ಬಾಗಲಕೋಟೆ: ಸಿಕ್ಕಿರುವ ಅಧಿಕಾರದ ಅವಕಾಶಗಳನ್ನು ಬಳಸಿಕೊಂಡು ಜನತೆಗೆ ಉತ್ತಮ ಆಡಳಿತ ನೀಡುವಂತೆ ಶಾಸಕ ಎಚ್.ವೈ. ಮೇಟಿ ಹೇಳಿದರು.
ನಗರದ ಬುಡಾ ಕಚೇರಿ ಆವರಣದಲ್ಲಿ ಶನಿವಾರ ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಡಳಿತ ಮಂಡಳಿಯವರ ಅಧಿಕಾರ ಸ್ವೀಕಾರ ಸಮಾರಂಭಲ್ಲಿ ಅವರು ಮಾತನಾಡಿದರು.
ನೂತನ ಆಡಳಿತ ಮಂಡಳಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದ ಶಾಸಕರು ಇದರ ವ್ಯಾಪ್ತಿಗೆ 16 ಹಳ್ಳಿಗಳು ಬರುತ್ತವೆ. ಬಿಟಿಡಿಎಗಿಂತ ದೊಡ್ಡದಾಗಿದೆ ಜನತೆಯ ನಿರೀಕ್ಷೆಗೆ ತಕ್ಕ ಕೆಲಸ ಮಾಡುವಂತೆ ರಜಾಕ್ ಬೆನ್ನೂರ ಮತ್ತು ಅವರ ನೇತೃತ್ವದ ಆಡಳಿತ ಮಂಡಳಿ ಸದಸ್ಯರಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತಮಾಡಿ,ಪಕ್ಷದ ಅಲ್ಪಸಂಖ್ಯಾತ ವರ್ಗದ ಕಾರ್ಯಕರ್ತರನ್ನು ಗುರುತಿಸಿ ಬುಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸಂತಸದ ಸಂಗತಿ. ಹುದ್ದೆಯ ಹೊಣೆ ಅರಿತು ಕೆಲಸ ಮಾಡುವಂತೆ ನೂತನ ಅಧ್ಯಕ್ಷ ಅಬ್ದುಲ್ ರಜಾಲ್ ಅವರಿಗೆ ಸಲಹೆ ಮಾಡಿದರು.
ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಸ್ಥಳ ಪರಿಶೀಲನೆ ನಡೆಸುವುದು ಮುಖ್ಯ. ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವಂತೆ ಕೆಲಸ ಮಾಡಿ. ಅಧಿಕಾರದಲ್ಲಿ ಎಷ್ಟು ದಿನ ಇರುತ್ತೇವೆ ಎನ್ನುವುದಕ್ಕಿಂತ, ಎಷ್ಟು ಕೆಲಸ ಮಾಡಲಾಗಿದೆ ಎನ್ನುವುದು ಮುಖ್ಯ ಎಂದರು.
ನಗರದ ಹಲವು ಸಮಸ್ಯೆಗಳಿಗೆ ಹಣಕಾಸಿನ ಅಗತ್ಯವಿರುತ್ತದೆ. ಸಮಸ್ಯೆ ನಿವಾರಣೆಗೆ ಸರ್ಕಾರದಿಂದ ಅಗತ್ಯ ಸಂಪನ್ಮೂಲ ಪಡೆದುಕೊಂಡು ಕೆಲಸ ಮಾಡುವಂತೆ ಅವರ ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಬಾಗಲಕೋಟೆ ಮುಳುಗಡೆ ನಗರವಾಗಿದ್ದು, ಇಲ್ಲಿ ಹತ್ತಾರು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕೆ ಹಿರಿಯರ ಸಲಹೆ, ಮಾರ್ಗದರ್ಶನ ಪಡೆದುಕೊಳ್ಳಲು ಸಲಹೆ ಮಾಡಿದರು.
ಬುಡಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅಬ್ದುಲ್ ರಜಾಕ್ ಬೆನ್ನೂರ ಮಾತನಾಡಿ, ತಮ್ಮನ್ನು ಬುಡಾ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಸಹಕರಿಸಿದ ಶಾಸಕ ಎಚ್.ವೈ.ಮೇಟಿ ಹಾಗೂ ಇತರ ಮುಖಂಡರಿಗೆ ಧನ್ಯವಾದ ಸಲ್ಲಿಸಿ, ಎಲ್ಲರ ಸಹಕಾರದೊಂದಿಗೆ ಕೆಲಸ ಮಾಡುವುದಾಗಿ ತಿಳಿಸಿದರು.
ಆರ್. ವಾಸನ್ನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿವು ನಂದಿಕೋಲಮಠ, ಅಶೋಕ ಲಾಗಲೋಟಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.




