ಬಾಗಲಕೋಟೆ: ಭವಿಷ್ಯದ ಲೆಕ್ಕಾಚಾರದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಕಬ್ಬು ಬೆಳೆಗಾರರ ಹೋರಾಟದ ಕಿಚ್ಚಿನ ಕಾವನ್ನು ಪ್ರಧಾನಿಗಳಿಗೆ ಅತ್ಯಂತ ವ್ಯವಸ್ಥಿತವಾಗಿ ತಲುಪಿಸುವ ಮೂಲಕ ಜಾಣ ನಡೆ ಪ್ರದರ್ಶಿಸಿದ್ದಾರೆ.
ಪ್ರತಿ ವರ್ಷ ಕಬ್ಬು ಬೆಳೆಗಾರರು ನ್ಯಾಯಯುತ ಬೆಲೆಗಾಗಿ ಹೋರಾಟಕ್ಕೆ ಇಳಿಯುತ್ತಲೇ ಇದ್ದಾರೆ. ಹೋರಾಟದ ಮೂಲಕ ಸೂಕ್ತ ದರ ಪಡೆದುಕೊಂಡಿದ್ದಾರೆ. ಈ ವೇಳೆ ಏನೇ ಸಂಘರ್ಷಗಳು ನಡೆದರೂ ಅದು ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲಿಕರು ಹಾಗೂ ರಾಜ್ಯ ಸರ್ಕಾರದ ನಡುವಿನ ಮಾತುಕತೆಯೊಂದಿಗೆ ಇತ್ಯರ್ಥವಾಗುತ್ತಿತ್ತು.
ಕಬ್ಬು ದರ ನಿಗದಿ ಕೇಂದ್ರದ ವಿಷಯ:
ಪ್ರತಿ ವರ್ಷದಂತೆ ಕಬ್ಬು ಬೆಳೆಗಾರರು ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ಕೊಡುವಂತೆ ಆಗ್ರಹಿಸಿ ಹೋರಾಟ ಆರಂಭಿಸಿದರು. ಹೋರಾಟದ ಆರಂಭದಲ್ಲಿ ಈ ಬಗೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಂಧಾನ ಸಭೆಗಳು ನಡೆದವಾದರೂ ಪ್ರಯೋಜನವಾಗಿಲ್ಲ. ಕೊನೆಗೆ ಹೋರಾಟಗಾರರು ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ಕೊಡಲೇಬೇಕು ಎಂದು ಆಗ್ರಹಿಸಿ ಹೋರಾಟ ತೀವ್ರಗೊಳಿಸಿದರು. ರೈತ ಹೋರಾಟದಿಂದ ಮುಜುಗರಗೊಂಡ ಸರ್ಕಾರ ಇದೇ ಮೊದಲ ಬಾರಿಗೆ ಪ್ರತಿ ಟನ್ ಕಬ್ಬಿಗೆ ಬೆಲೆ ನಿರ್ಧರಿಸಬೇಕಾದವರು ನಾವಲ್ಲ. ಅದು ಏನಿದ್ದರೂ ಕೇಂದ್ರ ಸರ್ಕಾರಕ್ಕೆ ಸಂಬಂಧಪಟ್ಟ ವಿಷಯ ಎಂದು ಪಲಾಯನವಾದ ನೀತಿಗೆ ರಾಜ್ಯ ಸರ್ಕಾರ ಮುಂದಾಯಿತು.
ಸಂಧಾನಕ್ಕೆ ಮುಂದಾದ ಸರ್ಕಾರ:
ಪಟ್ಟು ಬಿಡದ ಹೋರಾಟಗಾರರು ಕಬ್ಬಿಗೆ ನ್ಯಾಯಯುತ ಬೆಲೆ ನೀಡಲೇ ಬೇಕು ಎಂದು ಹೋರಾಟ ತೀವ್ರಗೊಳಿಸಿದರು. ಹೆದ್ದಾರಿ ತಡೆಗಳನ್ನು ಆರಂಭಿಸಿದರು. ಹೆದ್ದಾರಿ ತಡೆ ಸಮಯದಲ್ಲಿ ವಾಹನಗಳಿಗೆ ಕಲ್ಲು ತೂರಾಟ ನಡೆದವು. ಇದರಿಂದ ಎಚ್ಚೆತ್ತ ಸರ್ಕಾರ ಹೋರಾಟ ಸ್ಥಳಕ್ಕೆ ಮಾತುಕತೆಗಾಗಿ ಸಚಿವರನ್ನು ಕಳುಹಿಸಿತು. ಸಮಸ್ಯೆ ಮತ್ತಷ್ಟು ಕಗ್ಗಂಟಾಗುತ್ತಲೇ ಬೆಲೆ ನಿಗದಿಗಾಗಿ ಸಮಸ್ಯೆ ಪರಿಹರಿಸಲು ವಿಶೇಷ ಸಚಿವ ಸಂಪುಟ ಸಭೆ ಕರೆಯಿತು. ಸಮಸ್ಯೆ ಪರಿಹಾರಕ್ಕೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲು ಸಂಪುಟ ಸಭೆ ಅನುಮತಿ ನೀಡಿತು.
