ಬಾದಾಮಿ ಕಾಂಗ್ರೆಸ್ ಪಾಳೆಯದಲ್ಲಿ ಹಳೆಯದೆಲ್ಲ ಕೊಚ್ಚಿಕೊಂಡು ಹೋಗಿ ಹೋಸ ನೀರು ಹರಿಯುತ್ತಿದೆ. ಮಾಜಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಅವರ ಬಹುತೇಕ ಬೆಂಬಲಿಗರು ಕಾಂಗ್ರೆಸ್ಸಿನಲ್ಲೆ ಇದ್ದು ಇಲ್ಲದಂತಾಗಿದ್ದಾರೆ. ಬಿ.ಬಿ.ಚಿಮ್ಮನಕಟ್ಟಿ ಅವರ ಪುತ್ರ, ಶಾಸಕ ಭೀಮಸೇನ ಚಿಮ್ಮನಕಟ್ಟಿ ತಮ್ಮದೆ ಆದ ಹೊಸ ಪಡೆ ಕಟ್ಟಿಕೊಂಡಿದ್ದಾರೆ.
2018 ರಲ್ಲಿ ನಡೆದ ವಿಧಾನಸಭೆ ಚುನಾವಣೆ ಬಾದಾಮಿ ಕ್ಷೇತ್ರದ ಪಾಲಿಗೆ ಅತ್ಯಂತ ನಿರ್ಣಾಯಕವಾಗಿತ್ತು. ಅಂದು ಶಾಸಕರಾಗಿದ್ದ ಬಿ.ಬಿ.ಚಿಮ್ಮನಕಟ್ಟಿ ಅವರು ಅಂದೂ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟು, ಅವರು ಗೆಲ್ಲುವಂತೆ ನೋಡಿಕೊಂಡಿದ್ದರು.
ಕುದ್ದು ಹೋದ ಅಪ್ಪ ನಿಷ್ಠರು :
ಸಿದ್ದರಾಮಯ್ಯ ಬಾದಾಮಿ ಶಾಸಕರಾದ ಬಳಿಕ ಆರಂಭದಲ್ಲಿ ಎಲ್ಲವೂ ಸರಿಯಾಗಿತ್ತು. ದಿನಗಳೆದಂತೆ ಸಿದ್ದರಾಮಯ್ಯ ಅವರ ಬೆಂಬಲಿಗರ ಪಡೆ ಬಲಗೊಳ್ಳತೊಡಗಿತು. ಸಣ್ಣಗೆ ಬಿ.ಬಿ.ಚಿಮ್ಮನಕಟ್ಟಿ ಅವರ ಕೋಟೆಯಲ್ಲಿ ಬಿರುಕು ಕಾಣಿಸಿಕೊಳ್ಳತೊಡಗಿತು. ಕ್ಷೇತ್ರದಾದ್ಯಂತ ಸಿದ್ದರಾಮಯ್ಯ ಬೆಂಬಲಿಗರ ಪಾರುಪತ್ಯವೇ ಜೋರಾಯಿತು. ಅದ್ಯಾವ ಹಂತ ತಲುಪಿದತೆಂದರೆ, ಸಿದ್ದರಾಮಯ್ಯ ಬೆಂಬಲಿಗರು ಚಿಮ್ಮನಕಟ್ಟಿ ಅವರನ್ನು ಕಡೆಗಣಿಸಲಾರಂಭಿಸಿದರು.
ಸಿದ್ದರಾಮಯ್ಯ ಬೆಂಬಲಿಗರ ನಡೆಯಿಂದ ಬೇಸತ್ತ ಚಿಮ್ಮನಕಟ್ಟಿ ಒಳೊಳಗೆ ಕುದ್ದು ಹೋದರು.
ಸಿದ್ದುಗೆ ಸೆಡ್ಡು:
ಸಿದ್ದರಾಮಯ್ಯ ಬೆಂಬಲಿಗರ ಅಟ್ಟಹಾಸದಿಂದ ಕ್ರೋಧಗೊಂಡಿದ್ದ ಚಿಮ್ಮನಕಟ್ಟಿ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾಗಲೇ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆದಾಗ ಆ ವೇದಿಕೆಯಲ್ಲಿ ಪ್ರಥಮ ಬಾರಿಗೆ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರ ನಡೆಗೆ ವಿರೋಧ ವ್ಯಕ್ತ ಪಡಿಸಿ ಪಕ್ಷದಲ್ಲಷ್ಟೆ ಅಲ್ಲ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದರು.
