ಏಕರೂಪ ಪರಿಹಾರ ಘೋಷಣೆ; ರೈತರ ಒಪ್ಪಿಗೆ ಮಾತ್ರ ಬಾಕಿ

ಬಹು ನಿರೀಕ್ಷಿತ ಹಾಗೂ ಮಹತ್ವಾಕಾಂಕ್ಷಿ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿ ಸರ್ಕಾರ ಕಳೆದ ಎರಡುವರೆ ವರ್ಷಗಳಿಂದ ಯೋಜನೆ ಹಂತ- 3 ರಲ್ಲಿ ಭೂಸ್ವಾಧೀನಕ್ಕೊಳಪಡುವ ಭೂಮಿಗೆ ಏಕರೂಪ ಪರಿಹಾರ ನಿಗದಿಗಾಗಿ ನಡೆದ ಸರ್ಕಾರದ ಸತತ ಪ್ರಯತ್ನ ಕೊನೆಗೂ ಫಲಕಾರಿ ಆದಂತೆ ಕಾಣಿಸುತ್ತಿದೆ.

ಕಳೆದ ವಿಧಾನಸಭೆ ಚುನಾವಣೆ ಬಳಿಕ ಅಧಿಕಾರಕ್ಕೆ ಬಂದ ಬಳಿಕ ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕಾಗಿನ ಮುಳಗಡೆ ಸಂತ್ರಸ್ತರ ಹೋರಾಟ ನಿರಂತರವಾಗಿ‌ ನಡೆದುಕೊಂಡು ಬಂದಿದೆ. ಸರ್ಕಾರ ಕೂಡ ಮುಳುಗಡೆ ಸಂತ್ರಸ್ತರ ಹೋರಾಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತಲೇ ಬಂದಿದೆ.

ಅಹೋರಾತ್ರಿ ಧರಣಿ:

ಬೆಳಗಾವಿ ಅಧಿವೇಶನ ಸಮಯದಲ್ಲಿ ಬಾಗಲಕೋಟೆ ಯಲ್ಲಿ ನಡೆದ ರೈತರ ಅಹೋರಾತ್ರಿ ಹೋರಾಟವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ಹಂತ -3 ರಲ್ಲಿ ಸ್ವಾಧೀನಕ್ಕೊಳಪಡುವ ಜಮೀನುಗಳಿಗೆ ಏಕರೂಪದ ದರ ನಿಗದಿ ವಿಷಯದಲ್ಲಿ ಬಾಗಲಕೋಟೆ, ವಿಜಯಪುರ ಭಾಗದ ಜನಪ್ರತಿನಿಧಿಗಳು, ಮುಳುಗಡೆ ಹೋರಾಟ ಸಮಿತಿ ಮುಖಂಡರು, ರೈತರು ಹಾಗೂ ಅಧಿಕಾರಿಗಳ ಜತೆ ಮೇಲಿಂದ ಮೇಲೆ ಸಭೆಗಳನ್ನು ನಡೆಸಿ ಅಭಿಪ್ರಾಯ ಸಂಗ್ರಹಿಸಿದ ಸರ್ಕಾರ ಕೊನೆಗೂ ಮಂಗಳವಾರ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಸ್ವಾಧೀನಕ್ಕೊಳಪಡುವ ಭೂಮಿಗೆ ಏಕರೂಪ ಪರಿಹಾರ ಕುರಿತು ಐತಿಹಾಸಿಕ ನಿರ್ಣಯ ಕೈಗೊಂಡಿದೆ.

ಪರಿಹಾರ ಘೋಷಣೆ:

ಸಂಪುಟ ಸಭೆ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಸಂಪುಟ ಕೈಗೊಂಡ ನಿರ್ಣಯ ಪ್ರಕಟಿಸಿದ್ದು, ಯುಕೆಪಿ ಹಂತ-3 ರಲ್ಲಿ ಸ್ವಾಧೀನಕ್ಕೊಳಪಡುವ ಪ್ರತಿ ಎಕರೆ ನೀರಾವರಿ ಜಮೀನಿಗೆ 40 ಲಕ್ಷ ರೂ., ಒಣ ಬೇಸಾಯ ಭೂಮಿಗೆ 30 ಲಕ್ಷ ರೂ. ಹಾಗೂ ಕಾಲುವೆ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಳ್ಳುವ ಜಮೀನಿಗೆ ಪ್ರತಿ ಎಕರೆಗೆ 25 ಲಕ್ಷ ರೂ.‌ನಿಗದಿ ಪಡಿಸಿದೆ.

