ್ಲಿ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹಲವು ಬಾರಿ ಸ್ಪಷ್ಟನೆ ನೀಡಿದ್ದಾರಾದರೂ ಬೆಂಬಲಿಗರು ಮಾತ್ರ ಅವಕಾಶ ಸಿಕ್ಕಾಗಲೆಲ್ಲ, ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಲೇ ಇದ್ದಾರೆ.
ಮೊನ್ನೆ ಮುಧೋಳದಲ್ಲಿ ನಡೆದ ಜಿಡಗಣ್ಣ -ಬಾಲಣ್ಣ ಅವರ ಪುತ್ಥಳಿ ಸ್ಥಾಪನೆ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ, ಸುರಪುರದ ಮಾಜಿ ಶಾಸಕ ರಾಜಗೌಡ ಅವರು 2028ಕ್ಕೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎನ್ನಬೇಡಿ, ಇದೇ ಅವಧಿಯಲ್ಲಿ ಅವಕಾಶ ಸಿಕ್ಕರೆ ಮುಖ್ಯಮಂತ್ರಿ ಆಗಿ ಬಿಡಿ. 2028ಕ್ಕೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎನ್ನುವ ಮಾತನ್ನಾಡಿದಾಗ, ಜಾರಕಿಹೊಳಿ ಅವರು ಮುಖ್ಯಮಂತ್ರಿ ಆಗಲು ಅವಸರ ಏನಿಲ್ಲ. 2028 ಕ್ಕೆ ತಪ್ಪಿದರೆ 2033ಕ್ಕೆ ನೋಡೋಣ ಎನ್ನುವ ಉತ್ತರ ನೀಡಿದರು.
ಅದರ ಮಧ್ಯೆ ಅಬಕಾರಿ ಸಚಿವ ತಿಮ್ಮಾಪುರ ಅವರು, ಜಾರಕಿಹೊಳಿ ಅವರು ಎಲ್ಲರ ನಿರೀಕ್ಷೆಯಂತೆ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ. ಅವರು ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಸ್ವಂತ ಶಕ್ತಿಯ ಮೇಲೆ ಒಂದಿಲ್ಲ ಒಂದು ದಿನ ಮುಖ್ಯಮಂತ್ರಿ ಆಗಲಿದ್ದಾರೆ. ಅದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದು ಗಟ್ಟಿಧ್ವನಿಯಲ್ಲಿ ಹೇಳಿದ್ದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ದೂರದೃಷ್ಟಿಯ ನಡೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬಣಗಳ ನಡುವೆ ಮುಖ್ಯಮಂತ್ರಿ ಸ್ಥಾನದ ಬಗೆಗೆ ನಡೆದಿರುವ ದಂಗಲ್ ಬಗೆಗೆ ಏನನ್ನೂ ಹೇಳದ ಸಚಿವ ತಿಮ್ಮಾಪುರ ಅವರು ಸತೀಶ್ ಜಾರಕಿಹೊಳಿ ನನ್ನ ನಾಯಕ ಎಂದು ಹೇಳಿದ್ದಲ್ಲದೆ, ಅವರ ಬೆಂಬಲಿಗರ ಭಾವನೆಗೆ ಸಾಥ್ ನೀಡಿದ್ದಾರೆ. ಇದು ರಾಜಕೀಯವಾಗಿ ಹಲವು ಅರ್ಥಗಳ ಹುಟ್ಟಿಗೆ ಕಾರಣವಾಗಿದೆ.
ಹಿಂದೊಮ್ಮೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಎಸ್. ಬಂಗಾರಪ್ಪ ಮತ್ತು ಕೆ.ಎಚ್.ರಂಗನಾಥ ಅವರ ನಡುವೆ ಪೈಪೋಟಿ ಉಂಟಾಗಿದ್ದ ವೇಳೆ ಶಾಸಕರಾಗಿದ್ದ ತಿಮ್ಮಾಪುರ ಅವರು ರಂಗನಾಥ ಅವರ ಪರ ಹೇಳಿಕೆ ನೀಡಿದ್ದರಿಂದ ಸಾಕಷ್ಟು ಮುಜುಗರ ಎದುರಿಸಿದ್ದನ್ನು ಅವರೇ ಹಲವು ಬಾರಿ ಹೇಳಿಕೊಂಡಿದ್ದಾರೆ. ಆ ಅನುಭವದ ಹಿನ್ನೆಲೆಯಲ್ಲಿ ಅವರು ಪಕ್ಷದಲ್ಲಿನ ನಾಯಕತ್ವ ವಿಷಯದಲ್ಲಿ ಹೈಕಮಾಂಡ್ ಪರ ತಮ್ಮ ನಿಲುವನ್ನು ಪ್ರಕಟಿಸುತ್ತ ಬಂದಿದ್ದಾರೆ. ಈಗ ಅವರು ಸತೀಶ್ ಜಾರಕಿಹೊಳಿ ಪರ ಗಟ್ಟಿಯಾಗಿ ಮಾತನಾಡಿದ್ದಾರೆ. ಮುಂದಿನ ಬೆಳವಣಿಗೆಗಳನ್ನು ಕಾಯ್ದು ನೋಡಬೇಕಷ್ಟೆ.
- ವಿಠ್ಠಲ ಆರ್. ಬಲಕುಂದಿ




