ಬಾಗಲಕೋಟೆ ಜಿಲ್ಲೆಯ ಹುನಗುಂದ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪ್ರದೇಶಗಳಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಸಾಗಣೆ ಸದ್ದು ಕೇಳಿಸುತ್ತಲೇ ಇದೆ. ಸಂಬಂಧಿಸಿದ ಅಧಿಕಾರಿಗಳಿಂದಾಗಲಿ, ಜಿಲ್ಲಾಡಳಿತದಿಂದಾಗಲಿ ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಇದೀಗ ಬೆಂಗಳೂರು ಲೋಕಾಯುಕ್ತ ವಿಶೇಷ ತಂಡ ಅಖಾಡ ಪ್ರವೇಶಿಸಿದೆ. ಇನ್ನಾದರೂ ಮರಳು ದಂಧೆಕೋರರ ಅಟ್ಟಹಾಸಕ್ಕೆ ಕಡಿವಾಣ ಬೀಳಬಹುದು ಎನ್ನುವ ಆಶಾ ಭಾವನೆ ಜನಸಾಮಾನ್ಯರಲ್ಲಿ ಮೂಡಿದೆ.
ಮರಳಿಗೆ ಬಂಗಾರದ ಬೆಲೆ:
ಹುನಗುಂದ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಮಲಪ್ರಭ ನದಿ ದಂಡೆ ಪ್ರದೇಶ, ಹಳ್ಳದ ದಂಡೆಗಳು ಹಾಗೂ ಖಾಸಗಿ ಜಮೀನುಗಳಲ್ಲಿ ಚಿನ್ನದ ಬೆಲೆಯುಳ್ಳ ಮರಳು ಹೇರಳವಾಗಿ ಲಭ್ಯವಾಗುತ್ತದೆ. ಇಂತಹ ಚಿನ್ನದ ಮೇಲೆ ಅದೆಷ್ಟೋ ಮರಳು ದಂಧೆಕೋರರ ಕಣ್ಣು ಬಿದ್ದಿರುವ ಪರಿಣಾಮ ಬೃಹತ್ ಯಂತ್ರಗಳನ್ನು ಬಳಸಿ ಮರಳು ಎತ್ತುವ ಕೆಲಸ ಅವ್ಯಾಹತವಾಗಿ ನಡೆದಿದೆ. ಈ ದಂಧೆಯಲ್ಲಿ ರಾಜಕೀಯ ಪ್ರಭಾವ ಇರುವುದರಿಂದಲೇ ಇದನ್ನು ತಡೆಯಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ.
ಜಿಲ್ಲಾದ್ಯಂತ ಅಕ್ರಮ ವ್ಯವಹಾರ:
ಅಕ್ರಮ ಮರಳು ದಂಧೆ ಕೇವಲ ಹುನಗುಂದ ವಿಧಾನಸಭೆ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ ಜಿಲ್ಲೆಯ ಮಲಪ್ರಭ, ಘಟಪ್ರಭ ಮತ್ತು ಕೃಷ್ಣಾ ನದಿ ತೀರದ ಪ್ರದೇಶ ಸೇರಿದಂತೆ ಹಳ್ಳಗಳು ಹರಿಯುವ ಪ್ರದೇಶಗಳು ಮತ್ತು ಖಾಸಗಿ ಜಮೀನುಗಳಲ್ಲೂ ಮರಳು ದಂಧೆಕೋರರ ಅಟ್ಟಹಾಸ ಹೆಚ್ಚಿದೆ. ಜಿಲ್ಲೆಯಲ್ಲಿನ ಅಕ್ರಮ ಮರಳು ದಂಧೆಗೆ ಕಾಣದ ಪ್ರಭಾವಿಗಳ ಕೈಗಳ ಆಶೀರ್ವಾದವಿದೆ. ಹಾಗಾಗಿ ಅಧಿಕಾರಿಗಳ ಮಾತು ಕೇಳುವ ಪರಿಸ್ಥಿತಿಯಲ್ಲಿ ಅವರಿಲ್ಲ. ಪ್ರಭಾವಿಗಳ ಕೈಚಳಕದಿಂದ ಜಿಲ್ಲಾಡಳಿತ ಕೂಡ ಕೈ ಕಟ್ಟಿ ಕುಳಿತಿದೆ. ತೀರಾ ಇತ್ತೀಚೆಗಷ್ಟೆ ಜಮಖಂಡಿ ಭಾಗದಲ್ಲಿ ಅಕ್ರಮ ಮರಳು ದಂಧೆ ತಡೆಯಲು ಹೋದ ವ್ಯಕ್ತ ಸಾವಿಗೀಡಾದ ನಿದರ್ಶನವಿದೆ.
