ಜಿಲ್ಲಾಡಳಿತ ನಡೆ ರೈತರ ಸಮಸ್ಯೆಗೆ ಪರಿಹಾರವಲ್ಲ

ಬಾಗಲಕೋಟೆ: ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಹುಟ್ಟಿಕೊಂಡಾಗಿನಿಂದಲೂ ಕಬ್ಬು ಬೆಳೆಗಾರರು ಹೋರಾಟ ಮಾಡಿಯೇ ನ್ಯಾಯಯುತ ಬೆಲೆ ಪಡೆದುಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗುತ್ತಿರುವುದು ದುರದೃಷ್ಟಕರ ಸಂಗತಿ. ಪ್ರತಿ ವರ್ಷವೂ ಕಬ್ಬು ನುರಿಸುವ ಹಂಗಾಮು ಆರಂಭಕ್ಕೂ ಮುನ್ನ ನ್ಯಾಯಯುತ ಬೆಲೆಗಾಗಿ ರೈತರು ಕಾರ್ಖಾನೆಗಳ ಆಡಳಿತ ಮಂಡಳಿಯವರ ಜತೆ ಸಂಘರ್ಷ ನಡೆಸಿ, ಬೀದಿಗಿಳಿದು ಹೋರಾಟ ನಡೆಸುವ ಪರಿಸ್ಥಿತಿ ಹಾಗೆ ಮುಂದುವರಿದಿದೆ.

ಒಟ್ಟಾಭಿಪ್ರಾಯ ಮೂಡುತ್ತಿಲ್ಲ:

ರೈತರು ಹಾಗೂ ಕಾರ್ಖಾನೆ ಆಡಳಿತ ಮಂಡಳಿಯವರ ನಡುವೆ ಸೌಹಾರ್ದ ವಾತಾವರಣದಲ್ಲಿ ನ್ಯಾಯಯುತ ಬೆಲೆ ನಿಗದಿಗಾಗಿ ಜಿಲ್ಲಾಡಳಿತ ಹಲವು ಬಾರಿ ಸಭೆಗಳನ್ನು ನಡೆಸಿದೆ. ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ‌ ಸಚಿವರು ರೈತರೊಂದಿಗೆ ನಡುರಸ್ತೆಯಲ್ಲೆ ಕುಳಿತು ಮಾತುಕತೆ ನಡೆಸಿದ್ದಾರಾದರೂ ಇದುವರೆಗೂ ಒಟ್ಟಾಭಿಪ್ರಾಯಕ್ಕೆ ಬರಲಾಗುತ್ತಿಲ್ಲ.

ಇಷ್ಟು ಹೊತ್ತಿಗೆ ಬೆಲೆ ನಿಗದಿ ವಿಷಯಕ್ಕೆ ಪರಿಹಾರ ಕಂಡುಕೊಂಡು ಕಾರ್ಖಾನೆಗಳು ಕಬ್ಬು ನುರಿಸುವಿಕೆ ಆರಂಭಗೊಳ್ಳಬೇಕಿತ್ತು. ರೈತರ ಬೇಡಿಕೆಯಂತೆ ಕಾರ್ಖಾನೆ ಆಡಳಿತ ಮಂಡಳಿಯವರು ಪ್ರತಿ ಟನ್ ಕಬ್ಬಿಗೆ 3600 ರೂಪಾಯಿ ನೀಡಲು ಒಪ್ಪುತ್ತಿಲ್ಲ. ಪರಿಣಾಮವಾಗಿ ಹಠಮಾರಿ ಧೋರಣೆ ಮುಂದುವರಿದಿದೆ. ಉಭಯತರ ನಡುವಿನ ಬೆಲೆ ನಿಗದಿಗಾಗಿನ ಪಟ್ಟು ಸಡಿಲಾಗದ ಧೋರಣೆಯ ಮಧ್ಯೆ ಬೆಳೆದು ನಿಂತಿರುವ ಕಬ್ಬಿನ ಇಳುವರಿ ಕಡಿಮೆ ಆಗಿ, ರೈತರಿಗೆ ನಷ್ಟ ಉಂಟಾಗುವ ಸಾಧ್ಯತೆಗಳಿವೆ.

ಹೋರಾಟದ ಅನಿವಾರ್ಯತೆ ತಪ್ಪಬೇಕಿದೆ:

ಒಂದೊಮ್ಮೆ ಕಾರ್ಖಾನೆ ಆಡಳಿತ ಮಂಡಳಿಯವರು ರೈತರ ಬೇಡಿಕೆಯ ಬಗೆಗೆ ಅಸಡ್ಡೆ ಮುಂದುವರಿಸಿದಲ್ಲಿ, ಅವರೆಲ್ಲ ಬೀದಿಗಿಳಿದು ಹೋರಾಟಕ್ಕೆ ಮುಂದಾಗುವುದನ್ನು ಜಿಲ್ಲಾಡಳಿತಕ್ಕೆ ತಪ್ಪಿಸುವುದು ಕಷ್ಟವಾಗಿ ಪರಿಣಮಿಸಲಿದೆ. ಈ ಹಿಂದೆ ರೈತರು ಬೀದಿಗಿಳಿದು ಹೋರಾಟ ನಡೆಸಿದಾಗ ಎಷ್ಟೆಲ್ಲ ಕಾನೂನು – ಸುವವ್ಯಸ್ಥೆಗೆ ಸಮಸ್ಯೆ ಆಗಿತ್ತು ಎನ್ನುವುದು ಬಹುತೇಕರ ಗಮನಕ್ಕೆ ಇದೆ.

