ರಾಷ್ಟ್ರೀಯ ತೋಟಗಾರಿಕೆ ಮೇಳಕ್ಕೆ ತೋವಿವಿ ಸಜ್ಜು

ಬಾಗಲಕೋಟೆ: ರಾಷ್ಟ್ರ ಮಟ್ಟದ ಮೂರು ದಿನಗಳ ತೋಟಗಾರಿಕೆ ಮೇಳ-2025 ಡಿಸೆಂಬರ್ 21 ರಿಂದ ಆರಂಭಗೊಳ್ಳಲಿದೆ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ ಹೇಳಿದರು.

ನಗರದ ತೋವಿವಿ ಸಭಾ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಮೂರು ದಿನಗಳ ಕಾಲ ನಡೆಯುವ ಮೇಳಕ್ಕೆ ನಾನಾ ಭಾಗಗಳಿಂದ 5 ಲಕ್ಷಕ್ಕೂ ಅಧಿಕ ರೈತರು, ಉದ್ಯಮಿಗಳು, ಪಾಲುದಾರರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ. ಇದು ಸುಧಾರಿತ ತಂತ್ರಜ್ಞಾನಗಳು, ಮೌಲ್ಯವರ್ಧನೆ ಮತ್ತು ರಫ್ತು ಆಧಾರಿತ ಅವಕಾಶಗಳನ್ನು ಪ್ರದರ್ಶಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಮೇಳದ ಕಾರ್ಯಕ್ರಮದಲ್ಲಿ ಕರ್ನಾಟಕದ 24 ಜಿಲ್ಲೆಗಳ ಅತ್ಯುತ್ತಮ ರೈತರು ಮತ್ತು ರೈತ ಮಹಿಳೆಯರನ್ನು ‘ಅತ್ಯುತ್ತಮ ತೋಟಗಾರಿಕೆ ಫಲಶ್ರೇಷ್ಠರು’ ಎಂಬ ಪ್ರಶಸ್ತಿಯೊಂದಿಗೆ ಗೌರವಿಸಲಾಗುತ್ತದೆ ಎಂದು ತಿಳಿಸಿದರು.

ತೋಟಗಾರಿಕೆಯಲ್ಲಿ ವ್ಯಾಪಾರವನ್ನು ಉತ್ತೇಜಿಸಲು ರಫ್ತುದಾರರ ಮತ್ತು ಮಾರಾಟಗಾರ ನಡುವಿನ ಮಾರುಕಟ್ಟೆ ಸಂಪರ್ಕವನ್ನು ಬಲಪಡಿಸಲು ವಿನ್ಯಾಸಗೊಳಿಸಲಾದ ನಿಖರ ತೋಟಗಾರಿಕೆ ತಂತ್ರಜ್ಞಾನಗಳು, ಮೌಲ್ಯವರ್ಧನೆ, ರಫ್ತು ಸಮಾವೇಶ ಮತ್ತು ಖರೀದಿದಾರ-ಮಾರಾಟಗಾರರ ಸಭೆ ಈ ಮೇಳದ ಪ್ರಮುಖ ಅಂಶಗಳಾಗಿವೆ. ಇದು ಹೆಚ್ಚಿನ ರಫ್ತು ಜಾಗೃತಿಯನ್ನು ಉತ್ತೇಜಿಸುತ್ತದೆ. ಹೊಸ ಮಾರುಕಟ್ಟೆ ಅವಕಾಶಗಳನ್ನು ತೆರೆಯುತ್ತದೆ ಎಂದರು.

ನಾನಾ ಹಬ್ ಗಳ ರಚನೆ:

ಪ್ರಮುಖ ತೋಟಗಾರಿಕೆ ಬೆಳೆಗಳ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳ ಬಗ್ಗೆ ಮಧುವನ, ಭೌಗೋಳಿಕ ಸೂಚಕ ಬೆಳೆಗಳು, ಸಿರಿಫಲ ಹಣ್ಣು, ದಾಳಿಂಬೆ, ದ್ರಾಕ್ಷಿ. ತೋಟಪಟ್ಟಿ ಔಷಧಿ, ಸಾಂಬಾರು ಬೆಳೆ, ಯಂತ್ರೋಪಕರಣಗಳು, ಡ್ರೋನ್, ಹಾರ್ಟಿಕಲ್ಡರ್, ನವ್ಯ ತೋಟಗಾರಿಕೆ ಬೆಳೆಗಳು, ಬಯೋಚಾರ್ ಪ್ರದರ್ಶನ, ಹೈಡೋಪೋನಿಕ್ಸ್ ಮತ್ತು ಮಣ್ಣು ರಹಿತ ಕೃಷಿ, ಮೈಕ್ರೋ ಗ್ರೀನ್ಸ್ ಹಬ್‌ಗಳನ್ನು ರಚಿಸಲಾಗಿದೆ ಎಂದು ಅವರು ವಿವರಿಸಿದರು.

