ಬಾಗಲಕೋಟೆ: ಕುಡಚಿ – ಬಾಗಲಕೋಟೆ ರೈಲ್ವೆ ಮಾರ್ಗ ಪೂರ್ಣಗೊಳಿಸಲು ಹಾಗೂ ಲೋಕಾಪುರ – ಧಾರವಾಡ ಹೊಸ ರೈಲ್ವೆ ಮಾರ್ಗ ರಚನೆಗಾಗಿ ರಾಜ್ಯ ರೈಲ್ವೆ ಹೋರಾಟ ಸಮಿತಿಯಿಂದ ನಿರಂತರ ಹೋರಾಟ ನಡೆಯುತ್ತಿದೆ. ಸಾರ್ವಜನಿಕ ವಲಯದಿಂದಲೂ ಸೂಕ್ತ ಸ್ಪಂದನೆ ಸಿಕ್ಕಿದೆ. ಆದರೆ ನಮ್ಮನ್ನಾಳುವ ಜನಪ್ರತಿನಿಧಿಗಳಿಂದ ಮಾತ್ರ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ ಎನ್ನುವುದು ಜನತೆಯಲ್ಲಿ ಬೇಸರವನ್ನುಂಟು ಮಾಡಿದೆ.
ನಿರಂತರ ಹೋರಾಟ:
ರಾಜ್ಯ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ಧಿನ್ ಖಾಜಿ ನೇತೃತ್ವದಲ್ಲಿ ನಡೆದ ಸತತ ಹೋರಾಟದ ಫಲವಾಗಿ ಬಾಗಲಕೋಟೆ-ಕುಡಚಿ ರೈಲು ಮಾರ್ಗ ಲೋಕಾಪರವರೆಗೂ ಪೂರ್ಣಗೊಂಡಿದೆ. ಆದರೆ ರೈಲುಗಳು ಓಡಾಡುತ್ತಿಲ್ಲ. ಲೋಕಾಪುರದಿಂದ ಮುಂದೆ ಮಾರ್ಗ ರಚನೆ ನಿಧಾನಗೊಂಡಿದೆ. ಮಾರ್ಗ ಪೂರ್ಣಗೊಳಿಸುವಂತೆ ನಿತ್ಯವೂ ಹೋರಾಟ ನಡೆಯುತ್ತಲೇ ಇದೆ.
ರೈಲ್ವೆ ಹೋರಾಟ ಸಮಿತಿ ಮುಖಂಡರು, ವ್ಯಾಪಾರಸ್ಥರು ಮಾರ್ಗ ಪೂರ್ಣಗೊಳಿಸುವಂತೆ ಜನಪ್ರತಿನಿಧಿಗಳನ್ನು ಒತ್ತಾಯಿಸುತ್ತಲೇ ಇದ್ದಾರೆ. ಕುತುಬುದ್ಧೀನ್ ಖಾಜಿ ಅವರಂತೂ ಜಿಲ್ಲೆಯ ಬಹುತೇಕ ಎಲ್ಲ ಜನಪ್ರತಿನಿಧಿಗಳನ್ನು ಖುದ್ದು ಭೇಟಿ ಮಾಡಿ ಲೋಕಾಪುರವರೆಗೆ ಮಾರ್ಗ ಪೂರ್ಣಗೊಂಡಿದ್ದು ಅಲ್ಲಿಯವರೆಗೆ ರೈಲುಗಳನ್ನು ಓಡಿಸಿ, ಮಂದಗತಿಯಲ್ಲಿ ಸಾಗಿರುವ ಲೋಕಾಪುರ- ಕುಡಚಿವರೆಗಿನ ಮಾರ್ಗ ರಚನೆ ಕಾಮಗಾರಿ ಪೂರ್ಣಗೊಳಿಸಿ ಎಂದು ಗೋಗರೆಯುತ್ತಿದ್ದಾರೆ. ಗಮನಾರ್ಹ ಸಂಗತಿ ಎಂದರೆ ಬೆಳಗಾವಿಯ ಸುವರ್ಣ ಸೌಧದಲ್ಲಿ ರಾಜ್ಯದ ಅಧಿವೇಶನ ನಡೆಯುತ್ತಿದೆ. ದೆಹಲಿಯಲ್ಲಿ ಸಂಸತ್ ಅಧಿವೇಶನ ನಡೆಯುತ್ತಿದೆ.
