ರಾಜ್ಯದಲ್ಲಿನ ಅಧಿಕಾರೂಢ ಕಾಂಗ್ರೆಸ್ಸು ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ವಿಚಾರದಲ್ಲಿ ಮುಳುಗೆಳುತ್ತಿರುವಾಗ ದಿ. ಶಾಸಕ ಎಚ್. ವೈ. ಮೇಟಿ ಅವರ ನಿಧನದಿಂದ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಭಾಪತಿ ಸ್ಥಾನವೂ ತೆರವಾಗಿದೆ. ಈ ಸ್ಥಾನ ಭರ್ತಿಯ ಅಗತ್ಯವಿದೆಯಾದರೂ, ಇದರತ್ತ ಗಮನ ಹರಿಸಲು ಸದ್ಯ ಕಾಂಗ್ರೆಸ್ಸಿನಲ್ಲಿ ಯಾರಿಗೂ ಪುರುಸೊತ್ತು ಇಲ್ಲವಾಗಿದೆ.
ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಸಭಾಪತಿ ಸ್ಥಾನ ಖಾಲಿ ಇರುವುದು ಇದೇ ಮೊದಲಲ್ಲ. 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಒಂದು ವರ್ಷಕ್ಕೂ ಅಧಿಕ ಕಾಲ ಸಭಾಪತಿ ಸ್ಥಾನ ಖಾಲಿಯೇ ಇತ್ತು. ದಿ. ಶಾಸಕ ಎಚ್.ವೈ. ಮೇಟಿ ಅವರು ಮನಸ್ಸು ಮಾಡಿದ್ದಲ್ಲಿ, ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಸಭಾಪತಿ ನೇಮಕ ಮಾಡಿಸಬಹುದಾಗಿತ್ತು. ಆದರೆ ಅವರು ಹಾಗೆ ಮಾಡಲಿಲ್ಲ. ಬಾಗಲಕೋಟೆ ಕಾಂಗ್ರೆಸ್ ಪಾಳೆಯದಲ್ಲಿ ಸಭಾಪತಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗಿತ್ತು. ಯಾರನ್ನು ನೇಮಕ ಮಾಡಬೇಕು ಎನ್ನುವ ಗೊಂದಲದಲ್ಲಿ ವರ್ಷವೇ ಕಳೆಯಿತು.
ಸಭಾಪತಿ ಸ್ಥಾನದ ಮೇಲೆ ಹಲವರ ಕಣ್ಣು:
ಕೊನೆಗೆ ಮೇಟಿ ಅವರೇ ಬಿಟಿಡಿಎ ಸಭಾಪತಿ ಸ್ಥಾನವನ್ನು ಅಲಂಕರಿಸಿದರು. ಆದರೂ ಸದಸ್ಯರ ನೇಮಕ ಮಾಡಲೇ ಇಲ್ಲ. ಈಗಲೂ ಬಿಟಿಡಿಎಗೆ ಆಡಳಿತ ಮಂಡಳಿ ನೇಮಕ ಮಾಡಬೇಕು ಎನ್ನುವ ಮನಸ್ಸು ಯಾರಿಗೂ ಇಲ್ಲ. ಆದರೆ ತೆರವಾಗಿರುವ ಸಭಾಪತಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಅಧಿಕವಾಗಿದೆ. ಯುವ ನಾಯಕರಿಂದ ಹಿಡಿದು ಹಿರಿಯ ಕಾಂಗ್ರೆಸ್ಸಿಗರು ಕೂಡಾ ಸಭಾಪತಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಕಾಣದ ಕೈ ಗಳ ಆಡಳಿತ:
ರಾಜ್ಯ ಕಾಂಗ್ರೆಸ್ಸಿನಲ್ಲಿ ನಡೆಯುತ್ತಿರುವ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ವಿಷಯ ಅಂತ್ಯ ಕಾಣುವವರೆಗೆ ಮಾತ್ರವಲ್ಲ, ಬಾಗಲಕೋಟೆ ವಿಧಾನಸಭೆ ಕ್ಷೇತ್ರಕ್ಕೆ ಉಪ ಚುನಾವಣೆ ಆಗುವವರೆಗೂ ಬಿಟಿಡಿಎ ವಿಷಯ ಮುನ್ನೆಲೆ ಬರುವ ಯಾವ ಸಾಧ್ಯತೆಗಳೂ ಇಲ್ಲ.