ಏಕರೂಪ ದರ ನಿಗದಿಗಾಗಿ ಸರ್ಕಾರ ಮತ್ತು ರೈತರ ಮಧ್ಯೆ ಹಲವು ಸುತ್ತಿನ ಸಭೆಗಳು ನಡೆದಾಗ, ರೈತರು ಪ್ರತಿ ಎಕರೆ ನೀರಾವರಿ ಜಮೀನಿಗೆ 50 ಲಕ್ಷ ರೂ., ಪ್ರತಿ ಎಕರೆ ಒಣ ಬೇಸಾಯ ಭೂಮಿಗೆ 40 ಲಕ್ಷ ರೂ. ಪರಿಹಾರ ನೀಡುವಂತೆ ಒತ್ತಾಯಿಸಿದ್ದರು. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.‌ಬಿ.ತಿಮ್ಮಾಪುರ ಅವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನೇತೃತ್ವದಲ್ಲಿ ಇತ್ತೀಚೆಗೆ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಒಣ ಬೇಸಾಯ ಭೂಮಿಗೆ 40 ಲಕ್ಷ ರೂ., ನೀರಾವರಿ ಜಮೀನಿಗೆ 50 ಲಕ್ಷ ರೂ. ನಿಗದಿ ಪಡಿಸುವ ಮಾತನ್ನು ಹೇಳಿದ್ದರು. ಸಚಿವ ತಿಮ್ಮಾಪುರ ಮಾತಿಗೆ ಉಪಮುಖ್ಯಮಂತ್ರಿಗಳು ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದರು. ಬಳಿಕ ನಡೆದ ಕೃಷ್ಣೆಗೆ ಬಾಗಿನ ಸಲ್ಲಿಸಲು ಆಲಮಟ್ಟಿಗೆ ಆಗಮಿಸಿದ್ದ ವೇಳೆಯೂ ತಿಮ್ಮಾಪುರ ಅವರನ್ನು ಬಿಡಿ, ಅವರು ರೈತರ ಪರ ನಿಂತು‌ಬಿಟ್ಟಿದ್ದಾರೆ
ಎನ್ನುವ ಮಾತನ್ನಾಡಿದ್ದರು.

ಹಿಂದೊಮ್ಮೆ ಪರಿಹಾರ ನಿಗದಿ ಆಗಿತ್ತು:

ಅದೆಲ್ಲವನ್ನು ಮೀರಿ ಸರ್ಕಾರ ಈಗ ಏಕರೂಪ ಪರಿಹಾರ ನಿಗದಿ ಮಾಡಿದ್ದು, ರೈತರಿಂದ ಏನು ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎನ್ನುವುದನ್ನು ಕಾಯ್ದು ನೋಡಬೇಕಿದೆ. ಸರ್ಕಾರ ಅಳೆದು, ತೂಗಿ ಏಕರೂಪ ದರ ನಿಗದಿ ಪಡಿಸಿದ್ದು, ಸದ್ಯ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲೂ ಏಕರೂಪ ದರ ನಿಗದಿ ಪಡಿಸಲಾಗಿತ್ತು. ಆಗ ನೀರವರಿ ಜಮೀನಿಗೆ ಪ್ರತಿ ಎಕರೆಗೆ 24 ಲಕ್ಷ ರೂ., ಒಣಬೇಸಾಯ ಭೂಮಿಗೆ ಪ್ರತಿ ಎಕರೆಗೆ 20 ಲಕ್ಷ ರೂ. ನಿಗದಿ ಮಾಡಿ, ಕೆಲವರಿಗೆ ಪರಿಹಾರ ಧನ ಚೆಕ್ ಕೂಡ ವಿತರಿಸಲಾಗಿತ್ತು. ಆದರೆ ರೈತರು ಸರ್ಕಾರ ನಿಗದಿ ಪಡಿಸಿದ ಪರಿಹಾರ ಧನಕ್ಕೆ ವಿರೋಧ ವ್ಯಕ್ತ ಪಡಿಸಿದ ಪರಿಣಾಮ ಪರಿಹಾರ ಹಂಚಿಕೆ ಅಲ್ಲಿಗೆ ನಿಂತು ಹೋಗಿತ್ತು.

ಮತ್ತೊಮ್ಮೆ ನಿಗದಿ:

ಈಗ ಸರ್ಕಾರ ಮತ್ತೊಮ್ಮೆ ಎಕರೂಪ ಪರಿಹಾರ ಧನ ನಿಗದಿ ಪಡಿಸಿದ್ದು, ಈ ಭಾಗದ ಜನಪ್ರತಿನಿಧಿಗಳು ಎಷ್ಟರ ಮಟ್ಟಿಗೆ ರೈತರ ಮನವೊಲಿಸಲಿದ್ದಾರೆ ಎನ್ನುವುದರ ಮೇಲೆ ಎಲ್ಲವೂ ನಿರ್ಧಾರವಾಗಲಿದೆ. ಜತೆಗೆ ಪ್ರತಿಪಕ್ಷಗಳು ಸರ್ಕಾರದ ಈ‌ ನಿರ್ಣಯವನ್ನು ಹೇಗೆ ತೆಗೆದುಕೊಳ್ಳಲಿವೆ ಎನ್ನುವುದು ಮುಖ್ಯವಾಗಲಿದೆ.

