ಬಾಗಲಕೋಟೆ: ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಬೇಕಾದವರಲ್ಲೇ ಅಸಡ್ಡೆ ಭಾವನೆ ಮೂಡಿದರೆ ಸರ್ಕಾರದ ಯೋಜನೆಗಳು ಜನತೆಗೆ ತಲುಪುವುದಾದರೂ ಹೇಗೆ ಎನ್ನುವ ಯಕ್ಷ ಪ್ರಶ್ನೆಗೆ ಉತ್ತರ ಇಲ್ಲವಾಗಿದೆ. ಕೆಲಸ ಮಾಡದ ಅಧಿಕಾರಿಗಳನ್ನು ಜನಪ್ರತಿನಿಧಿಗಳು ಎಷ್ಟೆ ತರಾಟೆಗೆ ತೆಗೆದುಕೊಂಡರೂ ನೀರಲ್ಲಿ ಹೋಮ ಮಾಡಿದ ಸ್ಥಿತಿ ಇದೆ.
ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರೂ ಆಗಿರುವ ಬೀಳಗಿ ಶಾಸಕ ಜೆ.ಟಿ. ಪಾಟೀಲ ಸಾರ್ವಜನಿಕ ಸಭೆ ಸಮಾರಂಭಗಳಲ್ಲಿಯೇ ಕೆಲಸ ಮಾಡದ ಅಧಿಕಾರಿಗಳನ್ನು ಹತ್ತು ಹಲವು ಬಾರಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅನೇಕ ಬಾರಿ ವಾಗ್ದಳಿ ನಡೆಸಿ ಕಾನೂನು ಕ್ರಮದ ಎಚ್ಚರಿಕೆ ಕೂಡ ನೀಡಿದ್ದಾರಾದರೂ ಪ್ರಯೋಜನವಿಲ್ಲ ಎನ್ನುವಂತಾಗಿದೆ.
ಬದಲಾಗದ ನೌಕರರು:
ಸಾರ್ವಜನಿಕರ ಕೆಲಸದಲ್ಲಿ ಅನಗತ್ಯ ವಿಳಂಬ, ಅಭಿವೃದ್ಧಿ ಕಾರ್ಯಗಳಲ್ಲಿ ಏರುಪೇರು, ನಿವೇಶನ ಹಂಚಿಕೆ ಹೀಗೆ ಹಲವು ವಿಷಯದಲ್ಲಿ ಬಹಿರಂಗವಾಗಿಯೇ ತಹಸೀಲ್ದಾರ್, ಪಿಡಿಒ, ತಲಾಟಿ ಅವರನ್ನು ತರಾಟೆಗೆ ತೆಗೆದುಕೊಂಡು ಬುದ್ದಿ ಹೇಳಿದ್ದಾರೆ. ಅಮಾನತು ಕ್ರಮದ ಬಗೆಗೆ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಕಾಣದಾಗಿದೆ. ಅವರು ಎಚ್ಚರಿಕೆ ಮಾತುಗಳನ್ನು ಹೇಳುವುದು, ಇವರು ಎಂದಿನಂತೆ ತಮ್ಮ ಕೆಲಸ ಮುಂದುವರಿಸುವುದು ಚಾಳಿ ಆಗಿ ಬಿಟ್ಟಿದೆ.
