ಕಬ್ಬಿನ ಬೆಲೆ ನಿಗದಿಗೆ ಸರ್ಕಾರದ ಸಂಧಾನ ಅನಿವಾರ್ಯ

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ನವೆಂಬರ್ ಒಂದರಿಂದ ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳ ಸದ್ದು ಆರಂಭಗೊಳ್ಳಬೇಕಿತ್ತು. ಯಾವುದೂ ಅಂದುಕೊಂಡ ಹಾಗೆ ನಡೆಯದ ಹಿನ್ನೆಲೆಯಲ್ಲಿ ನವೆಂಬರ್ ಒಂದರಿಂದ ಕಾರ್ಖಾನೆಗಳನ್ನು ಆರಂಭಿಸಲು ರೈತರು ಒಪ್ಪುತ್ತಿಲ್ಲ. ಪರಿಣಾಮವಾಗಿ ಕಾರ್ಖಾನೆಗಳ ಕಬ್ಬು ನುರಿಸುವ ಕೆಲಸ ಇನ್ನಷ್ಟು ವಿಳಂಬವಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.

ಪ್ರಸಕ್ತ ಸಾಲಿಗೆ ಕಾರ್ಖಾನೆಗಳಿಗೆ ಕಳುಹಿಸುವ ಪ್ರತಿ ಟನ್ ಕಬ್ಬಿಗೆ 3500 ರೂ.ಗಳನ್ನು ಮುಂಗಡ ಹಣವಾಗಿ ಪಾವತಿಸಬೇಕು. ಬಾಕಿ ಹಣ ಪಾವತಿಸಬೇಕು ಎನ್ನುವ ಬೇಡಿಕೆ ಈ ಕ್ಷಣದವರೆಗೂ ಕಗ್ಗಂಟಾಗಿಯೇ ಉಳಿದಿದೆ. ಕಬ್ಬು ದರ ನಿಗದಿ ವಿಷಯದಲ್ಲಿ ರೈತರು ಮತ್ತು ಸಕ್ಕರೆ ಕಾರ್ಖಾನೆಗಳ ನಡುವೆ ಮಧ್ಯಸ್ಥಗಾರನಾಗಿ ಕೆಲಸ ಮಾಡಬೇಕಾದ ಸರ್ಕಾರ ದರ ನಿಗದಿ ವಿಷಯ ತನಗೆ ಸಂಬಂಧಿಸಿದ್ದಲ್ಲ ಎನ್ನುವಂತೆ ನಡೆದುಕೊಳ್ಳುತ್ತಿದೆ. ಇದರಿಂದಾಗಿ ರೈತರು ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ರೈತರ ಹೋರಾಟಕ್ಕೆ ನ್ಯಾಯವಾದಿಗಳು, ಸ್ವಾಮೀಜಿಗಳು ಬೆಂಬಲ ವ್ಯಕ್ತಪಡಿಸಿ ಸಾಥ್ ನೀಡಿದ್ದರಿಂದ ಹೋರಾಟ ಮತ್ತಷ್ಟು ತೀವ್ರಗೊಂಡಿದೆ.

ಒಬ್ಬೊಬ್ಬರಿಗೆ ಒಂದೊಂದು ಚಿಂತೆ:

ಕಬ್ಬಿಗೆ ಮುಂಗಡ ಬೆಲೆ ನಿಗದಿ ಆಗದೇ ಕಾರ್ಖಾನೆ ಆರಂಭಿಸುವಂತಿಲ್ಲ. ಯಾರೂ ಕಾರ್ಖಾನೆಗಳಿಗೆ ಕಬ್ಬು ಕಳುಹಿಸುವಂತಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿರುವ ರೈತರು ಅಲ್ಲಲ್ಲಿ ಹೋರಾಟಗಳನ್ನು ನಡೆಸುತ್ತಿದ್ದಾರೆ. ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಜನಪ್ರತಿನಿಧಿಗಳು ಹಾಗೂ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದಾರೆ. ಈ ಭಾಗದ ಜನಪ್ರತಿನಿಧಿಗಳಾಗಲಿ, ಸರ್ಕಾರವಾಗಲಿ ರೈತರ ಹೋರಾಟಕ್ಕೆ ಕ್ಯಾರೇ ಎನ್ನುತ್ತಿಲ್ಲ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಚಿಂತೆ ಎನ್ನುವಂತೆ ಅಧಿಕಾರದಲ್ಲಿರುವವರು ಇರುವ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ, ಉಳಿದ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಬದಲಾವಣೆ, ಸಂಪುಟ ಸೇರ್ಪಡೆಗಾಗಿನ ಲಾಬಿಯಲ್ಲಿ ನಿರತರಾಗಿದ್ದಾರೆ. ರೈತರ ಹೋರಾಟ, ಅವರ ಬೇಡಿಕೆಗಳನ್ನು ಕೇಳುವಷ್ಟು ಪುರುಸೊತ್ತಿಲ್ಲದ ಸ್ಥಿತಿಯಲ್ಲಿದ್ದಾರೆ.

