ಚಾಲುಕ್ಯ ಉತ್ಸವಕ್ಕೂ ಸಿದ್ದರಾಮಯ್ಯ ಉತ್ಸಾಹ ತೋರಲಿ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜಕಾರಣದ ಇತಿಹಾಸದಲ್ಲಿ 2018ರ ವಿಧಾನಸಭೆ ಚುನಾವಣೆ ಅವರ ಇಡೀ ಭವಿಷ್ಯದ ರಾಜಕಾಣರಕ್ಕೆ ಅಗ್ನಿ ಪರೀಕ್ಷೆ ಕಾಲವಾಗಿತ್ತು ಎನ್ನುವುದು ನಿರ್ವಿವಾದವಾದದು. ಅಂತಹ ಪರೀಕ್ಷೆಯನ್ನು ಪಾಸು ಮಾಡಿಸಿದ್ದು ಬಾದಾಮಿ ವಿಧಾನಸಭೆ ಕ್ಷೇತ್ರ. ಒಂದೊಮ್ಮೆ ಬಾದಾಮಿ ಕ್ಷೇತ್ರ ಸಿದ್ದರಾಮಯ್ಯ ಅವರನ್ನು ಕೈ ಹಿಡಿಯದಿದ್ದರೆ ಅವರ ರಾಜಕೀಯ ಭವಿಷ್ಯಕ್ಕೆ ಗ್ರಹಣ ಹಿಡಿಯುತ್ತಿತ್ತು ಎನ್ನುವ ಮಾತು ಇಂದಿಗೂ ರಾಜಕೀಯ ವಲಯದಲ್ಲಿ ಆಗಾಗ್ಗೆ ವಿಶ್ಲೇಷಣೆಗೆ ಒಳಗಾಗುತ್ತಲೇ ಇರುತ್ತದೆ.

ಸಿದ್ದರಾಮಯ್ಯ ಅವರಿಗೆ ರಾಜಕೀಯ ಪುನರ್ ಜನ್ಮ ನೀಡಿದ ಬಾದಾಮಿ ಕ್ಷೇತ್ರದಿಂದ ಅವರು ಆಯ್ಕೆ ಆದ ಬಳಿಕ ಐದು ವರ್ಷ ವಿಧಾನಸಭೆ ಪ್ರತಿಪಕ್ಷ ನಾಯಕರಾಗಿ, ಬಳಿಕ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಅವರು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲಿಲ್ಲ. ಬಾದಾಮಿ ನಂಟು ಉಳಿಸಿಕೊಳ್ಳಲಿಲ್ಲ ಎನ್ನುವುದು ಅವರ ಅಭಿಮಾನಿಗಳಿಗೆ ಬೇಸರದ ಸಂಗತಿ ಆಗಿದೆ. 2023ರಲ್ಲಿ ಮುಖ್ಯಮಂತ್ರಿ ಆದ ಬಳಿಕ ಅವರು ಬಾದಾಮಿ ಕ್ಷೇತ್ರದ ಕಡೆಗೆ ತಿರುಗಿಯೂ ನೋಡಿಲ್ಲ.

ಪ್ರವಾಸಿಗರ ನೆಚ್ಚಿನ ತಾಣ:

ಬಾದಾಮಿ ಕ್ಷೇತ್ರದ ಇತಿಹಾಸ ಪ್ರಸಿದ್ದ ವಾಸ್ತುಶಿಲ್ಪ ಕಲೆಗಳ ತಾಣ, ಬಾದಾಮಿ ಚಾಲುಕ್ಯರ ರಾಜಧಾನಿ, ಚಾಲುಕ್ಯ ರಾಜ ಇಮ್ಮಡಿ ಪುಲಿಕೇಶಿ ಕನೌಜದ ದೋರೆ ಹರ್ಷವರ್ಧನನ್ನು ಸೋಲಿಸುವ ಮೂಲಕ ಇಡೀ ದೇಶವನ್ನು ಆಳಿದ ಮೊದಲ ದೊರೆ. ಇಂದಿಗೂ ಇತಿಹಾಸ ತಜ್ಞರಿಗೆ, ಪ್ರವಾಸಿಗರಿಗೆ ಅಚ್ಚು ಮೆಚ್ಚಿನ ತಾಣ. ಇಂತಹ ಸ್ಥಾನದ ಮಹಿಮೆಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಾದಾಮಿ ಹೆಸರನ್ನು ಇನ್ನಷ್ಟು ಗಟ್ಟಿಯಾಗಿ ಉಳಿಸುವ ಪ್ರಯತ್ನ 1990ರ ದಶಕದಲ್ಲಿ ರಾಜ್ಯದ ಮೊದಲ ಕಾಂಗ್ರೆಸ್ಸೇತರ ಜನತಾದಳ ಸರ್ಕಾರ ಪಟ್ಟದಕಲ್ಲು ರಾಷ್ಟ್ರೀಯ ಉತ್ಸವ ಆಚರಣೆ ಮೂಲಕ ನಾಂದಿ ಹಾಡಿತು.