ಬುಧುವಾರವಷ್ಟೆ ಬೀಳಗಿ ಕ್ಷೇತ್ರ ವ್ಯಾಪ್ತಿಯ ಜಲಗೇರಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಹಕ್ಕುಪತ್ರ ವಿತರಣೆಯಲ್ಲಿ ಆಗಿರುವ ವ್ಯತ್ಯಾಸಗಳ ಕುರಿತು ತಹಸೀಲ್ದಾರ ಸೇರಿದಂತೆ ಪಿಡಿಒ, ತಲಾಟಿ ಅವgನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು “ಊರಾಗ ಡವಲಪಮೆಂಟ್ ಕೆಲಸಾನೂ ಮಾಡುದಿಲ್ಲ. ಅಭಿವೃದ್ಧಿ ಕೆಲಸಕ್ಕೆ ಕೈ ಹಚ್ಚಿಲ್ಲ. ಹಿಂಗಾದ್ರ ನೀವು ತೆಗೆದುಕೊಳ್ಳುವ ಪಗಾರ ಹೆಂಗರ ಜೀವಕ್ಕ ಸುಖ ಅನಸ್ತದ” ನಿಮಗ. ಹಕ್ಕು ಪತ್ರ ಹಂಚಿಕೆ ವಿಷಯದಲ್ಲಿ ಆಗಿರುವ ವ್ಯತ್ಯಾಸದ ಹಿನ್ನೆಲೆಯಲ್ಲಿ ಪಿಡಿಒ ಮತ್ತು ತಲಾಟಿ ವಿರುದ್ಧ ನೋಟಿಸ್ ಜಾರಿ ಮಾಡುವಂತೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಸುಧಾರಿಸಿದ ವ್ಯವಸ್ಥೆ:
ಇದೇ ರೀತಿ ಅನೇಕ ಸಭೆ, ಸಮಾರಂಭಗಳಲ್ಲಿ ಶಾಸಕ ಜೆ.ಟಿ. ಪಾಟೀಲ ಅವರು ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಆಗಾಗ್ಗೆ ಚಾಟಿ ಬೀಸುತ್ತಲೇ ಇರುತ್ತಾರೆ. ಆದರೆ ಅಧಿಕಾರಿಗಳು ಮಾತ್ರ ಏನೂ ಆಗಿಯೇ ಇಲ್ಲ ಎನ್ನುವಂತೆ ವರ್ತಿಸುತ್ತಾರೆ. ಪರಿಣಾಮವಾಗಿ ಇಂದಿಗೂ ಪಂಚಾಯಿತಿ ವ್ಯವಸ್ಥೆಯಲ್ಲಿ ಸುಧಾರಣೆ ಎನ್ನುವುದು ಗಗನ ಕುಸುಮವಾಗಿದೆ. ಸಾರ್ವಜನಿಕರು ಪಂಚಾಯಿತಿಗಳಿಗೆ ಅಲೆಯುವುದು ತಪ್ಪುತ್ತಿಲ್ಲ. ಸರ್ಕಾರದ ಯೋಜನೆಗಳ ಪರಿಣಾಮಕಾರಿ ಜಾರಿ ಆಗುತ್ತಿಲ್ಲ.
ಕೆಡಿಪಿ ಸಭೆಯಲ್ಲೂ ಅಷ್ಟೆ:
ಅಚ್ಚರಿಯ ಸಂಗತಿ ಎಂದರೆ ಶಾಸಕ ಜೆ.ಟಿ. ಪಾಟೀಲರ ಹಾಗೆ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಸಭೆಗಳು ನಡೆಯುತ್ತವೆ. ಅಲ್ಲಿಯೂ ಜೆ.ಟಿ. ಪಾಟೀಲರು ಸೇರಿದಂತೆ ಇತರ ಶಾಸಕರು ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿ ಕ್ರಮಕ್ಕೆ ಆಗ್ರಹಿಸುತ್ತಾರೆ. ಹೀಗೆ ಕ್ರಮಕ್ಕೆ ಒತ್ತಾಯ ಬಂದಾಗ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ನೋಟಿಸು ಕೊಡಿ ಎಂದು ಹೇಳುವ ಜತೆಗೆ ಇಂತಹ ಅಧಿಕಾರಿಗಳು ನಮ್ಮ ಜಿಲ್ಲೆಗೆ ಬೇಡ, ಇಂತಹ ಅಧಿಕಾರಿಗಳ ಸೇವೆ ಬೇಕಾಗಿಲ್ಲ ಎಂದು ವರ್ಗಾವಣೆಗೆ ಶಿಫಾರಸ್ಸು ಮಾಡುತ್ತಾರೆ. ಅಧಿಕಾರಿಗಳ ವರ್ಗಾವಣೆಯೂ ಆಗುತ್ತದೆ. ಮುಂದೆ ಒಂದೆರಡು ತಿಂಗಳಲ್ಲಿ ಜಿಲ್ಲೆಯಿಂದ ವರ್ಗಾವಣೆ ಆಗಿದ್ದ ಅಧಿಕಾರಿಗಳು ವಾಪಸ್ ಅದೇ ಹುದ್ದೆಯಲ್ಲಿ ವಿರಾಜಮಾನರಾಗಿತ್ತಾರೆ. ಇಂತಹ ಅನೇಕ ನಿದರ್ಶನಗಳು ಜಿಲ್ಲೆಯಲ್ಲಿವೆ.
