ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಬಾಧಿತ ಜಮೀನುಗಳಿಗೆ ಕನ್ಸಂಟ್ ಅವಾರ್ಡ ಮಂಗಳವಾರದ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ಬೀಳಗಿ ಶಾಸಕ ಜೆ.ಟಿ. ಪಾಟೀಲ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಯುಕೆಪಿ ಯೋಜನೆಯಡಿ ಮುಳುಗಡೆ ಆಗಲಿರುವ ಜಮೀನುಗಳಿಗೆ ಕನ್ಸಂಟ್ ಅವಾರ್ಡ ನಿಗದಿ ಪಡಿಸುವ ಹಿನ್ನೆಲೆಯಲ್ಲಿ ಮಂಗಳವಾರ ಮುಖ್ಯಮಂತ್ರಿಗಳು ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ಪ್ರತಿ ಎಕರೆ ಒಣ ಬೇಸಾಯದ ಭೂಮಿಗೆ, ಪ್ರತಿ ಎಕರೆ ನೀರಾವರಿ ಜಮೀನಿಗೆ ಎಷ್ಟು ಪರಿಹಾರ ಎನ್ನುವುದು ನಿಗದಿ ಆಗಲಿದೆ ಎಂದರು.
ಸರ್ಕಾರದ ಆಡಳಿತಾವಧಿ ಇನ್ನೂ ಎರಡು ವರ್ಷ ಎಂಟು ತಿಂಗಳು ಅವಧಿ ಇದೆ. ಅಷ್ಟರಲ್ಲಿ ಯೋಜನೆ ಪೂರ್ಣ ಗೊಳಿಸಲು ಸಿದ್ದರಿದ್ದೇವೆ. ಕೇಂದ್ರ ಸರ್ಕಾರ ಕೃಷ್ಣಾ ನ್ಯಾಯಾಧೀಕರಣ-೨ ರ ಅಧಿಸೂಚನೆ ಹೊರಡಿಸಬೇಕು ಎಂದರು.
ಯುಕೆಪಿ ಯೋಜನಾ ವೆಚ್ಚದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಸರ್ಕಾರ ಮನಸ್ಸು ಮಾಡಿದಲ್ಲಿ ಸಂಪನ್ಮೂಲ ಕ್ರೋಢಿಕರಣ ಅಸಾಧ್ಯದ ಮಾತಲ್ಲ. ಯುಕೆಪಿ ಯೋಜನೆ ಕೆಲಸ ಆರು ತಿಂಗಳಲ್ಲಿ ಪೂರ್ಣಗೊಳ್ಳುವಷ್ಟು ಮಾತ್ರ ಬಾಕಿ ಇದೆ. ಪರಿಹಾರ ವಿತರಣೆ ಬಳಿಕ ಬಾಕಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.




