ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಅವರಿಗೆ ಇನ್ನು ಮುಂದೆ ಹೊಸ ಜಿಲ್ಲಾ ಅಧ್ಯಕ್ಷರ ನೇಮಕ ಆಗುವವರೆಗೂ ಎರಡು ದೋಣಿಯ ಪಯಣಿಗರಾಗುವ ಅದೃಷ್ಟ ಖುಲಾಯಿಸಿದೆ. ಕಾರಣವಿಷ್ಟೆ, ಜಿಲ್ಲಾಧ್ಯಕ್ಷರಾಗಿರುವ ಅವರನ್ನು ಸರ್ಕಾರ ಕರ್ನಾಟಕ ರಾಜ್ಯ ಕೈಗಾರಿಕೆ ಹಾಗೂ ಮೂಲ ಸೌಕರ್ಯಗಳ ಕಾರ್ಪೋರೇಷನ್ ಅಧ್ಯಕ್ಷರಾಗಿ ನೇಮಕ ಮಾಡಿದೆ.
ಸದ್ಯದ ಸ್ಥಿತಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸ್ಥಾನಕ್ಕೆ ನೂತನ ಸಾರಥಿ ಹುಡುಕಾಟ ಅಂದುಕೊಂಡಷ್ಟು ಸುಲಭವಲ್ಲ ಎನ್ನುವ ವಾತಾವಣ ಇದೆ. ಹಾಗಾಗಿ ಕಾರ್ಪೋರೇಷನ್ ಅಧ್ಯಕ್ಷತೆ ಜತೆಗೆ ಇನ್ನಷ್ಟು ತಿಂಗಳು ಅವರೇ ಜಿಲ್ಲಾಧ್ಯಕ್ಷರಾಗಿಯೂ ಮುಂದುವರಿಯುವ ಸಾಧ್ಯತೆಗಳು ಹೆಚ್ಚು.
ಸಾಲು ಚುನಾವಣೆಗಳು:
ಕಳೆದ ಆರು ತಿಂಗಳು ಹಿಂದೆಯೇ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆಗಳು ಆರಂಭಗೊಂಡಿದ್ದವು. ಪಕ್ಷ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗಾಗಿ ವೀಕ್ಷಕರನ್ನು ಕೂಡ ನೇಮಕ ಮಾಡಿತ್ತು. ಬಳಿಕ ಆಯ್ಕೆ ಪ್ರಕ್ರಿಯೆ ನಿಂತು ಹೋಗಿದ್ದರಿಂದ ನಂಜಯ್ಯನಮಠ ಅವರೇ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.
ಇದೀಗ ಅವರು ಕಾರ್ಪೋರೇಷನ್ ಅಧ್ಯಕ್ಷರಾಗಿ ನೇಮಕಗೊಂಡಿರುವುದರಿಂದ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಬೇಕಿದೆಯಾದರೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಂಡಳಿ ಸ್ಥಳೀಯ ಚುನಾವಣೆ, ಬಳಿಕ ಎದುರಾಗಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಸಾಲು ಸಾಲು ಚುನಾವಣೆಗಳು ಎದುರಾಗಲಿರುವ ಕಾರಣ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಲ್ಲೂ ಮುಂದುವರಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.
ಡಿಸಿಸಿ ಪ್ರತಿಷ್ಠೆಯ ಚುನಾವಣೆ:
ಮುಂದಿನ ತಿಂಗಳು ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಚುನಾವಣೆಗಳು ನಡೆಯಲಿದ್ದು, ಸಹಕಾರಿ ಕ್ಷೇತ್ರದ ಚುನಾವಣೆ ಆಗಿದ್ದರೂ ಪ್ರಮುಖ ರಾಜಕೀಯ ಪಕ್ಷಗಳ ಪಾತ್ರ ಕೂಡ ನಿರ್ಣಾಯಕವಾಗಿರುತ್ತದೆ. ಚುನಾವಣೆಗಳ ಹೊಸ್ತಿಲಿನಲ್ಲಿ ಅಧ್ಯಕ್ಷರ ಬದಲಾವಣೆ ಸಾಧುವಲ್ಲ, ಇದರಿಂದ ಸಂಘಟನೆಗೆ ಸಮಸ್ಯೆ ಆಗಲಿದೆ. ಚುನಾವಣೆಗಳ ಬಳಿಕ ಹೊಸಬರು ನೇಮಕಗೊಂಡಲ್ಲಿ, ಅವರೂ ಭವಿಷ್ಯದಲ್ಲೊ ಸಕ್ರೀಯರಾಗಿ ಕೆಲಸ ಮಾಡಲು ಸಾಧ್ಯವಾಗಲಿದೆ ಎನ್ನುವ ವಾದ ಜಿಲ್ಲಾ ಕಾಂಗ್ರೆಸ್ ಪಾಳೆಯದಲ್ಲಿದೆ.
