ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ ಅವರಿಗೆ ರಾಜ್ಯ ಕೈಗಾರಿಕೆ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ಪ್ರಾಪ್ತವಾಗುವ ಮೂಲಕ ಜಿಲ್ಲೆಗೆ ಸರ್ಕಾರದಿಂದ ಮತ್ತೊಂದು ದಸರಾ ಬಂಪರ್ ಕೊಡುಗೆ ಸಿಕ್ಕಂತಾಗಿದೆ. ಈಗಾಗಲೇ ಜಿಲ್ಲೆಯ ಇಬ್ಬರು ಶಾಸಕರು ನಿಗಮ, ಮಂಡಳಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು ಇದೀಗ ಮತ್ತೊಂದು ಸ್ಥಾನ ಸಿಕ್ಕಿದೆ.
ಪಕ್ಷದ ಜಿಲ್ಲಾ ಕಚೇರಿ ನಿರ್ಮಾತೃ:
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಅವರು ಎರಡು ಬಾರಿ ಶಾಸಕರಾಗಿ, ಕೃಷ್ಣಾ ಕಾಡಾ ಅಧ್ಯಕ್ಷರಾಗಿ, ಭೂಸೇನಾ ನಿಗಮದ ಅಧ್ಯಕ್ಷರಾಗಿ, ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಗಡಣೆ ಸಮಿತಿ ಅಧ್ಯಕ್ಷತೆ ಸೇರಿದಂತೆ ಪಕ್ಷ ಮತ್ತು ಸರ್ಕಾರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸುದೀರ್ಘ ಅವಧಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷಕ್ಕೊಂದು ಸ್ವಂತ ಕಟ್ಟಡ ನಿರ್ಮಾಣ ಮಾಡಿರುವುದಲ್ಲಿ ಅವರ ಪಾತ್ರ ಅನನ್ಯವಾಗಿದೆ.
ಹಿರಿಯ ಕಾಂಗ್ರಸ್ಸಿಗರಾಗಿರುವ ನಂಜಯ್ಯನಮಠ ಅವರಿಗೆ ಪಕ್ಷ ಇಲ್ಲವೆ ಸರ್ಕಾರದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಆಗಾಗ್ಗೆ ಹೇಳುತ್ತಲೇ ಇದ್ದರು. ಕಾರಣವಿಷ್ಟೆ, ಎಸ್. ಜಿ. ನಂಜಯ್ಯನಮಠ ಅವರು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ವೇಳೆ ಡಿ.ಕೆ. ಶಿವಕುಮಾರ ಜಿಲ್ಲಾಧ್ಯಕ್ಷರಾಗಿದ್ದರಂತೆ. ಈಗ ಡಿ.ಕೆ. ಶಿವಕುಮಾರ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ವೇಳೆ ನಂಜಯ್ಯನಮಠ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಾಸಕರಿಗೆ ಮಣೆ:
ನಿಗಮ, ಮಂಡಳಿಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ನೇಮಕದ ಮೊದಲ ಪಟ್ಟಿಯಲ್ಲೇ ನಂಜಯ್ಯನಮಠ ಅವರಿಗೆ ಅವಕಾಶಗಳು ಸಿಗಬಹುದು ಎನ್ನುವ ನಿರೀಕ್ಷೆ ಹುಸಿಯಾಗಿತ್ತು. ಆಗ ಶಾಸಕರುಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರಿಂದ ಬೀಳಗಿ ಶಾಸಕ ಜೆ.ಟಿ.ಪಾಟೀಲ ಅವರು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರಾಗಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮ ಅಧ್ಯಕ್ಷರಾಗಿ ನೇಮಕಗೊಂಡರು.
ಏಳರ ಪೈಕಿ ನಾಲ್ವರಿಗೆ ಅವಕಾಶ:
ಜಿಲ್ಲೆಯ ಏಳು ಜನ ಶಾಸಕರ ಪೈಕಿ ಸರ್ಕಾರದಲ್ಲಿ ನಾಲ್ವರಿಗೆ ಅವಕಾಶ ಸಿಕ್ಕಂತಾಗಿದೆ. ಮುಧೋಳ ಶಾಸಕ ಆರ್. ಬಿ. ತಿಮ್ಮಾಪುರ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವರಾಗಿ, ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ ನಿಗಮ, ಮಂಡಳಿ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ಜಿಲ್ಲಾಧ್ಯಕ್ಷ ನಂಜಯ್ಯನಮಠ ಅವರು ಕೈಗಾರಿಕೆ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗೆ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಮಾತು ಉಳಿಸಿಕೊಂಡ ಡಿಕೆಶಿ:
ಒಟ್ಟಾರೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಗೆ ಬಂಪರ ಕೊಡುಗೆ ಸಿಕ್ಕಂತಾಗಿದೆ. ಕೆಪಿಸಿಸಿ ಅಧ್ಯಕ್ಷರು ನಂಜಯ್ಯನಮಠ ಅವರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನವನ್ನು ದಸರಾ ಉಡುಗೋರೆಯಾಗಿ ನೀಡುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಎಸ್. ಜಿ. ನಂಜಯ್ಯನಮಠ ಅವರೊಟ್ಟಿಗೆ ಜಿಲ್ಲೆಯ ಅನೇಕ ಮುಖಂಡರು ನಿಗಮ, ಮಂಡಳಿಯಲ್ಲಿ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದರು. ಪಕ್ಷ ಜಿಲ್ಲೆಯ ಪ್ರಮುಖ ಮುಖಂಡರಿಗೆ ಅವಕಾಶ ನೀಡುವ ಬದಲಿಗೆ ಹಾಲಿ, ಮಾಜಿ ಶಾಸಕರಿಗೆ ಮಣೆ ಹಾಕುವ ಕೆಲಸ ಮಾಡಿದೆ.
ಬೇರೆಯವರಿಗೆ ಅವಕಾಶ:
ಸದ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ನಂಜಯ್ಯನಮಠ ಅವರು ಕೆಲಸ ಮಾಡುತ್ತಿದ್ದು, ಆ ಸ್ಥಾನಕ್ಕೆ ಹೊಸಬರ ನೇಮಕ ಆಗಬಹುದು. ಈಗಾಗಲೇ ಜಿಲ್ಲಾಧ್ಯಕ್ಷರ ಬದಲಾವಣೆ ಪ್ರಕ್ರಿಯೆಯನ್ನು ಕೆಪಿಸಿಸಿ ಆರಂಭಿಸಿ, ಜಿಲ್ಲೆಗೆ ಉಸ್ತುವಾರಿಗಳನ್ನೂ ನೇಮಕ ಮಾಡಿತ್ತು. ಇದೀಗ ಜಿಲ್ಲಾಧ್ಯಕ್ಷರ ನೇಮಕಕ್ಕೆ ದಾರಿ ಮತ್ತಷ್ಟು ಸುಗಮವಾದಂತಾಗಿದೆ.
- ವಿಠ್ಠಲ ಆರ್. ಬಲಕುಂದಿ