ರೈತರು ಬೀದಿಗಿಳಿದು ಹೋರಾಟ ನಡೆಸುವುದನ್ನು ತಡೆಯಲು ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಬೇಕಿದೆ. ನೀವೇ ಸೌಹಾರ್ದ ವಾತಾವರಣದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ ಎನ್ನುವ ಸಲಹೆ ಅಷ್ಟೊಂದು ಸಮಂಜಸ ಎನ್ನಿಸುತ್ತಿಲ್ಲ.

ಒಂದೆ ದರ‌ ನಿಗದಿ:

ಸದ್ಯ ಜಿಲ್ಲೆಯಲ್ಲಿನ ಒಂದೊಂದು ಕಾರ್ಖಾನೆ ಒಂದೊಂದು ರೀತಿ ದರ ನಿಗದಿ‌ ಮಾಡಿದ್ದು, ಅದನ್ನು ರೈತ ಮುಖಂಡರು ಒಪ್ಪುತ್ತಿಲ್ಲ. ಜಿಲ್ಲೆಯ ಎಲ್ಲ‌ ಕಾರ್ಖಾನೆಯವರು ಒಂದೆ ದರ ನಿಗದಿ ಪಡಿಸಬೇಕು. ಬಾಕಿ ಹಣ ಪಾವತಿಸಬೇಕು ಎನ್ನುವ ಬೇಡಿಕೆಗಳನ್ನೂ ಮುಂದಿಟ್ಟಿದ್ದಾರೆ. ಇವುಗಳಿಗೆ ಕೇವಲ ರೈತರು ಮತ್ತು ಕಾರ್ಖಾನೆ ಆಡಳಿತ ಮಂಡಳಿಯವರು ಸೇರಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದು.

ರೈತರು ಹಾಗೂ ಕಾರ್ಖಾನೆ ಆಡಳಿತ‌ ಮಂಡಳಿಯವರ ನಡುವೆ ಉತ್ತಮ ವಾತಾವರಣದಲ್ಲಿ ಸಮಸ್ಯೆಗೆ ಪರಿಹಾರ ಸಿಗುವಂತಾಗಲು ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಮಧ್ಯಸ್ಥಿಕೆ ಅನಿವಾರ್ಯ. ಕಾರ್ಖಾನೆಗಳು ಆದಷ್ಟು ಬೇಗ ಕಬ್ಬು ನುರಿಸುವಿಕೆ ಆರಂಭಿಸುವಂತಾಗಲು ಜಿಲ್ಲಾಡಳಿತವೆ ಮತ್ತೊಮ್ಮೆ ಉಭಯತರ ಸಭೆ ಕರೆದು ಸೂಕ್ತ ಪರಿಹಾರ ಮಾರ್ಗ ಕಲ್ಪಿಸಬೇಕಿದೆ.

ಹೋರಾಟ ಲಾಭಕ್ಕಿಂತ ನಷ್ಟ:

ಪರಸ್ಪರರ ಸಮಸ್ಯೆಗೆ ಪರಿಹಾರ ಕಲ್ಪಿಸುವ ವಿಷಯದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸ್ವಲ್ಪವೇ ವಿಳಂಬ ಮಾಡಿದರೂ ರೈತರು ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎನ್ನುವ ಮಾತನ್ನು ರೈತ ಮುಖಂಡರು ಹೇಳುತ್ತಿದ್ದಾರೆ.

ಕಬ್ಬಿಗೆ ನ್ಯಾಯಯುತ ಬೆಲೆಗೆ ಆಗ್ರಹಿಸಿ ಒಂದೊಮ್ಮೆ ರೈತರು ಹೋರಾಟಕ್ಕಿಳಿದಲ್ಲಿ ಕಾರ್ಖಾನೆಯವರಿಗೂ ಸಮಸ್ಯೆ ತಪ್ಪಿದ್ದಲ್ಲ. ಜತೆಗೆ ಕಾರ್ಖಾನೆ ಸೇರಬೇಕಾದ ಕಬ್ಬು ಕೂಡಾ ಜಮೀನುಗಳಲ್ಲೆ ಉಳಿದು, ಇಳುವರಿ ಕಡಿಮೆ ಆಗಲಿದೆ. ಹಾಗೆ ಕಬ್ಬು ಕಟಾವು ಮಾಡಲು ಬಂದ ಕಬ್ಬಿನ ಗ್ಯಾಂಗಿನವರು ಕೈಗೆ ಕೆಲಸವಿಲ್ಲದೆ ಕಾಲ ಕಳೆಯಬೇಕಾಗುತ್ತದೆ.

ಸುಸೂತ್ರ ಹಂಗಾಮು:

ನ್ಯಾಯಯುತ ಬೆಲೆಗಾಗಿನ ರೈತರ ಹೋರಾಟದಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಸಿಗುವಂತಾಗಲು ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ‌ ಸಚಿವರು ಕೂಡಲೇ ಪರಿಹಾರೋಪಾಯಗಳನ್ನು ಕಂಡು ಹಿಡಿಯುವ ಮೂಲಕ ಜಿಲ್ಲೆಯಲ್ಲಿ ಕಬ್ಬಿನ ಹಂಗಾಮು ಸುಸೂತ್ರವಾಗಿ ಆರಂಭಗೊಳ್ಳುವಂತೆ ನೋಡಿಕೊಳ್ಳಬೇಕಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top