ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಗೆ ರಾಜಕೀಯ ಮರುಜನ್ಮ ನೀಡಿದ ಬಾದಾಮಿ ಕ್ಷೇತ್ರಕ್ಕೆ ಎರಡುವರೆ ವರ್ಷದ ಬಳಿಕ ಇದೀಗ ಚಾಲುಕ್ಯ ಉತ್ಸವ ಉದ್ಘಾಟನೆಗೆ ಆಗಮಿಸುತ್ತಿದ್ದಾರೆ. ಉತ್ಸವಕ್ಕೆ ಮುಖ್ಯಮಂತ್ರಿಗಳಿಂದಲೇ ಚಾಲನೆ ಕೊಡಿಸಬೇಕು ಎನ್ನುವ ಜಿಲ್ಲೆಯ ಜನಪ್ರತಿನಿಧಿಗಳ ಬಹುದಿನಗಳ ಆಶಯವೂ ಇಡೇರುತ್ತಿದೆ. ಜತೆಗೆ ಕಳಾಹೀನವಾಗಿದ್ದ ಉತ್ಸವಕ್ಕೆ ಮುಖ್ಯಮಂತ್ರಿಗಳಿಂದ ಚಾಲನೆ ಸಿಕ್ಕುತ್ತಿರುವುದು ಜನತೆಯಲ್ಲಿ ಹೊಸ ಭರವಸೆ ಹುಟ್ಟಿಸಿದೆ.
ರಾಜಕೀಯ ಪುನರ್ ಜನ್ಮ ನೀಡಿದ ಕ್ಷೇತ್ರ:
2018ರ ವಿಧಾನಸಭೆ ಚುನಾವಣೆಯ ಸಮಯ ಸಿದ್ದರಾಮಯ್ಯನವರ ರಾಜಕಾರಣದ ಅತ್ಯಂತ ನಿರ್ಣಾಯಕ ಸಮಯವಾಗಿತ್ತು. ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯನವರು ಚುನಾವಣೆಯಲ್ಲಿ ತಾವು ಗೆಲ್ಲುವ ಜತೆಗೆ ಪಕ್ಷವನ್ನು ಗೆಲ್ಲಿಸಿಕೊಂಡು ಬರಬೇಕಿತ್ತು. ಆದರೆ ಅವರು ಸ್ವರ್ಧಿಸಬಯಸಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಗೆಲ್ಲುವ ಭರವಸೆ ಇರಲಿಲ್ಲ. ಹಾಗಾಗಿ ಅವರು ಚಾಮುಂಡೇಶ್ವರಿ ಕ್ಷೇತ್ರದ ಜತೆಗೆ ಬಾದಾಮಿ ಕ್ಷೇತ್ರದ ಅಂದಿನ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಅವರನ್ನು ಹಿಂದೆ ಸರಿಸಿ ತಾವೇ ಚುನಾವಣೆ ಕಣಕ್ಕೆ ಧುಮುಕಿದರು.
ಪ್ರಯಾಸದ ಗೆಲುವು:
ಪ್ರತಿಪಕ್ಷ ಬಿಜೆಪಿ ಕೂಡ ಪ್ರಭಾವಿ ಮುಖಂಡ ಬಿ. ಶ್ರೀರಾಮುಲು ಅವರನ್ನು ಕಣಕ್ಕಿಳಿಸಿತು. ಪರಿಣಾಮವಾಗಿ ಕ್ಷೇತ್ರ ರಾಜ್ಯದಲ್ಲೇ ಗಮನ ಸೆಳೆಯಿತು. ದಿನದಿಂದ ದಿನಕ್ಕೆ ಚುನಾವಣೆ ಅಖಾಡ ರೋಚಕತೆ ಪಡೆಯುತ್ತ ಸಾಗಿತ್ತು. ನಾಡಿನ ಆರಾಧ್ಯ ದೈವ ಬಾದಾಮಿ ಬನಶಂಕರಿ ದೇವಿಯ ಆಶೀರ್ವಾದ ಯಾರಿಗೆ ಲಭಿಸಲಿದೆ ಎನ್ನುವ ಕೂತುಹಲ ಕೂಡ ಹೆಚ್ಚಾಯಿತು. ವಿಜಯಲಕ್ಷ್ಮಿ ಯಾರ ಪಾಲಾಗುವಳು ಎನ್ನುವ ಚರ್ಚೆಗಳು ಜೋರಾಗಿದ್ದವು. ಯಾರಿಗೂ ತಾವೇ ಗೆಲ್ಲುತ್ತೇವೆ ಎಂದು ಎದೆ ತಟ್ಟಿಕೊಂಡು ಹೇಳುವ ಸ್ಥಿತಿ ಇರಲಿಲ್ಲ.