ಬಳಿಕ ಮುಖ್ಯಮಂತ್ರಿಗಳು ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯವರು, ಕಬ್ಬು ಬೆಳೆಗಾರರ ಪ್ರತ್ಯೇಕ ಸಭೆಗಳನ್ನು ನಡೆಸಿದರು. ಕೊನೆಗೆ ಇಳುವರಿ ಆಧಾರವಾಗಿಟ್ಟು 3300 ರೂಪಾಯಿ ದರ ನಿಗದಿ ಎಲ್ಲರೂ ಒಪ್ಪಿಕೊಂಡು ದರ ಘೋಷಣೆ ಮಾಡಿದರು. 3300 ರೂ.ಗಳ ಪೈಕಿ 3200 ಪ್ರತಿ ಟನ್‌ಗೆ ಕೊಡಬೇಕು. ಬೆಂಬಲ ಬೆಲೆಯಾಗಿ ಕಾರ್ಖಾನೆಯವರು 50 ರೂಪಾಯಿ, ಸರ್ಕಾರ 50 ರೂಪಾಯಿ ಕೊಡಬೇಕು ಎನ್ನುವ ನಿರ್ಧಾರವಾಯಿತು. ಆಗಲೂ ಮುಖ್ಯಮಂತ್ರಿಗಳು ಇದು ನಮಗೆ ಸಂಬಂಧಿಸಿದ ವಿಷಯವೇ ಅಲ್ಲ. ಎಫ್‌ಆರ್‌ಪಿ ದರ, ಎಥಿನಾಲ್ ಉತ್ಪಾದನೆ, ವಿದ್ಯುತ್ ಉತ್ಪಾದನೆ, ಸಕ್ಕರೆ ಉತ್ಪಾದನೆ ನಿಗದಿ ಪಡಿಸುವವರು ಅವರು ಎನ್ನುವ ವಾದದಿಂದ ಹಿಂದಕ್ಕೆ ಸರಿಯಲೇ ಇಲ್ಲ.
ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ:
ಇಳುವರಿ ಆಧಾರದ ಮೇಲೆ ಕಬ್ಬಿಗೆ ದರ ನಿಗದಿ ಆಗಿರುವುದನ್ನು ಬೆಳಗಾವಿ ಜಿಲ್ಲೆಯ ರೈತರು, ಕಾರ್ಖಾನೆಯವರು ಒಪ್ಪಿಕೊಂಡರಾದರೂ ಬಾಗಲಕೋಟೆ, ವಿಜಯಪುರ, ಹಾವೇರಿ, ಯಾದಗಿರಿ ಸೇರಿದಂತೆ ಇತರ ಜಿಲ್ಲೆಗಳಲ್ಲಿ ಹೋರಾಟ ಹಾಗೆ ಮುಂದವರಿಯಿತು. ಇಳುವರಿ ಆಧಾರದ ಮೇಲೆ ದರ ನಿಗದಿ ಬೇಡ. ಪ್ರತಿ ಟನ್‌ಗೆ 3500 ರೂಪಾಯಿ ಏಕರೂಪ ದರ ನಿಗದಿ ಆಗಬೇಕು ಎಂದು ಆಗ್ರಹಿಸಿ ಹೋರಾಟ ಮುಂದುವರಿಯಿತು. ಈ ವೇಳೆ ಮುಧೋಳ ಸುತ್ತಲಿನ ಭಾಗದಲ್ಲಿ ಹೆದ್ದಾರಿ ತಡೆ, ಮುಧೋಳ ಬಂದ್, ಸರ್ಕಾರಿ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುವ ಕೆಲಸ ನಡೆಯಿತು.
ಬಾಕಿಹಣ ಪಾವತಿ, ಕಬ್ಬಿನ ದರ ನಿಗದಿ ಆಗುವವರೆಗೂ ಕಾರ್ಖಾನೆಗಳನ್ನು ಆರಂಭಿಸಬಾರದು ಎನ್ನುವ ರೈತರ ನಿಲುವಿಗೆ ವಿರುದ್ಧವಾಗಿ ಸಕ್ಕರೆ ಕಾರ್ಖಾನೆಯವರು ನಡೆದುಕೊಳ್ಳುತ್ತಿದ್ದಾರೆ. ಸಮೀರವಾಡಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯವರ ವಿರುದ್ಧ ಆಕ್ರೋಶಗೊಂಡ ಹೋರಾಟಗಾರರು ಅದನ್ನು ತಡೆಯಲು ಹೋದವೇಳೆ ಕಬ್ಬಿನ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಅಹಿತಕರ ಘಟನೆ ನಡೆಯಿತು. ಕಬ್ಬು ತುಂಬಿ ನಿಂತ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದರಿಂದ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗಿದ್ದಲ್ಲದೆ ಹೋರಾಟ ಮತ್ತಷ್ಟು ತೀವ್ರತೆ ಪಡೆದುಕೊಂಡಿತು.