ತರಕಾರಿ ಬೆಳೆಗಳ, ಹೂವಿನ, ಹಣ್ಣಿನ ವಿವಿಧ ತಳಿಗಳ, ಕೊಲ್ಲೋತ್ತರ ತೋಟಗಾರಿಕಾ ಉತ್ಪನ್ನಗಳ ಪ್ರದರ್ಶನ, ಕ್ಷೇತ್ರ ಭೇಟಿ, ಪ್ರಾತ್ಯಕ್ಷಿಕೆ, ಭಿತ್ತಿಚಿತ್ರ, ವಿಡಿಯೋ ಮುಂತಾದವುಗಳ ಮೂಲಕ ತಂತ್ರಜ್ಞಾನದ ಮಾಹಿತಿ ನೀಡಲಾಗುತ್ತದೆ. ಸಮಗ್ರ ಕೃಷಿ ಪದ್ಧತಿಯ ಅಡಿಯಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಸಮಗ್ರ ಮಾಹಿತಿಯು ದೊರೆಯುತ್ತದೆ. ವಿಜ್ಞಾನಿಗಳು, ಪ್ರಗತಿಪರ ರೈತ, ರೈತ ಉದ್ಯಮಿಗಳು ಮುಂತಾದವರನ್ನು ನೇರವಾಗಿ ಭೇಟಿಯಾಗಿ ಅವರ ಯಶೋಗಾಥೆಗಳಿಂದ ಪ್ರೇರಣೆ ಪಡೆಯುವದಲ್ಲದೇ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ವಿವರಿಸಿದರು.

ಪ್ರಗತಿಪರ ರೈತರ ಸಂವಾದ:

ತೋಟಗಾರಿಕಾ ಮೇಳದ ಸಂದರ್ಭದಲ್ಲಿ ಪ್ರತಿ ದಿನವೂ ಸಾಧಕ ರೈತರು ತಮ್ಮ ಅನುಭವಗಳನ್ನು ಇತರೇ ರೈತರ ಹೊಂದಿಗೆ ಹಂಚಿಕೊಳ್ಳಲಿದ್ದಾರೆ. ಜೊತೆಗೆ ಅನುಭವಿಗಳು, ಹಿರಿಯ ವಿಜ್ಞಾನಿಗಳು ಮತ್ತು ಪ್ರಗತಿಪರ ರೈತರೊಂದಿಗೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ. ವಿಶ್ವವಿದ್ಯಾಲಯದ ವ್ಯಾಪ್ತಿಯ 24 ಜಿಲ್ಲೆಗಳಿಂದ ಗುರುತಿಸಲ್ಪಟ್ಟ ಫಲಶ್ರೇಷ್ಠರನ್ನು ತೋಟಗಾರಿಕೆ ಮೇಳದಲ್ಲಿ ಪ್ರತಿ ದಿನ 8 ಜನರಂತೆ ಮೂರು ದಿನಗಳಲ್ಲಿ ಸನ್ಮಾನಿಸಲಾಗುವುದು. ಮೇಳದಲ್ಲಿ 300ಕ್ಕೂ ಹೆಚ್ಚು ಸರ್ಕಾರಿ, ಖಾಸಗಿ ಸಂಘ ಸಂಸ್ಥೆ ಮಳಿಗೆಗಳು ಮತ್ತು ಯಾಂತ್ರೀಕರಣ ಮಳಿಗೆಗಳನ್ನು ಸಬ್ಬಗೊಳಿಸಲಾಗಿದೆ.

ಪ್ರಸ್ತುತ ತೋಟಗಾರಿಕೆ ಮೇಳಗಳಲ್ಲಿ ಆದಾಯ ವೃದ್ಧಿಗಾಗಿ ನಿಖರ ಬೇಸಾಯದ ಬಗ್ಗೆ ರೈತರಿಗೆ ಮಾಹಿತಿಯನ್ನು ಕೊಡುವದರೊಂದಿಗೆ ತೋಟಗಾರಿಕೆ ಬೆಳೆಗಳಲ್ಲಿ ಆಗಿಂದ್ದಾಗೆ ಆಗುವ ಬೆಲೆಗಳಲ್ಲಿನ ಎರುಪೇರಿಗೆ ತೋಟಗಾರಿಕೆಯಲ್ಲಿ ಸಂಸ್ಕರಣೆಯ ಮಹತ್ವವನ್ನು ತಿಳಿಸಿಕೊಡುವ ಹಾಗೂ ತೋಟಗಾರಿಕೆ ಬೆಳೆಗಳ ರಫ್ತು ಮಾಡಲು ಬೇಕಾಗುವ ಪೂರಕ ಮಾಹಿತಿಯನ್ನು ಸಹ ನೀಡುವ ವೇದಿಕೆಯಾಗಲಿದೆ. ಇಂತಹ ಮೇಳಗಳು ವರ್ಷದಿಂದ ವರ್ಷಕ್ಕೆ ತೋಟಗಾರಿಕೆ ಕ್ಷೇತ್ರದ ಗಣನೀಯ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದು ಹೇಳಿದರು.

