ಹಮ್ಮು, ಬಿಮ್ಮುಗಳಿಲ್ಲದ ಮುತ್ಸದ್ಧಿ ನಾಯಕ ಮೇಟಿ

ಅಪ್ಪಟ ಗ್ರಾಮೀಣ ಸೊಗಡಿನ ಶಾಸಕ ಎಚ್. ವೈ.‌ ಮೇಟಿ ಅವರು ಯಾವುದೇ ಹಮ್ಮು-ಬಿಮ್ಮುಗಳಿಲ್ಲದ ಅತ್ಯಂತ ಸರಳ ವ್ಯಕ್ತಿ. ಅವರ ಸರಳತೆಯೇ ಅವರನ್ನು ಪಂಚಾಯ್ತಿ ರಾಜಕಾರಣದಿಂದ ಪಾರ್ಲಿಮೆಂಟ್ ಸದಸ್ಯತ್ವದವರೆಗೆ ತೆಗೆದುಕೊಂಡು ಹೋಯಿತು.

ಮೇಟಿ ಅವರು ರಾಜಕಾರಣದಲ್ಲಿ‌ ಬೆಳೆದು ಬಂದ ಬಗೆ ರೋಮಾಂಚನಕಾರಿ ಆಗಿದೆ. ಗುಳೇದಗುಡ್ಡ ಖಣ ಖ್ಯಾತಿಯ ಗುಳೇದಗುಡ್ಡ ವಿಧಾನ ಸಭೆ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದ ಅವರು ಎಚ್.ಡಿ.‌ ದೇವೇಗೌಡ ಅವರ ಸಂಪುಟದಲ್ಲಿ ಅರಣ್ಯ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. ಬಳಿಕ ಬಾಗಲಕೋಟೆ ಲೋಕಸಭೆ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಗೊಂಡರು. ಅದಾದ‌ ಮೇಲೆ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಸೋಲಿನ ರುಚಿ ಕಂಡರಾದರೂ 2004ರ ವಿಧಾನಸಭೆ ಚುನಾವಣೆಯಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದರು.

ಬಿಜೆಪಿ ಕೋಟೆಗೆ ನುಗ್ಗಿದ ಮೇಟಿ:

2004 ರಿಂದ 2008 ರ ವರೆಗೆ ರಾಜ್ಯ ರಾಜಕಾರಣದಲ್ಲಿ ನಡೆದ ಹಲವು ಏಳು ಬೀಳುಗಳ ಮಧ್ಯೆ ಸಿದ್ದರಾಮಯ್ಯ ಅವರಿಗೆ ನಿಷ್ಠರಾಗಿ ನಡೆದುಕೊಂಡು ಅವರೊಂದಿಗೆ ಕಾಂಗ್ರೆಸ್ ಸೇರ್ಪಡೆ ಆದರು. ಇದೇ ವೇಳೆ ವಿಧಾನಸಭೆ ಕ್ಷೇತ್ರಗಳ ಪುನರ್ ವಿಂಗಡಣೆ ನಡೆದು, ಗುಳೇಗುಡ್ಡ ಕ್ಷೇತ್ರ‌ ಮಾಯವಾಗಿ ತೇರದಾಳ ನೂತನ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದಾಗ ಮೇಟಿ ಅವರು ಬಾದಾಮಿಯಿಂದ ಸ್ಪರ್ಧಿಸುತ್ತಾರೋ ಇಲ್ಲವೆ ಹುನಗುಂದದಿಂದ ಸ್ಪರ್ಧಿಸುವರೋ ಎನ್ನುವ ಬಹು ಕುತೂಹಲಕರ ಚರ್ಚೆ ನಡೆದಿತ್ತು. ಬಾಗಲಕೋಟೆ ಕ್ಷೇತ್ರದ ಬಗೆಗೆ ಮಾತುಗಳೇ ಇರಲಿಲ್ಲ.

ಬಾಗಲಕೋಟೆ ವಿಷಯ ಮುನ್ನಲೆಗೆ ಬಾರದೆ ಇರುವುದಕ್ಕೆ ಹತ್ತು ಹಲವು ಕಾರಣಗಳಿದ್ದವು. ಬಾಗಲಕೋಟೆ ಕೇಸರಿ ಪಡೆಯ ಭದ್ರಕೋಟೆ. ಕೇಸರಿ ಕೋಟೆ ಬೇಧಿಸಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ಬಿಜೆಪಿ ತನ್ನ ಪ್ರಭಾವ ಹೊಂದಿತ್ತು. 1997, 1999 ಮತ್ತು 2004 ರಲ್ಲಿ ಬಿಜೆಪಿ ಕಮಲ ಅರಳಿತ್ತು. ಜತೆಗೆ ಬಿಜೆಪಿ ಹವಾ ಕೂಡ ಇತರ ಪಕ್ಷಗಳ ವರ್ಚಸ್ಸನ್ನು ಮಂಕಾಗಿಸಿತ್ತು. 2008 ರ ಚುನಾವಣೆಯಲ್ಲಿ ಕೊನೆಗಳಿಗೆಯಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಿದಾಗ ಸೋಲು ಕಂಡರಾದರೂ ಯಾರೂ ನಿರೀಕ್ಷಿಸದ ಪ್ರಮಾಣದಲ್ಲಿ ಕಾಂಗ್ರೆಸ್ಸಿಗೆ‌ ಮತಗಳನ್ನು ತಂದುಕೊಟ್ಟಾಗ ಕಾಂಗ್ರೆಸ್ ಪಾಳೆಯಲ್ಲಿ ಹೊಸ ಹುಮ್ಮಸ್ಸು ಮೂಡಲು ಕಾರಣರಾದರು.