ಊಸಾಬರಿಯೇ ಬೇಡೆಂದ ಜಿಲ್ಲಾಡಳಿತ:

ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ರೈತರ ಹೋರಾಟ ಸ್ಥಳಕ್ಕೆ ಭೇಟಿ ನೀಡಿ, ಸರ್ಕಾರದ ಗಮನ ಸೆಳೆಯುವುದಾಗಿ ಹೇಳಿ ಹೋದವರು ವಾಪಸ್ ಅವರ ಬಳಿ ಸುಳಿದಿಲ್ಲ. ಬಾಗಲಕೋಟೆ ಜಿಲ್ಲಾಡಳಿತ ಮುಂಗಡ ಬೆಲೆ ನಿಗದಿ ವಿಷಯವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿಲ್ಲ. ಇತ್ತೀಚೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತರು ಮತ್ತು ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಪರಸ್ಪರ ಸೌಹಾರ್ದಯುತವಾಗಿ ಬೆಲೆ ನಿಗದಿ ವಿಷಯ ಇತ್ಯರ್ಥ ಪಡಿಸಿಕೊಳ್ಳಿ ಎನ್ನುವ ಸಲಹೆ ನೀಡಿ ಕೈತೊಳೆದುಕೊಂಡಿದೆ. ಜಿಲ್ಲಾಡಳಿತದ ಸಲಹೆಯ ಬಳಿಕ ಜಿಲ್ಲೆಯಲ್ಲಿ ಒಂದು ಬಾರಿಯೂ ರೈತರು ಮತ್ತು ಕಾರ್ಖಾನೆ ಆಡಳಿತ ಮಂಡಳಿಯವರ ನಡುವೆ ಸೌಹಾರ್ದ ಸಭೆ ನಡೆದಿಲ್ಲ. ಬದಲಿಗೆ ರೈತರ ಹೋರಾಟ ಮತ್ತಷ್ಟು ಕಾವು ಪಡೆದುಕೊಂಡಿದೆ.

ಸರ್ಕಾರದ ಮಧ್ಯಸ್ಥಿಕೆ ಇಲ್ಲದೆ ಇದುವರೆಗೂ ಕೇವಲ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯವರು ಮತ್ತು ರೈತರು ಪರಸ್ಪರ ಸಭೆ ಸೇರಿ ಕಬ್ಬಿನ ಬೆಲೆ ನಿಗದಿ ಮಾಡಿಕೊಂಡಿರುವ ನಿದರ್ಶನಗಳೇ ಇಲ್ಲ. ಬೆಲೆ ನಿಗದಿ ವಿಷಯದಲ್ಲಿ ಜಿಲ್ಲಾಡಳಿತ ಮುತುವರ್ಜಿ ವಹಿಸದೇ ಹೋದಲ್ಲಿ ರೈತರ ಹೋರಾಟ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆಗಳು ದಟ್ಟವಾಗಿವೆ. ಜತೆಗೆ ಬೆಲೆ ನಿಗದಿ ಆಗುವವರೆಗೂ ಕಾರ್ಖಾನೆಗಳು ಕಬ್ಬು ನುರಿಸುವಿಕೆ ಆರಂಭಿಸುವುದು ಕಷ್ಟವಾಗಲಿದೆ.

