ಬೀಳಗಿ ಕ್ಷೇತ್ರದಲ್ಲಿ ಆರೋಪ, ಪ್ರತ್ಯಾರೋಪಗಳ ಬಳಿಕ ಸ್ವಲ್ಪ ದಿನ ತಣ್ಣಗಾಗಿದ್ದ ರಾಜಕೀಯ ಕೆಸರಾಟ ಮತ್ತೆ ಶುರುವಾಗಿದೆ. ಮಾಜಿ ಸಚಿವ ಮುರುಗೇಶ ನಿರಾಣಿ ಅವರು ಶಾಸಕ ಜೆ.ಟಿ. ಪಾಟೀಲ ವಿರುದ್ಧ ನೇರಾ ನೇರ ಅಖಾಡಕ್ಕಿಳಿದಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಆದ್ಯತೆ ನೀಡದೆ ಮಸಾಜ್ ನಲ್ಲೇ ಶಾಸಕ ಜೆ.ಟಿ. ಪಾಟೀಲ ಕಾಲ ಕಳೆದಿದ್ದಾರೆ ಎನ್ನುವ ಗಂಭೀರ ಆರೋಪ ಮಾಡಿದ್ದಾರೆ.
ಸದ್ಯಕ್ಕೆ ಇವರ ರಾಜಕೀಯ ಗುದ್ದಾಟನಿಲ್ಲುವಂತೆ ಕಾಣಿಸುತ್ತಿಲ್ಲ. ಒಬ್ಬರನ್ನೊಬ್ಬರು ಕೆಣಕುವ ಕೆಲಸ ನಡೆದಿದೆ. ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿ ಮಾಜಿ ಸಚಿವ ಮುರುಗೇಶ ನಿರಾಣಿ ವಿರುದ್ಧ ಜೆ.ಟಿ. ಪಾಟೀಲರ ಹರಿಹಾಯ್ದಿದ್ದರು. ನಿರಾಣಿ ಅವರ ಪ್ರತಿ ಹೇಳಿಕೆಗೆ ತಿರುಗೇಟು ನೀಡಿದ್ದರು.
ಶುಕ್ರವಾರ ಮಾಜಿ ಸಚಿವ ನಿರಾಣಿ ಅವರು ಪ್ರತಿಕಾಗೋಷ್ಠಿ ನಡೆಸಿ ಜೆ.ಟಿ.ಪಾಟೀಲರ ಪತ್ರಿ ಹೇಳಿಕೆಗೆ ಸ್ಪಷ್ಟನೆ ಕೊಡುವ ಮೂಲಕ ಅವರು ರಾಜಕೀಯ, ಕೈಗಾರಿಕೆ, ಶಿಕ್ಷಣ ಕ್ಷೇತ್ರ ಸೇರಿದಂತೆ ಯಾವುದರಲ್ಲೂ ತಮಗೆ ಸರಿಸಾಟಿ ಅಲ್ಲ. ಐಷಾರಾಮಿ ಜೀವನದಲ್ಲೇ ಕಾಲ ಕಳೆದಿರುವ ಅವರು ಕ್ಷೇತ್ರಕ್ಕೆ ಏನೂ ಮಾಡಿಲ್ಲ. ಕಳೆದ 20 ವರ್ಷಗಳಲ್ಲಿ ಹಾಗೇನಾದರೂ ಅಭಿವೃದ್ಧಿ ಕೆಲಸ ಮಾಡಿದ್ದಲ್ಲಿ ದಾಖಲೆ ಪುಸ್ತಕ ಬಿಡುಗಡೆ ಮಾಡಲಿ. ತಮ್ಮ ಅಧಿಕಾರಾವಧಿಯಲ್ಲಿ ಏನು ಕೆಲಸ ಆಗಿವೆ ಎನ್ನುವ ಕುರಿತ ವಿವರಣೆಯ ಪುಸ್ತಕ ಬಿಡುಗಡೆ ಮಾಡಿರುವುದಾಗಿ ಹೇಳಿಕೊಂಡರು.
ತಾವೂ ಕ್ಷೇತ್ರದ ಅಭಿವೃದ್ಧಿ ಮಾಡಲಿಲ್ಲ, ತಮಗೂ ಅಭಿವೃದ್ಧಿ ಮಾಡಲು ಬಿಡಲಿಲ್ಲ. ನರೆನೂರಲ್ಲಿ ರೈತರು ಜಾಗೆ ಕೊಟ್ಟಿದ್ದರೆ ತೋಟಗಾರಿಕೆ ವಿಜ್ಞಾನಗಳ ವಿವಿ ಅಲ್ಲಿಯೇ ಆಗುತ್ತಿತ್ತು. ಹಲಕುರ್ಕಿಯಲ್ಲಿ ಭೂಮಿ ಸಿಕ್ಕಿದ್ದಲ್ಲಿ ವಿಮಾನ ನಿಲ್ದಾಣ ಆಗುತ್ತಿತ್ತು. ಸೂರ್ಯ ಸ್ಟೀಲ್ ಇಂಡಸ್ಟ್ರಿಗೆ ಬೇವೂರ ಬಳಿ ಜಾಗೆ ಲಭ್ಯವಾಗಿದ್ದಲ್ಲಿ ಸಾವಿರಾರೂ ಕೈಗಳಿಗೆ ಕೆಲಸ ಸಿಗುತ್ತಿತ್ತು. ಜಿಲ್ಲೆಯ ಕೈಗಾರಿಕೆಗಳ ಸ್ಥಾಪನೆಯಿಂದ ಅಭಿವೃದ್ಧಿಗೆ ಅನುಕೂಲವಾಗುತ್ತಿತ್ತು.
