ಒಪ್ಪಿತ ದರ ನಿಗದಿಗಾಗಿ ನಡೆದಿದೆ ಹರಸಾಹಸ

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ -3 ರ ಅನುಷ್ಠಾನ ಹಿನ್ನೆಲೆಯಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗುವ ಜಮೀನುಗಳಿಗೆ ಒಪ್ಪಿತ ದರ ನಿಗದಿ ಪಡಿಸುವ ಕುರಿತು ಬುಧವಾರ ವಿಧಾನಸೌಧದಲ್ಲಿ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಚಿವರು, ಶಾಸಕರು ಹಾಗೂ ರೈತರ ಸಭೆ ನಡೆಸಿದ್ದು, ಸಭೆ ಮುಳುಗಡೆ ಸಂತ್ರಸ್ತರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಸಭೆಯಲ್ಲಿ ಯುಕೆಪಿ ಯೋಜನೆ ಅನುಷ್ಠಾನಕ್ಕಾಗಿ ಸ್ವಾಧೀನ ಪಡಿಸಿಕೊಳ್ಳಲಾಗುವ ಜಮೀನುಗಳಿಗೆ ದರ ನಿಗದಿ ಕುರಿತು ಗಂಭೀರ‌ ಚರ್ಚೆ ನಡೆದಿದೆ. ಈಗಾಗಲೇ ಅನೇಕ ಬಾರಿ ಇಂತಹ ಸಭೆಗಳು ನಡೆದಿವೆ. ಫಲಿತಾಂಶ ಶೂನ್ಯ ಎನ್ನುವಂತಾಗಿದೆ. ದರ ನಿಗದಿ ವಿಷಯದಲ್ಲಿ ಸರ್ಕಾರದ ನಿರ್ಧಾರಗಳನ್ನು ತಿರಸ್ಕರಿಸಿರುವ ರೈತರು ಯೋಗ್ಯ ಬೆಲೆಗೆ ಒತ್ತಾಯಿಸಿ ಸತತ ಹೋರಾಟ ನಡೆಸುತ್ತಲೇ ಬಂದಿದ್ದಾರೆ.

ಹೋರಾಟಗಳು ನಡೆದಾಗಲೆಲ್ಲ ಸರ್ಕಾರಗಳು ರೈತರ ಬೇಡಿಕೆಗಳನ್ನು ಆಲಿಸುತ್ತಲೇ ಬಂದಿವೆ. ಆದರೆ ಅವರಿಂದ ಸ್ವಾಧೀನ ಪಡಿಸಿಕೊಳ್ಳಲಾಗುವ ಜಮೀನುಗಳಿಗೆ ಸೂಕ್ತ ಬೆಲೆ ನಿಗದಿಯಲ್ಲಿ ವ್ಯತ್ಯಾಸವಾಗುತ್ತಲೇ ಇದೆ. ಸೂಕ್ತ ಪರಿಹಾರ ಸಾಧ್ಯವಾಗುತ್ತಿಲ್ಲ.

ವರ್ಷಗಳು ಉರುಳುವ ಜತೆಗೆ ಜಮೀನುಗಳ ಮಾರುಕಟ್ಟೆ ಬೆಲೆಗಳು ಏರಿಕೆ ಆಗುತ್ತಲೇ ಇದ್ದು, ಮಾರುಕಟ್ಟೆ ದರ ಆಧರಿಸಿ ಪರಿಹಾರ ನೀಡಿ ಎಂದು ರೈತರು ವಾದಿಸುತ್ತಿದ್ದಾರೆ. ಆದರೆ ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ.

ಆಲಮಟ್ಟಿ ಜಲಾಶಯದ ಎತ್ತರ 519.60 ರಿಂದ 524.256 ಮೀಟರಿಗೆ ಹೆಚ್ಚಿಸಬೇಕಿದೆ. ಎತ್ತರ ಹೆಚ್ಚಿಸಲು ಭೂಸ್ವಾಧೀನ, ಪುನರ್ ವಸತಿ, ಪುನರ್ ನಿರ್ಮಾಣ ಕಾರ್ಯ ಮುಗಿಯಬೇಕಿದೆ. ಯೋಜನಾ ವೆಚ್ಚದ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ.‌ ಆದರೂ ಸರ್ಕಾರಗಳು ನಿರ್ಲಕ್ಷ್ಯ ವಹಿಸುತ್ತಲೇ ಬಂದದ್ದರಿಂದ ಯೋಜನೆ ವೆಚ್ಚ 2 ಲಕ್ಷ ಕೋಟಿ ರೂ.ಗೆ ಬಂದು ತಲುಪಿದೆ. ಕೃಷ್ಣಾ ನ್ಯಾಯಾಧೀಕರಣ -2 ರಲ್ಲಿ ರಾಜ್ಯಕ್ಕೆ ಹಂಚಿಕೆ ಆಗಿರುವ ನೀರನ್ನು ಬಳಕೆ ಮಾಡಿಕೊಳ್ಳಲು ಅಗತ್ಯ ಭೂಸ್ವಾಧೀನ ಆಗಬೇಕಿದೆ.

