ಬಾಗಲಕೋಟೆ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ತಳ ಮಟ್ಟದ ಕಾಯಕರ್ತರಿಗೆ ರಾಜಕೀಯ ಅಧಿಕಾರ ಕಲ್ಪಿಸುವ ಅತ್ಯಂತ ಮಹತ್ತರ ಘಟ್ಟವೇ ಪಂಚಾಯಿತಿ ಚುನಾವಣೆ ವ್ಯವಸ್ಥೆ. ಈ ವ್ಯವಸ್ಥೆಯಡಿ ಗ್ರಾಮ ಮಟ್ಟದಲ್ಲಿನ ಕಡೆಯ ಕಾರ್ಯಕರ್ತನಿಗೂ ಅಧಿಕಾರ ಸಿಕ್ಕುವ ಸಂದರ್ಭ ಇದಾಗಿದೆ.
ಹಾಲಿ, ಮಾಜಿ ಶಾಸಕರಿಗೆ ತಳಮಳ:
ಪಂಚಾಯಿತಿ ಚುನಾವಣೆಗಳಿಂದಲೇ ರಾಜಕಾರಣದಲ್ಲಿ ಉತ್ತುಂಗಕ್ಕೇರಿದ ಸಾಕಷ್ಟು ಉದಾಹರಣೆಗಳನ್ನು ಕಾಣಬಹುದಾಗಿದೆ. ಪ್ರಮುಖ ರಾಜಕೀಯ ಪಕ್ಷಗಳ ಕಾರ್ಯಕರ್ತರ ಪಾಲಿಗೆ ಅಂತಹ ನಿರ್ಣಾಯಕ ಗಳಿಗೆ ಮತ್ತೆ ಸಮೀಪಿಸುತ್ತಿದೆ. ಪ್ರಮುಖ ರಾಜಕೀಯ ಪಕ್ಷಗಳಿಗೆ ಪಂಚಾಯಿತಿ ಚುನಾವಣೆ ಜ್ವರ ಕಾಣಿಸಿಕೊಂಡಿದೆ. ಕಾರ್ಯಕರ್ತರಿಗೆ ಅಧಿಕಾರ ಕೊಡಿಸಬೇಕಾಗಿರುವ ಪ್ರಮುಖ ರಾಜಕೀಯ ಪಕ್ಷಗಳ ಹಾಲಿ, ಮಾಜಿ ಶಾಸಕರಲ್ಲಿ ಮಾತ್ರ ತಳಮಳ ಶುರುವಾಗಿದೆ. ಪಂಚಾಯಿತಿ ಚುನಾವಣೆಗಳಲ್ಲಿ ಪಕ್ಷ ನಿಷ್ಠರನ್ನು ಗುರುತಿಸಿ, ಸ್ಪರ್ಧೆಗೆ ಅವಕಾಶ ನೀಡಿ, ಅವರನ್ನು ಗೆಲ್ಲಿಸುವ ಗುರುತರ ಹೊಣೆಯನ್ನು ಹಾಲಿ, ಮಾಜಿ ಶಾಸಕರು ನಿಭಾಯಿಸಬೇಕಿದೆ. ಆ ಮೂಲಕ ತಮ್ಮ ಹಾಗೂ ಪಕ್ಷದ ವರ್ಚಸ್ಸನ್ನು ಕಾಪಾಡಿಕೊಳ್ಳಬೇಕಿದೆ.
ಸಾಧನೆ-ವೈಫಲ್ಯಗಳೇ ಅಸ್ತ್ರ:
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಬರೊಬ್ಬರಿ ಎರಡುವರೆ ವರ್ಷ ಕಳೆದಿದೆ. ಬಾಕಿ ಎರಡುವರೆ ವರ್ಷ ಅಧಿಕಾರಾವಧಿ ಇದೆ. ಹಾಗಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕಳೆದ ಎರಡುವರೆ ವರ್ಷಗಳ ಅವಧಿಯಲ್ಲಿ ಮಾಡಿದ ಸಾಧನೆಯನ್ನು ಜನರ ಮುಂದೆ ಇಡಲು ಇದು ಅತ್ಯಂತ ಪ್ರಶಸ್ತ ಸಮವಾಗಿದೆ. ಸರ್ಕಾರದ ಸಾಧನೆ ಮುಂದಿಟ್ಟುಕೊಂಡು ಚುನಾವಣೆ ಎದುರಿಸಬೇಕಾಗಿರುವ ಕಾಂಗ್ರೆಸ್ಸಿಗೆ ಸಾಧನೆಗಳು ಎಷ್ಟರ ಮಟ್ಟಿಗೆ ಗೆಲುವಿನ ಶ್ರೀರಕ್ಷೆ ಆಗಲಿವೆ ಎನ್ನುವುದನ್ನು ಪಂಚಾಯಿತಿ ಚುನಾವಣೆ ಫಲಿತಾಂಶವೇ ಸಾಕ್ಷಿ ಆಗಲಿದೆ.