ಕಾಣದ ಕೈಗಳ ಮೂಲಕವೇ ಅಲ್ಲಿನ ಆಡಳಿತ ಮುಂದುವರಿಯುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. ನವನಗರ ಸಮರ್ಪಕ ನಿರ್ವಹಣೆ ದೃಷ್ಟಿಯಿಂದ ಸಭಾಪತಿ ನೇಮಕ ಅಗತ್ಯವಿದೆಯಾದರೂ ಆ ನಿಟ್ಟಿನಲ್ಲಿ ಗಮನ ಹರಿಸಲು ಯಾರಿಗೂ ಇಷ್ಟವಿಲ್ಲ. ಏಕೆಂದರೆ ಸಭಾಪತಿ ನೇಮಕದ ಬಗೆಗೆ ಪಕ್ಷದ ರಾಜ್ಯ ಮುಖಂಡರ ಬಳಿಗೆ ಹೋಗಿ ವಿಷಯ ಪ್ರಸ್ತಾಪಿಸುವ ಸನ್ನಿವೇಶ ಇಲ್ಲವಾಗಿದೆ.
ಸಚಿವರು ಮನಸ್ಸು ಮಾಡಬೇಕು:
ಬಾಗಲಕೋಟೆ ನಗರದ ಹಿತದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವರು ಮನಸ್ಸು ಮಾಡಬೇಕಿದೆ. ಸದ್ಯ ಅವರು ಮನಸ್ಸು ಮಾಡುವ ಸ್ಥಿತಿಯಲ್ಲಿಲ್ಲ. ಯಾರಿಗೆ ಬೇಕಪ್ಪ ಇಲ್ಲದ್ದನ್ನು ಮೈಮೇಲೆ ಹಾಕಿಕೊಳ್ಳಬೇಕು ಎನ್ನುವ ಭಾವದಲ್ಲಿ ಇದ್ದಂತಿದೆ. ಅದಕ್ಕೆ ಬಲವಾದ ಕಾರಣವೂ ಇದೆ. ರಾಜ್ಯ ಕಾಂಗ್ರೆಸ್ಸಿನಲ್ಲಿ ಏನು ಬೆಳವಣಿಗಳು ಆಗುತ್ತವೋ, ಅದರಲ್ಲಿ ತಮ್ಮ ಸ್ಥಾನ ಮಾನಗಳು ಏನಾಗುತ್ತವೋ ಎನ್ನುವ ಚಿಂತನೆಯಲ್ಲಿದ್ದಾರೆ.
ಸಚಿವ ತಿಮ್ಮಾಪುರ ಅವರ ಜತೆಗೆ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಮಂತ್ರಿಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಶತಾಯ-ಗತಾಯ ಮಂತ್ರಿ ಸ್ಥಾನ ಪಡೆಯಲೇ ಬೇಕು ಎಂದು ಹೊರಟಿದ್ದಾರೆ. ಹಾಗಾಗಿ ಜಿಲ್ಲೆಯ ಶಾಸಕರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಬಿಟಿಡಿಎ ಬಗೆಗೆ ಕಾಳಜಿ ವಹಿಸುವವರು ಯಾರು ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.
ಆಪ್ತರ ಮೂಲಕ ಪ್ರಯತ್ನ:
ಬಿಟಿಡಿಎ ಸಭಾಪತಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಮುಖ್ಯಮಂತ್ರಿಗಳ ಅತ್ಯಾಪ್ತರ ಮೂಲಕ ಪ್ರಯತ್ನಿಸುವ ಚಿಂತನೆಯಲ್ಲಿದ್ದಾರೆ. ಸದ್ಯದ ರಾಜಕೀಯ ಸನ್ನಿವೇಶದಲ್ಲಿ ಅದೆಲ್ಲ ಸಾಧ್ಯವಾಗುತ್ತಾ ಎನ್ನುವುದು ಕುತೂಹಲದ ಸಂಗತಿ ಆಗಿದೆ. ಏತನ್ಮಧ್ಯೆ ಉಪಚುನಾವಣೆ ಬಳಿಕವೇ ಬಿಟಿಡಿಎ ಆಡಳಿತ ಮಂಡಳಿ ನೇಮಕ ಪ್ರಕ್ರಿಯೆ ಆಗಲಿದೆ ಎನ್ನುವ ಮಾತು ಪಕ್ಷ ಕೆಲ ಹಿರಿಯ ಮುಖಂಡರಿಂದ ಕೇಳಿ ಬರುತ್ತಿದೆ. ಉಪ ಚುನಾವಣೆ ಸಮಯದಲ್ಲಿ ಇದೆಲ್ಲ ಏಕೆ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ.
- ವಿಠ್ಠಲ ಆರ್. ಬಲಕುಂದಿ