ಅಚ್ಚರಿ ಸಂಗತಿ ಎಂದರೆ ಸಿದ್ದರಾಮಯ್ಯನವರು ಸ್ಪರ್ಧಿಸಿರುವ ಎರಡೂ ಕ್ಷೇತ್ರಗಳಲ್ಲೂ ಎಲ್ಲಿ ಸೋತು ಬಿಡುತ್ತಾರೋ ಎನ್ನುವ ವಾತಾವರಣ ಸೃಷ್ಟಿ ಆಗಿತ್ತು. ಕೊನಗೆ ಫಲಿತಾಂಶ ಹೊರಬಿದ್ದಾಗ ಚಾಮುಂಡೇಶ್ವರಿಯಲ್ಲಿ ಜಿ.ಟಿ. ದೇವೇಗೌಡರ ವಿರುದ್ಧ ಸೋಲು ಕಂಡ ಸಿದ್ದರಾಮಯ್ಯನವರು, ಬಾದಾಮಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು ವಿರುದ್ಧ ಪ್ರಯಾಸದ ಗೆಲುವು ಸಾಧಿಸುವ ಮೂಲಕ ರಾಜಕೀಯ ಪುನರ್ ಜನ್ಮ ಪಡೆದರು ಎಂದು ಅಂದು ಮಾಧ್ಯಮಗಳಲ್ಲಿ ವಿಶ್ಲೇಷಿಸಲಾಯಿತು.
ಆಗ ಉತ್ಸವಕ್ಕೆ ಚಾಲನೆ ಸಿಗಲಿಲ್ಲ:
2018ರಲ್ಲಿ ರಾಜಕೀಯ ಪುನರ್ ಜನ್ಮ ನೀಡಿದ ಬಾದಾಮಿ ಕ್ಷೇತ್ರದ ಅಭಿವೃದ್ಧಿಗೆ ಪ್ರತಿಪಕ್ಷದ ನಾಯಕರಾಗಿದ್ದುಕೊಂಡು ಸಾಕಷ್ಟು ಶ್ರಮಿಸಿದರಾದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿ ಬದಲು ವರುಣಾದಿಂದ ಸ್ಪರ್ಧಿಸಿ ಗೆದ್ದು ಮುಖ್ಯಮಂತ್ರಿ ಆಗಿದ್ದಾರೆ. ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದ ಶಾಸಕರಾಗಿದ್ದ ಐದು ವರ್ಷಗಳ ಅವಧಿಯಲ್ಲಿ ನಿಂತು ಹೋಗಿದ್ದ ಚಾಲುಕ್ಯ ಉತ್ಸವ ಒಮ್ಮೆಯೂ ನಡೆಯಲಿಲ್ಲ. ಮುಖ್ಯಮಂತ್ರಿ ಆದ ಬಳಿಕವಾದರೂ ಚಾಲುಕ್ಯ ಉತ್ಸವ ನಡೆಯಲಿ ಎಂದು ಜನತೆ ಕಳೆದ ಎರಡುವರೆ ವರ್ಷಗಳಿಂದ ಕಾಯುತ್ತಲೇ ಇದ್ದರು.
