ಬಾಗಲಕೋಟೆ: ಕಾಂಗ್ರೆಸ್ ಹೈಕಮಾಂಡ್ನ ದಿವ್ಯ ಮೌನದ ಮಧ್ಯೆ ರಾಜ್ಯ ಸಚಿವ ಸಂಪುಟ ಪುನಾರಚನೆ, ನಾಯಕತ್ವ ಬದಲಾವಣೆ ಗಾಳಿ ಜೋರಾಗಿ ಬೀಸುತ್ತಿದ್ದು, ಬಾಗಲಕೋಟೆ ಜಿಲ್ಲೆಯಲ್ಲೂ ಅದರ ಕಾವು ವ್ಯಾಪಿಸಿದೆ. ರಾಜ್ಯ ವೀರಶೈವ- ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಮತ್ತೆ ಮಂತ್ರಿ ಸ್ಥಾನದ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಐವರು ಕಾಂಗ್ರೆಸ್ ಶಾಸಕರ ಪೈಕಿ ಈಗಾಗಲೇ ಆರ್.ಬಿ. ತಿಮ್ಮಾಪುರ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದು, ಸಂಪುಟ ಪುನಾರಚನೆ ವೇಳೆ ತಮಗೂ ಮಂತ್ರಿ ಸ್ಥಾನದ ಅವಕಾಶ ಸಿಗಲಿದೆ ಎಂದು ವಿಜಯಯಾನಂದ ಕಾಶಪ್ಪನವರ ಇಂಗಿತ ವ್ಯಕ್ತ ಪಡಿಸಿದ್ದಾರೆ. ಈಗಾಗಲೇ ತಮಗೂ ಮಂತ್ರಿಸ್ಥಾನದ ಅವಕಾಶ ನೀಡುವಂತೆ ಪಕ್ಷದ ಹಿರಿಯರನ್ನು ಭೇಟಿಮಾಡಿ ಮನವಿ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.
ಕಳೆದ ಬಾರಿಯೇ ಮಂತ್ರಿ ಸ್ಥಾನಕ್ಕಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದ ಅವರು ಸಾಮಾಜಿಕ ನ್ಯಾಯದಡಿ ಅವಕಾಶ ತಪ್ಪಿಸಿಕೊಂಡಿದ್ದರು. ಈ ಬಾರಿ ಶತಾಯ-ಗತಾಯ ಮಂತ್ರಿ ಸ್ಥಾನಕ್ಕಾಗಿ ಪ್ರಯತ್ನ ನಡೆಸಿದ್ದು, ಮಂತ್ರಿ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ.
ಕಾಂಗ್ರೆಸ್ ನಿಷ್ಠ ಕುಟುಂಬ:
ಕಾಶಪ್ಪನವರ ಕುಟುಂಬ ಕಾಂಗ್ರೆಸ್ ನಿಷ್ಠ ಕುಟುಂಬವಾಗಿದ್ದು, ವಿಜಯಾನಂದ ಕಾಶಪ್ಪನವರ ತಂದೆ ದಿ. ಎಸ್.ಆರ್. ಕಾಶಪ್ಪನವರ ಕೂಡ ಶಾಸಕರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಬಳಿಕ ಗೌರಮ್ಮ ಕಾಶಪ್ಪನವರ ಕೂಡ ಶಾಸಕರಾಗಿದ್ದರು. ಇದೀಗ ವಿಜಯಾನಂದ ಕಾಶಪ್ಪನವರ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಗೊಂಡಿದ್ದು, ವೀರಶೈವ-ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಜಯಾನಂದ ಕಾಶಪ್ಪನವರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಇಬ್ಬರೊಂದಿಗೂ ಉತ್ತಮ ಒಡನಾಟ ಹೊಂದಿದ್ದು, ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬದೊಂದಿಗೂ ನಿಕಟ ಸಂಪರ್ಕದಲ್ಲಿದ್ದಾರೆ. ಕಾಶಪ್ಪನವರ ಪ್ರಬಲ ಲಿಂಗಾಯತ ಸಮುದಾಯದಕ್ಕೆ ಸೇರಿರುವುದರಿಂದ ಸಾಮಾಜಿಕ ನ್ಯಾಯ, ಪ್ರದೇಶವಾರು ಪ್ರಾತಿನಿಧ್ಯ, ಸಮುದಾಯದ ಆದ್ಯತೆ, ಜಿಲ್ಲಾ ಪ್ರಾತಿನಿಧ್ಯ ವಿಷಯದ ಲೆಕ್ಕಾಚಾರದ ವ್ಯಾಪ್ತಿಗೆ ಬರಬೇಕಿದೆ. ಲಿಂಗಾಯತ ಸಮುದಾಯದಲ್ಲಿ ಸಾಕಷ್ಟು ಜನ ಆಕಾಂಕ್ಷಿಗಳಿದ್ದು, ಅವರನ್ನು ಹಿಂದಿಕ್ಕಿ ಹೈಕಮಾಂಡ್ ಒಲವುಗಳಿಸಿಕೊಳ್ಳಬೇಕಿದ್ದು, ಆ ಪ್ರಯತ್ನ ಮುಂದುವರಿಸಿದ್ದಾರೆ. ಒಂದೊಮ್ಮೆ ಸಚಿವ ಸಂಪುಟ ಪುನಾರಚನೆ ಆದಲ್ಲಿ ಅವಕಾಶಗಳು ಹೆಚ್ಚು ಎನ್ನುವುದು ಅವರ ಬೆಂಬಲಿಗರ ವಾದವಾಗಿದೆ.
