ಬಾಗಲಕೋಟೆ: ದಿವಂಗತ ಶಾಸಕ ಎಚ್. ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಬಾಗಲಕೋಟೆ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ನ್ನು ಮೇಟಿ ಅವರ ಕುಟುಂಬಕ್ಕೆ ನೀಡಬೇಕು ಎನ್ನುವ ವಾದ ಈಗಲೇ ಕಾಂಗ್ರೆಸ್ ಪಾಳೆಯದಲ್ಲಿ ಶುರುವಾಗಿದೆ.
ಎಚ್.ವೈ. ಮೇಟಿ ಅವರ ಮೂವರು ಮಕ್ಕಳ ಪೈಕಿ ಯಾರಿಗೆ ಟಿಕೆಟ್ ಎನ್ನುವ ಕುತೂಹಲದ ಮಧ್ಯೆ, ಇವರಿಗೆ ಟಿಕೆಟ್ ನೀಡಬೇಕು ಎಂದು ಅವರವರ ಅಭಿಮಾನಿಗಳು ಒತ್ತಾಯಿಸುತ್ತಿರುವುದು ಗಮನಾರ್ಹ ಅಂಶವಾಗಿದೆ. ಎಚ್. ವೈ. ಮೇಟಿ ಅವರ ಮಕ್ಕಳ ಪೈಕಿ ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ ಮತ್ತು ಬಾಯಕ್ಕ ಮೇಟಿ ರಾಜಕಾರಣದಲ್ಲಿದ್ದಾರೆ. ಮೂವರೂ ಕ್ಷೇತ್ರದಾದ್ಯಂತ ಓಡಾಡಿಕೊಂಡಿದ್ದಾರೆ.
ಬಾಯಕ್ಕ ಮೇಟಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗಾಗಿ ಕ್ಷೇತ್ರದಾದ್ಯಂತ ಅವರು ಸಾಕಷ್ಟ ಚಿರಪರಿಚಿತ ಆಗಿದ್ದಾರೆ. ಇನ್ನು ಉಮೇಶ ಮೇಟಿ ಕ್ಷೇತ್ರದ ಗ್ರಾಮೀಣ ಭಾಗದ ಮೇಲೆ ಹಿಡಿತ ಹೊಂದಿದ್ದಾರೆ. ಕ್ಷೇತ್ರದ ಗ್ರಾಮೀಣ ಭಾಗದಲ್ಲಿನ ಎಲ್ಲ ಕಾರ್ಯವನ್ನೂ ಅವರೇ ನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಮಲ್ಲಿಕಾರ್ಜುನ ಮೇಟಿ ನಗರ ಮತ್ತು ಗ್ರಾಮೀಣ ಎರಡೂ ಕಡೆಗಳಲ್ಲೂ ಓಡಾಡಿಕೊಂಡಿದ್ದಾರೆ. ಒಟ್ಟಾರೆ ಮೂವರೂ ಸಕ್ರೀಯ ರಾಜಕಾರಣದಲ್ಲಿದ್ದು, ಎಚ್‌ವೈ ಅವರ ಕಾರ್ಯಕ್ಕೆ ಸಾಥ್ ಆಗಿದ್ದರು. ಹಾಗಾಗಿ ಮೂವರ ಬಗೆಗೂ ಅವರವರ ಅಭಿಮಾನಿಗಳು ಒಲವು ವ್ಯಕ್ತ ಪಡಿಸುತ್ತಿದ್ದಾರೆ.
