ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ್ ಕಲ್ಪನೆಯ ಕೂಸು ಪಂಚಾಯ್ತಿ ರಾಜ್ ವ್ಯವಸ್ಥೆ. ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಜಾರಿಗೆ ಬಂದಿದ್ದು ಪಂಚಾಯಿತಿ ರಾಜ್ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರ ಬಹು ಮುಖ್ಯವಾಗಿದೆ.
ಪಂಚಾಯಿತಿ ರಾಜ್ ವ್ಯವಸ್ಥೆ ಜಾರಿ ಬಳಿಕ ಗ್ರಾಮೀಣರ ಬದುಕು ಹಾಗೂ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಸಾಕಷ್ಟು ಗ್ರಾಮಗಳು ಅಗತ್ಯ ಮೂಲ ಸೌಕರ್ಯಗಳೊಂದಿಗೆ ಮಾದರಿ ಗ್ರಾಮಗಳಾಗಿ ನಿಂತಿವೆ. ಬಹುತೇಕ ಎಲ್ಲ ಗ್ರಾಮಗಳು ಇನ್ನೂ ಈ ಸಾಲಿನಲ್ಲಿ ನಿಂತುಕೊಳ್ಳಬೇಕಿದೆ.
ಗ್ರಾಪಂ.ಸದಸ್ಯರಿಗೆ ಕಿವಿ ಮಾತು:
ಗ್ರಾಮ ಪಂಚಾಯ್ತಿಗಳಲ್ಲಿ ಆಡಳಿತ ನಡೆಸುವವರು ಪರಿಣಾಮಕಾರಿಯಾಗಿ ಕೆಲಸ ಮಾಡದ ಪರಿಣಾಮ ಇಂದಿಗೂ ಬಹುತೇಕ ಗ್ರಾಮಗಳು ಅಗತ್ಯ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಇಂತಹ ವ್ಯವಸ್ಥೆಯನ್ನು ನೋಡಿಯೇ ಬೀಳಗಿ ಶಾಸಕರೂ ಆಗಿರುವ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಜೆ.ಟಿ. ಪಾಟೀಲರು “ಪಂಚಾಯಿತಿ ಸದಸ್ಯರು ಪಿಡಿಒಗಳ ಕೈ ಚೀಲ ಹಿಡಿಯಬೇಡಿ” ಎಂದು ಹೇಳಿರುವ ಮಾತು ಅತ್ಯಂತ ಮಾರ್ಮಿಕವಾಗಿದೆ.
ಪಿಡಿಒಗಳ ಬಳಿ ಪಾಲು ಕೇಳುವ ಸ್ಥಿತಿ :
ಬೀಳಗಿ ವಿಧಾನಸಭೆ ಕ್ಷೇತ್ರದ ಬಾದಾಮಿ ತಾಲೂಕಿನ ಕಾಡರಕೊಪ್ಪದಲ್ಲಿ ನಡೆದ ಪಿಕೆಪಿಎಸ್ -2 ರ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿದ್ದ ಜೆ.ಟಿ.ಪಾಟೀಲರು ಬಹುತೇಕ ಪಂಚಾಯಿತಿ ಸದಸ್ಯರು ಪಿಡಿಒಗಳ ಬಳಿಗೆ ಹೋಗಿ ಪಾಲು ಕೇಳುವ ಸ್ಥಿತಿಗೆ ಬಂದು ನಿಂತಿರುವುದು ವಿಷಾದಕರ ಸಂಗತಿ.
ಗ್ರಾಪಂ. ಅಧಿಕಾರಿಗಳು ಪಂಚಾಯಿತಿ ಸದಸ್ಯರು ಹೇಳುವ ಕೆಲಸ ಮಾಡಲು ಇದ್ದವರು. ಸದಸ್ಯರು ಗ್ರಾಮಗಳ ಅಭಿವೃದ್ಧಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ನಿರ್ಣಯಗಳನ್ನು ಅನುಷ್ಠಾನಕ್ಕೆ ತರುವ ಕೆಲಸ ಮಾಡಬೇಕಾದವರು. ಆದರೆ ಪರಿಸ್ಥಿತಿ ಇಂದು ಬದಲಾಗಿದೆ. ಪಂಚಾಯಿತಿ ಸದಸ್ಯರ ಮಾತು ಕೇಳಬೇಕಾದ ಅಧಿಕಾರಿಗಳನ್ನು ಸದಸ್ಯರು ಬೆನ್ನುತ್ತಿದ್ದಾರೆ. ಇದು ಇಂದಿನ ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಗ್ರಾಮಗಳಲ್ಲಿ ಇಂತಹ ಕೆಲಸ ಆಗಬೇಕೆಂದು ಸಭೆಯಲ್ಲಿ ಕೈಗೊಳ್ಳುವ ನಿರ್ಣಯಗಳು ಚಾಚುತಪ್ಪದೆ ಜಾರಿಗೆ ಬರಬೇಕು. ಆದರೆ ಹಾಗೆ ಆಗುತ್ತಿಲ್ಲ. ಬಹುತೇಕ ಕಡೆಗಳಲ್ಲಿ ಅಧಿಕಾರಿಗಳು ಸದಸ್ಯರಿಗೆ ಕ್ಯಾರೆ ಎನ್ನುವ ಸ್ಥಿತಿ ಇದೆ.
