ಸರ್ಕಾರಿ ವೈದ್ಯ ಕಾಲೇಜು ಸ್ಥಾಪನೆಯತ್ತ ಮಹತ್ವದ ಹೆಜ್ಜೆ

ಬಾಗಲಕೋಟೆ: ನಗರದಲ್ಲಿ ಉದ್ದೇಶಿತ ರಾಜೀವಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ವೈದ್ಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ ಸ್ಥಾಪನೆ ವಿಷಯದಲ್ಲಿ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇರಿಸಿದೆ. ಬೆಂಗಳೂರು ವಿಧಾನ ಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ 450 ಕೋಟಿ ರೂ.ಗಳ ಆಡಳಿತಾತ್ಮಕ ಮಂಜೂರಾತಿ ನೀಡಿದೆ.

150 ಎಂಬಿಬಿಎಸ್ ಪ್ರವೇಶ ಮಿತಿಯೊಂದಿಗೆ ಆರಂಭಿಸಲು ಅಗತ್ಯವಿರುವ ವೈದ್ಯಕೀಯ ಕಾಲೇಜು ಕಟ್ಟಡ, ಬಾಲಕ, ಬಾಲಕಿಯರ ವಸತಿ ನಿಲಯ, ಬೋಧಕ ಸಿಬ್ಬಂದಿ ವಸತಿ ಗೃಹಗಳ ನಿರ್ಮಾಣ ಸೇರಿದಂತೆ ಇತರೇ ಪೂರಕ ಕಾಮಗಾರಿಗಳಿಗೆ ಅಗತ್ಯವಿರುವ 450 ಕೋಟಿ ರೂ.ಗಳ ಅಂದಾಜು ಪಟ್ಟಿಗೆ ಅನುಮೋದನೆ ನೀಡಿದೆ.

ನಿರಂತರ ಹೋರಾಟ:

ಜಿಲ್ಲಾ ಕೇಂದ್ರ ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ಸ್ಥಾಪನೆ ಆಗಬೇಕು ಎನ್ನುವ ಕೂಗು ಕಳೆದೊಂದು ದಶಕದಿಂದ ಕೇಳಿ ಬರುತ್ತಲೇ ಇತ್ತು . ಇದಕ್ಕಾಗಿ ನಡೆದ ಹೋರಾಟ, ಸತ್ಯಾಗ್ರಹಗಳಿಗೆ ಲೆಕ್ಕವಿಲ್ಲ. ಸಾರ್ವಜನಿಕರ ಬೂಟು ಪಾಲೀಷ್ ಮಾಡಿ ಅದರಿಂದ ಬಂದ ದುಡ್ಡನ್ನು ಕೂಡ ಸರ್ಕಾರಕ್ಕೆ ಕಳುಹಿಸಿದ ನಿದರ್ಶನಗಳು ಇವೆ.

ಸಿದ್ದರಾಮಯ್ಯ ಅವರು 2013 ರಿಂದ 2018ರ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೇ ಜಿಲ್ಲೆಗೊಂದು ವೈದ್ಯ ಕಾಲೇಜ್ ಸ್ಥಾಪನೆ ಮಾಡಲಾಗುವುದು ಎಂದು ಇತರ ಜಿಲ್ಲೆಗಳ ಜತೆ ಬಾಗಲಕೋಟೆಗೂ ಸರ್ಕಾರಿ ವೈದ್ಯ ಕಾಲೇಜು ಸ್ಥಾಪಿಸಲಾಗುವುದು ಎಂದು ಭರವಸೆ ರಾಜ್ಯದ ಮುಂಗಡ ಪತ್ರ ಮಂಡನೆ ವೇಳೆ ಘೋಷಿಸಿದ್ದರು. ಇಲ್ಲಿಯವರೆಗೂ ಆ ಕೆಲಸ ಹಾಗೆ ನನೆಗುದಿಗೆ ಬಿದ್ದಿತ್ತು. ಬಳಿಕ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವೈದ್ಯ ಕಾಲೇಜು ಸ್ಥಾಪನೆ ಮಾತುಗಳು ಕೇಳಿ ಬಂದಿದ್ದವು. ಅದಕ್ಕೂ ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

ಎಚ್. ವೈ.‌ ಮೇಟಿ

ಮೇಟಿ ಒತ್ತಾಸೆಗೆ ಸಿಎಂ ಸ್ಪಂದನೆ:

ಹೇಗಾದರೂ ಮಾಡಿ ಬಾಗಲಕೋಟೆಗೆ ವೈದ್ಯ ಕಾಲೇಜ್ ತರಲೇ ಬೇಕು ಎನ್ನುವ ಹಠ ತೊಟ್ಟಿದ್ದ ಶಾಸಕ ಎಚ್. ವೈ. ಮೇಟಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಇನ್ನಿಲ್ಲದ ಒತ್ತಡ ಹಾಕಲಾರಂಭಿಸಿದರು. ಪರಿಣಾಮವಾಗಿ ಕಳೆದ ಬಜೇಟ್ ನಲ್ಲಿ ಬಾಗಲಕೋಟಗೆ ರಾಜೀವಗಾಂಧಿ ಆರೋಗ್ಯ ವಿಶ್ವ ವಿದ್ಯಾಲಯದ ವೈದ್ಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ಸ್ಥಾಪನೆ ಘೋಷಣೆ ಮಾಡಲಾಯಿತು. ಬಳಿಕ ಸಂಪುಟ ಸಭೆಯಲ್ಲೂ ಅದಕ್ಕೆ ಅನುಮತಿ ಸಿಕ್ಕಿತು.

