ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ಚರ್ಚೆ ಕಾರ್ಯಕರ್ತರಲ್ಲಿ ಬೇಸರವನ್ನು ಮೂಡಿಸಿದೆ ಎನ್ನುವ ಭಾವವನ್ನು ಕೈಗಾರಿಕೆ ಹಾಗೂ ಮೂಲ ಸೌಕರ್ಯ ನಿಗಮದ ಅಧ್ಯಕ್ಷ ಎಸ್. ಜಿ.ನಂಜಯ್ಯನಮಠ ಅವರು ವ್ಯಕ್ತ ಪಡಿಸಿದ್ದು, ಆ ಮೂಲಕ ಪಕ್ಷದ ನಿಷ್ಠಾವಂತ ಹಾಗೂ ಪ್ರಾಮಾಣಿಕ ಕಾರ್ಯಕರ್ತರ ಮನಸ್ಸಿಗೆ ಆಗುತ್ತಿರುವ ಮುಜುಗರವನ್ನು ಬಹಿರಂಗ ಪಡಿಸಿದ್ದಾರೆ.
ನಂಜಯ್ಯನಮಠ ಗಟ್ಟಿತನ:
ಬಾಗಲಕೊಟೆ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕತ್ವ ಬದಲಾವಣೆ ವಿಷಯದಲ್ಲಿ ನಂಜಯ್ಯನಮಠ ಅವರು ವ್ಯಕ್ತಪಡಿಸಿದ ಅಭಿಪ್ರಾಯ ರಾಜ್ಯದಲ್ಲಿನ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರ ಭಾವನೆ ಆಗಿದೆ.
ಸದ್ಯ ಕಾಂಗ್ರೆಸ್ಸಿನಲ್ಲಿ ನಾಯಕತ್ವದ ಬಗೆಗೆ ನಡೆಯುತ್ತಿರುವ ವಿದ್ಯಮಾನಗಳು ಭವಿಷ್ಯದಲ್ಲಿ ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದಂತೂ ಅಲ್ಲ ಎಂದು ಇಂದಿನ ಸನ್ನಿವೇಶದಲ್ಲಿ ಹೇಳುವುದಕ್ಕೂ ಗಟ್ಟಿತನ ಬೇಕು. ಆ ಕೆಲಸವನ್ನು ನಂಜಯ್ಯನಮಠ ಅವರು ಮಾಡಿದ್ದಾರೆ.
ಭಾವನೆಗಳಿಗೆ ಧಕ್ಕೆ ಬೇಡ:
ಪಕ್ಷದ ಹೈ ಕಮಾಂಡ್ ಈ ವಿಷಯವನ್ನು ಆದಷ್ಟು ಬೇಗ ಇತ್ಯರ್ಥ ಪಡಿಸಬೇಕು. ಪಕ್ಷ ಸಂಘಟಿಸುವವರು, ಚುನಾವಣೆ ಮಾಡುವವರು, ನಾಯಕರನ್ನು ಸೃಷ್ಟಿಸುವವರು ಕಾರ್ಯಕರ್ತರು. ನಾಯಕರು ಬದಲಾದರೂ ಕಾರ್ಯಕರ್ತರು ಬದಲಾಗುವುದಿಲ್ಲ. ಯಾವಾಗಲೂ ಪಕ್ಷದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಾರೆ. ಅಂತಹ ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ಬರುವ ಕೆಲಸ ಆಗಬಾರದು. ಆದರೆ ಅದೆ ಕೆಲಸ ನಡೆದಿದೆ.
ಸದಾ ಪಕ್ಷದ ಹಿತವನ್ನೆ ಬಯಸುವ ಕಾರ್ಯಕರ್ತರ ಮನಸ್ಸಿಗೆ ನೋವನ್ನುಂಟು ಮಾಡುವ ಕೆಲಸವನ್ನು ಪಕ್ಷದ ನಾಯಕರು ಮಾಡಬಾರದು. ಏನೇ ಸಮಸ್ಯೆ ಇದ್ದರೂ ಅದನ್ನು ಹೈಕಮಾಂಡ್ ಬಗೆಹರಿಸುವ ಕೆಲಸ ಮಾಡಬೇಕು ಎನ್ನುವ ಮಾತನ್ನು ನಂಜಯ್ಯನಮಠ ಅವರು ಬಹಳ ನೋವಿನಿಂದ ವ್ಯಕ್ತ ಪಡಿಸಿದರಾದರೂ ಕಾರ್ಯಕರ್ತರ ಭಾವನೆಗೆ ಸ್ಪಂದಿಸುವವರು ಯಾರೂ ಇಲ್ಲ ಎನ್ನುವಂತ ಸ್ಥಿತಿ ಕಾಂಗ್ರೆಸ್ ಪಾಳೆಯದಲ್ಲಿ ನಿರ್ಮಾಣವಾಗಿದೆ.
