ಪುನಾರಚಿತ‌ ಸಂಪುಟದಲ್ಲೂ ಬಾಗಲಕೋಟೆ ಜಿಲ್ಲೆಗೆ ಮಂತ್ರಿಸ್ಥಾನ

ಬಾಗಲಕೋಟೆ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜ್ಯ ಸಚಿವ ಸಂಪುಟ ಪುನಾರಚನೆ ವಿದ್ಯಮಾನಗಳು ಗರಿಗೆದರಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ ಸಂಪುಟ ಪುನಾರಚನೆ ಬಗೆಗೆ ಚರ್ಚೆ ಆಗಿಲ್ಲವೆಂದು ಸ್ಪಷ್ಟನೆ ನೀಡಿದ್ದರೂ ಪುನಾರಚನೆ ಚಟುವಟಿಕೆಗಳು ತೀವ್ರಗೊಂಡಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸ್ಥಾನಾಕಾಂಕ್ಷಿಗಳು, ಇರುವ ಸ್ಥಾನ ಉಳಿಸಿಕೊಳ್ಳಬೇಕು ಎನ್ನುವ ಸಚಿವರ ದಂಡು ದೆಹಲಿಗೆ ಹೋಗಿದೆ.

ಬೇರೆ ಖಾತೆಯ ಇರಾದೆ:

ಸದ್ಯ ಸಿದ್ದರಾಮಯ್ಯನವರ ಸಂಪುಟದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಇಲ್ಲವಾಗಿದ್ದರೂ ಬಾಗಲಕೋಟೆ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿದೆ. ಜತೆಗೆ ಜಿಲ್ಲೆಗೆ ನಿಗಮ –ಮಂಡಳಿಯಲ್ಲೂ ಮೂರು ಸ್ಥಾನಗಳು ಲಭ್ಯವಾಗಿವೆ. ಇಷ್ಟೊಂದು ಪ್ರಾತಿನಿಧ್ಯ ಪಡೆದಿರುವ ಜಿಲ್ಲೆಯಲ್ಲಿ ಸಂಪುಟ ಸೇರ್ಪಡೆಗೆ ಇಬ್ಬರು ಶಾಸಕರು ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಸಂಪುಟದಲ್ಲಿರುವ ಆರ್.ಬಿ. ತಿಮ್ಮಾಪುರ ಅವರು ಸದ್ಯ ತಮ್ಮ ಬಳಿ ಇರುವ ಅಬಕಾರಿ ಖಾತೆ ಬದಲಿಗೆ ಬೇರೆ ಖಾತೆ ಪಡೆಯುವ ಇರಾದೆಯನ್ನು ಈಗಾಗಲೇ ವ್ಯಕ್ತ ಪಡಿಸಿದ್ದಾರೆ. ಒಂದೊಮ್ಮೆ ಸಂಪುಟ ಪುನಾರಚನೆ ಆದರೂ ತಾವು ಪುನಾರಚಿತ ಸಂಪುಟದಲ್ಲೂ ಮಂತ್ರಿಯಾಗುವ ವಿಶ್ವಾಸದಲ್ಲಿ ಅವರು ಬೇರೆ ಅಭಿವೃದ್ಧಿ ಪರ ಖಾತೆ ಕೇಳುವ ಬಗೆಗೆ ಮಾತನಾಡಿದ್ದಾರೆ. ಗಮನಾರ್ಹ ಅಂಶವೆಂದರೆ ತಿಮ್ಮಾಪುರ ಕೂಡ ದೆಹಲಿಯತ್ತ ಮುಖಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ಸ್ಥಾನ ಗ್ಯಾರಂಟಿ:

ಮೂಲಗಳ ಪ್ರಕಾರ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಬೀಳಗಿ ಶಾಸಕ ಜೆ.ಟಿ. ಪಾಟೀಲ ಮಂತ್ರಿಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಅವರು ನಿಗಮ-ಮಂಡಳಿ ಅಧ್ಯಕ್ಷರೂ ಆಗಿದ್ದಾರೆ. ಮಂತ್ರಿಸ್ಥಾನ ಗಿಟ್ಟಿಸುವ ನಿಟ್ಟಿನಲ್ಲಿ ಅವರ ಪ್ರಯತ್ನ ನಡೆಸಿದ್ದಾರೆ. ಪುನಾರಚಿತ ಸಂಪುಟದಲ್ಲಿ ಒಂದು ಸ್ಥಾನ ಜಿಲ್ಲೆಗೆ ಗ್ಯಾರಂಟಿ ಎನ್ನುವ ಮಾತಿದೆ. ಗಮನಾರ್ಹ ಅಂಶವೆಂದರೆ ಸಂಪುಟ ಪುನಾರಚನೆ ವೇಳೆ ಕೆಲವರನ್ನು ಕೈ ಬಿಡಲಾಗುತ್ತದೆ ಎನ್ನುವ ವಾದ ದಿನದಿಂದನಕ್ಕೆ ಬಲವಾಗುತ್ತಿದೆ.

