ಬಾಗಲಕೋಟೆ: ಗಣೇಶೋತ್ಸವ ಆಚರಣೆಯ ಹಿಂದೆ ಸ್ವಾತಂತ್ರ್ಯ ಹೋರಾಟದ ಚರಿತ್ರೆ ಇದ್ದು, ಲೋಕಮಾನ್ಯ ಬಾಲಗಂಗಾಧರ ತಿಲಕರು ಸ್ವಾತಂತ್ರ್ಯ ಹೋರಾಟಕ್ಕಾಗಿ ಜನರಲ್ಲಿ ಏಕತೆಯನ್ನು ತರಲು ಸಾರ್ವಜನಿಕ ಗಣೇಶೋತ್ಸವದ ಆಚರಣೆಗೆ ಚಾಲನೆ ನೀಡಿದರು. ಗಣೇಶೋತ್ಸವ ಎನ್ನುವುದು ಅದು ರಾಷ್ಟ್ರ ಪ್ರೇಮದ ಸಂಕೇತವಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಸಿ.ಚರಂತಿಮಠ ಅವರು ಹೇಳಿದರು.
ನಗರದ ಬಿವಿವಿ ಸಂಘದ ಎಸ್.ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಂದ ಪ್ರತಿಷ್ಠಾಪಿಸಲಾದ ಗಣೇಶನ ದರ್ಶನ ಪಡೆದ ಅವರು ಗಣೇಶನ ಹಬ್ಬ ಇದು ಸಾಂಸ್ಕೃತಿಕ ಹಬ್ಬ ಕೂಡ ಹೌದು. ಪ್ರತಿವರ್ಷ ವಿದ್ಯಾರ್ಥಿಗಳು ಅತ್ಯಂತ ಉತ್ಸಾಹದಿಂದ ಮೆಡಿಕಲ್ ಕಾಲೇಜಿನಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಹಬ್ಬವನ್ನು ಆಚರಿಸುತ್ತಿರುವರು. ವಿಘ್ನವಿನಾಶಕನಾದ ಗಣೇಶನು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ. ವಿದ್ಯಾರ್ಥಿಗಳು ತಮ್ಮ ವ್ಯಾಸಂಗದಲ್ಲಿ ಉನ್ನತಿಯನ್ನು ಸಾಧಿಸಲಿ ಎಂದು ಹಾರೈಸಿದರು.
ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಅಶೋಕ ಎಮ್.ಸಜ್ಜನ (ಬೇವೂರ), ಮೆಡಿಕಲ್ ಕಾಲೇಜ್ ಪ್ರಾಚಾರ್ಯರಾದ ಡಾ.ಭುವನೇಶ್ವರಿ ಯಳಮಲಿ, ವೈದ್ಯರಾದ ಡಾ.ಸಿ.ಎಸ್.ಹಿರೇಮಠ, ಡಾ.ಮಂಜುಳಾ ಪಾಟೀಲ, ಡಾ.ಮಹಾಂತೇಶ ಭೂತಾಳ, ಡಾ.ಸಂತೋಷ ಶೀಲವಂತ, ವಿದ್ಯಾರ್ಥಿ ಪ್ರತಿನಿಧಿಗಳಾದ ಜಾಹ್ನವಿ, ವಿಠ್ಠಲ, ಸುದರ್ಶನ ಮತ್ತು ಲಿಖಿತಾ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