ತಿಮ್ಮಾಪುರಗೆ ಮುಂದುವರಿಕೆ ವಿಶ್ವಾಸ:
ಈಗಾಗಲೇ ಸಂಪುಟದಲ್ಲಿ ಪ್ರಾತಿನಿಧ್ಯ ಪಡೆದಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹಲವು ಆರೋಪಗಳ ಮಧ್ಯೆ ಖಾತೆ ನಿರ್ವಹಿಸುತ್ತಿದ್ದಾರೆ. ಮಂತ್ರಿ ಆಗಿ ಮುಂದುವರಿಯುವ ವಿಶ್ವಾಸ ಹೊಂದಿರುವ ಅವರು ಸಂಪುಟ ಪುನಾರಚನೆ ವೇಳೆ ಖಾತೆ ಬದಲಾವಣೆ ಬಯಸಿದ್ದಾರೆ. ಅಬಕಾರಿ ಬದಲಿಗೆ ಅಭಿವೃದ್ದಿ ಪರವಾದ ಕೆಲಸ ಮಾಡಲು ಅವಕಾಶವಿರುವ ಖಾತೆ ಕೇಳುವ ವಿಚಾರದಲ್ಲಿದ್ದಾರೆ.
2023ರಲ್ಲಿ ಪಕ್ಷ ಅಧಿಕಾರಕ್ಕೆ ಬಂದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ ಸೇರಲು ಜಿಲ್ಲೆಯಲ್ಲಿ ಅಷ್ಟಾಗಿ ಪೈಪೋಟಿ ಇರಲಿಲ್ಲ. ಆಗಲೂ ಕಾಶಪ್ಪನವರ ಮಂತ್ರಿ ಸ್ಥಾನಕ್ಕಾಗಿ ಪ್ರಯತ್ನಿಸಿದರಾದರೂ ಪ್ರಯೋಜನವಾಗಲಿಲ್ಲ. ಮಂತ್ರಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅವರಿಗೆ ನಿಗಮ –ಮಂಡಳಿಯಲ್ಲಿ ಅವಕಾಶ ಲಭ್ಯವಾಗಿದೆ.
ಜೆಟಿಗೂ ಮಂತ್ರಿ ಆಗುವ ಆಸೆ:
ಇವರಿಬ್ಬರ ಜತೆಗೆ ಪ್ರಬಲ ಸಮುದಾಯಕ್ಕೆ ಸೇರಿರುವ ಬೀಳಗಿ ಕ್ಷೇತ್ರದ ಶಾಸಕರೂ ಆಗಿರುವ ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಜೆ.ಟಿ. ಪಾಟೀಲ ಕೂಡ ಸಚಿವ ಸ್ಥಾನದ ಆಕಾಂಕ್ಷಿ ಆಗಿದ್ದಾರೆ. ಅವರೂ ಆಗಾಗ್ಗೆ ಅವಕಾಶ ಸಿಕ್ಕರೆ ಮಂತ್ರಿ ಆಗವೆ ಎನ್ನುವ ಮಾತನ್ನು ಆಡುತ್ತಲೇ ಇದ್ದಾರೆ. ಜಿಲ್ಲೆಯ ಹಿರಿಯ ಶಾಸಕರಾಗಿದ್ದು, ಸಾಮಾಜಿಕ ನ್ಯಾಯ, ಸಮುದಾಯದ ಪ್ರಾತಿನಿಧ್ಯ ಪರಿಣಾಮ ಜೆ.ಟಿ. ಪಾಟೀಲ ಇದುವರೆಗೂ ಮಂತ್ರಿ ಸ್ಥಾನದಿಂದ ವಂಚಿತರಾಗುತ್ತಲೇ ಬಂದಿದ್ದಾರೆ. ಈಗಲೂ ಅದೇ ಸಂಪ್ರದಾಯ ಮುಂದುವರಿಯುತ್ತಾ ಇಲ್ಲವೆ ಅವಕಾಶ ಸಿಕ್ಕುತ್ತಾ ಎನ್ನುವುದನ್ನು ಕಾಯ್ದು ನೋಡಬೇಕಾದ ಸ್ಥಿತಿ ಇದೆ.
