ಬಾಗಲಕೋಟೆ: ಬಾದಾಮಿ ಚಾಲುಕ್ಯ ಉತ್ಸವಕ್ಕೆ ಕಳೆದ 10 ವರ್ಷಗಳಿಂದ ಆವರಿಸಿಕೊಂಡಿರುವ ರಾಜಕೀಯ ಕರಿನೆರಳು ಸದ್ಯಕ್ಕೆ ಸರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಲಿ ಎನ್ನುವ ಉದ್ದೇಶದಿಂದ 1980ರ ದಶಕದ ಅಂತ್ಯದಲ್ಲಿ ಆರಂಭಿಸಲಾದ ರಾಷ್ಟ್ರೀಯ ಚಾಲುಕ್ಯ ಉತ್ಸವ ಇಚ್ಛಾಶಕ್ತಿಯ ಕೊರತೆ ಫಲವಾಗಿ ಕಳೆದ ಹತ್ತು ವರ್ಷಗಳಿಂದ ನಿಂತು ಹೋಗಿದೆ.
ದಶಕದ ಬಳಿಕ ಈ ವರ್ಷವಾದರೂ ಅದ್ಧೂರಿ ಉತ್ಸವ ನಡೆಯಲಿದೆ ಎನ್ನುವ ಉತ್ಸಾಹದ ಮಧ್ಯೆ ಪದೆ ಪದೆ ಮುಂದೂಡಲ್ಪಡುತ್ತಿದೆ. ಈಗಾಗಲೇ ಹಲವು ಬಾರಿ ಮುಂದಕ್ಕೆ ಹೋಗಿದ್ದ ಚಾಲುಕ್ಯ ಉತ್ಸವ ಡಿ.19ರಿಂದ ಮೂರು ದಿನಗಳ ಕಾಲ ನಡೆಯಬೇಕಿತ್ತು. ಬೆಳಗಾವಿ ಅಧಿವೇಶನ, ಬನಶಂಕರಿ ಜಾತ್ರೆ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮುಂದುಡಲ್ಪಟ್ಟಿದೆ.
ರಾಜಕಾರಣದ ವಾಸನೆ:
ಉತ್ಸವ ಮುಂದೂಡಿಕೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಏನೇ ಸಮಜಾಯಿಷಿ ನೀಡಿದರೂ ಇದರ ಹಿಂದೆ ಕಾಂಗ್ರೆಸ್ ಪಾಳೆಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಮುಖ್ಯ ಕಾರಣ ಎನ್ನುವ ಮಾತುಗಳು ಜನಜನಿತವಾಗಿವೆ. ಕಳೆದೊಂದು ವರ್ಷದಿಂದ ಚಾಲುಕ್ಯ ಉತ್ಸವ ಆಚರಣೆ ಬಗೆಗೆ ಹತ್ತಾರು ಬಾರಿ ಸಭೆಗಳು ನಡೆದು, ಮುಖ್ಯಮಂತ್ರಿಗಳು ದಿನಾಂಕ ನೀಡಿದ ಕೂಡಲೇ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎನ್ನುವ ಮಾತನ್ನು ಉಸ್ತುವಾರಿ ಸಚಿವರು ಆಗಾಗ್ಗೆ ಹೇಳುತ್ತಲೇ ಇದ್ದರು. ಇತ್ತೀಚೆಗಷ್ಟೆ ಜಿಲ್ಲಾ ಉಸ್ತುವಾರಿ ಸಚಿವರು ಬೆಳಗಾವಿಯ ಅಧಿವೇಶನದಲ್ಲಿ ಭಾಗವಹಿಸಲು ಮುಖ್ಯಮಂತ್ರಿಗಳು ಆಗಮಿಸುತ್ತಾರೆ. ಆ ವೇಳೆ ಅಧಿವೇಶನದ ಕೊನೆಯ ದಿನ ಬಾದಾಮಿಗೆ ಆಗಮಿಸಿ ಚಾಲುಕ್ಯ ಉತ್ಸವ ಆಚರಣೆಗೆ ಚಾಲನೆ ನೀಡಲಿದ್ದಾರೆ. ಆ ನಿಟ್ಟಿನಲ್ಲಿ ಎಲ್ಲ ಸಿದ್ಧತೆಗಳು ನಡೆಯುತ್ತಿವೆ ಎಂದು ಹೇಳಿದ್ದರು.
ಇದೀಗ ಬೆಳಗಾವಿ ಅಧಿವೇಶನ ಮತ್ತು ಬಾದಾಮಿ ಬನಶಂಕರಿದೇವಿ ಜಾತ್ರೆಯ ಹಿನ್ನೆಲೆಯಲ್ಲಿ ಉತ್ಸವವನ್ನು ಜನೆವರಿ 17ಕ್ಕೆ ಮಂದೂಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಮುಖ್ಯಮಂತ್ರಿಗಳು ಅಧಿವೇಶನಕ್ಕೆ ಬಂದಾಗ ಇಲ್ಲಿಗೆ ಬಂದು ಉತ್ಸವ ಚಾಲನೆ ನೀಡಲು ಅನುಕೂಲ ಆಗಲಿದೆ ಎಂದು ಹೇಳಿದವರು ಈಗ ತಮ್ಮ ಮಾತಿನ ದಾಟಿ ಬದಲಾಯಿಸಿ ಅಧಿವೇಶನದ ಗಡಿಬಿಡಿ, ಜಾತ್ರೆಯ ಕಾರಣ ಹೇಳುತ್ತಿದ್ದಾರೆ. ಗಮನಾರ್ಹ ಅಂಶವೆಂದರೆ ಈ ಹಿಂದೆ ಚಾಲುಕ್ಯ ಉತ್ಸವವನ್ನು ಬನಶಂಕರಿ ದೇವಿ ಜಾತ್ರೆಯ ಸಂದರ್ಭದಲ್ಲೇ ನಡೆಸಿದ ಉದಾಹರಣೆ ಇವೆ. ಜಾತ್ರೆಯ ಸಮಯದಲ್ಲಿ ಉತ್ಸವ ನಡೆಸುವುದರಿಂದ ಜನತೆಗೂ ಬಂದು ಹೋಗಲು ಅನುಕೂಲವಾಗಲಿದೆ ಎನ್ನುವ ಅಭಿಪ್ರಾಯ ಆಗಿತ್ತು.