ಹೊಸ ಇತಿಹಾಸ ಸೃಷ್ಟಿ:

2008 ರ ಚುನಾವಣೆಯಲ್ಲಿ ಸೋಲು‌ ಕಂಡರೂ ಕ್ಷೇತ್ರದಲ್ಲಿ ಸದಾ ಚಟುವಟಿಕೆಯಿಂದ‌ ಇದ್ದು ಪಕ್ಷ‌ ಸಂಘಟಿಸಿದರು. ಐದು ವರ್ಷಗಳ ಅವರ ಕಾರ್ಯಕ್ಕೆ 2013 ರ ವಿಧಾನ ಸಭೆ ಚುನಾವಣೆಯಲ್ಲಿ ಫಲ ಸಿಕ್ಕಿತು. ಬಿಜೆಪಿ ವಿರುದ್ಧ ದಿಗ್ವಿಜಯ ಸಾಧಿಸಿ ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದರು. ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧ್ಯವೇ ಇಲ್ಲ ಎನ್ನುವ ವಾದಕ್ಕೆ ಇತಿಶ್ರೀ ಹಾಡಿ ಹೋಸ ಇತಿಹಾಸ ಸೃಷ್ಟಿಸಿದರು.

ಕೇಸರಿ ಕೋಟೆಯನ್ನು ಛಿದ್ರಗೊಳಿಸಿ ಕಾಂಗ್ರೆಸ್ ಬಾವುಟ ಹಾರಿಸಿದ ಮೇಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಅಬಕಾರಿ ಸಚಿವರೂ ಆದರು.

2018 ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯಲ್ಲಿ ಬಾಗಲಕೋಟೆ ಕ್ಷೇತ್ರ ಮತ್ತೆ ಬಿಜೆಪಿ ಪಾಲಾಯಿತು.

ಸೋಲಿನಿಂದ ಎದೆಗುಂದದ ಮೇಟಿ ಅವರು ಪಕ್ಷ ಸಂಘಟನೆಯನ್ನು‌ ನಿರಂತರವಾಗಿ ಉಳಿಸಿಕೊಂಡು, 2023 ರ ವಿಧಾನಸಭೆ ಚುನಾವಣೆಯಲ್ಲಿ ಕೇಸರಿ ಪಡೆಗೆ ಸೋಲುಣಿಸುವ ಮೂಲಕ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಅಸ್ತಿತ್ವ ಏನು ಎನ್ನುವುದನ್ನು‌ ಸಾಬೀತು ಪಡಿಸಿದರು.

ಬಿಟಿಡಿಎ ಅಧ್ಯಕ್ಷತೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟ‌ ಸೇರಲು ಅವಕಾಶ ಸಿಗದಿದ್ದರೂ ಬಾಗಲಕೊಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಬಾಗಲಕೋಟೆಗೆ ಸರ್ಕಾರಿ ವೈದ್ಯ‌ ಕಾಲೇಜು ಮಂಜೂರಾತಿಸುವಲ್ಲಿನ ಅವರ ಪ್ರಯತ್ನ ಶ್ಲಾಘನೀಯ.

ಐದು‌ಬಾರಿ ಶಾಸಕರಾಗಿ, ಒಂದು ಬಾರಿ‌ ಸಂಸದರಾಗಿ, ನಿಗಮ‌, ಮಂಡಳಿ ಅಧ್ಯಕ್ಷರಾಗಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಮೇಟಿ ಅವರು ಸಲ್ಲಿಸಿದ ಸೇವೆ ಅವಿಸ್ಮರಣೀಯವಾಗಿದೆ. ಜನಾನುರಾಗಿ ನಾಯಕರಾಗಿದ್ದ ಅವರು ರಾಜಕೀಯ ಚಾಣಕ್ಯ ಎಂದೇ ಹೆಸರಾಗಿದ್ದರು. ವಯೋಸಹಜ‌ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿ ಆಗದೇ ಇಹಲೋಕ ತ್ಯಜಿಸಿದ್ದಾರೆ. ಅವರ ಅಗಲಿಕೆಯಿಂದ ಬಾಗಲಕೊಟೆ ಜಿಲ್ಲೆ ಮುತ್ಸದ್ಧಿ ನಾಯಕನನ್ನು ಕಳೆದುಕೊಂಡಂತಾಗಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top