ಅಭಿಮಾನಿಗಳ ಮಧ್ಯೆ ಪೈಪೋಟಿ :
ದಿ. ಶಾಸಕ ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಸ್ಪರ್ಧಿಸಲು ಮೇಟಿ ಕುಟುಂಬಸ್ಥರು ಎಷ್ಟು ಉತ್ಸುಕರಾಗಿದ್ದಾರೆ. ಯಾರೂ ಸ್ಪರ್ಧಿಸಬಹುದು ಎನ್ನುವುದು ಕುಟಬಸ್ಥರಿಂದ ಇನ್ನೂ ಸ್ಪಷ್ಟವಾಗಬೇಕಿದೆ. ಅವರವರ ಅಭಿಮಾನಿಗಳು ಇವರಿಗೇ ಟಿಕೆಟ್ ಕೊಟ್ಟರೆ ಒಳ್ಳೆಯದು ಎನ್ನುವ ಅಭಿಪ್ರಾಯವನ್ನು ಕ್ಷೇತ್ರದಲ್ಲಿ ಬಹುತೇಕ ಕಡೆ ವ್ಯಕ್ತ ಪಡಿಸುತ್ತಿದ್ದಾರೆ. ಇಂತವರಿಗೆ ಟಿಕೆಟ್ ನೀಡಿ ಎನ್ನುವ ಒತ್ತಾಯ ಅವರ ಅಭಿಮಾನಿಗಳ ಮಧ್ಯೆಯೇ ಪೈಪೋಟಿ ಶುರುವಾಗಿದೆ. ಮೇಟಿ ಅವರ ಕುಟುಂಬಸ್ಥರು ಈ ಬಗೆಗೆ ಇನ್ನೂ ಯಾವ ನಿರ್ಧಾರಕ್ಕೂ ಬಂದಿಲ್ಲ. ಯಾರಿಗೆ ಟಿಕೆಟ್ ಸಿಕ್ಕರೆ ಒಳ್ಳೆಯದು ಎನ್ನುವ ಚರ್ಚೆಯೂ ಕೂಡ ಅವರ ಮಧ್ಯೆ ಇನ್ನೂ ವ್ಯಕ್ತ ಆಗಿಲ್ಲ. ಅದಕ್ಕೆ ಇನ್ನೂ ಸಾಕಷ್ಟು ಸಮಯದ ಅಗತ್ಯವಿದೆ. ಸಮಯ ಕೂಡಿ ಬಂದಾಗ ಅವರೆಲ್ಲ ಸೇರಿ ನಿರ್ಧಾರಕ್ಕೆ ಬರಲಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಇಂತವರಿಗೆ ಟಿಕೆಟ್ ಸಿಗಬೇಕು ಎನ್ನುವ ಬಗೆಗೆ ತಮ್ಮದೆ ಆದ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.
ಪಕ್ಷದಲ್ಲಿಲ್ಲ ಚರ್ಚೆ:
ಉಪ ಚುನಾವಣೆಯಲ್ಲಿ ದಿ. ಶಾಸಕ ಮೇಟಿ ಕುಟುಂಬಸ್ಥರಿಗೆ ಟಿಕೆಟ್ ಕೊಡಬೇಕೋ ಇಲ್ಲ ಬೇರೆಯವರಿಗೆ ಟಿಕೆಟ್ ಕೊಡಬೇಕೋ ಎನ್ನುವ ವಿಷಯ ಕಾಂಗ್ರೆಸ್ಸಿನಲ್ಲಿ ಇನ್ನೂ ಚರ್ಚೆಗೆ ಬಂದಿಲ್ಲ. ಪಕ್ಷದಲ್ಲಿ ವಿಷಯ ಚರ್ಚೆಗೆ ಬರುವ ಮುನ್ನವೇ ಅಭಿಮಾನಿಗಳ ವಲಯದಲ್ಲಿ ಭಾರಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ.
ಏತನ್ಮಧ್ಯೆ ಎಚ್. ವೈ. ಮೇಟಿ ಕುಟುಂಬಸ್ಥರು ಹೊರತು ಪಡಿಸಿ ಬೇರೆಯವರಿಗೆ ಟಿಕೆಟ್ ನೀಡಿದರೆ ಹೇಗೆ ಎನ್ನುವ ಚರ್ಚೆಯೂ ಪಕ್ಷದ ಆಂತರಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಮೇಟಿ ಕುಟುಂಬಸ್ಥರನ್ನು ಹೊರತು ಪಡಿಸಿ ಬೇರೆಯವರೂ ಟಿಕೆಟ್ ಕೇಳುವ ಉತ್ಸುಕತೆಯಲ್ಲಿ ಅನೇಕರು ಇದ್ದಾರೆ. ಹಾಗಾಗಿ ಯಾರಿಗೆ ಟಿಕೆಟ್ ಕೊಟ್ಟರೆ ಸೂಕ್ತವಾಗಲಿದೆ ಎನ್ನುವ ಗಂಭೀರ ಚಿಂತನೆಯಂತೂ ಆರಂಭಗೊಂಡಿದೆ.