ಸಂಸತ್ತಿನಲ್ಲಿ ಕೇಳದ ಧ್ವನಿ:
ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಆದ್ಯತೆ ನೀಡಿ ಚರ್ಚೆ ಆಗುತ್ತಿದ್ದರೂ ನನೆಗುದಿಗೆ ಬಿದ್ದಿರುವ ಯೋಜನೆ ಪೂರ್ಣಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸುವ ಕುರಿತು ಚರ್ಚೆ ಆಗುತ್ತಿಲ್ಲ. ಅತ್ತ ಲೋಕಸಭೆಯಲ್ಲೂ ಲೋಕಾಪುರದಿಂದ- ಕುಡಚಿವರೆಗಿನ ರೈಲು ಮಾರ್ಗ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವ ಬಗೆಗಾಗಲಿ, ಲೋಕಾಪುರ- ಧಾರವಾಡ ನೂತನ ಮಾರ್ಗ ರಚನೆ ಬಗೆಗಾಗಲಿ ಈ ಭಾಗದ ಸಂಸದರು ಚಕಾರವೆತ್ತುತ್ತಿಲ್ಲ.
ಸಮಗ್ರ ಅಭಿವೃದ್ಧಿಗೆ ನಾಂದಿ:
ಬಾಗಲಕೋಟೆ – ಕುಡಚಿ ರೈಲು ಮಾರ್ಗ ಪೂರ್ಣಗೊಳ್ಳುವುದರಿಂದ, ಲೋಕಾಪುರ-ಧಾರವಾಡ ನೂತನ ಮಾರ್ಗ ರಚನೆಯಿಂದ ಈ ಭಾಗದ ಬೆಳವಣಿಗೆಗೆ ಎಷ್ಟೊಂದು ಅನೂಕುಲವಾಗಲಿದೆ ಎನ್ನುವುದು ಜನಪ್ರತಿನಿಧಿಗಳಿಗೆ ಗೊತ್ತಿದ್ದರೂ ಜಾಣ ಮೌನಕ್ಕೆ ಶರಣಾಗಿದ್ದಾರೆ. ಎರಡೂ ಮಾರ್ಗಗಳ ರಚನೆಯಿಂದ ಬಹುದೊಡ್ಡ ಸಂಪರ್ಕ ಕ್ರಾಂತಿ ಆಗಲಿದೆ. ರಾಜ್ಯದ ಪ್ರವಾಸೋದ್ಯಮ, ಶೈಕ್ಷಣಿಕ, ಕೃಷಿ, ಕೈಗಾರಿಕೆ, ವ್ಯಾಪಾರ, ವಹಿವಾಟು ಹೆಚ್ಚಳಕ್ಕೆ ಸಹಕಾರಿ ಆಗಲಿದೆ. ದೇಶದ ಉತ್ತರ ಹಾಗೂ ದಕ್ಷಿಣ ಭಾಗಗಳ ಪ್ರಯಾಣ ಅಂತರ ಕೂಡ ಸಾಕಷ್ಟು ಕಡಿಮೆ ಆಗಲಿದೆ.
ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು, ಸಿಮೆಂಟ್ ಕಾರ್ಖಾನೆಗಳು, ಗ್ರಾನೈಟ್ ಉದ್ಯಮ ಹೇರಳವಾಗಿದೆ. ಈ ಕ್ಷೇತ್ರಗಳ ಅಭಿವೃದ್ಧಿ ತೀವ್ರಗೊಳ್ಳಲು ಬಾಗಲಕೋಟೆ- ಕುಡಚಿ ಮಾರ್ಗ ಪೂರ್ಣಗೊಳ್ಳಬೇಕಿದೆ. ಹಾಗೇ ಲೋಕಾಪುರ- ಧಾರವಾಡ ನೂತನ ಮಾರ್ಗ ರಚನೆಯಿಂದ ವಿಜಯಪುರ, ಬಾಗಲಕೋಟೆ ಜನತೆ ಶಿಕ್ಷಣ, ವ್ಯಾಪಾರ, ವಹಿವಾಟಿಗಾಗಿ, ಹೈಕೋರ್ಟ್ ಕೆಲಸಗಳಿಗಾಗಿ ಜನತೆ ಹುಬ್ಬಳ್ಳಿ, ಧಾರವಾಡಗಳಿಗೆ ಸದ್ಯ ಗದಗ ಮಾರ್ಗವಾಗಿ ಸುತ್ತು ಬಳಸಿ ಹೋಗಬೇಕಾಗಿದೆ. ಒಂದೊಮ್ಮೆ ಲೋಕಾಪುರ- ಧಾರವಾಡ ನೂತನ ಮಾರ್ಗ ರಚನೆ ಆದಲ್ಲಿ ಈ ಭಾಗ ಕೇವಲ ಎರಡು ತಾಸುಗಳಲ್ಲಿ ಧಾರವಾಡ ಹುಬ್ಬಳ್ಳಿಗೆ ಹೋಗಲು ಅನೂಕಲವಾಗಲಿವೆ. ಆರ್ಥಿವಾಗಿ ರೈಲ್ವೆ ಇಲಾಖೆಗೂ ಈ ಮಾರ್ಗ ಲಾಭದಾಯಕವಾಗಲಿವೆ.