ಸ್ಥಳಕ್ಕೆ ಧಾವಿಸಿದ ಸರ್ಕಾರ:
ಸಕ್ಕರೆ ಸಚಿವ ಶಿವಾನಂದ ಪಾಟೀಲ, ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಸ್ಥಳಕ್ಕೆ ಧಾವಿಸಿ ಕಾರ್ಖಾನೆ ಆಡಳಿತ ಮಂಡಳಿಯವರು ಮತ್ತು ಕಬ್ಬು ಬೆಳೆಗಾರರ ಮಧ್ಯೆ ಹಲವು ಸುತ್ತಿನ ಮಾತುಕತೆ ನಡೆಸಿ ಕೊನೆಗೆ ಬಾಕಿ ಹಣ ಪಾವತಿ, ಸರ್ಕಾರ ನಿರ್ಧರಿಸಿದ 3300 ರೂಪಾಯಿ ನೀಡಬೇಕು ಎನ್ನುವ ನಿರ್ಧಾರ ಹೊರ ಬಿದ್ದಿತು. ಆಗಲೂ ಸಕ್ಕರೆ ಸಚಿವರು ಇದು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ವಿಷಯವಲ್ಲ. ಎಲ್ಲವೂ ಕೇಂದ್ರಕ್ಕೆ ಸಂಬಂಧಿಸಿದ್ದು ಎಂದು ಕೇಂದ್ರದತ್ತ ಬೊಟ್ಟು ಮಾಡಿದರು.
ಪ್ರಧಾನಿಗೆ ಭೇಟಿ ಮಾಡಿದ ಸಿಎಂ:
ಕಬ್ಬು ಬೆಳೆಗಾರರ ಹೋರಾಟದಿಂದ ಎಚ್ಚೆತ್ತ ಮುಖ್ಯಮಂತ್ರಿಗಳು ಈ ಬಗೆಗೆ ಚರ್ಚಿಸಲು ಸಮಯ ಕೋರಿ ಪ್ರಧಾನಿಗಳಿಗೆ ಪತ್ರ ಬರೆದು ಸಮಯ ಕೇಳಿದರು. ಪ್ರಧಾನಿಗಳು ಸಮಯ ನೀಡಿದ ಬೆನ್ನಲ್ಲೇ ದೆಹಲಿಗೆ ತೆರಳಿದ ಮುಖ್ಯಮಂತ್ರಿಗಳು ಕಬ್ಬುಬೆಳೆಗಾರರ ಸಮಸ್ಯೆ ಬಗೆಗೆ ಚರ್ಚಿಸಿ ಸಕ್ಕರೆ ದರ ಹೆಚ್ಚಳ, ಏಥಿನಾಲ್ ಉತ್ಪಾದನೆ ಪ್ರಮಾಣ ಹೆಚ್ಚಳಕ್ಕೆ ಅವಕಾಶ ಕುರಿತು ಪ್ರಸ್ತಾಪ ಮಾಡಿದ್ದರು. ಜತೆಗೆ ಮಹಾದಾಯಿ, ಕೃಷ್ಣಾ ನ್ಯಾಯಾಧೀಕರಣ ಸೇರಿದಂತೆ ನೀರಾವರಿ ಸಮಸ್ಯೆಗಳ ಕುರಿತು ಚರ್ಚಿಸಿ ಮನವಿ ಸಲ್ಲಿಸಿದರು. ಮುಖ್ಯಮಂತ್ರಿಗಳ ಪ್ರಧಾನಿಯವರ ಭೇಟಿ ಫಲಪ್ರದ ಎನ್ನುವಂತೆ ಕೇಂದ್ರ ಸಕ್ಕರೆ ದರ ಹೆಚ್ಚಳಕ್ಕೆ ಮುಂದಾಗಿದೆ.
ಒಟ್ಟಾರೆ ಪ್ರಸಕ್ತ ಸಾಲಿನ ಕಬ್ಬು ನುರಿಸುವ ಹಂಗಾಮಿನಲ್ಲಿ ನಡೆದ ದರ ಸಮರ ಹೋರಾಟ ಹಳ್ಳಿಯಿಂದ ದಿಲ್ಲಿಯವರೆಗೂ ತಲುಪಿದ್ದು ಸಣ್ಣ ಮಾತಲ್ಲ. ಕೇಂದ್ರ ಸರ್ಕಾರ ಇನ್ನಾದರೂ ಕಬ್ಬಿಗೆ ನ್ಯಾಯಯುತ ದರ ನಿಗದಿ ವಿಷಯದಲ್ಲಿ ರೈತರೂ ಹಾಗೂ ಕಾರ್ಖಾನೆಯವರ ಹಿತದೃಷ್ಟಿ ಇಟ್ಟುಕೊಂಡು ದರ ನಿಗದಿ ಮಾಡಬೇಕು. ಆ ಮೂಲಕ ಪ್ರತಿ ವರ್ಷ ನಡೆಯುವ ಕಬ್ಬಿನ ದರ ಸಂಘರ್ಷಕ್ಕೆ ಇತೀಶ್ರೀ ಹಾಡಬೇಕಿದೆ.
- ವಿಠ್ಠಲ ಆರ್. ಬಲಕುಂದಿ