ಪ್ರತಿಪಕ್ಷ ಬಿಜೆಪಿ, ಜೆಡಿಎಸ್‌ಗೂ ಪಂಚಾಯಿತಿ ಚುನಾವಣೆಗಳು ಸವಾಲಾಗಲಿವೆ. ಕಳೆದ ಎರಡುವರೆ ವರ್ಷಗಳ ಅವಧಿಯಲ್ಲಿ ಪ್ರತಿಪಕ್ಷವಾಗಿ ಎಷ್ಟು ಸಮರ್ಥವಾಗಿ ಕೆಲಸ ಮಾಡಿದೆ. ಆಡಳಿತ ಪಕ್ಷ ಹಳಿ ತಪ್ಪದಂತೆ ನೋಡಿಕೊಂಡಿದೆ ಎನ್ನುವುದು ಮುಖ್ಯವಾಗಲಿದೆ. ಸರ್ಕಾರದ ವೈಫಲ್ಯಗಳನ್ನೇ ಅಸ್ತ್ರವಾಗಿಸಿಕೊಂಡು ಪ್ರತಿಪಕ್ಷಗಳು ಚುನಾವಣೆ ಗೆಲ್ಲಬೇಕಿದೆ. ಗಮನಾರ್ಹ ಅಂಶವೆಂದರೆ ಸ್ಥಳೀಯ ಸಮಸ್ಯೆಗಳಿಗೆ ಎಷ್ಟರ ಮಟ್ಟಿಗೆ ಪರಿಹಾರ ಸಿಕ್ಕಿದೆ ಎನ್ನುವುದು ಕೂಡ ಅಷ್ಟೆ ಮುಖ್ಯವಾಗಿದೆ.
ಅಭ್ಯರ್ಥಿ ಆಯ್ಕೆ ಸುಲಭವಲ್ಲ:
ಕ್ಷೇತ್ರದಲ್ಲಿ ಯಾವ ಪಕ್ಷದ ಶಾಸಕರಿದ್ದಾರೆ. ಕಳೆದ ಎರಡುವರೆ ವರ್ಷಗಳಲ್ಲಿನ ಅವರ ಸಾಧನೆ, ವೈಫಲ್ಯಗಳ ಜತೆಗೆ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು, ಜಾತಿ ಪ್ರಾಬಲ್ಯ ಕೂಡ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ಹಾಗಾಗಿ ಹಾಲಿ , ಮಾಜಿ ಶಾಸಕರು ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಬಹಳಷ್ಟು ನಾಜುಕಾಗಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕಿದೆ. ಇದಕ್ಕಾಗಿ ಅವರು ಸಾಕಷ್ಟು ಸಮಯಾವಕಾಶ ಕೊಟ್ಟು ಅರ್ಹ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಅಂದು ಕೊಂಡಷ್ಟು ಸುಲಭದ ಕೆಲಸವಲ್ಲ. ಸಮಸ್ಯಾತ್ಮಕ ಕ್ಷೇತ್ರಗಳಲ್ಲಿ ಕಾರ್ಯಕರ್ತರ ನಡುವಿನ ಗೊಂದಲ ಪರಿಹರಿಸಿ ಹೊಂದಾಣಿಕೆ ಅಭ್ಯರ್ಥಿ ಸಜ್ಜುಗೊಳಿಸುವುದು, ಅಭ್ಯರ್ಥಿಗಳೇ ಇಲ್ಲದ ಪ್ರದೇಶಗಳಲ್ಲಿ ಸೂಕ್ತ ಅಭ್ಯರ್ಥಿ ಹುಡುಕುವ ಕೆಲಸವನ್ನು ಮಾಡಬೇಕಾಗುತ್ತದೆ.