ಪಟ್ಟದಕಲ್ಲು ಉತ್ಸವ:

ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಯ ಮಹೋನ್ನತ ಉದ್ದೇಶ ಹೊತ್ತು ಆರಂಭಿಸಿದ ಪಟ್ಟದಕಲ್ಲು ಉತ್ಸವ ನಿರಂತರವಾಗಿ ನಡೆಯಲೇ ಇಲ್ಲ. ಪಟ್ಟದ ಕಲ್ಲು ಉತ್ಸವ ಹತ್ತು ಹಲವು ಏಳು ಬೀಳುಗಳ ಮಧ್ಯೆ ಚಾಲುಕ್ಯ ಉತ್ಸವವಾಗಿ ರೂಪಗೊಂಡು ಆಗಾಗ್ಗೆ ನಡೆಯುತ್ತ ಬಂದರೂ ಕಳೆದೊಂದು ದಶಕದಿಂದ ಉತ್ಸವಕ್ಕೆ ಗ್ರಹಣ ಹಿಡಿದಿದೆ. ಇದರ ಬಳಿಕ ಆರಂಭಗೊಂಡಿರುವ ಹಂಪಿ ಉತ್ಸವ, ಕಿತ್ತೂರು ಉತ್ಸವಗಳು ನಿರಂತರವಾಗಿ ನಡೆಯುತ್ತಲೇ ಇವೆ. ಏತನ್ಮಧ್ಯೆ ಜಿಲ್ಲೆಯಲ್ಲಿ ಆರಂಭಗೊಂಡ ರನ್ನ ಉತ್ಸವ ಮಾತ್ರ ಆಗಾಗ್ಗೆ ನಡೆಯುತ್ತಲೇ ಇದೆ. ಅದೇನು ಗ್ರಹಚಾರ ಬಡಿದಿದೆಯೋ ಏನೋ ಕಳೆದೊಂದು ದಶಕದಿಂದ ಚಾಲುಕ್ಯ ಉತ್ಸವ ಜನಮಾನಸದಿಂದಲೇ ಮರೆಯಾದಂತಾಗಿದೆ. ಉತ್ಸವ ಆಚರಣೆ ಕೂಗು ಕೇಳಿ ಬಂದರೂ ಅದು ಅರಣ್ಯರೋಧನ ಎನ್ನುವಂತಾಗಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ಎನ್ನದೇ ಜನತೆಗೆ ವಿಧಿಯಿಲ್ಲದಾಗಿದೆ.

ಉತ್ಸಾಹ ತೋರುತ್ತಿಲ್ಲ:

ಬಾದಾಮಿ ವಿಧಾನಸಭೆ ಕ್ಷೇತ್ರದಿಂದ ರಾಜಕೀಯ ಪುನರಜನ್ಮ ಪಡೆದು ಪ್ರತಿಪಕ್ಷ ನಾಯಕರಾಗಿ, ಸದ್ಯ ರಾಜ್ಯದ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರಾದರೂ ಚಾಲುಕ್ಯ ಉತ್ಸವ ಆಚರಣೆಗೆ ಉತ್ಸಾಹ ತೋರಬೇಕಿತ್ತು. ಬಾದಾಮಿ ಕ್ಷೇತ್ರವನ್ನೆ ಮರೆತಿರುವ ಅವರಿಗೆ ಚಾಲುಕ್ಯ ಉತ್ಸವ ಹೇಗೆ ನೆನಪಾದೀತು ಎಂದು ಜನ ಆಡಿಕೊಳ್ಳುವಂತಾಗಿದೆ. ಜತೆಗೆ ರನ್ನ ಉತ್ಸವವನ್ನು ಅದ್ಧೂರಿಯಾಗಿ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವರು ಚಾಲುಕ್ಯ ಉತ್ಸವದ ಆಚರಣೆಗೆ ಅಷ್ಟಾಗಿ ಉತ್ಸಾಹ ತೋರುತ್ತಿಲ್ಲ ಎನ್ನುವ ಅಭಿಪ್ರಾಯ ಕೂಡಾ ಜನಜನಿತವಾಗಿದೆ.

