ಹಾಲಿ, ಮಾಜಿ ಶಾಸಕರ ಜತೆ ಯುವಕರಿಗೂ ಸಿಕ್ತು ಅವಕಾಶ

ನಿಗಮ-ಮಂಡಳಿ‌ ಸೇರಿದಂತೆ ಸರ್ಕಾರದ ಯಾವುದೇ ಹುದ್ದೆಗಳು ಹಾಲಿ,‌ ಮಾಜಿ ಶಾಸಕರಿಗೆ ಸೀಮಿತ.‌ ಪಕ್ಷದಲ್ಲಿ ಯುವ ಕಾರ್ಯಕರ್ತರು ಬರಿ‌ ಸಂಘಟನೆಗೆ ಮಾತ್ರ ಸೀಮಿತ ಎನ್ನುವ ಅಸಮಾಧಾನಕ್ಕೆ ಮುಲಾಮು ಹಚ್ಚುವ ಕೆಲಸ ಜಿಲ್ಲಾ ಕಾಂಗ್ರೆಸ್ ಪಾಳೆಯದಲ್ಲಿ ನಡೆದಿದೆ.

ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳಲ್ಲೊಬ್ಬರಾದ ಅನೀಲ ದಡ್ಡಿ ಅವರನ್ನು ಸರ್ಕಾರ ಗ್ಯಾರಂಟಿ ಅನುಷ್ಠಾನಗಳ ಸಮಿತಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ‌ ಮಾಡಿದೆ. ಈ ಸಮಿತಿಗೆ ಅಧ್ಯಕ್ಷರಾಗಿದ್ದ ಎಚ್. ಎಚ್. ತೆಕ್ಕೆನ್ನವರ ಇತ್ತೀಚೆಗೆ ನಡೆದ ಅಪಘಾತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ದಡ್ಡಿ ಅವರು ನೇಮಕಗೊಂಡಿದ್ದಾರೆ.

ಯುವಕರು ಸಂಘಟನೆಗೆ ಸೀಮಿತ:

ಸರ್ಕಾರ ನಿಗಮ-‌ಮಂಡಳಿ ನೇಮಕಾತಿ ವೇಳೆ ಹಾಲಿ, ಮಾಜಿ ಶಾಸಕರಿಗೆ ಮಣೆ ಹಾಕಿದ್ದರಿಂದ ಜಿಲ್ಲಾ ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನ ಶುರುವಾಗಿತ್ತು. ಎಲ್ಲ ಸ್ಥಾನಮಾನಗಳು ಹಾಲಿ,‌ ಮಾಜಿ ಶಾಸಕರಿಗೆ ಎನ್ನುವುದಾದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಯುವಕರಿಗೆ ಯಾವ ಅವಕಾಶಗಳು ಇಲ್ಲ ಎನ್ನುವಂತಾಗಿತ್ತು. ಯುವ ಕಾರ್ಯಕರ್ತರು ಸಂಘಟನೆಗಷ್ಟೆ ಸೀಮಿತವಾ ಎನ್ನುವ ಪ್ರಶ್ನೆಯ ಹುಟ್ಟಿಗೆ ಕಾರಣವಾಗಿತ್ತು.

ಯುವಕರಿಗೆ ಸಿಕ್ತು ಅವಕಾಶ:

ಏತನ್ಮಧ್ಯೆ ತೆರವಾದ ಹುದ್ದೆಗೆ ಅನೀಲ ದಡ್ಡಿ ಅವರನ್ನು ನೇಮಕ‌ ಮಾಡಿರುವುದು ಯುವ ಮುಖಂಡರಲ್ಲಿ ಸಮಾಧಾನ ಮೂಡಿದಂತಾಗಿದೆ. ಈಗಾಗಲೇ ಬುಡಾ ಅಧ್ಯಕ್ಷ ಸ್ಥಾನಕ್ಕೆ ಮೊಹಮ್ಮದ ರಜಾಕ್ ಬೆಣ್ಣೂರ ಅವರನ್ನು ನೇಮಕ ಮಾಡಲಾಗಿದ್ದು, ಇದೀಗ ಅನೀಲ ದಡ್ಡಿ ಅವರಿಗೆ ಅವಕಾಶ ಕಲ್ಪಿಸಲಾಗಿದೆ.