ಕೈ ಬಿಡುವ ಸಚಿವರ ಪಟ್ಟಿಯಲ್ಲಿ ಸಚಿವ ತಿಮ್ಮಾಪುರ ಅವರ ಹೆಸರು ಇದೆ ಎನ್ನುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಹೊಸಬರೊಬ್ಬರು ಸಂಪುಟ ಸೇರಲಿದ್ದಾರೆ ಎನ್ನುವುದಾದಲ್ಲಿ ಹಳಬರನ್ನು ಕೈ ಬಿಡಬಹುದು ಎನ್ನುವುದು ರಾಜಕೀಯ ಲೆಕ್ಕಾಚಾರ. ಸದ್ಯದ ಸ್ಥಿತಿಯಲ್ಲಿ ಜಿಲ್ಲೆಗೆ ಎರಡು ಸ್ಥಾನ ನೀಡುವ ಸ್ಥಿತಿ ಇಲ್ಲ. ಇರುವ ಒಂದು ಸ್ಥಾನ ಉಳಿದರೆ ಸಾಕು ಎನ್ನುವ ವಾತಾವರಣವಿದೆ. ಈಗಾಗಲೇ ಸಂಪುಟದಲ್ಲಿ ಪ್ರಾತಿನಿಧ್ಯ ಪಡೆಯದೇ ಇರುವ ಜಿಲ್ಲೆಗೆ ಪ್ರಾತಿನಿಧ್ಯ ಕೊಡಬೇಕು ಎನ್ನುವುದು ಸೇರದಂತೆ ನಾನಾ ರೀತಿಯ ಲೆಕ್ಕಾಚಾರದಲ್ಲಿ ಜಿಲ್ಲೆಗೆ ಪುನಾರಚಿತ ಸಂಪುಟದಲ್ಲಿ ಜಿಲ್ಲೆಗೆ ಅವಕಾಶವೇ ಸಿಗುವುದು ಅನುಮಾನ.

ಪಕ್ಷ ಗೆಲ್ಲಿಸಲು ಮಂತ್ರಿಸ್ಥಾನ:

ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಶಾಸಕರಾಗಿದ್ದ ಎಚ್.ವೈ. ಮೇಟಿ ಅವರ ನಿಧನದಿಂದಾಗಿ ತೆರವಾಗಿರುವ ಶಾಸಕ ಸ್ಥಾನಕ್ಕೆ ಯಾವುದೇ ಸಮಯದಲ್ಲೂ ಚುನಾವಣೆ ಘೋಷಣೆ ಆಗುವ ಸಾಧ್ಯತೆಗಳಿರುವುದರಿಂದ ಪುನಾರಚಿತ ಸಂಪುಟದಲ್ಲಿ ಜಿಲ್ಲೆಯ ಒಬ್ಬರಿಗೆ ಅವಕಾಶ ಸಿಗಲಿದೆ ಎನ್ನುವ ಹೊಸ ಭರವಸೆ ಜಿಲ್ಲೆಯ ಶಾಸಕರಲ್ಲಿ ಹುಟ್ಟಿಕೊಂಡಿದೆ. ಹಾಗಾಗಿ ಸ್ಥಾನ ಉಳಿಸಿಕೊಳ್ಳಲು ಹಾಲಿ ಸಚಿವ ಆರ್.ಬಿ. ತಿಮ್ಮಾಪುರ, ಸ್ಥಾನ ಗಿಟ್ಟಿಸಿಕೊಳ್ಳಲು ಜೆ.ಟಿ. ಪಾಟೀಲ, ವಿಜಯಾನಂದ ಕಾಶಪ್ಪನವರ ಪ್ರಯತ್ನ ಇನ್ನಷ್ಟು ಜೋರಾಗಲಿದೆ. ಕಾಶಪ್ಪನವರ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ತೆರಳುವ ಮುಂಚೆ ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ.

ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಂಡು ಬರಲು ಜಿಲ್ಲೆಯ ಒಬ್ಬರು ಸಚಿವರು ಇದ್ದರೆ ಅನುಕೂಲ ಎನ್ನುವ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಜಿಲ್ಲೆಯ ಪ್ರಾತಿನಿಧ್ಯದ ಸಾಧ್ಯತೆಗಳು ದಟ್ಟವಾಗುತ್ತಿವೆ. ಆದರೆ ಮುಖ್ಯಮಂತ್ರಿಗಳ ನಿರ್ಧಾರ ಏನಾಗಿರಲಿದೆ ಎನ್ನುವುದು ಬಹುಮುಖ್ಯವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸಬರಿಗೂ ಆದ್ಯತೆ ನೀಡಲೇ ಬೇಕಾದ ಅನಿವಾರ್ಯತೆಯಲ್ಲಿ ಇರುವುದರಿಂದ ಹಾಗೂ ಬಾಗಲಕೋಟೆ ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಗೂ ಸಂಪುಟದಲ್ಲಿ ಅವಕಾಶ ನೀಡುವರು ಎನ್ನುವುದು ಬಹುತೇಕ ಕಾಂಗ್ರೆಸ್ಸಿಗರ ಆಶಯವಾಗಿದೆ.

  • ವಿಠ್ಠಲ ಆರ್. ಬಲಕುಂದಿ

Scroll to Top