ಮೇಳದ ವಿಶೇಷ ಕ್ಷೇತ್ರ ಪ್ರಾತ್ಯಕ್ಷಿಕೆಗಳು:

ವಿವಿಧ ತರಕಾರಿ ಬೆಳೆಗಳಲ್ಲಿ ಒಟ್ಟು 32 ಬೆಳೆಗಳ 52 ತಳಿಗಳನ್ನು ಒಳಗೊಂಡ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ. ಅಲ್ಲದೆ, ಕೈತೋಟ ಹಾಗೂ ಪೌಷ್ಠಿಕ ತೋಟದ ಪ್ರಾತ್ಯಕ್ಷಿಕೆ, ವಿವಿಧ ಹೂವಿನ ಒಟ್ಟು 32 ಬೆಳೆಗಳ 82 ತಳಿಗಳನ್ನು ಒಳಗೊಂಡ ಪ್ರಾತ್ಯಕ್ಷಿಕೆಗಳು ಸಿದ್ದಗೊಂಡಿವೆ. ತೋಟಪಟ್ಟಿ, ಮಸಾಲೆ, ಔಷಧಿ ಮತ್ತು ಸುಗಂಧಿ ದ್ರವ್ಯ ಬೆಳೆಗಳಿಗೆ ಸಂಬಂದಿಸಿದಂತೆ ಒಟ್ಟು 50 ಬೆಳೆಗಳನ್ನೊಳಗೊಂಡ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ವಿಚಾರಗೋಷ್ಠಿಗಳ ಆಯೋಜನೆ:

ವಿಶ್ವವಿದ್ಯಾಲಯವು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಿಖರ ತೋಟಗಾರಿಕೆ ಮೌಲ್ಯವರ್ಧನೆ ಹಾಗೂ ರಫ್ತು ಅವಕಾಶಗಳಿಗಾಗಿ ವಿವಿಧ ವಿಷಯಾಧಾರಿತ ಸಮುಚ್ಚಯಗಳನ್ನು ಏರ್ಪಡಿಸಿದೆ. ಈ ಕೆಳಗಿನ ಸಮುಚ್ಚಯಗಳಲ್ಲಿ ವಿವಿಧ ಬೆಳೆ ಹಾಗೂ ತಂತ್ರಜ್ಞಾನಗಳ ಕುರಿತು ಸಮಗ್ರ ಮಾಹಿತಿ ನೀಡಲು ನುರಿತ ವಿಜ್ಞಾನಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗಿದೆ.

ವಿಶೇಷ ಮಾರಾಟ ಮಳಿಗೆ:

ಸಾರ್ವಜನಿಕ ಹಾಗೂ ರೈತರ ಅನುಕೂಲಕ್ಕಾಗಿ ಒಂದೇ ಸೂರಿನಡಿ ವಿಶ್ವವಿದ್ಯಾಲಯದಲ್ಲಿ ಉತ್ಪಾದಿಸಿದ ವಿವಿಧ ಸಸಿಗಳು, ಬೀಜಗಳು, ಜೈವಿಕ ಉತ್ಪನ್ನಗಳು, ಮೌಲ್ಯವರ್ಧಿತ ಉತ್ಪನ್ನಗಳು, ಪರಿಕರಗಳು ಮತ್ತು ಪ್ರಕಟಣೆಗಳನ್ನು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಆ್ಯಪ್ ಬಿಡುಗಡೆ:

ರೈತರಿಗೆ ಸುಲಭವಾಗಿ ತೋಟಗಾರಿಕೆ ಬೆಳೆಗಳ ಉತ್ಪಾದನೆಯ ಬಗ್ಗೆ ಮಾಹಿತಿ ಸಿಗುವ ಸಲುವಾಗಿ ‘ಹಾರ್ಟಿ ಗೈಡ್’ ಎಂಬ ಮೊಬೈಲ್ ಆ್ಯಪ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು ಮೇಳದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.

Scroll to Top