ಜಿಲ್ಲೆಯ ಪ್ರಾತಿನಿಧ್ಯ ಅನುಮಾನ:
ಹಾಲಿ ಸಚಿವರ ಜತೆಗೆ ಸಂಪುಟ ಸೇರಬೇಕು ಎನ್ನುವ ಆಕಾಂಕ್ಷಿಗಳ ಸಂಖ್ಯೆ ಸಾಕಷ್ಟಿದ್ದು, ಪುನಾರಚನೆ ವೇಳೆ ಮುಖ್ಯಮಂತ್ರಿಗಳು ಇರುವ ಸಚಿವರಲ್ಲಿ ಯಾರನ್ನು ಕೈ ಬಿಡಲಿದ್ದಾರೆ ಎನ್ನುವುದು ಕುತೂಹಲದ ಸಂಗತಿ ಆಗಿದೆ. ಸದ್ಯ ಸಂಪುಟದಲ್ಲಿ ಬಾಗಲಕೋಟೆ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿದ್ದು, ಮುಂದಿನ ಸಂಪುಟದಲ್ಲಿ ಇರುವ ಪ್ರಾತಿನಿಧ್ಯ ಉಳಿದರೆ ಸಾಕು ಎನ್ನುವ ಸ್ಥಿತಿ ಇದೆ. ಜಿಲ್ಲೆಯ ಐವರು ಶಾಸಕರು ಪೈಕಿ ಹೊಸಬರಿಗೆ ಅವಕಾಶ ನೀಡಲು ಇರುವವರನ್ನು ಕೈಬಿಡಬೇಕಾಗುವ ಅನಿವಾರ್ಯತೆ ಇದೆ. ಹಾಗಾಗಿ ಸಂಪುಟದಲ್ಲಿನ ಕೆಲ ಹಾಲಿ ಸಚಿವರು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಈಗಲೇ ದೆಹಲಿ ಯಾತ್ರೆ ಆರಂಭಿಸಿದ್ದಾರೆ.
ಕೆಲ ಜಿಲ್ಲೆಗಿಲ್ಲ ಪ್ರಾತಿನಿಧ್ಯ:
ಮಂತ್ರಿಗಳಾಗಬೇಕು ಎನ್ನುವವರ ಸಂಖ್ಯೆ ಹೆಚ್ಚಾಗಿರುವಾಗ ಆಯಾ ಜಿಲ್ಲೆಗಳಲ್ಲಿನ ಹಾಲಿ ಸಚಿವರನ್ನೇ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು. ಇಲ್ಲ, ಇದ್ದವರನ್ನು ಮುಂದುವರಿಸಬೇಕು ಎನ್ನುವ ಸನ್ನಿವೇಶವಿದೆ. ಹಾಗೆ ನೋಡಿದಾಗ ಸದ್ಯದ ಸಂಪುಟದಲ್ಲಿ ಕೆಲ ಜಿಲ್ಲೆಗಳಿಗೆ ಪ್ರಾತಿನಿಧ್ಯವೇ ಸಿಕ್ಕಿಲ್ಲ. ಅಂತಹ ಜಿಲ್ಲೆಗಳಿಗೂ ಮುಖ್ಯಮಂತ್ರಿಗಳು ಅವಕಾಶ ನೀಡಲು ಮುಂದಾದಲ್ಲಿ ಬಾಗಲಕೋಟೆ ಜಿಲ್ಲೆಗೆ ಸಂಪುಟದಲ್ಲಿ ಒಂದು ಸ್ಥಾನ ಸಿಗುವುದು ಕಷ್ಟವಾಗಲಿದೆ ಎನ್ನುವ ಮಾತುಗಳು ಕಡಿಮೆ ಏನಿಲ್ಲ.
ವರಿಷ್ಠರ ಮೌನ:
ರಾಜ್ಯ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಬದಲಾವಣೆ, ಸಂಪುಟ ಪುನಾರಚನೆ ಬಗೆಗೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಪಕ್ಷದ ವರಿಷ್ಠರು ಮಾತ್ರ ಈ ಬಗೆಗೆ ಏನನ್ನೂ ಹೇಳುತ್ತಿಲ್ಲ. ಎಲ್ಲವನ್ನೂ ಗಂಭೀರವಾಗಿ ಗಮನಿಸುತ್ತಿದ್ದಾರೆ. ಬಿಹಾರ ಚುನಾವಣೆ ಬಳಿಕವೇ ಇದಕ್ಕೊಂದು ಸ್ಪಷ್ಟ ಸ್ವರೂಪ ಸಿಗಲಿದೆ. ಅಲ್ಲಿಯವರೆಗೂ ಊಹಾಪೋಹಗಳ ದರ್ಬಾರ ಮುಂದುವರಿಯಲಿದೆ.
- ವಿಠ್ಠಲ ಆರ್. ಬಲಕುಂದಿ