ಏತನ್ಮಧ್ಯೆ ಅಧಿಕಾರಿಗಳ ಬಳಿಗೆ ತೆರಳಿ ಕೆಲ ಸದಸ್ಯರು ” ನಮ್ಮ ಪಾಲು ಎಷ್ಟು ಬಂದಿದೆ. ನಮ್ಮದು ನಮಗೆ ಕೊಡಿ” ಎಂದು ಕೇಳುತ್ತಿರುವ ವ್ಯವಸ್ಥೆ ಬದಲಾಗಬೇಕು ಎಂದು ಶಾಸಕ ಜೆ.ಟಿ. ಪಾಟೀಲರು ಕಿವಿ ಮಾತು ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಸದಸ್ಯರು ಮತ್ತು ಅಧಿಕಾರಿಗಳ ಸದ್ಯದ ಮನಸ್ಥಿತಿ ಬದಲಾಗಬೇಕಿದೆ.
ಅಭಿವೃದ್ಧಿ ವೇಗ ಹೆಚ್ಚಲಿ:
ಇಂದು ಗ್ರಾಮಗಳ ಅಭಿವೃದ್ಧಿ ವೇಗ ಅಲ್ಲಿನ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳನ್ನು ಅವಲಂಭಿಸಿರುತ್ತದೆ. ಸದಸ್ಯರು ಮತ್ತು ಅಧಿಕಾರಿಗಳ ನಡುವೆ ಸೌಹಾರ್ದ ವಾತಾವರಣ ಇರಬೇಕು. ಸದಸ್ಯರು ಅಧಿಕಾರಿಗಳ ಕೈಚೀಲ ಹಿಡಿಯುವ ವ್ಯವಸ್ಥೆ ಅಂತ್ಯಗೊಳ್ಳಬೇಕು. ಅಂದಾಗ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗಲಿದೆ. ಗಾಂಧೀಜಿ ಅವರು ಕಂಡ ಗ್ರಾಮಸ್ವರಾಜ್ ಕನಸು ನನಸಾಗಲು. ಸಾಧ್ಯವಿದೆ.
ಸದ್ಯದ ವ್ಯಸ್ಥೆಯ ಮಧ್ಯೆಯೂ ಅನೇಕ ಗ್ರಾಮ ಪಂಚಾಯಿತಿಗಳಲ್ಲಿನ ವ್ಯವಸ್ಥೆ ಪರಿಣಾಮ ಸಾಕಷ್ಟು ಮಾದರಿಗಳನ್ನಹ ಕಾಣಬಹುದಾಗಿದೆ. ಅದು ಎಲ್ಲ ಗ್ರಾಮಗಳಲ್ಲೂ ಕಾಣುವಂತಾಗಬೇಕಿದೆ. ಅಂದಾಗ ಮಾತ್ರ ಪಂಚಾಯಿತಿ ರಾಜ್ ವ್ಯವಸ್ಥೆ ಇನ್ನಷ್ಟು ಬಲಗೊಳ್ಳಲು ಸಾಧ್ಯವಾಗಲಿದೆ. ಇಲ್ಲದೆ ಹೋದಲ್ಲಿ ಗ್ರಾಮ ಪಂಚಾಯಿತಿಗಳು ರಾಜಕೀಯ ಪಕ್ಷಗಳ ಕಾರ್ಯಕರ್ತ ಹಾಗೂ ನಿರುದ್ಯೋಗಿಗಳ ಪಾಲಿನ ಹುಲ್ಲುಗಾವಲು ಪ್ರದೇಶಗಳಾಗಿ ಉಳಿಯಲಿದ್ದು, ಅಭಿವೃದ್ಧಿ ಎನ್ನುವುದು ದಾಖಲೆಗಳಿಗೆ ಮಾತ್ರ ಸೀಮಿತ ಎನ್ನುವಂತಾಗಲಿದೆ.
- ವಿಠ್ಠಲ ಆರ್. ಬಲಕುಂದಿ




