ಭಾಂಡಗೆ ಶಸ್ತ್ರಕ್ಕೆ ಶುರುವಾಗಿದೆ ಪ್ರತ್ಯಸ್ತ್ರ

ರಾಜ್ಯಸಭೆ ಸದಸ್ಯ ನಾರಾಯಣಸಾ ಭಾಂಡಗೆ ಅವರು ನೀಡಿದ ಹೇಳಿಕೆ ಹಿಂದೆ ಅದ್ಯಾವ ಉದ್ದೇಶವಿತ್ತೋ ಏನೋ ಅಂತೂ ಅವರ ಆಯುಧ ಖರೀದಿ ಹೇಳಿಕೆ ಈಗ ವಿವಾದದ ಕಿಡಿ ಹೊತ್ತಿಸಿದೆ. ನವರಾತ್ರಿ ಉತ್ಸವದಲ್ಲಿ ನಡೆಯುವ ಆಯುಧ ಪೂಜೆಗೆ ಆಯುಧಗಳನ್ನು ಖರೀದಿಸಿ ಎಂದು ಹೇಳಿದ್ದೆ ತಡ. ಪರ, ವಿರೋಧ ಮಾತುಗಳು ಸಾಕಷ್ಟು ಸದ್ದು ಮಾಡುತ್ತಿವೆ.

ನಾರಾಯಸಾ ಭಾಂಡಗೆ ಅವರು ಮಂಗಳವಾರ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಎಲ್ಲರೂ ಆಯುಧ ಪೂಜೆಗೆ ಆಯುಧಗಳ ಪೂಜೆ ಮಾಡಿ. ಆಯುಧಗಳು ಇಲ್ಲದವರು ಆಯುಧಗಳನ್ನು ಖರೀದಿಸಿ ಪೂಜೆ ಸಲ್ಲಿಸಿ ಎಂದು ಹೇಳಿದರು.‌

ಸ್ವಯಂ‌ ರಕ್ಷಣೆಗೆ ಬೇಕಂತೆ ಆಯುಧ:

ಇಷ್ಟೆ ಆಗಿದ್ದಲ್ಲಿ ಯಾವ ವಿವಾದ ಹುಟ್ಟಿಕೊಳ್ಳುತ್ತಿರಲಿಲ್ಲ. ಸ್ವಯಂ ರಕ್ಷಣೆಗೂ ಆಯುಧಗಳು ಬೇಕು, ಅನ್ಯಾಯದ ವಿರುದ್ಧ ಎತ್ತಲು ಬರುತ್ತವೆ. ಎಲ್ಲ ಸಮಯದಲ್ಲೂ ಪೊಲೀಸರು ಬರಲಾಗದು ಎಂದಿದ್ದು ವಿವಾದದ ಹುಟ್ಟಿಗೆ ಕಾರಣವಾಗಿದೆ.

ನವರಾತ್ರಿ ಹಬ್ಬ ನಮ್ಮ ಧರ್ಮ, ಸಂಸ್ಕೃತಿ, ಸಾಂಪ್ರದಾಯಿಕ ಹಬ್ಬ. ಈ ವೇಳೆ ನವಮಿ ದಿವಸ ಆಚರಿಸುವ ಆಯುಧ ಪೂಜೆಗೆ ತನ್ನದೇ ಆದ ವೈಶಿಷ್ಟ್ಯವಿದೆ. ಅಂದು ಬಹುತೇಕರು ಆಯುಧಗಳನ್ನು, ಬದುಕಿನ ಅಸ್ತ್ರಗಳನ್ನು ಪೂಜಿಸುವುದು ವಾಡಿಕೆ. ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಕ್ರಮವಾಗಿ ಆಯುಧ ಇಟ್ಟುಕೊಳ್ಳುವುದಕ್ಕೆ ನಿಷೇಧವಿದೆ. ಆದಾಗ್ಯೂ ಹಲವರ ಮನೆಗಳಲ್ಲಿ ಅಬಾಧಿತವಾಗಿ ಭರ್ಚಿ, ತಲವಾರಗಳು ತಕರಾರುಗಳು ಇಲ್ಲದೆ ಪೂಜೆಗೊಳ್ಳುತ್ತಿವೆ.

ಸ್ವಯಂ ರಕ್ಷಣೆಗಾಗಿ ಆಯುಧಗಳು ಇರಬೇಕು. ಸ್ವಯಂ ರಕ್ಷಣೆ ಮಾಡಿಕೊಳ್ಳಲಾಗದವರು ದೇಶ ರಕ್ಷಣೆ ಹೇಗೆ ಮಾಡಲು ಸಾಧ್ಯ ಎಂದು ಪ್ರಶ್ನಿಸಿದ್ದು ಕೂಡ ವಿವಾದದ ಕೇಂದ್ರ ಬಿಂದುವಾಗಿ ಪರಿಣಮಿಸಿದೆ.ಯಾರೋ ಜನ ಸಾಮಾನ್ಯರು ಆಯುಧಗಳನ್ನು ಖರೀದಿಸಿ ಎಂದು ಹೇಳುವುದು ಬೇರೆ. ರಾಜ್ಯಸಭೆ ಸದಸ್ಯರಾಗಿ ಇದ್ದವರು, ಸಾಂವಿಧಾನಿಕ ಹುದ್ದೆಯಲ್ಲಿದ್ದವರು ಆಯುಧ ಖರೀದಿಸಿ, ಸ್ವಯಂ‌ ರಕ್ಷಣೆಗೂ ಆಯುಧ ಬೇಕು ಎಂದು ಹೇಳಿದ್ದು ಚರ್ಚೆಗೆ ಗ್ರಾಸವಾಗಿದೆ.