ರೈತರಿಂದ ಸ್ವಾಧೀನ ಪಡಿಸಿಕೊಳ್ಳಬೇಕಿರುವ ಭೂಮಿ ಬೆಲೆಗಳು ಗಗನಕ್ಕೇರುತ್ತಿವೆ. ಸರ್ಕಾರಕ್ಕೆ ಭೂ ಸ್ವಾಧೀನ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಬೆಲೆಗಳು ಹೆಚ್ಚುತ್ತಿವೆ. ಇಂತಹ ಸನ್ನಿವೇಶದಲ್ಲಿ ರೈತರು ತಮ್ಮ ಜಮೀನುಗಳಿಗೆ

ಹೆಚ್ಚಿನ‌ ಪರಿಹಾರ ಕೇಳುವುದು ಸ್ವಾಭಾವಿಕ. ಅದಕ್ಕಾಗಿ ಸರ್ಕಾರ (ಕನ್ಸೆಂಟ್ ಅವಾರ್ಡ) ಒಪ್ಪಿತ ದರ ನಿಗದಿಗೆ ಮುಂದಾಗಿದೆ.‌ ಒಪ್ಪಿತ ದರ ನಿಗದಿಗಾಗಿ ಸರ್ಕಾರ ಸಾಕಷ್ಟು ಸರ್ಕಸ್ ಮಾಡುತ್ತಿದೆ. ಆದರೆ ರೈತರ ಮನವೊಲಿಸಿ ಸೂಕ್ತ ದರ ನಿಗದಿ ಸಾಧ್ಯವಾಗುತ್ತಿಲ್ಲ.

ಇದೀಗ ಜಲಸಂಪನ್ಮೂಲ ಸಚಿವರ ಒಪ್ಪಿತ ದರ ನಿಗದಿಗಾಗಿ ಸಚಿವರು, ಶಾಸಕರು ಹಾಗೂ ರೈತರ ಸಭೆ ನಡೆಸಿದ್ದಾರೆ. ಸಭೆಯಲ್ಲಿ ರೈತರು ಪ್ರತಿ ಎಕರೆ ಭೂಮಿಗೆ ಕನಿಷ್ಠ 40 ರಿಂದ 50 ಲಕ್ಷ ರೂ.ಗಳ ವರೆಗೆ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆಂದು ಗೊತ್ತಾಗಿದೆ. ಹಾಗಾಗಿಯೇ ಡಿ.ಕೆ. ಶಿವಕುಮಾರ ಅವರು ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುವ ವೇಳೆ ಬೆಲೆ ನಿಗದಿ ವಿಷಯದಲ್ಲಿ ” ರೈತರು ಗಗನದಲ್ಲಿದ್ದಾರೆ.‌ ನಾವು ಮಧ್ಯದಲ್ಲಿದ್ದೇವೆ” ಎಂದು ಹೇಳುವ ಜತೆಗೆ ರೈತರು ಸರ್ಕಾರದ ಕಡೆಗೂ ನೋಡಬೇಕು ಎಂದು ಹೇಳಿರಬೇಕು ಅನಿಸುತ್ತದೆ.

ಗುರುವಾರ ನಡೆಯುವ ಸಂಪುಟ ಸಭೆಗೂ‌ ಮುನ್ನ ಮತ್ತೊಮ್ಮೆ ಸಚಿವರು, ಶಾಸಕರೊಂದಿಗೆ ಚರ್ಚೆ ನಡೆಸಿ ಬಳಿಕ ಸಂಪುಟದಲ್ಲಿ ಒಪ್ಪಿತ ದರ ನಿಗದ ವಿಷಯ ಪ್ರಸ್ತಾಪಿಸುವ ಮಾತನ್ನಾಡಿದ್ದಾರೆ. ಏನೇ ಆಗಲಿ ಸರ್ಕಾರ ರೈತರು ಮತ್ತೆ ಹೋರಾಟಕ್ಕಿಳಿಯದ ಹಾಗೆ ಒಪ್ಪಿತ ದರ ನಿಗದಿ ಮಾಡಬೇಕಾದ ಸವಾಲಿನ ಪ್ರಶ್ನೆಯಾಗಿದೆ. ಒಮ್ಮೆ ರೈತರು ಸರ್ಕಾರದ ಬೆಲೆ ಒಪ್ಪಿಕೊಂಡರೆ ಸಾಕು, ಯುಕೆಪಿ ಹಂತ-3ರ ಅನುಷ್ಠಾನ ಕಷ್ಟವಾಗದು. ಹಾಗೆ ಜಲಸಂಪನ್ಮೂಲ ಸಚಿವರು ಹಣಕಾಸು ವಿಭಾಗದ ಅಧಿಕಾರಿ ಜತೆ ಸಾಧ್ಯಾಸಾಧ್ಯತೆಗಳ ಬಗೆಗೆ ಚರ್ಚಿಸಿ, ಸಂಪುಟದಲ್ಲಿ ಒಪ್ಪಿತ ದರ ನಿಗದಿ ಆಗುವಂತೆ ವಿಷಯ ಪ್ರಸ್ತಾಪಿಸಬೇಕಿದೆ.

ಒಪ್ಪಿತ ದರ ನಿಗದಿ ವಿಷಯದಲ್ಲಿ ಈಗಾಗಲೇ ನಡೆದಿರುವ ಸಭೆಗಳಂತೆ ಬುಧವಾರ ನಡೆದ ಸಭೆಯೂ ಹತ್ತರದಲ್ಲಿ ಹನ್ನೊಂದನೆಯದ್ದು ಆಗಬಾರದು ಎನ್ನುವುದು ಯೋಜನಾ ಬಾಧಿತ ರೈತರ ಆಶಯವಾಗಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top