ಬಿಜೆಪಿಯು ಜಿಗಜಿಣಗಿ ಅವರನ್ನು ಅಧ್ಯಕ್ಷರನ್ನಾಗಿಸಲಿ: ತಿಮ್ಮಾಪುರ

ಬಾಗಲಕೋಟೆ: ಬಿಜೆಪಿಯು ಸಂಸದ ರಮೇಶ ಜಿಗಜಿಣಗಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ‌ ಮಾಡಲಿ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಸಚಿವ ಆರ್. ಬಿ.‌ತಿಮ್ಮಾಪುರ ಸವಾಲು ಹಾಕಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷ ಹಲವು ಜನ ದಲಿತ ಮುಖಂಡರನ್ನು ಮುಖ್ಯಮಂತ್ರಿಯಾಗಿ ನೇಮಕ‌ ಮಾಡಿದೆ ಎಂದರು.

ದಲಿತ ಸಿಎಂ‌ ಬೇಡಿಕೆ ತಪ್ಪಲ್ಲ:

ರಾಜ್ಯದಲ್ಲಿ ಕೇಳಿ ಬರುತ್ತಿರುವ ದಲಿತ ಮುಖ್ಯಮಂತ್ರಿ ಬೇಡಿಕೆಯಲ್ಲಿ ತಪ್ಪೆನಿದೆ ಎಂದು ಪ್ರತಿಕ್ರಿಯಿಸಿದ ಅವರು ಪಕ್ಷದ ಶಾಸಕಾಂಗ ಸಭೆ ಮತ್ತು ವರಿಷ್ಠರು ಈ ಬಗೆಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಹೇಳಿದರು.

ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಒಳ ಮೀಸಲು ಜಾರಿಗೆ ಬರಲಿದೆ ಎನ್ನುವ ವಿಶ್ವಾಸ ವ್ಯಕ್ತ ಪಡಿಸಿದ ಅವರು ಈ ಬಗ್ಗೆ ಸಂಪುಟದಲ್ಲಿ ಸಾಧಕ-ಬಾಧಕಗಳ ಬಗೆಗೆ‌ ಚರ್ಚಿಸಲಾಗಿದೆ. ರಾಜ್ಯದಲ್ಲಿ‌ ಸರ್ವರಿಗೂ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಸಾಮಾಜಿಕ ಮತ್ತು‌ ಶೈಕ್ಷಣಿಕ ಸರ್ವೆ ಕಾರ್ಯ ಮುಗಿದಿದೆ. ಈ ಬಗೆಗೆ ಸಮಗ್ರವಾಗಿ ಅವಲೋಕಿಸಿದ ಬಳಿಕ ಅದರ ಅನುಷ್ಠಾನದ ಬಗೆಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.

ಯುಕೆಪಿ ಹಂತ-3 ರ ಅನುಷ್ಠಾನಕ್ಕೆ ಬದ್ಧ:

ಕೃಷ್ಣ ಮೇಲ್ದಂಡೆ ಯೋಜನೆ ಹಂತ- 3 ರ ಅನುಷ್ಠಾನಕ್ಕೆ ಬದ್ದವಾಗಿದ್ದು, ನಾಲ್ಕು‌ಆರ್ಥಿಕ ವರ್ಷಗಳಲ್ಲಿ ಯೋಜನೆ ಪೀರ್ಣ ಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಪ್ರತಿ ವರ್ಷ 18 ಸಾವಿರ ಕೋಟಿ ರೂ.ಗಳ ಅನುದಾನ ನೀಡಲು ಸಂಪುಟದಲ್ಲಿ ನಿರ್ಧಾರ ಕೈಗೊಂಡಿದೆ. ಶೀಘ್ರ ಅಗತ್ಯ‌ ಭೂಸ್ವಾಧೀನ‌ ಕಾರ್ಯ ಆರಂಭಗೊಳ್ಳಲಿದೆ ಎನ್ನುವ ವಿಶ್ವಾಸ ವ್ಯಕ್ತ ಪಡಿಸಿದರು.

ಭೂ ಸ್ವಾಧೀನ ಬಳಿಕ ಪುನರ್ ವಸತಿ, ಪುನರ್ ನಿರ್ಮಾಣದ ಬಗೆಗೂ‌ ಚರ್ಚಿಸಲಾಗಿದೆ. ಪುನರ್ ವಸತಿಗೆ ಪರ್ಯಾಯ ಕ್ರಮಗಳ ಬಗೆಗೂ ಸೂಕ್ತ ಚಿಂತನೆ ನಡೆಸಲಾಗಿದೆ.‌ ಸರ್ಕಾರ ಪುನರ್ ವಸತಿ ಕೇಂದ್ರಗಳನ್ನು ಸ್ಥಾಪಿಸಿ, ಅಗತ್ಯ ಮೂಲ ಸೌಕರ್ಯ ಕಲ್ಪಿಸಿದರೂ ಜನ ಸ್ಥಳಾಂತರಗೊಳ್ಳದ‌ ಸ್ಥಿತಿಯನ್ನು ನೋಡುತ್ತಿದ್ದೇವೆ. ಹಾಗಾಗಿ ಪುನರ್ ವಸತಿ ಕಲ್ಪಿಸುವ ಬಗೆಗೆ ಸರ್ಕಾರ ಭವಿಷ್ಯದಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಲಿದೆ ಎಂದರು.