ಟಿಕೆಟ್ ಮೇಲೆ ಹಲವರಿಗೆ ಆಸೆ:
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಯಾರಿಗಾದರೂ ಪಕ್ಷದ ಟಿಕೆಟ್ ಕೊಟ್ಟು ಗೆಲ್ಲಿಸಿಕೊಂಡು ಬರಬಹುದು ಎನ್ನುವ ವಿಶ್ವಾಸ ಹೊಂದಿರುವ ಕಾಂಗ್ರೆಸ್ಸಿಗರ ಸಂಖ್ಯೆಯೂ ಕಡಿಮೆ ಏನಿಲ್ಲ. ತಮ್ಮದೇ ಪಕ್ಷದ ಸರ್ಕಾರ ರಾಜ್ಯದಲ್ಲಿ ಇರುವುದರಿಂದ ಪಕ್ಷದ ಟಿಕೆಟ್‌ಗಾಗಿ ಪ್ರಯತ್ನಿಸುವ ಮುಖಂಡರು ಸಾಕಷ್ಟು ಜನ ಇದ್ದಾರೆ. ಪಕ್ಷ ಕುಟುಂಬಸ್ಥರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಡಲು ಮುಂದಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಹಲವರು ತುದಿಗಾಲಲ್ಲಿ ನಿಂತಿದ್ದಾರೆ. ಅವರೆಲ್ಲ ಚುನಾವಣೆ ಘೋಷಣೆಗೂ ಮುಂಚೆ ಎಲ್ಲೂ ಬಹಿರಂಗವಾಗಿ ಟಿಕೆಟ್ ಬಗೆಗೆ ಮಾತನಾಡುವ ಗೋಜಿಗೆ ಹೋಗಿಲ್ಲವಾದರೂ ಆಪ್ತರ ಮಧ್ಯೆ ನಿರಂತರ ಚರ್ಚೆ ನಡೆಸುತ್ತಿದ್ದಾರೆ. ಪರಿಸ್ಥಿತಿ ನೋಡಿಕೊಂಡು ಅವರೆಲ್ಲ ದಾಳ ಉರುಳಿಸಲು ಸಜ್ಜಾಗಿದ್ದಾರೆ.
ಒಂದೊಮ್ಮೆ ಪಕ್ಷ ಮೇಟಿ ಕುಟುಂಬಸ್ಥರನ್ನು ಬಿಟ್ಟು ಬೇರೆಯವರಿಗೆ ಮಣೆ ಹಾಕಲು ಮುಂದಾದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯಲಿದೆ. ಆ ಪಟ್ಟಿಯಲ್ಲಿ ಅತ್ಯಂತ ಕಿರಿಯ ವಯಸ್ಸಿನ ಯುವ ಕಾರ್ಯಕರ್ತರಿಂದ ಹಿಡಿದು ಅತ್ಯಂತ ಹಿರಿಯ ರಾಜಕಾರಣಿಗಳ ಹೆಸರುಗಳು ಕಾಣಿಸಿಕೊಳ್ಳಲಿವೆ.
ಕಾಂಗ್ರೆಸ್ ಪಕ್ಷದಲ್ಲಿ ಯಾರಾದರೂ ಶಾಸಕರು ನಿಧರಾದಲ್ಲಿ ಅವರ ಕುಟುಂಬಸ್ಥರಿಗೆ ಟಿಕೆಟ್ ನೀಡುವ ಸಂಪ್ರದಾಯವಿದೆ. ಆ ಸಂಪ್ರದಾಯ ಇಲ್ಲಿಯೂ ಮುಂದುವರಿಯುವ ಸಾಧ್ಯತೆಗಳೆ ಹೆಚ್ಚಿವೆ. ಆದಾಗ್ಯೂ ಇತರರು ಟಿಕೆಟ್ ಕೇಳುವ ಸಿದ್ಧತೆಯಲ್ಲಂತೂ ಇದ್ದಾರೆ.
ಸದ್ಯಕ್ಕಂತೂ ಕಾಂಗ್ರೆಸ್ ಟಿಕೆಟ್ ಮೇಟಿ ಕುಟುಂಬಸ್ಥರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ಸಿಗಲಾರದು ಎನ್ನುವ ಭಾವನೆ ಕ್ಷೇತ್ರಾದ್ಯಂತ ಜನಜನಿತವಾಗಿದೆ. ಪಕ್ಷ ಒಂದೊಮ್ಮೆ ಪಕ್ಷದ ಟಿಕೆಟ್ ಮೇಟಿ ಕುಟುಂಬಸ್ಥರಿಗೆ ಎನ್ನುವ ನಿರ್ಧಾರಕ್ಕೆ ಬಂದಲ್ಲಿ ಮೇಟಿ ಅವರ ಮಕ್ಕಳ ಪೈಕಿ ಕಾಂಗ್ರೆಸ್ ಯಾರಿಗೆ ಮಣೆ ಹಾಕಲಿದೆ ಎನ್ನುವುದು ಕುತೂಹಲದ ಸಂಗತಿ ಆಗಿದೆ.
- ವಿಠ್ಠಲ ಆರ್. ಬಲಕುಂದಿ




