ಬಾಗಲಕೋಟೆ: ಕಾರು, ವಾಹನಗಳ ಪೂಜೆ ಆಯುಧ ಪೂಜೆ ಅಲ್ಲ. ಪೂಜೆಯ ಉದ್ದೇಶಕ್ಕಾಗಿ ಮನೆಗಳಲ್ಲಿ ಆಯುಧ ಇರಬೇಕು. ಪ್ರತಿ ಮನೆಗಳಲ್ಲೂ ಶಾಸ್ತ್ರ ಮತ್ತು ಶಸ್ತ್ರ ಇರಲೇ ಬೇಕು. ಆಯುಧ ಪೂಜೆಗೆ ಶಸ್ತ್ರದ ಅಗತ್ಯವಿದ್ದು, ಶಸ್ತ್ರಗಳು ಇಲ್ಲದವರು ಅವುಗಳನ್ನು ಖರೀದಿಸಿ ಪೂಜೆ ಮಾಡಬೇಕು ಎಂದು ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.
ನಗರದಲ್ಲಿನ ರಾಜ್ಯಸಭೆ ಸದಸ್ಯರ ಜನಸಂಪರ್ಕ ಕಚೇರಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮನೆಗಳಲ್ಲಿ ಶಸ್ತ್ರಗಳಿರಲಿ :
ದೇಶದ ಧರ್ಮ, ಪರಂಪರೆ, ಸಂಸ್ಕೃತಿ ಮತ್ತು ಪುರಾತನ ಪರಂಪರೆಯ ದ್ಯೋತಕವಾಗಿರುವ ನವರಾತ್ರಿ ಆಚರಣೆ ವೇಳೆ ನವಮಿ ದಿವಸ ಎಲ್ಲರೂ ಆಯುಧಗಳ ಪೂಜೆ ಮಾಡಬೇಕು. ಮನೆಗಳಲ್ಲಿ ಶಸ್ತ್ರಗಳಿದ್ದಲ್ಲಿ ಅನ್ಯಾಯದ ವಿರುದ್ಧ ಎತ್ತಲು, ಸ್ವಯಂ ರಕ್ಷಣೆಗಾಗಿ ಅನುಕೂಲವಾಗಲಿದೆ. ಇಂದಿನ ವ್ಯವಸ್ಥೆಯಲ್ಲಿ ಎಲ್ಲ ಕಡೆಗಳಲ್ಲೂ ಪೊಲೀಸರು ಬರಲು ಸಾಧ್ಯವೇ ಇಲ್ಲ. ನಾವು ಯಾರ ಮೇಲೂ ಹೋಗುವುದಿಲ್ಲ. ಬೇರೆಯವರು ನಮ್ಮ ಮೇಲೆ ಬಂದಾಗ ನಮ್ಮ ರಕ್ಷಣೆಗಾಗಿ ಆದರೂ ಆಯುಧ ಬೇಕು. ಹಾಗಂತ ಕಾನೂನು ಕೈಗೆ ತೆಗೆದುಕೊಳ್ಳಿ ಅಂತ ಅರ್ಥವಲ್ಲ. ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ, ದೇಶ ರಕ್ಷಣೆ ಹೇಗೆ ಸಾಧ್ಯ ಎಂದು ಅವರು ಅಭಿಪ್ರಾಯಟ್ಟರು.
5 ರಂದು ಪಥ ಸಂಚಲನ:
ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಆರೆಸ್ಸೆಸ್ ಸಂಘಟನೆಯಿಂದ ಬಾಗಲಕೋಟೆಯಲ್ಲಿ ಅಕ್ಟೋಬರ್ 5 ರಂದು ಆರೆಸ್ಸೆಸ್ ಪಥ ಸಂಚಲನ ನಡೆಯುತ್ತಿದೆ. ಈ ಬಾರಿ ವಿಶೇಷವಾಗಿ ನಡೆಯಲಿದೆ. ಈಗಾಗಲೇ ಬಾಗಲಕೋಟೆಯ ಆರೆಸ್ಸೆಸ್ ಪಥಸಂಚಲನ ಸಾಕಷ್ಟು ಹೆಸರುವಾಸಿಯಾಗಿದೆ. ಇಲ್ಲಿಯ ಪಥಸಂಚಲನ ಕಾರ್ಯಕ್ರಮದಲ್ಲಿ ಸರ್ವರು ಭಾಗವಹಿಸುವ ಮೂಲಕ ಯಶಸ್ವಿಗೊಳಿಸುತ್ತ ಬಂದಿದ್ದಾರೆ. ಅನೇಕ ಕಾರಣಗಳಿಂದ ಕೆಲ ಕಾರ್ಯಕರ್ತರು ಸಂಘಟನೆಯಿಂದ ದೂರವಾಗಿದ್ದು, ಅವರೆಲ್ಲ ಈ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಎಲ್ಲವನ್ನೂ ಮರೆತು ಭಾಗವಹಿಸಬೇಕು. ಇದೊಂದು ದೇಶಭಕ್ತ ಸಂಘಟನೆ ಆಗಿದ್ದು, ಅದರ ಪ್ರೇರಣೆಯಿಂದಲೇ ನಾವೆಲ್ಲ ದೇಶ ಕಟ್ಟುವ ಕೆಲಸದಲ್ಲಿ ಭಾಗಿಯಾಗಿದ್ದು ಎಂದು ಅವರು ಹೇಳಿದರು.
ಗಣತಿ ಆಟಕ್ಕುಂಟು ಲೆಕ್ಕಕ್ಕಿಲ್ಲ:
ರಾಜ್ಯ ಸರ್ಕಾರ ಕೈಗೊಂಡಿರುವ ಗಣತಿ ಕಾರ್ಯ ಸಾಕಷ್ಟು ಗೊಂದಲಮಯವಾಗಿದೆ. ಗಣತಿಯಲ್ಲಿನ ಕೆಲ ಅಂಶಗಳ ಬಗೆಗೆ ವ್ಯಾಪಕ ವಿರೋಧ ಕಂಡು ಬಂದ ಹಿನ್ನೆಲೆಯಲ್ಲಿ ಮುಜಗುರಕ್ಕೊಳಗಾಗಿ ಸರ್ಕಾರ ಅಂತಹ ಅವುಗಳನ್ನು ಗಣತಿ ಪಟ್ಟಿಯಿಂದ ತೆಗೆದು ಹಾಕಿದೆ ಎಂದರು.
ಈಗಲೂ ಗಣತಿಯಲ್ಲಿ ಸಾಕಷ್ಟು ಗೊಂದಲಗಳು ಇವೆ. ಯಾವ ಉದ್ದೇಶಕ್ಕಾಗಿ ಸರ್ಕಾರ ಗಣತಿ ಕಾರ್ಯ ಕೈಗೊಂಡಿದೆ ಎನ್ನುವುದು ಸ್ಪಷ್ಟವಾಗುತ್ತಿಲ್ಲ. ಏನೋ ಸಾಧಿಸಲು ಹೊರಟಿದೆ. ಇದರಿಂದ ಜನತೆಗೆ ಏನೂ ಪ್ರಯೋಜನ ಆಗದು ಎಂದರು.