ಸಂಚಲನ ಮೂಡಿಸಿದ ದಾಳಿ:
ಇಂತಹ ಸನ್ನಿವೇಶದಲ್ಲಿ ಬೆಂಗಳೂರು ಲೋಕಾಯುಕ್ತ ವಿಶೇಷ ತಂಡ ಹುನಗುಂದ ವಿಧಾನಸಭೆ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಮರಳು ದಂಧೆ ಪ್ರದೇಶಗಳ ಮೇಲೆ ದಾಳಿ ಮಾಡಿದ್ದು ಜಿಲ್ಲಾದ್ಯಂತ ಮರಳು ದಂಧೆಕೋರರಲ್ಲಿ ಸಂಚಲನವನ್ನುಂಟು ಮಾಡಿದೆ. ಕಾಣದ ಕೈಗಳ ಪ್ರಭಾವದಿಂದಾಗಿ ಸ್ಥಳೀಯ ಅಧಿಕಾರಿಗಳಿಂದ ಸಾಧ್ಯವಾಗದ್ದನ್ನು ಲೋಕಾಯುಕ್ತ ವಿಶೇಷ ತಂಡ ಸಾಧ್ಯವಾಗಿಸಲು ಮುಂದಾಗಿದ್ದು, ಅಕ್ರಮ ಮರಳು ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕುವ ಕೆಲಸ ಆಗಬೇಕಿದೆ.
ಅಕ್ರಮ ಮರಳು ದಂಧೆ ನಡೆಯುತ್ತಿರುವ ನಿರ್ಧಿಷ್ಟ ಪ್ರದೇಶಗಳ ಮೇಲಷ್ಟೆ ದಾಳಿ ಸೀಮಿತವಾಗದೇ ಜಿಲ್ಲಾದ್ಯಂತ ನಡೆಯುತ್ತಿರುವ ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕುವ ಕೆಲಸ ಆಗಬೇಕಿದೆ. ಸದ್ಯದ ಬೆಂಗಳೂರು ಲೋಕಾಯುಕ್ತ ವಿಶೇಷ ತಂಡ ನಡೆಸಿದ ದಾಳಿಯ ಹಿನ್ನೆಲೆಯಲ್ಲಿ ನಡೆಯುವ ಕ್ರಮಕ್ಕೆ ಕೇವಲ ಅಧಿಕಾರಿಗಳು ಮಾತ್ರ ಬಲಿಪಶುವಾಗುವ ಕೆಲಸ ಆಗಬಾರದು. ಅಕ್ರಮ ಮರಳು ಸಾಗಣೆ ಹಿಂದಿರುವ ಕಾಣದ ಪ್ರಭಾವಿ ಶಕ್ತಿಗಳ ವಿರುದ್ಧವೂ ಕ್ರಮವಾದಾಗ ಮಾತ್ರ ತಕ್ಕ ಮಟ್ಟಿಗೆ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕಲು ಸಾಧ್ಯವಾಗಲಿದೆ ಎನ್ನುವುದು ಸಾಮಾನ್ಯ ಜನತೆಯ ಅಭಿಮತವಾಗಿದೆ.