ಕಾರಜೋಳರು ನೀರಾವರಿ ಮಂತ್ರಿ ಆದಾಗ ಸಂತಸ ಪಟ್ಟಿದ್ದೆ:

ಈ ಹಿಂದೆ ಗೋವಿಂದ ಕಾರಜೋಳರು ನೀರಾವರಿ ಸಚಿವರಾಗಿದ್ದ ವೇಳೆ ಯುಕೆಪಿ ಕಾರ್ಯ ಪೂರ್ಣಗೊಳ್ಳಲಿದೆ, ರೈತರು ಹಾಗೂ‌ ಮುಳುಗಡೆ ಸಂತ್ರಸ್ತರಿಗೆ ಅನುಕೂಲವಾಗಲಿದೆ ಎಂದು ಸಂತೋಷ ಪಟ್ಟಿದ್ದೆ.‌ಆದರೆ ಅವರ ಅವಧಿಯಲ್ಲಿ ಭೂಸ್ವಾಧೀನಕ್ಕೆ ಏಕರೂಪ ದರ ನಿಗದಿ ಆದರೂ ಪ್ರಯೋಜನವಾಗಲಿಲ್ಲ.‌ ರೈತರು ಅದಕ್ಕೆ ವಿರೋಧ ವ್ಯಕ್ತ ಪಡಿಸಿದ್ದರು. ಈಗ ಸರ್ಕಾರ ನಿಗದಿ ಪಡಿಸಿದ ಏಕರೂಪ ದರ ನಿಗದಿಗೆ ಹರ್ಷ ವ್ಯಕ್ತ ಪಡಿಸಿದ್ದಾರೆ. ಕಾರ್ಯಾನುಷ್ಠಾನ ಪ್ರಕ್ರಿಯೆಗಳು ಆರಂಭಗೊಂಡಿವೆ. ಆಗ ಕಡಿಮೆ ದರ ನಿಗದಿ ಪಡಿಸಿದವರು ಈಗ 40 ಲಕ್ಷ ರೂ., 50 ಲಕ್ಷ ರೂ.ಗಳ ಪರಿಹಾರದ ಬಗೆಗೆ ಮಾತನಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಕನ್ನಡಕ್ಕೆ ಪ್ರಥಮ ಆದ್ಯತೆ:

ಪತ್ರಿಕಾಗೋಷ್ಠಿಗೂ ಮುನ್ನ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ತಿಮ್ಮಾಪುರ, ಕನ್ನಡ ನಾಡಿನಲ್ಲಿ ಮಾತೃ ಭಾಷೆಯಾದ ಕನ್ನಡಕ್ಕೆ ಪ್ರಥಮ ಆದ್ಯತೆ ಎಂಬ ನೀತಿಯನ್ನು ನಮ್ಮ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಇದಕ್ಕೆ ಪೂರಕವಾಗಿ ಎಲ್ಲಾ ಹಂತಗಳಲ್ಲೂ ಕನ್ನಡದ ಅನುಷ್ಠಾನಕ್ಕೆ ಬದ್ಧವಾಗಿದೆ ಎಂದು ಹೇಳಿದರು.

ಜಿಲ್ಲೆಯ ಜನರು ಈ ನೆಲದ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಎಂದೆಂದಿಗೂ – ಸಾಧಿಸುವರು. ಇಂತಹ ಸಹೃದಯಿ ಬಂಧುಗಳ ಅಪೇಕ್ಷೆಯಂತೆ ಜಿಲ್ಲೆಯಲ್ಲಿ ಕನ್ನಡ ಭಾಷೆ ಮತ್ತು ಪ್ರೀತಿಯ ವಿಕಾಸಕ್ಕೆ ಸರ್ಕಾರ ವಿಶೇಷ ಗಮನಹರಿಸಿ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದರು.

ಭಾಷೆ, ಸಂಸ್ಕೃತಿಗೆ ಧಕ್ಕೆಯಾಗದಂತೆ ಕನ್ನಡ ಭಾಷೆಯನ್ನು ಸಧೃಡವಾಗಿ ಉಳಿಸಿ, ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

Scroll to Top