ಮುಂಬರುವ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲೂ ಯುವಕರಿಗೆ ಆದ್ಯತೆಯ ಸಾಧ್ಯತೆಗಳು ಹೆಚ್ಚಾಗಿವೆ. ಸರ್ಕಾರದ ಮಟ್ಟದಲ್ಲಿ ಅವಕಾಶಗಳಿಂದ ವಂಚಿತರಾದ ಯುವ ಕಾರ್ಯಕರ್ತರು ಹಾಗೂ ಮುಖಂಡರಿಗೆ ಹೆಚ್ಚಿನ ಅವಕಾಶ ನೀಡಲಿದೆ ಎನ್ನುವ ಮಾತುಗಳು ವ್ಯಾಪಕವಾಗಿವೆ.

ಚುನಾವಣೆಗೆ ಅವಕಾಶ:

ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಸ್ಥಾನಗಳಿಗೆ ಆಯಾ ಕ್ಷೇತ್ರದ ಶಾಸಕರು ಮತ್ತು‌ ಮಾಜಿ‌ ಶಾಸಕರ ಅಭಿಪ್ರಾಯದಂತೆ ಟಿಕೆಟ್ ಹಂಚಿಕೆ ಆಗುವುದು ಸರ್ವೆ ಸಾಮಾನ್ಯ. ಆದರೆ ಪಕ್ಷದ ವರಿಷ್ಠರ ನಿರ್ದೇಶನದಂತೆ ಕೆಲ ಸಮಯ ಟಿಕೆಟ್ ಹಂಚಿಕೆ ಆಗಲಿವೆ. ಹಾಗಾಗಿ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾದವರಿಗೆ, ಶಾಸಕರ ಆಪ್ತರಿಗೆ ಅವಕಾಶಗಳು ಮುಕ್ತವಾಗಿವೆ. ಜತೆಗೆ ಆಯಾ ಕ್ಷೇತ್ರಗಳಲ್ಲಿನ ಪ್ರಬಲ ಸಮುದಾಯಗಳ ಮುಖಂಡರನ್ನು ಹುಡುಕಿ ಅವಕಾಶ ನೀಡುವ ಪ್ರಸಂಗಗಳು ನಡೆಯಲಿವೆ. ಏತನ್ಮಧ್ಯೆ ಪ್ರತಿಪಕ್ಷದ ಅಭ್ಯರ್ಥಿ ಆಯ್ಕೆ ಮೇಲೆಯೂ ಆಡಳಿತ ಪಕ್ಷದ ಅಭ್ಯರ್ಥಿ ನಿರ್ಧಾರವಾಗಲಿದೆ.

ಖಾಲಿ ಇಲ್ಲದ ಸ್ಥಾನಕ್ಕೆ ಪೈಪೋಟಿ:

ಮಾಜಿ ಶಾಸಕ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಸ್.‌ಜಿ ‌ನಂಜಯ್ಯನಮಠ ಅವರನ್ನು ಕೈಗಾರಿಕೆ ಹಾಗೂ ಮೂಲ ಸೌಕರ್ಯಗಳ ಕಾರ್ಪೋರೇಷನ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದ್ದು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅನುಭವಿ ಯುವಕರನ್ನು ನೇಮಕ ಮಾಡಬೇಕು ಎನ್ನುವ ಕೂಗಿದೆ. ಆ ಸ್ಥಾನಕ್ಕೆ ಯಾರ ನೇಮಕ ಆಗಲಿದೆ ಎನ್ನುವುದು ಸದ್ಯ ಕುತೂಹಲದ ಸಂಗತಿ ಆಗಿದೆ.

ಜಿಲ್ಲಾಧ್ಯಕ್ಷ ಸ್ಥಾನದ ಮೇಲೆ ಮಾಜಿ ಶಾಸಕರು, ವಿಧಾನಸಭೆ ಚುನಾವಣೆಯಲ್ಲಿ ಸೋತವರು, ಪಕ್ಷದ ಹಿರಿಯ ಮುಖಂಡರು ಸೇರಿದಂತೆ ಅನೇಕ ಜನ ಯುವ ನಾಯಕರು ಪೈಪೋಟಿ ನಡೆಸಿದ್ದಾರೆ. ಸದ್ಯಕ್ಕೆ ಜಿಲ್ಲಾಧ್ಯಕ್ಷ ಸ್ಥಾನದ ಬದಲಾವಣೆ ಬೆಳವಣಿಗೆಗಳು ಕಾಣಿಸುತ್ತಿಲ್ಲವಾದರೂ ಆಕಾಂಕ್ಷಿಗಳ ಪ್ರಯತ್ನ ಮಾತ್ರ ಜೋರಾಗಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top