ಮ್ಯಾಂಚೆಸ್ಟರ್ ನಗರದಲ್ಲಿ ಅಧಿಕಾರಕ್ಕಾಗಿ ಕೈ ಗುದ್ದಾಟ!

ಬಾಗಲಕೋಟೆ: ರಬಕವಿ – ಬನಹಟ್ಟಿ ಜವಳಿ ಉದ್ದಿಮೆ ನಗರ. ಇದು ಮ್ಯಾಂಚೆಸ್ಟರ್ ನಗರ ಎಂದೇ ಖ್ಯಾತಿ ಪಡೆದಿದೆ. ನೇಕಾರಿಕೆಯೇ ಇಲ್ಲಿನ ಜನತೆಯ ಪ್ರಮುಖ ಉದ್ಯೋಗ. ನಗರಸಭೆಯನ್ನು ಹೊಂದಿರುವ ನಗರಕ್ಕೊಂದು ನಗರ ಯೋಜನಾ ಪ್ರಾಧಿಕಾರವಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಈಗ ಈ ಹುದ್ದೆಗಾಗಿ ಹಾವು – ಏಣಿಯಾಟ ನಡೆದಿದೆ. ಇದು ಇಬ್ಬರು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆಯುತ್ತಿರುವ ಹೋರಾಟವಲ್ಲ. ಈ ಹೋರಾಟದ ಹಿಂದೆ ಕ್ಷೇತ್ರದ ಇಬ್ಬರು ಕಾಂಗ್ರೆಸ್ ಮುಖಂಡರ ನಡುವೆ ಕ್ಷೇತ್ರದ ಮೇಲಿನ ಹಿಡಿತಕ್ಕಾಗಿ ನಡೆಯುತ್ತಿರುವ ರಾಜಕೀಯ ಗುದ್ದಾಟವಾಗಿದೆ.

ಕಮಲ ಪಡೆಯ ಭದ್ರಕೋಟೆ:

2008 ರಲ್ಲಿ ನಡೆದ ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ಜಿಲ್ಲೆಯಲ್ಲಿನ ಗುಳೇದಗುಡ್ಡ ಕ್ಷೇತ್ರ ಮಾಯವಾಗಿ, ಹೊಸದಾಗಿ ತೇರದಾಳ ವಿಧಾನಸಭೆ ಕ್ಷೇತ್ರ ಅಸ್ತಿತ್ವಕ್ಕೆ ಬಂದಿದೆ. ಅಂದಿನಿಂದ ಇಂದಿನವರೆಗೂ ನಾಲ್ಕು ಬಾರಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಂದಿನ ಆಡಳಿತಾರೂಢ ಕಾಂಗ್ರೆಸ್ ಗೆದ್ದಿದ್ದು 2013 ರ ವಿಧಾನಸಭೆ ಚುನಾವಣೆಯಲ್ಲಿ ಮಾತ್ರ. ಅದನ್ನು ಬಿಟ್ಟರೆ ಬಿಜೆಪಿಯ ಸಿದ್ದು ಸವದಿ ಮೂರು ಬಾರಿ ಗೆಲುವು ಸಾಧಿಸಿದ್ದಾರೆ.

ಮೇಲ್ಮನೆಗೆ ಉಮಾಶ್ರೀ :

ಮೂರು ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಉಮಾಶ್ರೀ ಅವರು ಗೆಲುವಿನ ದಾಖಲೆ ಬರೆದು, ಮಂತ್ರಿಕೂಡ ಆಗಿದ್ದರು. 2023 ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯ ಆರಂಭದಲ್ಲೇ ಮೇಲ್ಮನೆ ಪ್ರವೇಶಿಸಿದರು. 2023 ರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದವರು ಸಿದ್ದು ಕೊಣ್ಣೂರ. ಚುನಾವಣೆಯಲ್ಲಿ ಸೋಲು ಕಂಡರೂ ಪಕ್ಷದ ರಾಜ್ಯಭಾರ ನಡೆಸುತ್ತಿರುವುದರಿಂದ ಕ್ಷೇತ್ರದಲ್ಲಿ ಎಲ್ಲವೂ ತಮ್ಮ ಅಣತಿಯಂತೆ ನಡೆಯಬೇಕು ಎನ್ನುವ ತವಕ ಅವರದ್ದು.

ರಾಜಕೀಯ ಮೇಲಾಟ:

ಕ್ಷೇತ್ರದ ಶಾಸಕರಾಗಿ, ಸಚಿವರಾಗಿ ಕೆಲಸ ಮಾಡಿರುವ ಉಮಾಶ್ರೀ ಅವರು ಮೇಲ್ಮನೆ ಪ್ರವೇಶಿಸಿದ ಮೇಲೆ ಅವರು ಕ್ಷೇತ್ರಾಭಿವೃದ್ಧಿಗಾಗಿ ಆಯ್ಕೆಮಾಡಿಕೊಂಡಿದ್ದು ತೇರದಾಳ ಕ್ಷೇತ್ರವನ್ನೆ. ಇದರಿಂದಾಗಿ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿರುವ ಸಿದ್ದು ಕೊಣ್ಣೂರ ಮತ್ತು ಉಮಾಶ್ರೀ ನಡುವೆ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವುದಕ್ಕಾಗಿ ರಾಜಕೀಯ ಮೇಲಾಟ ನಡೆಯುತ್ತಿದೆ. ಪರಿಣಾಮವಾಗಿ ಕಾಂಗ್ರೆಸ್ ಪಾಳೆಯದಲ್ಲಿ ಎರಡು ಸ್ಪಷ್ಟ ಗುಂಪುಗಳು ರೂಪಗೊಂಡಿವೆ.