ಹೋರಾಟಕ್ಕೆ ಸ್ವಾಮೀಜಿ ಬೆಂಬಲ:

ಈಗಾಗಲೇ ನಡೆಯುತ್ತಿರುವ ರೈತರ ಹೋರಾಟಕ್ಕೆ ನ್ಯಾಯವಾದಿಗಳು, ಸ್ವಾಮೀಜಿಗಳು ಬೆಂಬಲ ವ್ಯಕ್ತ ಪಡಿಸಿರುವುದರಿಂದ ಹೋರಾಟಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. ರೈತರ ಹೋರಾಟ ಇನ್ನಷ್ಟು ಕಾವು ಪಡೆದುಕೊಳ್ಳುವ ಮೊದಲು ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕುವ ಮೂಲಕ ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ವಿಷಯ ಇತ್ಯರ್ಥ ಪಡಿಸುವ ಕೆಲಸಕ್ಕೆ ಅಣಿಯಾಗಬೇಕಿದೆ. ಕಬ್ಬಿನ ಹಂಗಾಮು ವಿಳಂಬವಾದಷ್ಟು ರೈತರು ಮತ್ತು ಕಾರ್ಖಾನೆ ಆಡಳಿತ ಮಂಡಳಿಯವರಿಗೆ ನಷ್ಟ ಉಂಟಾಗಲಿದೆ.

ಸಚಿವರ ರಾಜೀನಾಮೆಗೆ ಒತ್ತಡ:

ಈಗಾಗಲೇ ಹೋರಾಟಗಾರರು ಸಮಸ್ಯೆ ಪರಿಹರಿಸಲಾಗದಿದ್ದರೆ ಸಕ್ಕರೆ ಸಚಿವರು ರಾಜೀನಾಮೆ ನೀಡಬೇಕು ಎನ್ನುವ ಆಗ್ರಹದ ಜತೆಗೆ ಜನಪ್ರತಿನಿಧಿಗಳ ಮನೆಗಳ ಮುಂದೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಕಾಲ ಮಿಂಚಿಲ್ಲ. ಜನಪ್ರತಿನಿಧಿಗಳು, ಸಕ್ಕರೆ ಸಚಿವರು ಕಬ್ಬಿನ ಬೆಲೆ ನಿಗದಿಗಾಗಿನ ಸಮಸ್ಯೆಗೆ ಪರಿಹಾರ ಕಲ್ಪಿಸುವತ್ತ ಆದ್ಯ ಗಮನ ಹರಿಸಬೇಕಿದೆ. ಆ ಮೂಲಕ ರೈತರು ಹಾಗೂ ಕಾರ್ಖಾನೆ ಆಡಳಿತ ಮಂಡಳಿಯವರಿಗೆ ಅನುಕೂಲವಾಗುವಂತೆ ಬೆಲೆ ನಿಗದಿಗಾಗಿ ಮಧ್ಯಸ್ಥಿಕೆ ವಹಿಸಿ, ರೈತರ ಹೋರಾಟ ಅಂತ್ಯಗೊಳಿಸಿ ಆದಷ್ಟು ಬೇಗ ಕಾರ್ಖಾನೆಗಳು ಕಬ್ಬು ನುರಿಸುವ ಕಾರ್ಯ ಆರಂಭಿಸುವಂತೆ ನೋಡಿಕೊಳ್ಳಬೇಕಿದೆ.

ಸಂಧಾನ ಸದ್ಯದ ಅಗತ್ಯ:

ಸರ್ಕಾರ ಕಬ್ಬು ಬೆಳೆಗಾರರ ಹೋರಾಟವನ್ನು ನಿರ್ಲಕ್ಷ್ಯ ಮಾಡದೇ ನ್ಯಾಯಯುತ ಬೆಲೆ ನಿಗದಿ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಬೇಕಾದ ಅಗತ್ಯವಿದೆ. ಕೇವಲ ರೈತರು ಮತ್ತು ಕಾರ್ಖಾನೆ ಆಡಳಿತ ಮಂಡಳಿಯವರು ಸೇರಿ ಬೆಲೆ ನಿಗದಿಗೆ ಪರಿಹಾರ ಕಂಡುಕೊಳ್ಳುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಸರ್ಕಾರ ಸಂಧಾನಕ್ಕೆ ಮುಂದಾಗಿ, ರೈತರು ಮತ್ತು ಕಾರ್ಖಾನೆ ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿ, ಪರಸ್ಪರ ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಿದೆ. ಇದರಿಂದ ಸರ್ಕಾರ, ರೈತರು ಮತ್ತು ಕಾರ್ಖಾನೆ ಆಡಳಿತ ಮಂಡಳಿಯವರಿಗೆ ಅನುಕೂಲವಾಗಲಿದೆ. ಸರ್ಕಾರ ಸ್ವಲ್ಪವೇ ನಿರ್ಲಕ್ಷ್ಯ ಮಾಡಿದರೂ ವಿಷಯ‌ ಇನ್ನಷ್ಟು ಕಗ್ಗಂಟಾಗಿ ಪರಿಣಮಿಸಲಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top