ಎಲ್ಲದಕ್ಕೂಅಡ್ಡಿ ಮಾಡಿದ್ದರಿಂದ ಅಂದುಕೊಂಡಂತೆ ಮಂತ್ರಿ ಇದ್ದೂ ನಿರೀಕ್ಷಿತ ಕೈಗಾರಿಕೆ ಅಭಿವೃದ್ಧಿಗೆ ಮಾಡಲಾಗಲಿಲ್ಲ. ಇಲ್ಲದಿದ್ದಲ್ಲಿ ಜಿಲ್ಲೆಯಲ್ಲಿ ಕೃಷಿ, ಕೈಗಾರಿಕೆ, ಪ್ರವಾಸೋದ್ಯಮಕ್ಕೆ ಪೂರಕ ವಾತಾವರಣ ಸೃಷ್ಟಿ ಆಗುತ್ತಿತ್ತು. ಹಾಗಾಗದಿರಲು ಇವರು ಕಾರಣರಾಗಿದ್ದಾರೆ ಎಂದು ಆಪಾದಿಸಿದರು.
ಈಗಾಗಲೇ ಅನೇಕ ಬಾರಿ ಇದೇ ಕೊನೆ ಚುನಾವಣೆ ಎಂದು ಹೇಳಿಕೊಂಡು, ಕಣ್ಣೀರು ಹಾಕಿ ಚುನಾವಣೆ ಗೆಲ್ಲುತ್ತ ಬಂದಿದ್ದಾರೆ. ಪ್ರತಿಬಾರಿ ಚುನಾವಣೆಯಲ್ಲಿ ಮುಂದಿನ ಬಾರಿ ನಿಮಗೆ ಅವಕಾಶ ಎಂದು ಕ್ಷೇತ್ರದಲ್ಲಿ ನಂಬಿಸುತ್ತಲೆ ಬಂದಿದ್ದಾರೆ.
ಇದೀಗ ಮುಂದಿನ ಬಾರಿಯೂ 2028 ರ ಚುನಾವಣೆ ಯಲ್ಲೂ ತಾವೇ ಸ್ಪರ್ಧಿಸಬೇಕು ಎನ್ನುವ ಆಸೆ ಇಟ್ಟು ಕೊಂಡಿರುವ ಜೆ.ಟಿ. ಪಾಟೀಲರು ಹೊಸ ನಾಟಕ ಶುರು ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಿಲ್ಲಬಾರದು ಎಂದು ಅಂದುಕೊಂಡಿದ್ದೆ. ನಿರಾಣಿ ಅವರು ” ನನ್ನನ್ನು ಬಡಿದೆಬ್ಬಿಸಿದ್ದಾರೆ. ಮುಂದಿನ ಚುನಾವಣೆ ಯಲ್ಲೂ ನಾನೆ ಅವರಿಗೆ ಎದುರಾಳಿ” ಎಂದು ಹೇಳುತ್ತಿರುವುದು ಬರಿ ಡ್ರಾಮಾ ಎಂದಿರುವ ನಿರಾಣಿ ಅವರು ಮುಂದಿನ ಚುನಾವಣೆಯಲ್ಲಿ ನಿಮಗೆ ಅವಕಾಶ ಎಂದು ಭರವಸೆ ಕೊಟ್ಟವರಿಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಹೀಗೆ ಶಾಸಕ ಜೆ.ಟಿ. ಪಾಟೀಲರ ಪ್ರತಿ ಹೇಳಿಕೆಯನ್ನು ಪ್ರಶ್ನಿಸಿರುವ ನಿರಾಣಿ ಅವರು, ಚುನಾವಣೆಗೆ ಯಾವಾಗಲೂ ಸಿದ್ಧ ಎಂದು ಸೆಡ್ಡು ಹೊಡಿದಿದ್ದಾರೆ. ಜತೆಗೆ ಅನಗತ್ಯ ಟೀಕೆ ಮಾಡುವುದನ್ನು ಬಿಡಿ ಎಂದು ಸಲಹೆ ಮಾಡಿರುವ ಅವರು ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿ ಕೈಜೋಡಿಸುವೆ ಎಂದು ಉದಾರತೆ ಮಾತನ್ನಾಡಿದ್ದಾರೆ.
ಹಾಲಿ ಶಾಸಕರು, ಮಾಜಿ ಸಚಿವರ ಆರೋಪ, ಪ್ರತ್ಯಾರೋಪಗಳಿಂದ ಜನ ಬೇಸರ ವ್ಯಕ್ತ ಪಡಿಸಿ, ಇದೊಂದು ರಾಜಕೀಯ ಗಿಮಿಕ್ ಹೊರತು ಬೇರೇನೂ ಅಲ್ಲ ಎನ್ನುತ್ತಿದ್ದಾರೆ. ಉಭಯತರ ತಿಕ್ಕಾಟ ತವಡು ಕುಟ್ಟಿದಂತೆ ಎಂದು ವಿಶ್ಲೇಷಿಸುತ್ತಿದ್ದಾರೆ. ಇಬ್ಬರ ರಾಜಕೀಯ ಹಾವುಏಣಿ ಆಟ ಎಲ್ಲಿಗೆ ಹೋಗಿ ಮುಟ್ಟುತ್ತದೋ ಕಾಯ್ದು ನೋಡಬೇಕಷ್ಟೆ.
- ವಿಠ್ಠಲ ಆರ್. ಬಲಕುಂದಿ