ವೈದ್ಯ ಕಾಲೇಜಿಗೆ 450 ಕೋಟಿ ರೂ.:

ವೈದ್ಯ ಕಾಲೇಜ್ ಸ್ಥಾಪನೆಗೆ ಸಂಪುಟ ಸಭೆಯಲ್ಲಿ ಅನುಮತಿ ಸಿಕ್ಕುತ್ತಿದ್ದಂತೆ, ಆಡಳಿತಾಧಿಕಾರಿ ಕೂಡ ನೇಮಕಗೊಂಡರು. ಬಾಗಲಕೋಟೆ ನವನಗರದಲ್ಲಿ ಸೂಕ್ತ ಜಾಗೆಯ ವ್ಯವಸ್ಥೆಯನ್ನೂ ಬಿಟಿಡಿಎ ಮೂಲಕ ಮಾಡಲಾಯಿತು. ಇಷ್ಟೇಲ್ಲ ಆದ ಮೇಲೆ ಮೂಲ ಸೌಕರ್ಯಗಳಿಗೆ ಬೇಕಾದ ಅಗತ್ಯ ಸಂಪನ್ಮೂಲ ಕಲ್ಪಿಸಲು ಬೇಕಾದ ಹಣಕಾಸಿನ ಮಂಜೂರಾತಿಗೂ ಪ್ರಯತ್ನಗಳು ನಡೆದವು. ಹತ್ತು ಹಲವು ಪ್ರಯತ್ನಗಳ ಮಧ್ಯೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು 450 ಕೋಟಿ ರೂ.ಗಳ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.

ಶಂಕುಸ್ಥಾಪನೆಯೊಂದೆ ಬಾಕಿ:

ವೈದ್ಯ ಕಾಲೇಜು ಮಂಜೂರಾಗಿ, ಜಾಗೆ ಸಿಕ್ಕು, ಅಗತ್ಯ ಸೌಕರ್ಯಗಳ ನಿರ್ಮಾಣಕ್ಕಾಗಿ ಹಣಕಾಸಿನ ವ್ಯವಸ್ಥೆ ಆಗಿದ್ದು, ಇನ್ನು ಕಾಮಗಾರಿ ಆರಂಭಕ್ಕೆ ಶಂಕು ಸ್ಥಾಪನೆಯೊಂದೇ ಬಾಕಿ. ಇದನ್ನೂ ಬಾಗಲಕೋಟೆ ಶಾಸಕ ಎಚ್.ವೈ. ಮೇಟಿ ಅವರು ಆದಷ್ಟು ಬೇಗ ನೆರವೇರಿಸಲಿ ಎನ್ನುವುದು ಜನತೆಯ ಆಶಯವಾಗಿದೆ.

ನಗರದಲ್ಲಿ ರಾಜೀವಗಾಂಧಿ ಆರೋಗ್ಯ ವಿವಿಯ ವೈದ್ಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ಸ್ಥಾಪನೆಯಿಂದ ಈ ಭಾಗದಲ್ಲಿನ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಪಡೆಯಲು ಸಹಕಾರಿ ಆಗಲಿದೆ. ಜತೆಗೆ ಆರೋಗ್ಯ ಕ್ಷೇತ್ರದಲ್ಲಿನ ಬೆಳವಣಿಗೆಗೆ ಹೆಚ್ಚಿನ ಅನುಕೂಲವಾಗಲಿದೆ. ಖಾಸಗಿ ಆಸ್ಪತ್ರೆಗಳ ದರ್ಬಾರು ಮಧ್ಯೆ ಸರ್ಕಾರಿ ವೈಧ್ಯ ಕಾಲೇಜು ಸ್ಥಾಪನೆ ಮುಳುಗಡೆ ನಗರದ ಜನತೆಗೆ ಸಂಜೀವಿನಿ ಆಗಲಿದೆ ಎನ್ನುವುದು ಬಹುತೇಕರ ಅಭಿಮತವಾಗಿದೆ.

ಸಮಾಧಾನದ ಸಂಗತಿ:

ಶಾಸಕ ಎಚ್. ವೈ. ಮೇಟಿ ಅವರು ಕ್ಷೇತ್ರದ ಅಭಿವೃದ್ಧಿಗೆ ಏನೂ ಮಾಡುತ್ತಿಲ್ಲ ಎನ್ನುವ ಕೂಗಿನ ಮಧ್ಯೆ ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ಸ್ಥಾಪನೆ ಕಾರ್ಯ ಚುರುಕಿನಿಂದ ನಡೆದಿರುವುದು ಸಮಾಧಾನಕರ ಸಂಗತಿ. ಕೊನೆಗೂ ಜಿಲ್ಲೆಯ ಜನತೆಯ ಬಹುದಿನಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top