ಯೋಜನಾ ವಿವರ:

“ಸ್ಥಳೀಯ ಜನಪ್ರತಿನಿಧಿಗಳು, ರೈತರು, ಸಚಿವರ ಅಭಿಪ್ರಾಯ ಪಡೆದು ಈ ನಿರ್ಧಾರ ತೆಗೆದುಕೊಂಡಿದೆ. ಈ ಪರಿಹಾರ ದರವು ಕೇವಲ ಕೃಷ್ಣಾ ಭಾಗ್ಯ ಜಲನಿಗಮ ವ್ಯಾಪ್ತಿಯ ಯುಕೆಪಿ 3ನೇ ಹಂತದ ಯೋಜನೆ ಪ್ರದೇಶಕ್ಕೆ ಮಾತ್ರ ಸೀಮಿತವಾಗಲಿದೆ. ಅಧಿಸೂಚನೆ ಹೊರಡಿಸುವುದು ತಡವಾಗುತ್ತಿರುವ ಹಿನ್ನೆಲೆಯಲ್ಲಿ ಇತರೆ ಪ್ರಕ್ರಿಯೆಗಳು ವಿಳಂಬವಾಗಬಾರದು ಎಂಬ ಕಾರಣಕ್ಕೆ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಗೆ ಮುಂದಾಗಿದೆ. ಈ ಯೋಜನೆಯಲ್ಲಿ 70 ಸಾವಿರ ಕೋಟಿ ರೂ. ಕೇವಲ ಭೂಸ್ವಾಧೀನ ಪ್ರಕ್ರಿಯೆಗೆ ವ್ಯಯವಾಗಲಿದೆ. ಈ ಪ್ರಕ್ರಿಯೆಯನ್ನು ರೈತರ ಒಪ್ಪಿಗೆ ಹಾಗೂ ನೇರವಾಗಿ ಖರೀದಿ ಮೂಲಕ 3 ವರ್ಷಗಳ ಅವಧಿಯಲ್ಲಿ ಮುಗಿಸಲು ನಿರ್ಧರಿಸಿದೆ.

1.33 ಲಕ್ಷ ಎಕರೆ ಭೂಮಿ ಸ್ವಾಧೀನ :

“ಈ ಯೋಜನೆಗೆ 1,33,867 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಬೇಕಾಗಿದ್ದು, ಈ ಪೈಕಿ 75,563 ಎಕರೆ ಮುಳುಗಡೆಯಾಗಲಿದ್ದು, ಕಾಲುವೆಗಾಗಿ 51,837 ಎಕರೆ ಭೂಮಿ ಅಗತ್ಯವಿದೆ. ಇನ್ನು ಪುನಶ್ಚೇತನ ಕಾರ್ಯಕ್ಕೆ 6,467 ಎಕರೆ ಜಮೀನು ಬೇಕಾಗಿದೆ. ಈ ಯೋಜನೆಗೆ ಅಗತ್ಯವಿರುವ ಭೂಮಿಯನ್ನು 2013ರ ಭೂಸ್ವಾಧೀನ ಕಾಯ್ದೆ ಅನ್ವಯ ಸ್ವಾಧೀನಪಡಿಸಿಕೊಳ್ಳಲಾಗುವುದು. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಅನೇಕ ಪ್ರಕರಣಗಳು ವಿಚಾರಣೆ ನಡೆಯುತ್ತಿದೆ. ಸುಮಾರು 20 ಸಾವಿರ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿವೆ. ಈ ಕಾಯ್ದೆಯಲ್ಲಿ ನೀಡಲಾಗಿರುವ ಅವಕಾಶದ ಪ್ರಕಾರ ಈ ಪ್ರಕರಣಗಳನ್ನು ರಾಜಿ ಸಂಧಾನ ಕಾನೂನು ಪ್ರಕಾರ ಇವುಗಳನ್ನು ಇತ್ಯರ್ಥ ಮಾಡಿಕೊಳ್ಳಲು ತೀರ್ಮಾನಿಸಿದೆ. ನ್ಯಾಯಾಲಯದಲ್ಲಿ ಪ್ರಕರಣವಿಲ್ಲದ ಜಮೀನುಗಳನ್ನು ರೈತರಿಂದ ನೇರವಾಗಿ ಖರೀದಿ ಮಾಡಲು‌ ಮುಂದಾಗಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top