ಕೂಡಿಬಂದ ಮಹೂರ್ತ:
ಇದೀಗ ಜನತೆಯ ಆಶಯ ಈಡೇರುವ ಕಾಲ ಕೂಡಿಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಡಿ.19ರಿಂದ ಆಯೋಜನೆಗೊಂಡಿರುವ ಚಾಲುಕ್ಯ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ ಎನ್ನುವ ವಿಷಯ ಜನತೆಯಲ್ಲಿ ಸಾಕಷ್ಟು ಸಂತಸವನ್ನುಂಟು ಮಾಡಿದೆ.
1989ರಲ್ಲಿ ಅಂದಿನ ಜನತಾ ಪರಿವಾರದ ಸರ್ಕಾರದಲ್ಲಿ ಮಂತ್ರಿಯಾಗಿದ್ದ ದಿ. ಎಂ.ಪಿ. ಪ್ರಕಾಶ ಅವರು ನಾಡಿನ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸಲು ವಿಜಯಪುರದಲ್ಲಿ ನವರಸಪುರ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಪಟ್ಟದಕಲ್ಲು ಉತ್ಸವ ಆರಂಭಿಸಿದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿದ್ದ ರಾಷ್ಟ್ರೀಯ ಉತ್ಸವ ಆಚರಣೆ, ಬಳಿಕ ಜಿಲ್ಲಾ ಉತ್ಸವವಾಗಿ ಮಾರ್ಪಟ್ಟಿತು. ಬರಬರುತ್ತ ಕಳೆದೊಂದು ದಶಕದಿಂದ ಚಾಲುಕ್ಯ ಉತ್ಸವ ನಿಂತೆ ಹೋಗಿತ್ತು.
ಚಾಲುಕ್ಯ ಉತ್ಸವ ಪ್ರತಿವರ್ಷ ನಡೆಯಲಿ:
80 ದಶಕದ ಅಂತ್ಯದ ವೇಳೆ ಅಂದಿನ ಜನತಾ ಪರಿವಾರದ ಸರ್ಕಾರದಲ್ಲಿ ಆರಂಭಗೊಂಡಿದ್ದ ಉತ್ಸವ, ಇದೀಗ ಜನತಾ ಪರಿವಾರದಿಂದಲೇ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ದಶಕದ ಬಳಿಕ ಚಾಲುಕ್ಯ ಉತ್ಸವಕ್ಕೆ ಚಾಲನೆ ನೀಡುತ್ತಿದ್ದಾರೆ. ಇದೀಗ ಪುನಾರಂಭಗೊಳ್ಳುತ್ತಿರುವ ಉತ್ಸವ ಇನ್ನು ಮುಂದೆ ಪ್ರತಿವರ್ಷವೂ ರಾಷ್ಟ್ರೀಯ ಉತ್ಸವವಾಗಿ ನಡೆಯಲಿ. ಕಳೆಗುಂದಿ ಹೋಗಿದ್ದ ಚಾಲುಕ್ಯ ಉತ್ಸವದ ಗತವೈಭವ ಮತ್ತೆ ಮರುಕಳುಹಿಸುವಂತಾಗಲಿ ಎನ್ನುವುದು ಜನತೆಯ ಆಶಯವಾಗಿದೆ.
ಮೈಸೂರು ದಸರಾ, ಹಂಪಿ ಉತ್ಸವ, ಕಿತ್ತೂರು ಉತ್ಸವಗಳು ಎಂತಹುದೇ ಸ್ಥಿತಿಯಲ್ಲೂ ಪ್ರತಿವರ್ಷ ನಡೆಯುತ್ತವೆಯೋ ಹಾಗೇ ಚಾಲುಕ್ಯ ಉತ್ಸವವೂ ಪ್ರತಿ ವರ್ಷ ನಡೆಯುವಂತೆ ಸರ್ಕಾರ ನೋಡಿಕೊಳ್ಳಬೇಕು. ಹೆಚ್ಚು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುವಂತಾಗಬೇಕು. ಈ ಭಾಗದ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಬೇಕಿದೆ.
- ವಿಠ್ಠಲ ಆರ್. ಬಲಕುಂದಿ