ದಿಕ್ಸೂಚಿ ಚುನಾವಣೆ:
ಪಂಚಾಯಿತಿಗಳ ಚುನಾವಣೆಗಳು ಕೇವಲ ಪಕ್ಷ ಮತ್ತು ಅಭ್ಯರ್ಥಿಗಳ ಬಲಾಬಲ ನಿರ್ಧರಿಸುವುದಿಲ್ಲ. ಅಭ್ಯರ್ಥಿಗಳ ಗೆಲುವಿನ ಪ್ರಮಾಣದ ಮೇಲೆ ಹಾಲಿ, ಮಾಜಿ ಶಾಸಕರ ವರ್ಚಸ್ಸು ಹಾಗೂ ಭವಿಷ್ಯದ ರಾಜಕಾರಣವೂ ನಿರ್ಧಾರವಾಗಲಿದೆ. ಹಾಗಾಗಿ ಪಂಚಾಯಿತಿ ಚುನಾವಣೆಯನ್ನು ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದು ರಾಜಕೀಯ ವಲಯದಲ್ಲಿ ಬಣ್ಣಿಸಲಾಗುತ್ತಿದೆ.
ಪಂಚಾಯ್ತಿ ಟಿಕೆಟ್ ಬೇಡಿಕೆ:
ಬಾಗಲಕೋಟೆ ಜಿಲ್ಲೆಯಲ್ಲೂ ಬಾಗಲಕೋಟೆ ವಿಧಾನಸಭೆ ಕ್ಷೇತ್ರ ಹೊರತು ಪಡಿಸಿ ಉಳಿದ ಕ್ಷೇತ್ರಗಳಲ್ಲಿ ಪಂಚಾಯಿತಿ ಚುನಾವಣೆ ಪೂರ್ವ ಚಟುವಟಿಗೆಳು ಗರಿಗೆದರಿವೆ ಎನ್ನುವಂತಿಲ್ಲ. ಇತರ ಕ್ಷೇತ್ರಗಳಿಗಿಂತ ಇಲ್ಲಿಯೇ ಹೆಚ್ಚಿನ ಚುನಾವಣೆ ರಾಜಕಾರಣ ನಡೆಯುತ್ತಿದೆ. ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯೂ ಪಂಚಾಯಿತಿ ಚುನಾವಣೆಗೆ ಥಳಕು ಹಾಕಿಕೊಂಡಿದೆ. ಪ್ರಮುಖ ರಾಜಕೀಯ ಪಕ್ಷಗಳ ಪ್ರಭಾವಿ ಮುಖಂಡರು ಈಗಲೇ ತಮ್ಮ ಸ್ಥಾನಗಳ ಬಗೆಗೂ ಚರ್ಚೆ ನಡೆಸುತ್ತಿದ್ದಾರೆ. ಮುಂಬರುವ ಪಂಚಾಯಿತಿ ಚುನಾವಣೆ ವೇಳೆ ತಮಗೆ ಇಂತಿಂತ ಕ್ಷೇತ್ರಗಳ ಟಿಕೆಟ್ ಬೇಕು ಎನ್ನುವ ಬೇಡಿಕೆಗಳನ್ನು ಮುಂದಿಡುತ್ತಿರುವುದು ಸಾಮಾನ್ಯವಾಗಿದೆ. ಪ್ರಭಾವಿ ಮುಖಂಡರ ಟಿಕೆಟ್ ಬೇಡಿಕೆ ಕೂಡ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಜತೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಒಟ್ಟಾರೆ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಮುಖಂಡರ ಪಾಲಿಗೆ ಪಂಚಾಯಿತಿಗಳ ಚುನಾವಣೆಯನ್ನು ‘ಪಂಚಾಯಿತಿ ಮಹಾಸಂಗ್ರಾಮ’ ಎಂದು ವಿಶ್ಲೇಷಿಸಲಾಗುತ್ತಿದೆ.
- ವಿಠ್ಠಲ ಆರ್. ಬಲಕುಂದಿ