ಕೈ ಕಾರ್ಯಕರ್ತರು ಹೈರಾಣ:

ಒಂದೇ ಪಕ್ಷದ ಇಬ್ಬರು ಮುಖಂಡರ ನಡುವಿನ ರಾಜಕೀಯ ಗುದ್ದಾಟದಲ್ಲಿ ಕಾರ್ಯಕರ್ತರು ಹೈರಾಣಾಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದರ ಫಲವಾಗಿಯೇ ರಬಕವಿ-ಬನಹಟ್ಟಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ಡ್ರಾಮಾ ನಡೆಯುತ್ತಿದೆ. ಇದರಿಂದಾಗಿ ತಿಂಗಳಲ್ಲಿ ಮೂರನೇ ಬಾರಿಗೆ ಇಬ್ಬರು ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಕ್ಷೇತ್ರದ ಕಾಂಗ್ರೆಸ್ ಪಾಳೆಯದಲ್ಲಿ ಸಿದ್ದು ಕೊಣ್ಣೂರ, ಉಮಾಶ್ರೀ ಅವರ ನಡುವೆ ನಡೆಯುತ್ತಿರುವ ರಾಜಕೀಯ ಗುದ್ದಾಟ ಇಷ್ಟಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಮುಂಬರುವ ಸಾಲು ಸಾಲು ಚುನಾವಣೆಗಳಲ್ಲೂ ಬಣ ಬಡಿದಾಟ ಜೋರಾಗುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ಇದು ಬಿಜೆಪಿ ಪಾಲಿಗೆ ವರದಾನವಾಗುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗುತ್ತಿವೆ.

ತೇರದಾಳ ವಿಧಾನಸಭೆ ಕಾಂಗ್ರೆಸ್ ಪಾಳೆಯದಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಹೇಳುವವರು ಕೇಳುವವರು ಯಾರೂ ಇಲ್ಲ ಎನ್ನುವಂತೆ ಭಾಸವಾಗುತ್ತಿದೆ. ಪಕ್ಕದ ಜಮಖಂಡಿ ಕ್ಷೇತ್ರದಲ್ಲೂ ಬಿಜೆಪಿ ಶಾಸಕರು ಇದ್ದಾರೆ. ಇಲ್ಲಿ ಕಾಂಗ್ರೆಸ್ಸಿನ ಪರಾಜಿತ ಅಭ್ಯರ್ಥಿ, ಮಾಜಿ ಶಾಸಕ ಆನಂದ ನ್ಯಾಮಗೌಡರ ಅಣತಿ ಪ್ರಕಾರ ಪಕ್ಷ ಸಂಘಟನೆ ನಡೆಯುತ್ತಿದೆ. ಆದರೆ ತೇರದಾಳ ಕ್ಷೇತ್ರದಲ್ಲಿ ಮಾತ್ರ ಹಾಗಾಗುತ್ತಿಲ್ಲ. ಮುಖಂಡರ ನಡುವಿನ ಹೊಂದಾಣಿಕೆ ಕೊರತೆ ಹಿನ್ನೆಲೆಯಲ್ಲಿ ಕಾರ್ಯಕರ್ತರು ಒದ್ದಾಡುವ ಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲಾಧ್ಯಕ್ಷರಿಗೆ ಪುರುಸೊತ್ತಿಲ್ಲ:

ತೇರದಾಳದಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಪಕ್ಷದ ಜಿಲ್ಲಾಧ್ಯಕ್ಷರೋ, ಹೊಸದಾಗಿ ವಹಿಸಿಕೊಂಡಿರುವ ಕೈಗಾರಿಕೆ ಹಾಗೂ ಮೂಲ ಸೌಕರ್ಯಗಳ ಕಾರ್ಪೋರಷನ್ ಅಧ್ಯಕ್ಷ ಸ್ಥಾನದಲ್ಲೇ ಹೆಚ್ಚಿನ ಗಮನ ಹರಿಸಿದಂತೆ ಕಾಣಿಸುತ್ತಿದೆ. ಹಾಗಾಗಿ ಪಕ್ಷದೊಳಗಿನ ಬೆಳವಣಿಗೆಗಳ ಮೇಲೆ ಗಮನ ಹರಿಸಲು ಆಗುತ್ತಿಲ್ಲವೇನೋ ಎನ್ನುವ ಮಾತು ಕಾಂಗ್ರೆಸ್ ಪಾಳೆಯದಲ್ಲಿಯೇ ಕೇಳಿ ಬರುತ್ತಿದೆ.

ಇಂತಹ ಬೆಳವಣಿಗೆಗಳು ತೇರದಾಳ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಇತರ ಕ್ಷೇತ್ರಗಳಲ್ಲೂ ಇದೆ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈಗಲೇ ಇದಕ್ಕೆ ಸೂಕ್ತ ಚಿಕಿತ್ಸೆ ಅಗತ್ಯವಿದೆ ಎನ್ನುವುದನ್ನು ಕಾರ್ಯಕರ್ತರ ಅಭಿಮತವಾಗಿದೆ. ಕಾಂಗ್ರೆಸ್ಸಿನ ಈ ಬೆಳವಣಿಗೆಗಳನ್ನು ಕಮಲ ಪಾಳೆಯ ಅತ್ಯಂತ ಉತ್ಸುಕತೆಯಿಂದ ಗಮನಿಸುತ್ತಿದೆ. ಕಾಂಗ್ರೆಸ್ಸಿಗರ ನಡುವಿನ ಬಣ ಬಡಿದಾಟದಿಂದ ತಮಗೆ ಹೆಚ್ಚಿನ ಲಾಭ ಎನ್ನುವ ಉಮೇದಿನಲ್ಲಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top