ಬೇಗ ಇತ್ಯರ್ಥಪಡಿಸಿ:
ಸದ್ಯ ಪಕ್ಷದಲ್ಲಿ ಉಂಟಾಗಿರುವ ಗೊಂದಲಕ್ಕೆ ಪಕ್ಷದ ಹೈ ಕಮಾಂಡ್ ತೆರೆ ಎಳೆಯಬೇಕಿದೆ. ಪಕ್ಷದ ವರಿಷ್ಠರ ಬಳಿಯೂ ಸಮಸ್ಯೆ ಇತ್ಯರ್ಥ ಪಡಿಸುವಂತೆ ಮನವಿ ಮಾಡಲಾಗುವುದು ಎನ್ನುವ ಮಾತನ್ನು ಹೇಳಿದ್ದಾರೆ.
ನಲವತ್ತು ವರ್ಷಗಳಿಂದ ಪಕ್ಷದ ಕಾರ್ಯಕರ್ತನಾಗಿ ನಿಷ್ಠೆಯಿಂದ ಕೆಲಸ ಮಾಡುತ್ತ ಬಂದಿರುವೆ. ಇಂತಹ ಬೆಳವಣಿಗೆಗಳು ಪಕ್ಷ ಸಂಘಟನೆ ದೃಷ್ಟಿಯಿಂದ ಒಳ್ಳೆಯದಲ್ಲ. ಇದಕ್ಕೆ ಆದಷ್ಟುಬೇಗ ಇತ್ಯರ್ಥಗೊಳ್ಳಬೇಕು. ಕಳೆದ ಚುನಾವಣೆಯಲ್ಲಿ ಪಾಂಪ್ಲೆಟ್ ಗಳನ್ನು ಹಂಚಿ, ಮನೆ ಮನೆಗೆ ಹೋಗಿ ಪ್ರಚಾರ ಮಾಡಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಲಕ್ಷಾಂತರ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ ಎನ್ನುವುದನ್ನು ಅವರು ನೆನಪಿಸುವ ಪ್ರಯತ್ನ ಮಾಡಿದ್ದಾರೆ.
ಜನರ ಪ್ರೀತಿ ಗಳಿಸಬೇಕು:
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸರ್ಕಾರ ರಾಜ್ಯದ ಜನತೆಗೆ ಒಳ್ಳೆಯ ಕಾರ್ಯಕ್ರಮ ನೀಡಿದೆ. ಇನ್ನಷ್ಟು ಒಳ್ಳೆಯ ಕಾರ್ಯಕ್ರಮ ನೀಡಬೇಕಿದೆ. ಆ ಮೂಲಕ ಜನರ ಪ್ರೀತಿ, ವಿಶ್ವಾಸ ಗಳಿಸುವ ಕೆಲಸ ಮಾಡಬೇಕಿದೆ ಎನ್ನುವ ಅಭಿಪ್ರಾಯ ಕಾರ್ಯಕರ್ತರದ್ದಾಗಿದೆ ಎಂದು ನಂಜಯ್ಯನಮಠ ಅವರು ಹೇಳಿದ್ದು, ಇಂದಿನ ಸನ್ನಿವೇಶದಲ್ಲಿ ಅರ್ಥ ಗರ್ಭಿತವಾಗಿದೆ.
ಕಾರ್ಯಕರ್ತರ ಶ್ರಮ, ಅವರ ಅಭಿಪ್ರಾಯಗಳ ಬಗೆಗೆ ಕೇಳುವವರೆ ಇಲ್ಲವಾಗಿದೆ. ಬರಿ ಡಿನ್ನರ್ ಪಾರ್ಟಿಗಳು, ದೆಹಲಿ ಪ್ರವಾಸ ಗುಂಗಿನಲ್ಲಿ ಬಹುತೇಕ ಕಾಂಗ್ರೆಸ್ ಶಾಸಕರು ಇದ್ದಾರೆ. ಪಕ್ಷದ ಹೈಕಮಾಂಡ್ ಕಾರ್ಯಕರ್ತರ ಭಾವನೆಗೆ ಸ್ಪಂದಿಸುವ ಮನಸ್ಸು ಮಾಡಬೇಕಿದೆ. ಆ ಮೂಲಕ ಸದ್ಯದ ಬೆಳವಣಿಗೆಗಳಿಗೆ ಬ್ರೇಕ್ ಹಾಕಬೇಕಿದೆ. ಈ ಕಾರ್ಯಕ್ಕೆ ಕಾಂಗ್ರೆಸ್ ಹೈಕಮಾಂಡ್ ಎಷ್ಟರ ಮಟ್ಟಿಗೆ ಸ್ಪಂದಿಸಲಿದೆ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.
- ವಿಠ್ಠಲ ಆರ್. ಬಲಕುಂದಿ