ಆಗಲೇ ಸಿದ್ದರಾಮಯ್ಯ ಅವರು 2023 ರ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧಿಸುವುದು ಅನುಮಾನ ಎನ್ನುವ ಮೊಳಕೆಯೊಡೆದಿದ್ದು. ಮುಂದೆ ಅವಿಭಜಿತ ವಿಜಯಪುರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ಮೇಲ್ಮನೆಗೆ ನಡೆದ ಚುನಾವಣೆ ವೇಳೆ ಬಾದಾಮಿಯಲ್ಲಿ ನಡೆದ ಪ್ರಚಾರ ಸಭೆಯಲ್ಲೇ ನಮ್ಮ ಕ್ಷೇತ್ರಬಿಟ್ಟಿ ಕೊಡಿ, ನಿಮ್ಮ ಕ್ಷೇತ್ರಕ್ಕೆ ನೀವು ಹೋಗಿ ಎಂದು ಮಾಜಿ ಸಚಿವ ಚಿಮ್ಮನಕಟ್ಟಿ ಗುಡುಗಿದರು.
2023 ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಬಾದಾಮಿ ಕ್ಷೇತ್ರ ಬಿಟ್ಟು ತಮ್ಮ ಕ್ಷೇತ್ರ ವರುಣಾದಿಂದ ಸ್ಪರ್ಧಿಸಿದರು. ಆಗ ಚಿಮ್ಮನಕಟ್ಟಿ ಪುತ್ರ ಭೀಮಸೇನ ಸ್ಪರ್ಧಿಸಿದರು. ಸಿದ್ದರಾಮಯ್ಯ ಬೆಂಬಲಿಗರು ಮೊದ ಮೊದಲ ಅವರ ಸ್ಪರ್ಧೆಗೆ ವಿರೋಧ ವ್ಯಕ್ತ ಪಡಿಸಿದರಾದರೂ ಸಿದ್ದರಾಮಯ್ಯ ಅವರ ಮಾತಿಗೆ ಕಟ್ಟುಬಿದ್ದು ಭೀಮಸೇನರ ಪರ ಕೆಲಸ ಮಾಡಿದರು. ಅಲ್ಲಿಂದ ಎಲ್ಲವೂ ಸರಿ ಹೋಗಲಿದೆ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗುವರು ಎನ್ನುವ ನಿರೀಕ್ಷೆಯನ್ನು ಭೀಮಸೇನ ಚಿಮ್ಮನಕಟ್ಟಿ ಹುಸಿಗೊಳಿಸಿದರು.
ಭೀಮಸೇನರ ಹೊಸ ಪಡೆ:
ತಮ್ಮ ತಂದೆಯ ಬಹುತೇಕ ನಿಷ್ಠ ಬೆಂಬಲಿಗರು ಹಾಗೂ ಸಿದ್ದರಾಮಯ್ಯ ಬೆಂಬಲಿಗರನ್ನು ದೂರವೇ ಇಡತೊಡಗಿದರು. ಇಂದಿಗೂ ಕ್ಷೇತ್ರದಲ್ಲಿ ತಮ್ಮ ತಂದೆಯವರಿಗೆ ನಿಷ್ಟರಿದ್ದ ಹಾಗೂ ಸಿದ್ದರಾಮಯ್ಯ ಬೆಂಬಲಿಗರಿಂದ ಅಂತರ ಕಾಯ್ದುಕೊಂಡು, ತಮ್ಮದೆ ಆದ ಹೊಸ ಪಡೆಯನ್ನು ಕಟ್ಟಿಕೊಂಡಿದ್ದಾರೆ. ಅವರ ಹೊಸ ಪಡೆ ಎಷ್ಟು ಸಮರ್ಥವಾಗಿದೆ ಎನ್ನುವುದರ ಪ್ರತಿಫಲನ ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ ವೇಳೆ ಅನಾವರಣಗೊಳ್ಳಲಿದೆ.
- ವಿಠ್ಠಲ ಆರ್. ಬಲಕುಂದಿ




