ಬಾಗಲಕೋಟೆ: ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸುವ ಮಹೋನ್ನತ ಉದ್ದೇಶದಿಂದ ಆರಂಭಿಸಲಾಗಿದ್ದ ಚಾಲುಕ್ಯ ಉತ್ಸವ ಕಳೆದೊಂದು ದಶಕದಿಂದ ನಿಂತೆ ಹೋಗಿತ್ತು. ಇದೀಗ ಮತ್ತೆ ಚಾಲುಕ್ಯ ಉತ್ಸವದ ಗತ ವೈಭವವನ್ನು ನೆನಪಿಸುವ ಕ್ಷಣಗಣನೆ ಆರಂಭಗೊಂಡಿದೆ. ಸೋಮವಾರದಿಂದ ಮೂರು ದಿನಗಳ ಕಾಲ ನಡೆಯುವ ಚಾಲುಕ್ಯ ಉತ್ಸವಕ್ಕೆ ಚಾಲುಕ್ಯರ ನಾಡು ಉತ್ಸಾಹದಿಂದ ಸಜ್ಜುಗೊಂಡಿದೆ.
ವೇದಿಕೆ ಸಜ್ಜು:
ಬಾದಾಮಿಯ ಎಪಿಎಂಸಿ ಎದುರಿನ ವಿಶಾಲ ಪ್ರಾಂಗಣದಲ್ಲಿ ಚಾಲುಕ್ಯರ ಕಲೆ, ವಾಸ್ತುಶಿಲ್ಪವನ್ನು ಸ್ಮರಿಸುವ ಬೃಹತ್ ವೇದಿಕೆ ಸಿದ್ದವಾಗಿದ್ದು, ಕಲೆ, ನೃತ್ಯ, ಸಂಸ್ಕೃತಿ, ಸಂಗೀತ ಪ್ರದರ್ಶನವಷ್ಟೆ ಬಾಕಿ. ಇದಕ್ಕೂ ಪೂರ್ವ ಭಾವಿಯಾಗಿ ಭಾನುವಾರ ಹೆಲಿಕಾಪ್ಟರ್ ಮೂಲಕ ಬಾದಾಮಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಜತೆಗೆ ಗ್ರಾಮೀಣ ಕ್ರೀಡೆಗಳ ಪ್ರದರ್ಶನ ಅತ್ಯಂತ ಉತ್ಸಾಹದಿಂದ ನಡೆದವು.
ನಾಡದೊರೆಯಿಂದ ಚಾಲನೆ:
ನಾಡದೋರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಸಂಜೆ ಬಾದಾಮಿಯಲ್ಲಿ ಅದ್ಧೂರಿ ಚಾಲನೆ ನೀಡಲಿದ್ದಾರೆ. ನಾಡದೊರೆ ಸ್ವಾಗತಕ್ಕಾಗಿ ಇಡೀ ನಗರದಲ್ಲಿ ಬ್ಯಾನರ್ಸ್ ಮತ್ತು ಪ್ಲೆಕ್ಸ್ ಅರ್ಭಟ ಕೂಡ ಜೋರಾಗಿದೆ. ಇದೇ ವೇಳೆ ಚಾಲುಕ್ಯ ದೊರೆ ಇಮ್ಮಡಿ ಪುಲಿಕೇಶಿ ಅವರ ಪ್ರತಿಮೆ ಅನಾವರಣಕ್ಕಾಗಿ ಭೂಮಿಪೂಜಾ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳು ನೆರವೇರಿಸಲಿದ್ದಾರೆ.
ಭರವಸೆಗಳ ಬುತ್ತಿಯ ನಿರೀಕ್ಷೆ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಪುನರ್ ಜನ್ಮ ನೀಡಿರುವ ಬಾದಾಮಿ ಕ್ಷೇತ್ರಕ್ಕೆ ಎರಡನೇ ಬಾರಿಗೆ ಮುಖ್ಯಮಂತ್ರಿ ಆದ ಬಳಿಕ ಮೊದಲ ಬಾರಿಗೆ ಚಾಲುಕ್ಯ ಉತ್ಸವಕ್ಕೆ ಚಾಲನೆ ನೀಡಲು ಆಗಮಿಸುತ್ತಿದ್ದಾರೆ.
ರಾಜಕೀಯ ಪುನರ್ ಜನ್ಮ ನೀಡಿರುವ ಬಾದಾಮಿ ಕ್ಷೇತ್ರದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಘೋಷಣೆ ಮಾಡುತ್ತಾರೋ ಹೇಗೆ ಎನ್ನುವುದು ಕುತೂಹಲದ ಸಂಗತಿ ಆಗಿದೆ.
ಪ್ರಸಕ್ತ ಸಾಲಿನ ಮುಂಗಡ ಪತ್ರದ ಸಿದ್ಧತೆಯಲ್ಲಿರುವ ಮುಖ್ಯಮಂತ್ರಿಗಳು ಬಾದಾಮಿ ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಬಜೆಟ್ ನಲ್ಲಿ ಏನು ಕೊಡುಗೆ ಕೊಡಬಹುದು ಎನ್ನುವುದನ್ನು ಘೋಷಣೆ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿ ಜನತೆಯೂ ಇದ್ದಾರೆ.
ನೃತ್ಯ ವೈಭವದ ಕಲರವ:
ಮೊದಲ ದಿನ ಬಾದಾಮಿಯಲ್ಲಿ ಚಾಲನೆ ಸಿಗಲಿರುವ ಚಾಲುಕ್ಯ ಉತ್ಸವ ಎರಡನೇ ದಿನ ಪಟ್ಟದಕಲ್ಲು, ಮೂರನೇ ದಿನ ಐಹೊಳೆಯಲ್ಲಿ ನಡೆಯಲಿದೆ. ಒಟ್ಟಾರೆ ಮೂರು ದಿನಗಳ ಕಾಲ ಚಾಲುಕ್ಯ ನಾಡಿನಲ್ಲಿ ಚಾಲುಕ್ಯರ ಕಲೆ, ಸಂಗೀತ, ನೃತ್ಯವೈಭವದ ಕಲರವ ಅನುರಣಿಸಲಿದೆ.