ಎಚ್ಕೆ, ಬಿಕೆ ಪ್ರತ್ಯಾಸ್ತ್ರ:

ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಭಾಂಡಗೆ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅವರು ಹಾಗೆ ಏಕೆ ಹೇಳಿದರು ಗೊತ್ತಾಗುತ್ತಿಲ್ಲ. ಆಯುಧ ಪೂಜೆ ಅಂದಾಕ್ಷಣ ಭರ್ಚಿ ,ತಲವಾರುಗಳಿಗೆ ಹೋಗಿದ್ದಾರೆ. ಬದುಕಿನ ಆಯುಧಗಳ ಪೂಜೆ ಅಂದು‌ ನಡೆಯುತ್ತದೆ. ಜನ ಅವರವರ ಬದುಕಿನ ಅಸ್ತ್ರಗಳನ್ನು ಪೂಜಿಸುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.

ಕಾನೂನು ಸಚಿವರ ಪ್ರತಿಕ್ರಿಯೆ ಬೆನ್ನಲ್ಲೆ ಹಿರಿಯ ಕಾಂಗ್ರೆಸ್ಸಿಗ ಬಿ.ಕೆ. ಹರಿಪ್ರಸಾದ ಕೂಡ ಭಾಂಡಗೆ ಅವರ ಹೇಳಿಕೆ ವಿರೋಧಿಸಿ‌ ಮಾತನಾಡಿದ್ದಾರೆ. ಭಾಂಡಗೆ ಅವರ ಹೇಳಿಕೆಗೆ ವಿರೋಧದ ಕಿಡಿ ಹೊತ್ತಿಕೊಂಡಿದ್ದು, ಅದು ಎಲ್ಲಿಯವರೆಗೂ ಬಂದು ನಿಲ್ಲುತ್ತೋ ಏನೋ.

ಸೂಕ್ತ ನಿರ್ಧಾರದ ಅಗತ್ಯ:

ಭಾಂಡಗೆ ಅವರು ತಮ್ಮ ಹೇಳಿಕೆಯನ್ನು ಸರಿಯೆಂದು ಸಮರ್ಥಿಸಿಕೊಳ್ಳಬಹುದು. ಆದರೆ ಅವರ ಹೇಳಿಕೆಗೆ ಭಿನ್ನ ಅಭಿಪ್ರಾಯಗಳು ವ್ಯಕ್ತಗೊಳ್ಳುತ್ತಿವೆ. ಪ್ರಚೋದನಾಕಾರಿ ಹೇಳಿಕೆ ಎನ್ನುವ ವಾದಕ್ಕೂ ಕಾರಣ ವಾಗಬಹುದಾಗಿದೆ. ಸ್ವಯಂ ರಕ್ಷಣೆಗೆ ಆಯುಧಗಳು ಇರಬೇಕು ಎನ್ನುವ ಮಾತು ಆಗಾಗ್ಗೆ ಕೇಳಿಬರುತ್ತಲೇ ಇರುತ್ತದೆ. ಹಾಗಾಗಿ ಅವರ ಹೇಳಿಕೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಪೂಜೆ ಹಾಗೂ ಸ್ವಯಂ ರಕ್ಷಣೆಗೆ ಆಯುಧ ಬೇಕು ಎಂದು ಭಾಂಡಗೆ ಹೇಳಿದ್ದು, ಆಯುಧ ಪೂಜೆ ವಿಧಾನವನ್ನು ಸಚಿವ ಎಚ್ಕೆ ಪಾಟೀಲರು ಅರ್ಥೈಸಿದ್ದೆ ಬೇರೆ ರೀತಿ.

ಸ್ವಯಂ ರಕ್ಷಣೆಗೆ ಸಂಬಂಧಿಸಿದಂತೆ ಆಯುಧ ಬಳಕೆ ಕುರಿತು ಗಂಭೀರ ಚರ್ಚೆ ಆಗಬೇಕಿದೆ. ಈಗಾಗಲೇ ಸ್ವಯಂ‌ ರಕ್ಷಣೆಗೆ ಆಯುಧ ಇರಬೇಕು ಎನ್ನುವ ಚರ್ಚೆ ವ್ಯಾಪಕವಾಗಿದೆ. ಸುರಕ್ಷಿತ ಸಮಾಜದ ದೃಷ್ಟಿಯಿಂದ ಆಯುಧ ಬಳಕೆ ಚರ್ಚೆ ತಾರ್ಕಿಕ ಅಂತ್ಯ ಕಾಣಬೇಕು. ಇಂತಹ ಮಾತುಗಳಿಗೆ ಕಾನೂನಿನ ಚೌಕಟ್ಟು ಬೇಕಿದೆ.

  • ವಿಠ್ಠಲ ಆರ್. ಬಲಕುಂದಿ
Scroll to Top