ಜನಪ್ರತಿನಿಧಿಗಳ ಇಂತಹ ನಿರ್ಧಾರಗಳಿಂದಾಗಿ ಜಿಲ್ಲಾಡಳಿತ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಕಾಣದಾಗಿದೆ. ಜಿಲ್ಲಾ ಮಟ್ಟದಲ್ಲೇ ಇಂತಹ ವ್ಯವಸ್ಥೆ ಇರುವಾಗ ಗ್ರಾಮ ಪಂಚಾಯಿತಿ ಮಟ್ಟದ ಆಡಳಿತ ವ್ಯವಸ್ಥೆಯಲ್ಲಿ ಬದಲಾವಣೆ ಹೇಗೆ ಸಾಧ್ಯ ಎನ್ನುವುದು ಯಕ್ಷಪ್ರಶ್ನೆಯಾಗಿದೆ.
ಜನಪ್ರತಿನಿಧಿಗಳ ದ್ವಂಧ್ವ ನಿಲುವು:
ಜನಪ್ರತಿನಿಧಿಗಳ ದ್ವಂಧ್ವ ನಿಲುವಿನಿಂದಾಗಿ ಆಡಳಿತ ವ್ಯವಸ್ಥೆಯಲ್ಲಿ ಜಿಡ್ಡುಗಟ್ಟಿದ ವಾತಾವರಣ ನಿರ್ಮಾಣವಾಗಿದೆ. ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳು ತಲುಪಬೇಕಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ ಎಂದು ಸಾರ್ವಜನಿಕರ ಅಭಿಪ್ರಾಯ ಪಡುತ್ತಿದ್ದಾರೆ.
ಕೆಲಸ ಮಾಡದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಗಳು ಆದಾಗ ಮಾತ್ರ ಅಲ್ಪಸ್ವಲ್ಪ ಬದಲಾವಣೆ ಸಾಧ್ಯವಾಗಲಿದೆ. ಬರೀ ಎಚ್ಚರಿಕೆ ಮಾತುಗಳಿಂದ ಪ್ರಯೋಜನವಿಲ್ಲ ಎನ್ನುವ ವಾತಾವರಣ ಬದಲಾಗಬೇಕಿದೆ. ಈ ವಿಷಯದಲ್ಲಿ ಜಿಲ್ಲೆಯ ಜಪ್ರತಿನಿಧಿಗಳು ಆಡಳಿತ ವ್ಯವಸ್ಥೆಯಲ್ಲಿ ಬಿಗಿ ನಿಲುವು ತಾಳುವ ಇಚ್ಛಾಶಕ್ತಿ ಮೆರೆಯಬೇಕಿದೆ.
ಇಚ್ಛಾಶಕ್ತಿ ಕೊರತೆ:
ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾತ್ರ ಇಂಥಹ ಅವ್ಯವಸ್ಥೆ ಇಲ್ಲ. ಜಿಲ್ಲಾ ಮಟ್ಟದಲ್ಲೂ ಇಂತಹುದೇ ಸ್ಥಿತಿ ಇದೆ. ಹಾಗಾಗಿಯೇ ಇಂದಿಗೂ ಅಕ್ರಮ ಮರಳು ಸಾಗಣೆ ಪ್ರಕರಣಗಳು ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಲೇ ಇವೆ. ಸೂಕ್ತ ಕಡಿವಾಣವಿಲ್ಲವಾಗಿ ನದಿ, ಕೆರೆ, ಪಟ್ಟಾ ಭೂಮಿಗಳಲ್ಲಿ ಇಂದಿಗೂ ಅಕ್ರಮ ಮರಳು ದಂಧೆ ನಡೆಯುತ್ತಲೇ ಇದೆ.
ಒಟ್ಟಾರೆ ಆಡಳಿತ ವ್ಯವಸ್ಥೆಯಲ್ಲಿನ ಸುಧಾರಣೆಗೆ ಯಾರೋ ಒಬ್ಬಿಬ್ಬರು ಜನಪ್ರತಿಧಿಗಳು ಪ್ರಯತ್ನ ಪಡುವಂತಾಗಬಾರದು. ಜಿಲ್ಲೆಯ ಇಡೀ ಆಡಳಿತ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆ ಬರುವಂತಾಗಲು ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಇಚ್ಛಾಶಕ್ತಿ ಮರೆದಾಗ ಮಾತ್ರ ಆಡಳಿತ ಸುಧಾರಣೆ ಸಾಧ್ಯವಾಗಲಿದೆ ಎನ್ನುವುದು ಜನತೆಯ ಅಭಿಮತವಾಗಿದೆ.
- ವಿಠ್ಠಲ ಆರ್. ಬಲಕುಂದಿ




