ಭ್ರಷ್ಟಾಚಾರ ಆರೋಪ ಸತ್ಯಕ್ಕೆ ದೂರವಾದುದು: ತಿಮ್ಮಾಪುರ

ಬಾಗಲಕೋಟೆ: ಮುಧೋಳದ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಟೆಂಡರ್ ಹಂಚಿಕೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಸ್ಪಷ್ಟಪಡಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಕಾರ್ಖಾನೆ ವಿಷಯದಲ್ಲಿ ತಮ್ಮವಿರುದ್ಧದ ಭ್ರಷ್ಟಾಚಾರ ಆರೋಪದ ಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ದೂರಿನಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು. ಕಾರ್ಖಾನೆ ಲೀಜ್ ಕೊಡುವ ವಿಷಯ ಕುರಿತು ಸಂಪುಟದಲ್ಲಿ ಸಮಗ್ರವಾಗಿ ಚರ್ಚಿಸಿ ಟೆಂಡರ್ ಮಾಡಲಾಗಿದೆ. ಸಹಕಾರಿ ಸಂಸ್ಥೆ ಉಳಿಸಲು ಸಾಕಷ್ಟು ಪ್ರಯತ್ನಪಟ್ಟು ರೈತರ ಆಶಯಕ್ಕೆ ತಕ್ಕಂತೆ ಸರ್ಕಾರ ನಡೆದುಕೊಂಡ ಪರಿಣಾಮ ಇಂದು ಕಾರ್ಖಾನೆ ಕಾರ್ಯನಿರ್ವಹಿಸುತ್ತಿದೆ ಎಂದರು.

ದೂರು ಸಲ್ಲಿಕೆ ಹಿಂದೆ ಕಾಣದ ಪ್ರಭಾವಿಗಳ ಕೈ ಇರಬಹುದು ಎನ್ನುವ ಕೆಲವರ ಸಂಶಯ ನಿಜವೂ ಇರಬಹುದು ಎಂದರು.

ನವೆಂಬರ್ ಮೊದಲ ವಾರದಲ್ಲಿ ಚಾಲುಕ್ಯ ಉತ್ಸವ ಆಚರಣೆಗೆ ನಿರ್ಧರಿಸಲಾಗಿದೆ. ಉತ್ಸವಕ್ಕೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗುವುದು. ಅವರು ಒಪ್ಪಿಗೆ ಸೂಚಿಸಿದ ಬಳಿಕ ನಿರ್ದಿಷ್ಟ ದಿನಾಂಕ ನಿಗದ ಪಡಿಸಲಾಗುವುದು ಎಂದು ಸಚಿವರು ಹೇಳಿದರು.

ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೂ ಶೇ.50 ರಷ್ಟು ಪ್ರಾತಿನಿಧ್ಯ ಹಾಗೂ ವೇದಿಕೆ ಮೇಲೆ ಸೂಕ್ತ ಸಮಯಾವಕಾಶ ಕಲ್ಪಿಸಲಾಗುವುದು. ಉತ್ಸವದ ಸಿದ್ದತೆಗಾಗಿ ನಾನಾ ಕಮೀಟಿಗಳನ್ನು ಶೀಘ್ರ ರಚಿಸಲಾಗುವುದು ಎಂದು ಅವರು ಹೇಳಿದರು.

ಶಾಸಕರಾದ ಜೆ.ಟಿ.‌ಪಾಟೀಲ, ಎಚ್.ವೈ.‌ಮೇಟಿ, ಭೀಮಸೇನ ಚಿಮ್ಮನಕಟ್ಟಿ ಇದ್ದರು.

Scroll to Top