ರಾಜಕೀಯ ಕರಿನೆರಳು:
ಚಾಲುಕ್ಯ ಉತ್ಸವ ಆಚರಣೆ ಮುಂದೂಡಿಕೆಗೆ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ ಕುರಿತ ಚರ್ಚೆಯೇ ನಿಜವಾದ ಕಾರಣವಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಬೆಳಗಾವಿ ಅಧಿವೇಶನದಲ್ಲೂ ನಿತ್ಯ ನಾಯಕತ್ವ ಬದಲಾವಣೆಗೆ ಸಂಬಧಿಸಿದಂತೆ ಪರ, ವಿರೋಧ ಹೇಳಿಕೆಗಳು ಕಾಂಗ್ರೆಸ್ ಪಾಳೆಯದಲ್ಲಿ ವ್ಯಕ್ತವಾಗುತ್ತಿವೆ. ಗಂಡ – ಹೆಂಡತಿ ನಡುವಿನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಕಾಂಗ್ರೆಸ್ ಪಾಳೆಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳು ಈ ಬಾರಿಯ ಚಾಲುಕ್ಯ ಉತ್ಸವ ಆಚರಣೆ ಅಡ್ಡಿಯಾಗಿ ಪರಿಣಮಿಸಿವೆ.
ಡಿ.19ರಂದು ಅಧಿವೇಶನ ಮುಕ್ತಾಯವಾಗುತ್ತಿದ್ದಂತೆ ಮುಖ್ಯಮಂತ್ರಿಗಳು ಬಾದಾಮಿಗೆ ಆಗಮಿಸಿ ಚಾಲುಕ್ಯ ಉತ್ಸವಕ್ಕೆ ಚಾಲನೆ ನೀಡಬೇಕಿತ್ತು. ಸದ್ಯ ಕಾಂಗ್ರೆಸ್ ಪಾಳೆಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳಿಂದಾಗಿ ಅವರು ಬಾದಾಮಿಗೆ ಬರಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮತ್ತೊಂದು ದಿನಾಂಕ ನಿಗದಿ ಪಡಿಸಿದ್ದಾರೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
ಗಮನಾರ್ಹ ಅಂಶವೆಂದರೆ ಅಧಿವೇಶನ ಮುಕ್ತಾಯವಾಗುತ್ತಿದ್ದಂತೆ ಬೆಳಗಾವಿಯಲ್ಲಿ ನಡೆಯತ್ತಿರುವ ನಾಯಕತ್ವ ಬದಲಾವಣೆ ವಿವಾದ ದೆಹಲಿಗೆ ಶಿಫ್ಟ್ ಆಗುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿವೆ. ಮುಖ್ಯಮಂತ್ರಿಗಳೂ ದೆಹಲಿಗೆ ತೆರಳುವ ಗಡಬಿಡಿ ಇರುವ ಹಿನ್ನೆಲೆಯಲ್ಲಿ ಚಾಲುಕ್ಯ ಉತ್ಸವ ಮುಂದೂಡಿಕೆ ಆಗಿದೆ.
ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿನ ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ವಿವಾದ ಸುಖಾಂತ್ಯಗೊಂಡಿದ್ದಲ್ಲಿ ಮಾತ್ರ ಮುಖ್ಯಮಂತ್ರಿಗಳು ಜನೆವರಿ 17ರಂದು ನಿಗದಿ ಆಗಿರುವ ಚಾಲುಕ್ಯ ಉತ್ಸವಕ್ಕೆ ಆಗಮಿಸಲಿದ್ದಾರೆ. ಇಲ್ಲದೆ ಹೋದಲ್ಲಿ ಸದ್ಯ ನಿಗದಿಗೊಂಡಿರುವ ದಿನಾಂಕವೂ ಮುಂದೂಡಿಕೆ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಹತ್ತು ವರ್ಷಗಳ ಬಳಿಕವಾದರೂ ನಡೆಯಬೇಕಿರುವ ಚಾಲುಕ್ಯ ಉತ್ಸವ ಆಚರಣೆಗೆ ಯಾವಾಗ ಕಾಲ ಕೂಡಿ ಬರಲಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಯಕ್ಷಪ್ರಶ್ನೆಯಾಗಿ ಹುಟ್ಟುಕೊಂಡಿದೆ.
- ವಿಠ್ಠಲ ಆರ್. ಬಲಕುಂದಿ