ಪ್ರವಾಸೋದ್ಯಮಕ್ಕೂ ಇಂಬು:
ಲೋಕಾಪುರ- ಧಾರವಾಡ ಮಾರ್ಗ ಮಧ್ಯದಲ್ಲಿ ರಾಮದುರ್ಗ ಬಳಿಯ ಶ್ರೀರಾಮಚಂದ್ರ ವನವಾಸದ ವೇಳೆ ಶಬರಿದೇವಿಯಿಂದ ಬೋರೆಹಣ್ಣು ತಿಂದು, ವಿಶ್ರಾಂತಿ ಪಡೆದನೆಂಬ ಐತಿಹ್ಯಯುಳ್ಳ ಶಬರಿ ಕೊಳ್ಳ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೇಲಂಗಾಣ ರಾಜ್ಯದ ಕೋಟ್ಯಂತರ ಭಕ್ತರ ಆರಾಧ್ಯ ದೈವಗಳಾದ ಶಿರಸಂಗಿ ಕಾಳಮ್ಮ, ಸವದತ್ತಿ ಎಲ್ಲಮ್ಮನ ಗುಡ್ಡ, ಶಿಕ್ಷಣ ಕಾಶಿ ಧಾರವಾಡ, ಕಿತ್ತೂರು ಕರ್ನಾಟಕ ಜನತೆಯ ಅನುಕೂಲಕ್ಕಾಗಿರುವ ಹೈಕೋರ್ಟ್ ಪೀಠಗಳು ಬರುವುದರಿಂದ ಜನತೆಗೆ ಬಹಳಷ್ಟು ಅನೂಕಲವಾಗಲಿದೆ.
ಇಚ್ಛಾಶಕ್ತಿ ಕೊರತೆ:
ಬಾಗಲಕೋಟೆ- ಕುಡಚಿ ಮಾರ್ಗ ಪೂರ್ಣಗೊಂಡು, ಲೋಕಾಪುರ-ಧಾರವಾಡ ನೂತನ ರೈಲು ಮಾರ್ಗ ರಚನೆ ಆದಲ್ಲಿ ಈ ಭಾಗದ ಚಿತ್ರಣವೇ ಬದಲಾಗಲಿದೆ. ಹೀಗಿದ್ದು, ಇಲ್ಲಿನ ಜನಪ್ರತಿನಿಧಿಗಳು ಕೇಂದ್ರದ ಮೇಲೆ ಒತ್ತಡ ಹಾಕುವ ಕೆಲಸ ಮಾಡುತ್ತಿಲ್ಲ. ಅಖಂಡ ವಿಜಯಪುರ, ಬೆಳಗಾವಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಎರಡೂ ಮಾರ್ಗಗಳ ರಚನೆಗಾಗಿ ಜನಪ್ರತಿನಿಧಿಗಳು ಸಂಸತ್ತಿನಲ್ಲಿ ಧ್ವನಿ ಎತ್ತುವ ಕೆಲಸ ಮಾಡಬೇಕಿದೆ. ಆ ಮೂಲಕ ಬಹುದಿನಗಳ ಬೇಡಿಕೆಗೆ ಸ್ಪಂದಿಸುವ ಪ್ರಾಮಾಣಿಕ ಕೆಲಸ ಮಾಡಬೇಕು ಎನ್ನುವುದು ರೈಲ್ವೆ ಹೋರಾಟಗಾರರ, ವ್ಯಾಪಾರಸ್ಥರ, ಕೃಷಿಕರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಜನತೆಯ ಆಗ್ರಹವಾಗಿದೆ.
- ವಿಠ್ಠಲ ಆರ್. ಬಲಕುಂದಿ