ಅಷ್ಟರ ಮಧ್ಯೆಯೂ ನೂತನ ಅಧ್ಯಕ್ಷರ ನೇಮಕದ ಒತ್ತಡ ಹೆಚ್ಚಿದರೂ ಪಕ್ಷದ ವರಿಷ್ಠರು ಅದಕ್ಕೆ ತಲೆ ಕೆಡಿಸಿಕೊಳ್ಳದೆ ಇದ್ದಲ್ಲಿ ನಂಜಯ್ಯನಮಠ ಅವರು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರ ಹಾಗೆ ಎರಡು ದೋಣಿಗಳ ಪಯಣ ನಡೆಸಲಿದ್ದಾರೆ.
ಆಕಾಂಕ್ಷಿಗಳ ಉದ್ದ ಪಟ್ಟಿಯೇ ಇದೆ:
ಒಂದೊಮ್ಮೆ ಪಕ್ಷ ಬದಲಾವಣೆ ಮಾಡಲೇ ಬೇಕು ಎನ್ನುವ ನಿರ್ಧಾರಕ್ಕೆ ಬಂದಲ್ಲಿ, ಸದ್ಯ ಹಾಲಿ ಶಾಸಕರ ಪೈಕಿ ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರಿಗೆ ತೋಟಗಾರಿಕೆ ವಿವಿ ಆಡಳಿತ ಮಂಡಳಿ ಸದಸ್ಯತ್ವ ಬಿಟ್ಟರೆ ಯಾವುದೇ ಹುದ್ದೆಗಳಿಲ್ಲ. ಯುವಕರಿಗೆ ಆದ್ಯತೆ ಎನ್ನುವುದಾದಲ್ಲಿ ಅವರನ್ನೂ ಸೇರಿದಂತೆ ಮಾಜಿ ಶಾಸಕ ಆನಂದ ನ್ಯಾಮಗೌಡ, ಯುವ ಮುಖಂಡ ಸಿದ್ದು ಕೊಣ್ಣೂರ, ಜಿಪಂ. ಮಾಜಿ ಅಧ್ಯಕ್ಷ ಬಸವಂತ ಮೇಟಿ, ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಮಾಜಿ ಅಧ್ಯಕ್ಷ ರವಿ ಕಲಬುರ್ಗಿ ಸೇರಿದಂತೆ ಹಲವು ಹೆಸರುಗಳು ಮುಂಚೂಣಿಯಲ್ಲಿವೆ.
ಅಂತಿಮವಾಗಿ ಪಕ್ಷದ ಮುಖಂಡರು ಯಾರ ಹೆಸರು ಅಂತಿಮಗೊಳಿಸಲಿದ್ದಾರೋ ಅವರಿಗೆ ವರಿಷ್ಠರು ಮಣೆ ಹಾಕಲಿದ್ದಾರೆ. ಜಿಲ್ಲಾ ಕಾಂಗ್ರೆಸ್‌ನಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬಲ್ಲ ಮುಖಂಡನ ಶೋಧ ಕಾರ್ಯವಂತೂ ಆರಂಭಗೊಳ್ಳಲಿದೆ. ಏತನ್ಮಧ್ಯೆ ಎರಡೂ ಹುದ್ದೆಗಳಲ್ಲಿ ನಂಜಯ್ಯನಮಠ ಮುಂದುವರಿಯಲು ಮನಸ್ಸು ಮಾಡುತ್ತಾರೋ ಹೇಗೋ ಎನ್ನುವುದು ಕುತೂಹಲದ ಸಂಗತಿ ಆಗಿದೆ. ಸುದೀರ್ಘ ಅವಧಿಗೆ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡುತ್ತಿರುವ ಅವರು ಹೊಸ ಹುದ್ದೆಯ ನೇಮಕದ ಬಳಿಕ ಎಷ್ಟರ ಮಟ್ಟಿಗೆ ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುತ್ತಾರೆ ಎನ್ನುವ ಪ್ರಶ್ನೆ ಕೂಡ ಎದುರಾಗಿದೆ.
ಎರಡನ್ನೂ ನಿಭಾಯಿಸಿಕೊಂಡು ಹೋಗುವ ಮನಸ್ಸು ಮಾಡಿದರೂ ಅವರು ಮುಂದುವರಿಕೆಯನ್ನು ಇತರರು ಎಷ್ಟರ ಮಟ್ಟಿಗೆ ಒಪ್ಪುತ್ತಾರೆ ಎನ್ನುವುದು ಕೂಡ ಮುಖ್ಯವಾಗಲಿದೆ. ಈಗಾಗಲೇ ಹಲವು ವರ್ಷಗಳಿಂದ ಅವರು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಆ ಹುದ್ದೆಯ ಮೇಲೆ ಕಣ್ಣಿಟ್ಟಿರುವ ಮುಖಂಡರು ಮಾತ್ರ ಪಕ್ಷದ ರಾಜ್ಯ ನಾಯಕರ ಮೇಲೆ ಇನ್ನಿಲ್ಲದ ಒತ್ತಡ ಹಾಕುವುದಂತೂ ಸ್ಪಷ್ಟ. ಹಾಗಾಗಿ ಅದೃಷ್ಟ ಯಾರ ಪಾಲಾಗಲಿದೆ ಎನ್ನುವುದಕ್ಕೆ ಇನ್ನಷ್ಟು ಕಾಲ ಕಾಯ್ದು ನೋಡಬೇಕಷ್ಟೆ.
- ವಿಠ್ಠಲ ಆರ್. ಬಲಕುಂದಿ