ಮುಖ್ಯಮಂತ್ರಿ ಕರೆಸುವ ವಿಚಾರ:

ಬಾದಾಮಿ ಶಾಸಕರ ಪ್ರಯತ್ನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಭರವಸೆ ಹಿನ್ನೆಲೆಯಲ್ಲಿ ಈ ಬಾರಿ ಚಾಲುಕ್ಯ ಉತ್ಸವ ನಡೆಯಲಿದೆ ಎನ್ನುವ ಜನತೆಯ ಆಶಯ ಚಿಗುರಿತ್ತು. ಮಾರ್ಚ್ ನಲ್ಲಿ ರನ್ನ ಉತ್ಸವದ ಜತೆಗೆ ಆಗಬೇಕಿದ್ದ ಚಾಲುಕ್ಯ ಉತ್ಸವ ಆಗಲೇ ಇಲ್ಲ. ಬಳಿಕ ಉಸ್ತುವಾರಿ ಸಚಿವರು “ನವೆಂಬರ್ ಮೊದಲ ವಾರದಲ್ಲಿ ಉತ್ಸವ ನಡೆಸಲು ನಿರ್ಧರಿಸಲಾಗಿದೆ. ಉತ್ಸವದ ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಕರೆಯಿಸುವ ನಿರ್ಧಾರ ಮಾಡಲಾಗಿದೆ. ಎಲ್ಲರೂ ಸೇರಿ ಅವರನ್ನು ಭೇಟಿ ಮಾಡಿ ಉತ್ಸವದ ಉದ್ಘಾಟನೆಗೆ ಸ್ವಾಗತಿಸುತ್ತೇವೆ” ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಕಳೆದ ವಾರವಷ್ಟೆ ಜಿಲ್ಲಾಧಿಕಾರಿಗಳು ಸಭೆ ನಡೆಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಎಂದು ಹೇಳಿದರು. ಹಾಗಾದರೆ ಮುಖ್ಯಮಂತ್ರಿಗಳು ಉತ್ಸವದ ಉದ್ಘಾಟನೆಗೆ ಬರಲು ಒಪ್ಪಲಿಲ್ಲವೋ ಹೇಗೆ ಎನ್ನುವುದು ಮಾತ್ರ ನಿಗೂಢವಾಗಿ ಉಳಿದಿದೆ.

ಉತ್ಸವದ ಲಕ್ಷಣಗಳಿಲ್ಲ:

ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆ ಪ್ರಕಾರ ನವೆಂಬರ್ ಮೊದಲ ವಾರದಲ್ಲಿ ಉತ್ಸವ ನಡೆಯಬೇಕಿತ್ತು. ಸದ್ಯದ ಸ್ಥಿತಿ ನೋಡಿದಾಗ ನವೆಂಬರ್‌ನಲ್ಲಿ ಉತ್ಸವ ನಡೆಯುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಉತ್ಸವದ ಉದ್ಘಾಟನೆಗೆ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳನ್ನು ಆಹ್ವಾನಿಸಿದರೋ ಇಲ್ಲವೋ ಏನ್ನುವುದೂ ಗೊತ್ತಾಗಿಲ್ಲ. ಜಿಲ್ಲಾಡಳಿದಿಂದ ಅಗತ್ಯ ಪೂರ್ವಭಾವಿ ಸಿದ್ಧತೆಗಳೂ ನಡೆದಿಲ್ಲ. ಸಮಿತಿಗಳ ರಚನೆ ಕೂಡ ಆಗಿಲ್ಲ. ಇದೆಲ್ಲವನ್ನೂ ಗಮನಿಸಿದಾಗ ನವೆಂಬರ್ ತಿಂಗಳಿನಲ್ಲಿ ಉತ್ಸವ ನಡೆಯುವುದು ಅನುಮಾನ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿಯೇ ಕೇಳಿ ಬರುತ್ತಿದೆ.

ಸಿಎಂ ಮನಸ್ಸು ಮಾಡಬೇಕು:

ಬಾದಾಮಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲುಕ್ಯ ಉತ್ಸವ ನಡೆಸಲು ಮನಸ್ಸು ಮಾಡಬೇಕು. ಆ ಮೂಲಕ ನಿಂತು ಹೋಗಿರುವ ಉತ್ಸವದ ಪುನಾರಂಭಕ್ಕೆ ಅವರು ಕಾರಣರಾಗಬೇಕು. ಆ ಮೂಲಕ ಬಾದಾಮಿ ನಂಟು ಉಳಿಸಿಕೊಂಡು, ಬಾದಾಮಿ ಕ್ಷೇತ್ರದಲ್ಲಿನ ಪ್ರವಾಸಿ ತಾಣಗಳ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ಕೆಲಸಕ್ಕೆ ಮುಖ್ಯಮಂತ್ರಿಗಳು ಮುಂದಾಗಬೇಕು. ಅವರ ಕಾಲದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಹಿನ್ನೆಲೆಯಲ್ಲಿ ಬನಶಂಕರಿ ಬಳಿ ನಿರ್ಮಿಸಲು ಆರಂಭಿಸಲಾದ ತ್ರಿಸ್ಟಾರ್ ಹೊಟೆಲ್ ಎಲ್ಲಿಗೆ ಬಂದಿದೆ ಎನ್ನುವುದನ್ನು ಒಮ್ಮೆಯಾದರೂ ತಿರುಗಿ ನೋಡಬೇಕಿದೆ.

  • ವಿಠ್ಠಲ ಆರ್. ಬಲಕುಂದಿ.
Scroll to Top