ದಂಧೆಕೋರರ ಚಾಣಾಕ್ಷ ನಡೆ:
ಈ ಹಿಂದೆ ಮಾಜಿ ಸಚಿವ ಎಸ್.ಆರ್. ಪಾಟೀಲ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಜಿಲ್ಲೆಯಲ್ಲಿನ ಅಕ್ರಮ ಮರಳು ದಂಧೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾತೋರಾತ್ರಿ ಮರಳು ಯಾರ್ಡ್ಗಳಿಗೆ ಭೇಟಿ ನೀಡುವ ಯೋಜನೆ ಮಾಡಿಕೊಂಡು ದಿಢೀರ್ ಭೇಟಿಗೆ ಹೋರಟ ವೇಳೆ ಇವರು ಮರಳು ಯಾರ್ಡ್ ತಲುಪುವ ವೇಳೆಗೆ ಅದ್ಹೇಗೋ ವಾಸನೆ ಕಂಡು ಹಿಡಿದ ಮರಳು ದಂಧೆಕೋರರು ಅಕ್ರಮವಾಗಿ ಮರಳು ಎತ್ತುವುದನ್ನು ಸಂಪೂರ್ಣ ನಿಲ್ಲಿಸಿ, ಅಕ್ರಮ ಸಾಗಣೆ ನಡೆಯುತ್ತಿಲ್ಲವೆನೋ ಎನ್ನುವ ವಾತಾವರಣ ಸೃಷ್ಟಿಸಿದ್ದರು. ಅಷ್ಟೊಂದು ವ್ಯವಸ್ಥಿತವಾಗಿ ಜಿಲ್ಲೆಯಲ್ಲಿ ಮರಳು ದಂಧೆ ನಡೆಯುತ್ತಿದೆ ಎನ್ನುವ ಆರೋಪ ವ್ಯಾಪಕವಾಗಿದೆ.
ಜನಪ್ರತಿನಿಧಿಗಳ ಪಾತ್ರ ಮುಖ್ಯ:
ಜಿಲ್ಲೆಯಲ್ಲಿನ ನದಿ, ಹಳ್ಳ, ಕೊಳ್ಳಗಳ ರಕ್ಷಣೆ ಹಿನ್ನೆಲೆಯಲ್ಲಿ ಅಕ್ರಮ ಮರಳು ದಂಧೆಯ ಅಟ್ಟಹಾಸ ಕೊನೆಗೊಳ್ಳಬೇಕಿದೆ. ಸಂಬಂಧಿಸಿದ ಅಧಿಕಾರಿಗಳ ಪ್ರಯತ್ನದ ಜತೆಗೆ ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರ ಕೂಡ ಮುಖ್ಯವಾಗಿದೆ. ಜನಪ್ರತಿನಿಧಿಗಳು ಇಚ್ಛಾಶಕ್ತಿ ಮೆರೆದಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಕಷ್ಟವಲ್ಲ ಎನ್ನುವ ಅಭಿಪ್ರಾಯವೂ ವ್ಯಾಪಕವಾಗಿದೆ.
ಜತೆಗೆ ಜನಪ್ರತಿನಿಧಿಗಳ ಕುಮ್ಮಕ್ಕಿನಿಂದಲೇ ಈ ಈ ವ್ಯವಹಾರ ನಡೆಯುತ್ತಿದೆ ಎನ್ನುವ ಆರೋಪ ಕೂಡ ಸಾಮಾನ್ಯವಾಗಿದೆ. ಹಾಗಾಗಿ ಹುನಗುಂದ ವಿಧಾನಸಭೆ ಕ್ಷೇತ್ರವ್ಯಾಪ್ತಿಯಲ್ಲಿ ಬೆಂಗಳೂರು ಲೋಕಾಯುಕ್ತ ವಿಶೇಷ ತಂಡ ನಿರಂತರವಾಗಿ ನಡೆಸುತ್ತಿರುವ ಕಾರ್ಯಾಚರಣೆಯಿಂದಾಗುವ ಪರಿಣಾಮಗಳ ಮೇಲೆ ಜಿಲ್ಲೆಯಲ್ಲಿನ ಅಕ್ರಮ ಮರಳು ದಂಧೆಗೆ ಕಡಿವಾಣ ಬೀಳಲಿದೆ ಎನ್ನುವುದು ಸ್ಪಷ್ಟವಾಗಲಿದೆ.
- ವಿಠ್ಠಲ ಆರ್. ಬಲಕುಂದಿ



